UVCE ಸಂಸ್ಥೆಗೆ ಕೂಡಿ ಬರದ ಐಐಟಿ ಮಾದರಿ ಸೌಲಭ್ಯ; UVCEನಲ್ಲಿ ಸಿಬ್ಬಂದಿ ಕೊರತೆ, ವಿದ್ಯಾರ್ಥಿಗಳ ಪರದಾಟ
ಬೆಂಗಳೂರಿನ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ಅನ್ನ ಐಐಟಿ ಮಾದರಿ ಮಾಡ್ತೀವಿ ಪುಲ್ ಹೈಟೆಕ್ ಮಾಡ್ತೀವಿ ಅಂತ ಸರ್ಕಾರ ಹೇಳಿ ಹಲವು ತಿಂಗಳು ಕಳೆದರೂ ಕಾರ್ಯರೂಪಕ್ಕೆ ಬಂದಿಲ್ಲ. ಈಗ ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ಅನುದಾನ ಕೊರತೆಯಿಂದ ಹಲವು ಸಮಸ್ಯೆಗಳ ಆಗರವಾಗಿದ್ದು ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಬೆಂಗಳೂರು, ಫೆ.09: ಸಿಲಿಕಾನ್ ಸಿಟಿ ಬೆಂಗಳೂರಿನ ಕೆ.ಆರ್. ವೃತ್ತದಲ್ಲಿರುವ ಯುವಿಸಿಇ (UVCE) ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜುಗೆ ಹೈಟೆಕ್ ಸ್ಪರ್ಶ ನೀಡುವುದಾಗಿ ಈ ಹಿಂದಿನ ಬಿಜೆಪಿ (BJP) ಸರ್ಕಾರ ಹೇಳಿತ್ತು. ಶತಮಾನ ಕಂಡ ಜ್ಞಾನ ದೇಗುಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿದ್ಯಾಸಂಸ್ಥೆಯ ಕಟ್ಟಡಕ್ಕೆ ಐಐಟಿ ದರ್ಜೆಯ ಸ್ಥಾನಮಾನ ನೀಡ್ತೀವಿ, ಫುಲ್ ಹೈಟೆಕ್ ಮಾಡ್ತೀವಿ ಅಂತಾ ಹೇಳಿ ಅದಕ್ಕೆ ತಕ್ಕಂತ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಈಗಿನ ಸರ್ಕಾರ ಈಗ ಮುಂದಿನ ದಿನಗಳಲ್ಲಿ UVCE ಸಂಸ್ಥೆಯನ್ನು ನೈಜ ಐಐಟಿ (IIT) ಮಾದರಿಯಲ್ಲಿ ಸೌಲಭ್ಯ ನೀಡಿ ಮೇಲ್ದರ್ಜೆಗೆ ಏರಿಸುವುದಾಗಿ ಹೇಳ್ತೀದೆ. ಆದರೆ ಅನುದಾನವನ್ನ ಕೊಡ್ತಿಲ್ಲ. ಸಿಬ್ಬಂದಿಗಳ ನೇಮಕಾತಿಯೂ ನಡೆದಿಲ್ಲ. ಲ್ಯಾಬ್ ಸೌಲ್ಯಭ್ಯವೂ ಚೆನ್ನಾಗಿಲ್ಲದಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆ ಶುರುವಾಗಿದೆ.
