ಸಿಎಂ ಡಿಕೆಶಿ ‘ಜೈಲು’ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಕೌಂಟರ್​​: ಅನುಕಂಪದ ಯತ್ನ ಎಂದು ಕಿಡಿ

Karnataka Politics: ಬಿಡದಿ ಟೌನ್‌ಶಿಪ್ ವಿವಾದ ಹಾಗೂ ಜೈಲು ಹೇಳಿಕೆ ಕುರಿತು ಡಿಕೆ ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದು, ಇದು ಅನುಕಂಪ ಗಿಟ್ಟಿಸಿಕೊಳ್ಳುವ ಯತ್ನ ಎಂದು ಕೌಂಟರ್ ನೀಡಿದ್ದಾರೆ. ಇದೇ ವೇಳೆ ದೇಶದ ವಿಪಕ್ಷ ನಾಯಕ ರಾಹುಲ್ ಗಾಂಧಿ ಕಳೆದ 25 ದಿನಗಳಿಂದ ಎಲ್ಲಿದ್ದಾರೆ ಎಂದೂ ಪ್ರಶ್ನಿಸಿರುವ ಅವರು, ಬರದ ವಿಚಾರದಲ್ಲಿಯೂ ರಾಜಕೀಯ ಮಾಡುವುದನ್ನು ಇವರು ಮೊದಲು ಬಿಡಬೇಕು ಎಂದು ಕಿಡಿ ಕಾರಿದ್ದಾರೆ.

ಸಿಎಂ ಡಿಕೆಶಿ ಜೈಲು ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಕೌಂಟರ್​​: ಅನುಕಂಪದ ಯತ್ನ ಎಂದು ಕಿಡಿ
ಸಿಎಂ ಡಿಕೆಶೆ 'ಜೈಲು' ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಕೌಂಟರ್​​
Image Credit source: PTI
Edited By:

Updated on: Jul 16, 2026 | 2:21 PM

ಮುಖ್ಯಾಂಶಗಳು

  • ಸಿಎಂ ಡಿಕೆಶಿ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ತಿರುಗೇಟು
  • 'ಜೈಲು' ಹೇಳಿಕೆ ಮೂಲಕ ಅನುಕಂಪ ಗಿಟ್ಟಿಸುವ ಯತ್ನವೆಂದು ಕಿಡಿ
  • ದೇಶದ ವಿಪಕ್ಷ ನಾಯಕ ರಾಹುಲ್ ಗಾಂಧಿ ಕ ಎಲ್ಲಿದ್ದಾರೆ ಎಂದೂ ಪ್ರಶ್ನೆ

ಬೆಂಗಳೂರು, ಜುಲೈ 16: ಬಿಡದಿಯಲ್ಲಿ ವಿವಾದಿತ ಟೌನ್​​ಶಿಪ್​​ ನಿರ್ಮಾಣ ವಿಚಾರವಾಗಿ ನಿನ್ನೆ (ಜುಲೈ 15) ಸುದ್ದಿಗೋಷ್ಠಿ ನಡೆಸಿದ್ದ ಸಿಎಂ ಡಿಕೆ ಶಿವಕುಮಾರ್​​, ನಾನು ಸಿಎಂ ಆಗಿದ್ದರಿಂದ ತಡೆದುಕೊಳ್ಳುವುದಕ್ಕೆ ಅವರಿಗೆ ಆಗುತ್ತಿಲ್ಲ. ಜೈಲಿಗೆ ಕಳುಹಿಸಲು ಎಷ್ಟು ಸಂಚು ನಡೀತು ಎಂದು ಮುಂದೆ ಹೇಳ್ತೇನೆ. ಜೈಲು ನನಗೆ ಹೊಸದೇನಲ್ಲ ಎಂದಿದ್ದರು. ಅವರ ಈ ಮಾತಿಗೆ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಕೌಂಟರ್​​ ನೀಡಿದ್ದು, ಡಿ.ಕೆ. ಶಿವಕುಮಾರ್ ಅವರನ್ನು ಯಾರೂ ಜೈಲಿಗೆ ಕಳುಹಿಸಲ್ಲ. ಅವರು ಮಾಡಿದ ತಪ್ಪು ಮತ್ತು ಭ್ರಷ್ಟಾಚಾರಕ್ಕೆ ಜೈಲಿಗೆ ಹೋದರೆ ಯಾರು ಏನೂ ಮಾಡಲು ಆಗಲ್ಲ ಎಂದಿದ್ದಾರೆ.

