ಕರ್ನಾಟಕಕ್ಕೆ ಸಿಹಿ ಸುದ್ದಿ: ಹೈದರಾಬಾದ್, ಚೆನ್ನೈ ಬೇಕಾಗಿಲ್ಲ ಬೆಂಗಳೂರಿನಲ್ಲೇ ಸಿಗಲಿದೆ ಅಮೆರಿಕ ವೀಸಾ
ಬೆಂಗಳೂರಿನಲ್ಲಿ ಅಮೇರಿಕಾ ಕಾನ್ಸುಲೇಟ್ ಕಚೇರಿ ಜನವರಿಯಲ್ಲಿ ಆರಂಭವಾಗಲಿದೆ ಎಂಬ ಸುದ್ದಿ ಕರ್ನಾಟಕದ ಜನರಿಗೆ ಸಂತಸ ತಂದಿದೆ. ಇದುವರೆಗೂ ಅಮೇರಿಕಾ ವೀಸಾಕ್ಕಾಗಿ ಹೈದರಾಬಾದ್ ಅಥವಾ ಚೆನ್ನೈಗೆ ತೆರಳಬೇಕಿತ್ತು. ಈಗ ಬೆಂಗಳೂರಿನಲ್ಲೇ ವೀಸಾ ಪಡೆಯಲು ಸಾಧ್ಯವಾಗುವುದು. ಬೆಂಗಳೂರಿನಲ್ಲಿ ಅಮೇರಿಕಾ ಕಾನ್ಸುಲೇಟ್ ಕಚೇರಿ ತೆರೆಯಲು ತೇಜಸ್ವಿ ಸೂರ್ಯ ಅವರ ಸತತ ಪ್ರಯತ್ನಗಳು ಫಲ ನೀಡಿವೆ. ಇದು ನಗರದ ಐಟಿ ಉದ್ಯಮಕ್ಕೆ ಮತ್ತು ಜನರಿಗೆ ಅನುಕೂಲವಾಗಲಿದೆ.
ಬೆಂಗಳೂರು, ಡಿಸೆಂಬರ್ 20: ಇಷ್ಟು ದಿನಗಳ ಕಾಲ ಅಮೆರಿಕದ ವೀಸಾ (America Visa) ಪಡೆಯಲು ಕರ್ನಾಟಕದ ಜನತೆ ಹೈದರಾಬಾದ್ ಅಥವಾ ಚೆನ್ನೈಗೆ ಹೋಗಬೇಕಿತ್ತು. ಇದು ಹೈರಾಣದ ಸಂಗತಿಯಾಗಿತ್ತು. ಆದರೆ, ಇನ್ಮುಂದೆ ಹೈದರಾಬಾದ್ ಅಥವಾ ಚೆನ್ನೈಗೆ ತೆರಳುವ ಅವಶ್ಯಕತೆ ಇಲ್ಲ, ಬೆಂಗಳೂರಿನಲ್ಲೇ (Bengaluru) ಅಮೆರಿಕದ ವೀಸಾ ಸಿಗುತ್ತದೆ. ಹೌದು, ಬೆಂಗಳೂರಿನಲ್ಲಿ ಜನವರಿ ತಿಂಗಳಿನಲ್ಲಿ ಅಮೆರಿಕ ಕಾನ್ಸುಲೇಟ್ ಕಚೇರಿ ಆರಂಭವಾಗಲಿದೆ. ಕಚೇರಿ ಆರಂಭಿಸುವ ನಿಟ್ಟಿನಲ್ಲಿ ಅಮೆರಿಕ ಕಾರ್ಯನಿರತವಾಗಿದೆ ಎಂದು ಭಾರತದಲ್ಲಿರುವ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೇಟ್ಟಿ ಹೇಳಿದ್ದಾರೆ.
ಅಮೆರಿಕ ಮತ್ತು ಭಾರತ ಬಿಸಿನೆಸ್ ಕೌನ್ಸಿಲ್ (ಯುಎಸ್ಐಬಿಸಿ) ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರುನಲ್ಲಿ ದೂತವಾಸ ಕಚೇರಿಯನ್ನು ಹೊಂದಿರದ ಏಕೈಕ ದೇಶ ಅಮೆರಕವಾಗಿತ್ತು. ಆದರೆ, ಈಗ ಕಚೇರಿ ಸ್ಥಾಪನೆಗೆ ನಾವು ಶ್ರಮಿಸಿದ್ದೇವೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ದೂತವಾಸ ಕಚೇರಿ ಆರಂಭವಾಗುತ್ತಿರುವ ವಿಚಾರವಾಗಿ ಬಿಜೆಪಿ ಸಂಸದ ತೇಜೆಸ್ವಿ ಸೂರ್ಯ ಸಂತಸ ವ್ಯಕ್ತಪಡಿಸಿದ್ದು, “ಬೆಂಗಳೂರಿನ ಜನರಿಗೆ ಇದು ಅತಿ ದೊಡ್ಡ ಸುದ್ದಿ, ಜನವರಿಯಲ್ಲಿ ಅಮೆರಿಕ ಕಾನ್ಸುಲೇಟ್ ಕಚೇರಿ ಆರಂಭವಾಗಲಿದೆ” ಎಂದು ಟ್ವೀಟ್ ಮಾಡಿದ್ದಾರೆ.
