ಉಪ ರಾಷ್ಟ್ರಪತಿಗಳಿಂದ ಶ್ರೀ ರವಿಶಂಕರ್​​ ಗುರೂಜಿ ಗುಣಗಾನ: ವಿಶೇಷ ಅಂಚೆ ಚೀಟಿ ಬಿಡುಗಡೆ

ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45 ವರ್ಷಗಳ ಸೇವೆ ಹಾಗೂ ರವಿಶಂಕರ್ ಗುರೂಜಿಯವರ 70ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಭಾಗಿಯಾಗಿದ್ದು, ಈ ವೇಳೆ ಅವರು ವಿಶೇಷ ಅಂಚೆ ಚೀಟಿಯನ್ನೂ ಬಿಡುಗಡೆಗೊಳಿಸಿದ್ದಾರೆ. ಗುರೂಜಿಯನ್ನು ಶ್ಲಾಘಿಸಿದ ಅವರು, ಗುರುಕುಲದ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ್ದಾರೆ. ಗೋಶಾಲೆ ವೀಕ್ಷಣೆಯನ್ನೂ ಮಾಡಿದ್ದಾರೆ.

ಉಪ ರಾಷ್ಟ್ರಪತಿಗಳಿಂದ ಶ್ರೀ ರವಿಶಂಕರ್​​ ಗುರೂಜಿ ಗುಣಗಾನ: ವಿಶೇಷ ಅಂಚೆ ಚೀಟಿ ಬಿಡುಗಡೆ
ಆರ್ಟ್​​ ಆಫ್​​ ಲಿವಿಂಗ್​​ ಕಾರ್ಯಕ್ರಮದಲ್ಲಿ ಭಾಗಿಯಾದ ಉಪ ರಾಷ್ಟ್ರಪತಿಗಳು

Updated on: May 29, 2026 | 2:33 PM

ಬೆಂಗಳೂರು,ಮೇ 29 : ದಿ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಯುವ ಅಭಿವೃದ್ಧಿ, ಉದ್ಯಮಶೀಲತೆ, ಸುಸ್ಥಿರತೆ, ಪ್ರಜ್ಞೆಯ ಅಧ್ಯಯನಗಳು ಮತ್ತು ಶಿಕ್ಷಣವನ್ನು ಒಳಗೊಂಡ ಐದು ಪ್ರಮುಖ ಉಪಕ್ರಮಗಳಿಗೆ ಭಾರತದ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಚಾಲನೆ ನೀಡಿದ್ದಾರೆ. ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45 ವರ್ಷಗಳ ಮಾನವೀಯ ಸೇವೆ ಮತ್ತು ಈ ತಿಂಗಳು 70 ವರ್ಷಕ್ಕೆ ಕಾಲಿಟ್ಟ ಶ್ರೀ ರವಿ ಶಂಕರ್ ಗುರೂಜಿ ಅವರ ಜೀವನಪರ್ಯಂತ ಶಾಂತಿ, ಯೋಗಕ್ಷೇಮ ಮತ್ತು ಮಾನವೀಯ ಮೌಲ್ಯಗಳಿಗೆ ನೀಡಿದ ಕೊಡುಗೆಯನ್ನು ಸ್ಮರಿಸುವ ಕಾರ್ಯಕ್ರಮ ಇದಾಗಿದೆ.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ , ಇಂದು ನಡೆಯುತ್ತಿರುವುದು ಒಂದು ಶ್ರೇಷ್ಠ ದೃಷ್ಟಿಯ ಆಚರಣೆಯಾಗಿದ್ದು, ಇದು ಖಂಡಗಳಾದ್ಯಂತ ಲಕ್ಷಾಂತರ ಜನರ ಜೀವನವನ್ನು ಸ್ಪರ್ಶಿಸಿದೆ. ದಿ ಆರ್ಟ್ ಆಫ್ ಲಿವಿಂಗ್ 182 ದೇಶಗಳಲ್ಲಿ ಇರುವುದು ನನಗೆ ಆಶ್ಚರ್ಯವನ್ನುಂಟು ಮಾಡಿದೆ. ಮಾನವ ವರ್ಗದ ಬಹುತೇಕ ನಾಗರಿಕತೆಯು ಈ ಆಂದೋಲನದ ಮೂಲಕ ಸಂಪರ್ಕಗೊಳ್ಳುತ್ತಿದೆ ಎಂದಿದ್ದಾರೆ. ಸಂಘರ್ಷ ಮತ್ತು ಅನಿಶ್ಚಿತತೆಯಿಂದ ಗುರುತಿಸಲ್ಪಟ್ಟ ಜಗತ್ತಿನಲ್ಲಿ, ಶ್ರೀ ರವಿ ಶಂಕರ್ ಗುರೂಜಿ ಅವರು ವಿವೇಕ, ಅರಿವು, ಶಾಂತಿ ಮತ್ತು ಸೌಹಾರ್ದತೆಯ ಮೌಲ್ಯಗಳೊಂದಿಗೆ ಮಾನವೀಯತೆಯನ್ನು ಪ್ರೇರೇಪಿಸುವುದನ್ನು ಮುಂದುವರೆಸಿರೋದಾಗಿ ಶ್ಲಾಘಿಸಿದ್ದಾರೆ. ರವಿಶಂಕರ್​​ ಗುರೂಜಿ ಅವರ ಸರಳತೆ ಮತ್ತು ಪ್ರಭಾವವನ್ನು ಶ್ಲಾಘಿಸಿದ ರಾಧಾಕೃಷ್ಣನ್, ಅವರ ನಗು, ವಿನಮ್ರತೆ ಮತ್ತು ಪ್ರೀತಿ ಪ್ರತಿಯೊಬ್ಬರ ಹೃದಯವನ್ನೂ ಸ್ಪರ್ಶಿಸುತ್ತದೆ. ಅವರ ಕೊಡುಗೆಯನ್ನು ಅಸಾಧಾರಣವಾಗಿಸುವುದು ಅವರು ಸಾಕಾರವಾಗಿಸಿರುವ ವಿನಯ ಮತ್ತು ಮಾನವೀಯತೆ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಧ್ಯಾನ ಮೂಲಭೂತ ಅವಶ್ಯಕತೆ’