ಪ್ರತಿಷ್ಠಿತ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ಅವ್ಯವಸ್ಥೆಯತ್ತ ಸಾಗಿದೆ. ಅಭಿವೃದ್ಧಿ ಕಾಣದೆ ಹಳ್ಳಹಿಡಿದಿದೆ. ಮೆಕಾನಿಕಲ್ ಲ್ಯಾಬ್ ನಲ್ಲಿಯ ಮೇಲಿನ ಸೀಲಿಂಗ್ ಕಿತ್ತು ಬರ್ತಿದೆ. ಕೆಲವು ಯಂತ್ರೋಪಕರಣಗಳು ಮೂಲೆಗುಂಪಾಗಿದೆ. ಇನ್ನು ಕೆಲವು ಹಾಳಾಗಿ ಮೂಲೆ ಸೇರಿದೆ. ಜೊತೆಗೆ ಇನ್ನು ಕೆಲವು ತಂತ್ರಜ್ಞಾನದ ಸೌಲಭ್ಯವೇ ಇಲ್ಲ. ಹೈಟೆಕ್ ವೈಫೈ ವ್ಯವಸ್ಥೆ ಇಲ್ಲ, ಲ್ಯಾಬ್ ನಲ್ಲಿ ಹಳೆಯ ಕಾಂಪೋನೆಂಟ್ ಗಳೆ ಇದ್ದು ಹೊಸ ಲ್ಯಾಬ್ ಉಪಕರಣ ಇಲ್ಲ, ಇದರ ಜೊತೆಗೆ ಪರ್ಮನೆಂಟ್ ಟೀಚಿಂಗ್ ಸಿಬ್ಬಂದಿ ಇಲ್ಲ, ಲ್ಯಾಬ್ ಗಳಲ್ಲಿ ಲ್ಯಾಬ್ ಟೆಕ್ನಿಷಿಯನ್ಸ್ ಇಲ್ಲ, ಈ ಕೆಲಸವನ್ನು ಶಿಕ್ಷಕರೇ ಮಾಡಬೇಕು ಸಾಕಷ್ಟು ಶಿಕ್ಷಕರ ಕೊರತೆ ಇದ್ದು ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಇದನ್ನೂ ಓದಿ: ಬೆಂಗಳೂರಿಗೆ ಶೀಘ್ರ ಬರಲಿದೆ ಸಬ್ ಅರ್ಬನ್ ರೈಲು, ಅಂತಿಮ ಹಂತದಲ್ಲಿ 2 ಕಾರಿಡಾರ್: ಎಂಬಿ ಪಾಟೀಲ್
ಈ ಹಿಂದೆ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಇತ್ತು. ಸರ್ಕಾರ ಪ್ರತ್ಯೇಕ ವಿವಿ ಘೋಷಣೆ ಬಳಿಕ ಬೆಂಗಳೂರು ವಿವಿಯೂ ಅನುದಾನ ನೀಡುತ್ತಿಲ್ಲ. ಸದ್ಯ ನೀಡಬೇಕಿದ್ದ 87 ಕೋಟಿ ಕಾಮಗಾರಿ ಅನುದಾನದಲ್ಲಿ ವಿವಿ 25 ಕೋಟಿ ಮಾತ್ರ ನೀಡಿ ಕೈತೊಳೆದುಕೊಂಡಿದೆ ಮತ್ತೊಂದಡೆ ಸರ್ಕಾರವೂ ಅನುದಾನ ನೀಡದ ಹಿನ್ನಲೆ ಕಾಮಗಾರಿಗೆ ಪರದಾಡಬೇಕಿದೆ. ಇನ್ನು ಈ ಬಗ್ಗೆ ಸಚಿವರನ್ನ ಕೇಳಿದ್ರೆ ಕಾಮಗಾರಿ ಮಾಡಲಿ ನಾವು ಕೊಡ್ತೀವಿ ಅಂತಿದ್ದಾರೆ.
ಒಟ್ಟಾರೆ ಐತಿಹಾಸಿಕ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ UVCE ಗೆ ಐಐಟಿ ಮಾದರಿ ಮಾಡ್ತೀವಿ ಹೈಟೆಕ್ ಮಾಡ್ತೀವಿ ಅಂತ ಕಟ್ಟಡಕ್ಕೆ ಸುಣ್ಣ ಬಣ್ಣ ಬಳೆದದ್ದು ಬಿಟ್ಟರೆ ಬೇರೇನೂ ಆಗುತ್ತಿಲ್ಲ. ಹೀಗಾಗಿ ಇನ್ನು ಮುಂದಾದರು ಸರ್ಕಾರ ಅದಷ್ಟು ಬೇಗ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಐತಿಹಾಸಿಕ ಶಿಕ್ಷಣ ಸಂಸ್ಥೆ ಉಳಿಸಿ ಬೆಳೆಸುವತ್ತ ಗಮನ ಹರಿಸಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