ಬೆಂಗಳೂರಿಗೆ ಶೀಘ್ರ ಬರಲಿದೆ ಸಬ್ ಅರ್ಬನ್ ರೈಲು, ಅಂತಿಮ ಹಂತದಲ್ಲಿ 2 ಕಾರಿಡಾರ್: ಎಂಬಿ ಪಾಟೀಲ್

Bengaluru Suburban Rail Project: ಬೆಂಗಳೂರು ಸಬ್​ ಅರ್ಬನ್ ರೈಲು ಯೋಜನೆಯ ನಾಲ್ಕು ಕಾರಿಡಾರ್​ಗಳ ಪೈಕಿ 2 ಶೀಘ್ರದಲ್ಲೇ ಸಿದ್ಧವಾಗಲಿವೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ಜತೆಗೆ, ಇನ್ನೆರಡು ಕಾರಿಡಾರ್​ಗಳಿಗೆ ಸಂಬಂಧಿಸಿದ ವಿವರಗಳನ್ನೂ ನೀಡಿದ್ದು, 2027 ರಲ್ಲಿ ಯೋಜನೆಯ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದಿದ್ದಾರೆ.

ಬೆಂಗಳೂರಿಗೆ ಶೀಘ್ರ ಬರಲಿದೆ ಸಬ್ ಅರ್ಬನ್ ರೈಲು, ಅಂತಿಮ ಹಂತದಲ್ಲಿ 2 ಕಾರಿಡಾರ್: ಎಂಬಿ ಪಾಟೀಲ್
ಸಾಂದರ್ಭಿಕ ಚಿತ್ರ
Follow us
Kiran HV
| Updated By: Ganapathi Sharma

Updated on: Feb 09, 2024 | 1:50 PM

ಬೆಂಗಳೂರು, ಫೆಬ್ರವರಿ 9: ಬೆಂಗಳೂರು ಉಪ ನಗರ ರೈಲ್ವೆ ಅಥವಾ ಸಬ್ ಅರ್ಬನ್ ರೈಲ್ವೆ ಯೋಜನೆಗೆ (Bengaluru Suburban Rail Project) ಸಂಬಂಧಿಸಿದಂತೆ ಕೆಎಫ್​ಡಬ್ಲ್ಯು (KFW) ಸಂಸ್ಥೆ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದೇವೆ. 4,561 ಕೋಟಿ ರೂಪಾಯಿ ಒಡಂಬಡಿಕೆಗೆ ಸಹಿ ಹಾಕಿದ್ದೇವೆ ಎಂದು ಸಚಿವ ಎಂಬಿ ಪಾಟೀಲ್ (MB Patil) ಮಾಹಿತಿ ನೀಡಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, 2021ರಂದೇ ಇದಕ್ಕೆ ಅನುಮೋದನೆ ದೊರಕಿದೆ. ಬೆಂಗಳೂರು ನಗರ ಮತ್ತು ಹೊರ ವಲಯಗಳನ್ನು ಜೋಡಿಸಲು ನಾಲ್ಕು ಕಾರಿಡಾರ್​​ಗಳ ಮೂಲಕ 148 ಕಿಮೀ ನಿರ್ಮಾಣ ಮಾಡುತ್ತಿದ್ದೇವೆ. ಈ ಪೈಕಿ ಎರಡು ಕಾರಿಡಾರ್​ಗಳು ಅಂತಿಮ ಹಂತಕ್ಕೆ ಬಂದಿವೆ ಎಂದು ಹೇಳಿದರು.

ಈ ಕಾರಿಡಾರ್​ಗಳಿಂದ ಪ್ರತಿದಿನ ಸುಮಾರು 10 ಲಕ್ಷ ಸಾರ್ವಜನಿಕರು ಪ್ರಯಾಣ ಮಾಡಲು ಅವಕಾಶ ಆಗುತ್ತದೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ನೆರವು ಮತ್ತು ಸಾಲದ ಮೂಲಕ ಇದನ್ನು ಪೂರ್ತಿ ಮಾಡಲಾಗುತ್ತಿದೆ. ಬೆಂಗಳೂರು ನಗರದ ವಾಹನಗಳ ದಟ್ಟಣೆಯನ್ನು ಕಡಿಮೆ ಮಾಡಲು ಸಬ್ ಅರ್ಬನ್ ರೈಲ್ವೆಯಿಂದ ಸಾಧ್ಯವಾಗಲಿದೆ. ಮೈಸೂರಿಗೆ ನಾಲ್ಕು ಲೈನ್ ಮಾಡಬೇಕು ಎಂಬ ಬೇಡಿಕೆ ಇದೆ. ಇದರ ಬಗ್ಗೆಯೂ ಗಮನಹರಿಸಿದ್ದೇವೆ ಎಂದು ಅವರು ತಿಳಿಸಿದರು.