ಉಪ ರಾಷ್ಟ್ರಪತಿಗಳನ್ನು ಸ್ವಾಗತಿಸಿ ಮಾತನಾಡಿದ ಶ್ರೀ ರವಿಶಂಕರ್​​ ಗುರೂಜಿ, ಧ್ಯಾನವು ಈಗ ಕೇವಲ ಐಷಾರಾಮವಾಗಿ ಉಳಿದಿಲ್ಲ ಎಂಬುದನ್ನು ಇಂದು ಪ್ರಪಂಚ ಗುರುತಿಸಿದೆ. ವಿಶ್ವ ಧ್ಯಾನ ದಿನವನ್ನು ಘೋಷಿಸಲು 192 ದೇಶಗಳು ಒಗ್ಗೂಡಿರುವುದರಿಂದ, ಧ್ಯಾನವು ಆರೋಗ್ಯಕರ, ಸಂತೋಷದ ಮತ್ತು ಒತ್ತಡ-ಮುಕ್ತ ಜೀವನಕ್ಕೆ ಒಂದು ಮೂಲಭೂತ ಅವಶ್ಯಕತೆ ಎಂಬ ತಿಳುವಳಿಕೆ ಹೆಚ್ಚುತ್ತಿದೆ ಎಂದಿದ್ದಾರೆ. ಜೊತೆಗೆ ಜ್ಞಾನ, ಧ್ಯಾನ ಮತ್ತು ಸಂಗೀತ ಎಂಬ ಮೂರು ವಿಷಯಗಳು ಯಾವಾಗಲೂ ನಮ್ಮೊಂದಿಗೆ ಜೀವನದುದ್ದಕ್ಕೂ ಇರಬೇಕು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಆರ್ಟ್ ಆಫ್ ಲಿವಿಂಗ್​ನ ಪರಿಶ್ರಮದಿಂದ ಮಹಿಮಾಪುರ ಗುಡ್ಡ ಈಗ ಹಸಿರುಮಯ

ಸಭೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಈ ಜಾಗತಿಕ ಆಂದೋಲನದ ಬೇರುಗಳು ನಮ್ಮ ಪುಣ್ಯಭೂಮಿಗೆ ಸಂಪರ್ಕಗೊಂಡಿರುವುದು ಕರ್ನಾಟಕಕ್ಕೆ ಹೆಮ್ಮೆಯ ವಿಷಯವಾಗಿದೆ. ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ, ದಿ ಆರ್ಟ್ ಆಫ್ ಲಿವಿಂಗ್ ವಿವಿಧ ಕಾರ್ಯಕ್ರಮಗಳ ಮೂಲಕ ವೈಯಕ್ತಿಕ, ಸಮುದಾಯ ಮತ್ತು ಜಾಗತಿಕ ಮಟ್ಟದಲ್ಲಿ ಶಾಂತಿ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುತ್ತಿದೆ. ಮಾನವೀಯ ಸೇವೆಗೆ ಮೀರಿ, ಶ್ರೀ ರವಿಶಂಕರ ಗುರೂಜಿ ಅವರ ಶಾಂತಿ ನಿರ್ಮಾಣದ ಪ್ರಯತ್ನಗಳು ದೀರ್ಘಕಾಲದ ಸಂಘರ್ಷಗಳನ್ನು ಪರಿಹರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿವೆ. ಮಾನವೀಯ ಮೌಲ್ಯಗಳ ಪುನರುಜ್ಜೀವನದ ಮೂಲಕ ಹಿಂಸಾಚಾರ ಮುಕ್ತ ಮತ್ತು ಒತ್ತಡ ಮುಕ್ತ ಸಮಾಜದ ಅವರ ದೃಷ್ಟಿಯು ಪ್ರಪಂಚದಾದ್ಯಂತ ಮೆಚ್ಚುಗೆ ಮತ್ತು ಮನ್ನಣೆಯನ್ನು ಪಡೆದಿದೆ ಎಂದಿದ್ದಾರೆ.