‘ತಪ್ಪು ಮಾಡಿದರೆ ಜೈಲಿಗೆ ಹೋಗುತ್ತಾರೆ’

ಯಾರೇ ಆದರೂ ತಪ್ಪು ಮಾಡಿದರೆ ಜೈಲಿಗೆ ಹೋಗುತ್ತಾರೆ. ಇದರ ಅರ್ಥ ನಾವು ಅವರನ್ನು ಜೈಲಿಗೆ ಕಳುಹಿಸುತ್ತೇವೆ ಅಂತ ಅಲ್ಲ. ಜೈಲಿನ ಬಗ್ಗೆ ಈಗ ಯಾಕೆ ಮಾತಾಡುತ್ತಿದ್ದೀರಿ? ನೀವು ಏನಾದರೂ ತಪ್ಪು ಮಾಡಿದ್ದೀರಾ? ಇದೆಲ್ಲಾ ಅನುಕಂಪ ತೆಗೆದುಕೊಳ್ಳಲು ಮಾಡುತ್ತಿರುವ ಪ್ರಯತ್ನ ಎಂದು ಜೋಶಿ ಆರೋಪಿಸಿದ್ದಾರೆ. ಮುಖ್ಯಮಂತ್ರಿ ಅಂದರೆ ನೀವೇನೂ ಸರ್ವಾಧಿಕಾರಿಗಳಲ್ಲ, ರಾಜ್ಯದ ಮಹಾರಾಜರಲ್ಲ. ಈ ಮಾತನ್ನು ಅರ್ಥ ಮಾಡಿಕೊಂಡು ತಮ್ಮ ನಡೆ ತೋರಿಸಬೇಕು. ಕುಮಾರಸ್ವಾಮಿ ಅವರು ಮಾಡಿರುವ ಭ್ರಷ್ಟಾಚಾರ ಆರೋಪಗಳ ಬಗ್ಗೆ ಸ್ಪಷ್ಟಪಡಿಸಬೇಕು ಎಂದವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬಿಡದಿ ಟೌನ್​ಶಿಪ್ ವಿವಾದ; ವಿರೋಧದ ಮಧ್ಯೆ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಬಿಡುಗಡೆ ಮಾಡಿದ ಸರ್ಕಾರ

ಬಲವಂತವಾಗಿ ಜಮೀನು ಕಸಿದುಕೊಂಡು ಟೌನ್​ಶಿಪ್ ಮಾಡುವ ಬದಲು, ರೈತರ ಮನವೊಲಿಸಬೇಕು. ಅದನ್ನು ಬಿಟ್ಟು ರೈತರು ತಿರುಗಿ ಬಿದ್ದ ಮೇಲೆ ಒತ್ತಾಯ ಮಾಡಿಲ್ಲ ಅನ್ನೋದಲ್ಲ. ಮೊದಲೇ ಯಾಕೆ ರೈತರ ಜೊತೆ ಮಾತನಾಡಿಲ್ಲ? ಅನೇಕರು ಅನೇಕ ರೀತಿ ಸಲಹೆ ಕೊಟ್ಟರೂ ಯಾಕೆ ಸ್ವೀಕಾರ ಮಾಡಿಲ್ಲ? ಎಂದು ಜೋಶಿ ಪ್ರಶ್ನಿಸಿದ್ದಾರೆ. ಮೂರು ವರ್ಷಗಳಲ್ಲಿ ಸಿದ್ದರಾಮಯ್ಯನವರಿಗೆ ಟೌನ್​​ಶಿಪ್​​ ಬಗ್ಗೆ ಇರದ ಆಸಕ್ತಿ ನಿಮಗೆ ಯಾಕೆ? ಇದರ ಅರ್ಥ ಏನೋ ಡೀಲ್ ಆಗಿದೆ ಅಂತಾ ಅಲ್ವಾ? ಇದರ ಬಗ್ಗೆ ಯಾಕೆ ಉತ್ತರ ಕೊಡುತ್ತಿಲ್ಲ? ದೇವೇಗೌಡರ ಆರೋಪಕ್ಕೆ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ಕೊಡುವುದು ಬಿಟ್ಟು ಅವರ ಮೇಲೆ ರೇಗಾಡುತ್ತಿದ್ದಾರೆ. ಮನುಷ್ಯ ಏನಾದರೂ ತಪ್ಪು ಮಾಡಿ ಅದನ್ನು ಸಮರ್ಥನೆ ಮಾಡಿಲಿಕ್ಕೆ ಆಗದಿದ್ದಾಗ ಈ ರೀತಿ ರೇಗಾಡುತ್ತಾನೆ ಎಂದು ಪ್ರಹ್ಲಾದ್​​ ಜೋಶಿ ಹೇಳಿದ್ದಾರೆ.