ಸಬ್ ಅರ್ಬನ್ ರೈಲ್ವೆ ಒಟ್ಟು 148 ಕಿಮೀ ಹಾಗೂ 58 ನಿಲ್ದಾಣಗಳನ್ನು ಹೊಂದಿರಲಿದೆ.

ನಾಲ್ಕು ಕಾರಿಡಾರ್​​ಗಳು ಯಾವುದೆಲ್ಲ?

ಕಾರಿಡಾರ್ 1: ಬೆಂಗಳೂರು – ದೇವನಹಳ್ಳಿ (41.4 ಕಿ.ಮೀ.) ಕಾರಿಡಾರ್ 2: ಚಿಕ್ಕಬಾಣಾವರ – ಬೆನ್ನಿಗಾನಹಳ್ಳಿ (25.2 ಕಿ.ಮೀ.) ಕಾರಿಡಾರ್ 3: ಕೆಂಗೇರಿ – ವೈಟ್ ಫೀಲ್ಡ್ ಕಾರಿಡಾರ್ 4: ಹೀಲಲಿಗೆ – ರಾಜನಕುಂಟೆ ( 46.24 ಕಿ.ಮೀ.)

ನಾಲ್ಕು ಸೆಕ್ಟರ್​ಗಳಲ್ಲಿ ಸಬ್ ಅರ್ಬನ್ ರೈಲು ಯೋಜನೆಗಳು ನಡೆಯುತ್ತಿವೆ. ಯೋಜನೆಗೆ ಬೇಕಿರುವ ಮೊತ್ತದ ಶೇ 20 ರಾಜ್ಯ ಸರ್ಕಾರ, ಶೇ 20 ಕೇಂದ್ರ ಸರ್ಕಾರ, ಉಳಿದದ್ದನ್ನು ಬ್ಯಾಂಕ್ ಮೂಲಕ ಸಂಗ್ರಹಿಸಿ ಯೋಜನೆ ಸಿದ್ದವಾಗುತ್ತಿದೆ. 2027 ರಲ್ಲಿ ಈ ಯೋಜನೆ ಪೂರ್ಣಗಳಿಸುವ ವಿಶ್ವಾಸವಿದೆ ಎಂದು ಎಂಬಿ ಪಾಟೀಲ್ ಭರವಸೆ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬೆಂಗಳೂರು ಸಬ್​ಅರ್ಬನ್ ರೈಲು ಯೋಜನೆಗೆ ವೇಗ: ದೇಶದಲ್ಲೇ ಅತಿ ಉದ್ದದ ಯು ಗರ್ಡರ್‌ ಅಳವಡಿಕೆಗೆ ಸಿದ್ಧತೆ

ಕಾರಿಡಾರ್‌- 2 ರಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ 31 ಮೀ ಉದ್ದದ ಯು ಗರ್ಡರ್‌ (U Girder) ಅಳವಡಿಕೆಗೆ ಇತ್ತೀಚೆಗೆ ಸಿದ್ಧತೆ ಮಾಡಲಾಗಿತ್ತು. ಈವರೆಗೂ ಮೆಟ್ರೋದಲ್ಲಿ 28 ಮೀ. ಉದ್ದದ ಗರ್ಡರ್ ತಯಾರಿಸಿ ಅಳವಡಿಕೆ‌ ಮಾಡಲಾಗುತ್ತಿತ್ತು. ಆದರೆ, ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯಲ್ಲಿ ಈ ದಾಖಲೆಯನ್ನು ಮುರಿಯಲಾಗುತ್ತಿದೆ. ಇದರೊಂದಿಗೆ ಕಾರಿಡಾರ್‌- 2 ರ ಕಾಮಗಾರಿಯನ್ನು ತ್ವರಿತಗೊಳಿಸಲಾಗುತ್ತಿದೆ ಎಂದು ಜನವರಿ 8ರಂದು ಎಂಬಿ ಪಾಟೀಲ್ ಟ್ವೀಟ್ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