ಅಂಚೆ ಚೀಟಿ ಅನಾವರಣ

ದಿ ಆರ್ಟ್ ಆಫ್ ಲಿವಿಂಗ್‌ ವೈಯಕ್ತಿಕ ಯೋಗಕ್ಷೇಮ, ಸಾಮಾಜಿಕ ಪರಿವರ್ತನೆ ಮತ್ತು ಜಾಗತಿಕ ಶಾಂತಿಗೆ ನೀಡಿದ 45 ವರ್ಷಗಳ ಕೊಡುಗೆಯನ್ನು ಗುರುತಿಸುವ ಸ್ಮರಣಾರ್ಥ ಅಂಚೆ ಚೀಟಿಯನ್ನೂ ಇದೇ ವೇಳೆ ಉಪ ರಾಷ್ಟ್ರಪತಿಗಳು ಗಣ್ಯರೊಂದಿಗೆ ಅನಾವರಣಗೊಳಿಸಿದ್ದಾರೆ.

ವಿದ್ಯಾರ್ಥಿಗಳ ಜೊತೆ ಸಂವಾದ

ಆಶ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉಪ ರಾಷ್ಟ್ರಪತಿಗಳು ಸಂಸ್ಥೆಯ ವಿವಿಧ ಸೌಲಭ್ಯಗಳನ್ನು ವೀಕ್ಷಿಸಿದ್ದಾರೆ. ಗುರುಕುಲಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಾದವನ್ನೂ ನಡೆಸಿದ್ದಾರೆ. ಶ್ರೀ ಪ್ರತಾಪ ಗಣಪತಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಅವರು, ಶ್ರೀ ಸೋಮನಾಥ ಜ್ಯೋತಿರ್ಲಿಂಗದ ಪವಿತ್ರ ಅಂಶಗಳ ದರ್ಶನ ಪಡೆಯುವ ಜೊತೆಗೆ ಸುಮಾರು 1,600 ಸ್ಥಳೀಯ ಹಸುಗಳಿರುವ ಗೋಶಾಲೆಗೆ ಭೇಟಿ ನೀಡಿದ್ದಾರೆ.

ಚಾಲನೆ ನೀಡಲಾದ ಉಪಕ್ರಮಗಳಲ್ಲಿ ಯುವ ವೃತ್ತಿ ಶ್ರೇಷ್ಠತಾ ಕಾರ್ಯಕ್ರಮ (Youth Career Excellence Program), ಪೂರ್ವ ಜ್ಞಾನ ವ್ಯವಸ್ಥೆಗಳ ಅಧ್ಯಾಪಕರು (Faculty of Eastern Knowledge Systems), ಆರ್ಟ್ ಆಫ್ ಲಿವಿಂಗ್ ಇನ್ನೋವೇಶನ್ ಮತ್ತು ಉದ್ಯಮಶೀಲತಾ ಇನ್‌ಕ್ಯುಬೇಶನ್ (Art of Living Innovation and Entrepreneurship Incubation), ಪ್ರಜ್ಞೆಯ ಅಧ್ಯಯನಗಳು ಮತ್ತು ಮಾನವ ಸಾಮರ್ಥ್ಯದ ಉತ್ಕೃಷ್ಟತಾ ಕೇಂದ್ರ (Centre of Excellence on Consciousness Studies and Human Potential), ಮತ್ತು ಇಕೋ ಶಾಂತಿ (Eco Shanti) ಸೇರಿವೆ.

ಈ ಸಮಾರಂಭದೊಂದಿಗೆ ದಿ ಆರ್ಟ್ ಆಫ್ ಲಿವಿಂಗ್ ಅಂತರಾಷ್ಟ್ರೀಯ ಕೇಂದ್ರದಲ್ಲಿ ಒಂದು ತಿಂಗಳ ಕಾಲ ನಡೆದ ಆಚರಣೆಯು ಮುಕ್ತಾಯಗೊಂಡಿದೆ. ಭಾರತ ಮತ್ತು ಪ್ರಪಂಚದಾದ್ಯಂತದ ರಾಜಕೀಯ ವಲಯದ ರಾಷ್ಟ್ರೀಯ ನಾಯಕರು, ವ್ಯಾಪಾರ ದಿಗ್ಗಜರು, ಕ್ರೀಡಾಪಟುಗಳು, ಉದ್ಯಮಿಗಳು, ಶಿಕ್ಷಣ ತಜ್ಞರು, ಧರ್ಮ ಗುರುಗಳು, ರಾಜತಾಂತ್ರಿಕರು, ಕಲಾವಿದರು ಮತ್ತು ಸಾಮಾಜಿಕ ಪರಿವರ್ತನಾಕಾರರು ಸೇರಿದಂತೆ 678 ಗಣ್ಯ ಅತಿಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ವಿಶೇಷ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Published On - 2:29 pm, Fri, 29 May 26

Prasanna Hegde

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Follow Us