ಬೆಂಗಳೂರು, ಮಾರ್ಚ್ 6: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಶುಕ್ರವಾರ ಬೆಂಗಳೂರಿಗೆ (Bengaluru) ಆಗಮಿಸಲಿದ್ದಾರೆ. ಮಾರತ್ತಹಳ್ಳಿಯಲ್ಲಿ ನಡೆಯಲಿರುವ ‘‘ವಿಶ್ವೇಶತೀರ್ಥ ಸ್ಮಾರಕ ಆಸ್ಪತ್ರೆ’’ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa), ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra), ಮಾಜಿ ಸಚಿವ ಅರವಿಂದ ಲಿಂಬಾವಳಿ ಕೂಡ ವೇದಿಕೆ ಹಂಚಿಕೊಳ್ಳಲಿದ್ದಾರೆ. ಉಡುಪಿ ಪೇಜಾವರ ಅಧೋಕ್ಷಜ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ.
ಆದರೆ, ಅಮಿತ್ ಶಾ ಬೆಂಗಳೂರು ಭೇಟಿ ವೇಳೆ ರಾಜ್ಯ ಬಿಜೆಪಿ ಬೆಳವಣಿಗೆಗಳ ಕುರಿತು ಕರ್ನಾಟಕದ ನಾಯಕರ ಯಾವುದೇ ಭೇಟಿ ನಿಗದಿಯಾಗಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅಮಿತ್ ಶಾ ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಭೇಟಿಯಾಗಲು ಬಿಜೆಪಿ ನಾಯಕ ಶ್ರೀರಾಮುಲು ಪ್ಲಾನ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಾ ಅವರನ್ನು ಭೇಟಿಯಾಗಿ ತಮಗೆ ಪಕ್ಷದಲ್ಲಾಗಿರುವ ಅವಮಾನದ ಬಗ್ಗೆ ವಿವರಣೆ ನೀಡಲು ಶ್ರೀರಾಮುಲು ಸಿದ್ಧವಾಗಿದ್ದಾರೆ. ಈಗಾಗಲೇ ಅಮಿತ್ ಶಾ ತಂಡದ ಜೊತೆಗೆ ಸಂಪರ್ಕದಲ್ಲಿರುವ ರಾಮುಲು ರಾಜ್ಯ ನಾಯಕರ ಜೊತೆಗೆ ಅಲ್ಲದೆ, ಪ್ರತ್ಯೇಕವಾಗಿ ಭೇಟಿಯಾಗಲು ಉದ್ದೇಶಿಸಿದ್ದಾರೆ.
2018ರ ಚುನಾವಣೆ ವೇಳೆ ಅಮಿತ್ ಶಾ ಸೂಚನೆ ಮೇರೆಗೆ ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ಸ್ಪರ್ಧೆ ಮಾಡಿದ್ದರು. ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಹಾಗೂ ಆ ನಂತರ ಪ್ರಚಾರಕ್ಕೂ ಶ್ರೀರಾಮುಲು ಜೊತೆಗೆ ಅಮಿತ್ ಶಾ ಬಂದಿದ್ದರು. 2023ರಲ್ಲಿ ಹೈದರಾಬಾದ್ನಲ್ಲಿ ನಡೆದ ‘ವಿಮೋಚನಾ ದಿನಾಚರಣೆ’ ಧ್ವಜಾರೋಹಣದ ವೇಳೆಯೂ ಶ್ರೀರಾಮುಲುವನ್ನು ಅಮಿತ್ ಶಾ ಕರೆಸಿಕೊಂಡಿದ್ದರು. ಹೀಗಾಗಿ, ಅಮಿತ್ ಶಾ ಜೊತೆಗೆ ಇರುವ ಹಳೆಯ ನಂಟಿನ ಸದ್ಭಳಕೆ ಮಾಡಿಕೊಳ್ಳಲು ಶ್ರೀರಾಮುಲು ಮುಂದಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ದಕ್ಷಿಣ ಭಾರತದವರಿಗೆ ಮುಂದಿನ ಬಿಜೆಪಿ ಅಧ್ಯಕ್ಷ ಪಟ್ಟ? ಹೋಳಿ ಹಬ್ಬದ ಬಳಿಕ ಹೆಸರು ಘೋಷಣೆ
ಸದ್ಯದ ಮಟ್ಟಿಗೆ ರಾಮುಲು ರಾಜ್ಯ ಬಿಜೆಪಿ ನಾಯಕರಿಂದ ಅಂತರ ಕಾಯ್ದುಕೊಂಡಿದ್ದಾರೆ. ಕೋರ್ ಕಮಿಟಿಯಲ್ಲಾದ ಅಪಮಾನದ ಬಳಿಕ ಪಕ್ಷದ ನಾಯಕರೊಂದಿಗೆ ಅಂತರ ಕಾಯ್ದಕೊಂಡಿದ್ದಾರೆ. ಶಾ ಅವರನ್ನು ಒಂದು ವೇಳೆ ನಾಳೆ ಭೇಟಿಯಾದರೆ ನಂತರ ಎಲ್ಲವೂ ಸರಿ ಹೋಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.