‘ರಾಹುಲ್​​ ಗಾಂಧಿ ಎಲ್ಲಿದ್ದಾರೆ?’

ದೇಶದ ವಿಪಕ್ಷ ನಾಯಕ ರಾಹುಲ್ ಗಾಂಧಿ ಕಳೆದ 25 ದಿನಗಳಿಂದ ಎಲ್ಲಿದ್ದಾರೆ ಎಂಬುದನ್ನು ದೇಶದ ಜನತೆಗೆ ತಿಳಿಸಿ ಎಂದೂ ಕಾಂಗ್ರೆಸ್​​ನ ಕೇಂದ್ರ ಸಚಿವರು ಆಗ್ರಹಿಸಿದ್ದಾರೆ. ನಾವು ಎಲ್ಲೇ ಹೋದರು ಹೇಳುತ್ತೇವೆ. ನಾನು ದಾವೋಸ್​​ಗೆ ಹೋಗಿದ್ದೆ, ಕಿರಣ್ ರಿಜಿಜು ಕತಾರ್​​ಗೆ ಹೋಗಿದ್ದರು. ಆ ರೀತಿ ಇವರು ಯಾಕೆ ಹೇಳುವುದಿಲ್ಲ? ವಿಪಕ್ಷ ನಾಯಕರಾಗಿರುವ ರಾಹುಲ್​​ ಎಲ್ಲಾ ಕೆಲಸ ಸರಿಸಿ ಎಲ್ಲಿಗೆ ಹೋಗಿದ್ದಾರೆ? ಏನು ಮಾಡುತ್ತಿದ್ದಾರೆ? ಎಂದವರು ಪ್ರಶ್ನಿಸಿದ್ದಾರೆ.

‘ಬರದ ವಿಚಾರದಲ್ಲೂ ರಾಜಕೀಯ ಸಲ್ಲ’

ಬರ ಅಧ್ಯಯನಕ್ಕಾಗಿ ಕೇಂದ್ರಕ್ಕೆ ರಾಜ್ಯ ಸರ್ಕಾರ ಪತ್ರ ಬರೆದ ವಿಚಾರವಾಗಿಯೂ ಪ್ರತಿಕ್ರಿಯಿಸಿರುವ ಜೋಶಿ, ರಾಜ್ಯದಲ್ಲಿ ಎಲ್ಲೆಲ್ಲಿ ಮಳೆಯಾಗಿದೆ, ಬರ ಸಮಸ್ಯೆ ಇದೆ ಎಂಬ ಬಗ್ಗೆ ಮೊದಲು ಅಧ್ಯಯನ ಮಾಡಿ ಅದನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು. ಅದನ್ನು ಬಿಟ್ಟು ಇದರಲ್ಲಿ ಸುಮ್ಮನೆ ರಾಜಕೀಯ ಮಾಡುವುದಲ್ಲ. ಕಾಂಗ್ರೆಸ್ ನೀತಿ ಏನಂದರೆ ಮಳೆ ಜಾಸ್ತಿ ಆದರೂ ಮೋದಿ ಕಾರಣ, ಮಳೆ ಕಡಿಮೆ ಆದರೂ ಮೋದಿ ಕಾರಣ. ಜನಸಂಖ್ಯೆ ಜಾಸ್ತಿ ಆದರೂ ಮೋದಿಯವರು ಕಾರಣ. ಇಂತಹ ಧೋರಣೆಯನ್ನು ಕಾಂಗ್ರೆಸ್ ಬಿಡಬೇಕು ಎಂದವರು ವಾಗ್ದಾಳಿ ನಡೆಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:13 pm, Thu, 16 July 26

Follow Us