- Kannada News Photo gallery Salary Hike And recliners and massage chairs for Karnataka MLAs In vidhana soudha News In Kannada
ಶಾಸಕರಿಗೆ ಸಿಹಿ ಸುದ್ದಿ: ಸಂಬಳ ಹೆಚ್ಚಳ ಜೊತೆಗೆ ಎಂಎಲ್ಎಗಳಿಗೆ ರಿಕ್ಲೈನರ್, ಮಸಾಜ್ ಚೇರ್‌ಗಳು
ಕರ್ನಾಟಕದಲ್ಲಿ ಬಸ್, ಮೆಟ್ರೋ ಟಿಕೆಟ್ ದರ ಏರಿಕೆಗೆ ಸಿಲುಕಿ ಜನಸಾಮಾನ್ಯರು ಪರದಾಡುತ್ತಿದ್ದಾರೆ. ಗೃಹಿಣಿಯರು ಗೃಹಲಕ್ಷ್ಮಿ ಯೋಜನೆಯ ದುಡ್ಡು ಇನ್ನೂ ಅಕೌಂಟ್‌ಗೆ ಬಂದಿಲ್ಲ ಅಂತ ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ದುಬಾರಿ ದುನಿಯಾದಲ್ಲಿ ಜನ ಸಾಮಾನ್ಯರಿಗೆ ಮಾತ್ರ ಬೆಲೆ ಏರಿಕೆಯ ಬರೆ. ಈ ಬೆಲೆ ಏರಿಕೆ ಬಗ್ಗೆ ಜನರು ಬೇಸರಗೊಂಡಿರುವ ಮಧ್ಯೆ ಶಾಸಕರ ಸಂಬಳ ಹೆಚ್ಚಿಸುವ ಬಗ್ಗೆ ಚರ್ಚೆಯಾಗಿದೆ. ಮತ್ತೊಂದೆಡೆ ಶಾಸಕರಿಗಾಗಿ ವಿಧಾನಸೌಧಕ್ಕೆ ರಿಕ್ಲೈನರ್ ಹಾಗೂ ಮಸಾಜ್ ಚೇರ್‌ಗಳು ಬಂದಿವೆ.
Updated on: Mar 03, 2025 | 11:02 PM

ಸ್ಪೀಕರ್ ಯುಟಿ ಖಾದರ್ ಆದೇಶದಂತೆ ವಿಧಾನಸಭೆಯ ಮೊಗಸಾಲೆಯಲ್ಲಿ 15 ರಿಕ್ಲೈನರ್ ಮತ್ತು 2 ಮಸಾಜ್ ಚೇರ್‌ಗಳನ್ನು ವಿಧಾನಸಭೆ ಸಚಿವಾಲಯ ಅಳವಡಿಸಿದ್ದು, ಮಂಗಳವಾರದಿಂದ ವಿಧಾನಸೌಧದ ಲಾಂಜ್‌ನಲ್ಲಿ ಶಾಸಕರಿಗೆ 17 ಆರಾಮ ಆಸನಗಳ ಸೌಲಭ್ಯ ಸಿಗಲಿದೆ.

15 ರಿಕ್ಲೈನರ್ ಮತ್ತು 2 ಮಸಾಜ್ ಚೇರ್‌ಗಳನ್ನು ಬಾಡಿಗೆಗೆ ತಂದು ವಿಧಾನಸಭೆಯ ಮೊಗಸಾಲೆಯಲ್ಲಿ ಅಳವಡಿಸಲಾಗಿದೆ. 1 ರಿಕ್ಲೈನರ್ ಚೇರ್‌ಗೆ ದಿನಕ್ಕೆ 1,200 ರೂ. ಇದ್ದರೆ 1 ಮಸಾಜ್ ಚೇರ್‌ಗೆ 10 ಸಾವಿರ ರೂ. ದರ ನಿಗದಿ ಮಾಡಲಾಗಿದೆ. 15 ದಿನದಲ್ಲಿ ಇದಕ್ಕೆಂದು 5.70 ಲಕ್ಷ ರೂಪಾಯಿ ವೆಚ್ಚ ಮಾಡಲಿದೆ.