ಟ್ವಿಟರ್ ಪೋಸ್ಟ್
Big update for Bengalureans – January date set for the establishment of the US Consulate in Namma Ooru
For years, Bengaluru—the IT capital contributing 40% of India’s IT revenue—lacked a US Consulate, forcing residents to travel to Chennai or Hyderabad for visa work. I made it… pic.twitter.com/vRMgOmiIle
— Tejasvi Surya (@Tejasvi_Surya) December 20, 2024
ಮುಂದುವರೆದು “ಐಟಿ ರಾಜಧಾನಿ ಬೆಂಗಳೂರು ದೇಶದ ಐಟಿಗೆ ಶೇ40 ರಷ್ಟು ಆದಾಯ ನೀಡುತ್ತದೆ. ಬೆಂಗಳೂರಿನ ಅನೇಕ ಜನರು ಮತ್ತು ಟೆಕ್ಕಿಗಳು ನಗರದಲ್ಲಿ ಅಮೆರಿಕ ವೀಸಾ ಪಡೆಯಲು ಚೆನ್ನೈ ಮತ್ತು ಹೈದರಾಬಾದ್ ಹೋಗುತ್ತಿದ್ದರು. ಅಮೆರಿಕ ವೀಸಾ ಪಡೆಯಲು ಚೆನ್ನೈ ಮತ್ತು ಹೈದರಾಬಾದ್ ಹೋಗುವುದನ್ನು ತಪ್ಪಿಸಿ, ಬೆಂಗಳೂರಿನಲ್ಲೇ ದೂತವಾಸ ಕಚೇರಿ ಆರಂಭಿಸುವುದು ಸಂಸದನಾಗಿ ನನ್ನ ಗುರಿಯಾಗಿತ್ತು. ಅದರಂತೆ, ಬೆಂಗಳೂರಿನಲ್ಲಿ ದೂತವಾಸ ಆರಂಭಿಸುವಲ್ಲಿ ಯಶಸ್ವಿಯಾಗಿದ್ದೇನೆ” ಎಂದು ಹೇಳಿದರು.
“ಬೆಂಗಳೂರಿನಲ್ಲಿ ದೂತವಾಸ ತೆರೆಯುವಂತೆ ಕೇಂದ್ರ ಸಚಿವ ಎಸ್ ಜೈಶಂಕರ್ ಅವರಿಗೆ 2019 ನವೆಂಬರ್ನಲ್ಲಿ ಮನವಿ ಮಾಡಿದ್ದೆ. 2023ರಲ್ಲಿ ಬೆಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ದೂತವಾಸ ತೆರೆಯುವ ಬಗ್ಗೆ ಭರವಸೆ ನೀಡಿದರು.
“ನಾನು 2020 ರಲ್ಲಿ ಆಗಿನ ಯುಎಸ್ ರಾಯಭಾರಿ ಕೆನ್ನೆತ್ ಜಸ್ಟರ್ ಅವರೊಂದಿಗೆ ಭಾರತ-ಯುಎಸ್ ಸಂಬಂಧ ಮತ್ತು ಬೆಂಗಳೂರಿನಲ್ಲಿ ದೂತವಾಸ ಕಚೇರಿ ತೆರೆಯುವ ಬಗ್ಗೆ ಪ್ರಸ್ತಾಪಿಸಿದೆ. ಸತತ ಪ್ರಯತ್ನಗಳ ನಂತರ ಮತ್ತು ಪ್ರಧಾನಿ ನರೇಂದ್ರ ಮೋದಿಯವರ 2023 ರ ಯುಎಸ್ ಭೇಟಿಯ ಸಮಯದಲ್ಲಿ ಅಲ್ಲಿ ನಡೆದ ಮಾತುಕತೆಯಿಂದ ಬೆಂಗಳೂರಿನಲ್ಲಿ ದೂತವಾಸ ಕಚೇರಿ ಆರಂಭವಾಗುತ್ತಿದೆ” ಎಂದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:14 am, Fri, 20 December 24