ವಿಧಾನಭೆಯ ಸ್ಪೀಕರ್ ಯುಟಿ ಖಾದರ್ ಅವರು ವಿಧಾನಸಭೆ ಅಧಿವೇಶನದಲ್ಲಿ ಮಧ್ಯಾಹ್ನದ ಬಳಿಕ ಶಾಸಕರ ಹಾಜರಾತಿ ಕಡಿಮೆ ಇರುತ್ತದೆ. ಅವರು ಕೆಲ ಕಾಲ ವಿಶ್ರಾಂತಿ ಪಡೆದು ಕಲಾಪಕ್ಕೆ ಹಾಜರಾಗಿ ಸದನಕ್ಕೆ ಹಾಜರಾಗುವಂತೆ ಮಾಡಲು ರಿಕ್ಲೈನರ್ ಕುರ್ಚಿಗಳನ್ನು ಬಾಡಿಗೆ ಪಡೆಯುವ ತೀರ್ಮಾನವನ್ನು ಕೈಗೊಂಡಿದ್ದರು.

ಈ ಬಗ್ಗೆ ಖಾದರ್ ಪ್ರತಿಕ್ರಿಯಿಸಿ, ಶಾಸಕರಾಗಿ ಶಾಸಕರಿಗೆ ಸೌಲಭ್ಯಗಳನ್ನು ಒದಗಿಸುವುದು ನನ್ನ ಜವಾಬ್ದಾರಿ. ರೆಕ್ಲೈನರ್ ಕುರ್ಚಿ ಐಷಾರಾಮಿ ಅಲ್ಲ, ಅದು ಅವಶ್ಯಕತೆಯಾಗಿದೆ. ಎಲ್ಲಾ ಶಾಸಕರು ಚಿಕ್ಕವರಲ್ಲ ಮತ್ತು ಎಲ್ಲರೂ ಆರೋಗ್ಯವಂತರಲ್ಲ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು. ಟೀಕಿಸುವವರು ಶಾಸಕರು ಅಥವಾ ಸಂಸದರನ್ನು ಶತ್ರುಗಳಂತೆ ನೋಡಬಾರದು, ಅವರನ್ನು ತಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಳ್ಳಬೇಕು. ಬಿಜೆಪಿ ಶಾಸಕರಿಂದಲೂ ಈ ಬೇಡಿಕೆ ಬಂದಿತ್ತು ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಇನ್ನು ಶಾಸಕರ ಸಂಬಳ ಹೆಚ್ಚಳ ಬಗ್ಗೆ ಚರ್ಚೆಗಳು ನಡೆದಿವೆ. ಇಂದು ನಡೆದ ವಿಧಾನಸಭಾ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗಿದೆ. ಕಳೆದ ಬಾರಿ ನಡೆದ ಅಧಿವೇಶನ ವೇಳೆ ಶಾಸಕರ ಸಂಬಳ ಹೆಚ್ಚಿಸುವ ಬಗ್ಗೆ ಶಾಸಕ ಅರವಿಂದ್ ಬೆಲ್ಲದ್ ಅವರು ಗಮನ ಸೆಳೆದಿದ್ದರು. ಶಾಸಕರ ವೇತನ ಹೆಚ್ಚಳಕ್ಕೆ ಆಯೋಗ ಮಾಡಿ ಎಂದೂ ಬೆಲ್ಲದ್ ಅವರು ಒತ್ತಾಯಿಸಿದ್ದರು.

ಇಂದು ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಶೇಕಡಾ 50ರಷ್ಟು ಸಂಬಳ ಹೆಚ್ಚಳ ಮಾಡಲು ಚರ್ಚಿಸಲಾಗಿದೆ. ಇದರ ಜೊತೆಗೆ ಬಿಎಸಿ ಸಭೆಯಲ್ಲಿ ಶಾಸಕರ ಕ್ಲಬ್‌ಗೆ 20 ಕೋಟಿ ರೂಪಾಯಿ ಅನುದಾನ ನೀಡುವ ಕುರಿತು ಚರ್ಚೆ ನಡೆಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಂಡಿ ನೋವಿನ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ವಿಧಾನಸಭೆ ಪ್ರವೇಶ ತನಕ ವ್ಹೀಲ್ ಚೇರ್ನಲ್ಲಿ ಹೋಗಲು ರ‍್ಯಾಂಪ್ ವ್ಯವಸ್ಥೆ ಮಾಡಲಾಗಿದೆ.

ಮುಖ್ಯಮಂತ್ರಿಗಳು ವ್ಹೀಲ್ ಚೇರ್ ಮೂಲಕ ಹೋಗಲು ವಿಧಾನಸೌಧ ಲಾಂಜ್, ವಿಧಾನಸಭೆ ಆಡಳಿತ ಪಕ್ಷದ ಮೊಗಸಾಲೆ ಮತ್ತು ವಿಧಾನಸಭೆ ಪ್ರವೇಶ ದ್ವಾರದ ಮೂರು ಕಡೆ ರ್ಯಾಂಪ್ ಹಾಕಲಾಗಿದೆ.
























