
ಬೆಂಗಳೂರು, ಜೂನ್ 20: ವಿಧಾನಸೌಧ (Vidhan Soudha) ಮತ್ತು ವಿಕಾಸಸೌಧ (Vikasa Soudha) ಕರ್ನಾಟಕ ರಾಜ್ಯದ ಶಕ್ತಿ ಕೇಂದ್ರಗಳಾಗಿವೆ. ರಾಜ್ಯ ಮತ್ತು ಹೊರರಾಜ್ಯದಿಂದ ವಿಧಾನಸೌಧ ವೀಕ್ಷಿಸಲು ಬರುವ ಜನರಲ್ಲಿ ಕನ್ನಡದ (Kannada) ಅಭಿಮಾನ ಜಾಗೃತಗೊಳ್ಳುವಂತೆ ಮಾಡಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಿನೂತನ ಯೋಜನೆ ರೂಪಿಸಿದೆ. ವಿಧಾನಸೌಧ ಮತ್ತು ವಿಕಾಸಸೌಧದ ಕಟ್ಟಡಗಳಿಗೆ ಕನ್ನಡತನ ಪ್ರತಿಬಿಂಬಿಸುವ ಘೋಷವಾಕ್ಯಗಳನ್ನು ಅಳವಡಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಯೋಜನೆ ರೂಪಿಸಿದ್ದು, ಸಾರ್ವಜನಿಕರಿಂದ ಘೋಷವಾಕ್ಯಗಳನ್ನು ಆಹ್ವಾನಿಸಿದೆ.
ಸಾರ್ವಜನಿಕರು ಕನ್ನಡ ಮತ್ತು ಕರ್ನಾಟಕದ ಕುರಿತಾದ ಘೋಷವಾಕ್ಯಗಳನ್ನು ಕಳುಹಿಸಬಹುದಾಗಿದೆ. ಸಾಹಿತ್ಯಿಕ ಘೋಷವಾಕ್ಯಗಳಲ್ಲದೆ, ಜನಪದದ ಸೂಕ್ತಿಗಳು, ಚಳವಳಿಗಳ ಘೋಷಣೆಗಳು, ಸಿನಿಮಾ ಗೀತೆಗಳನ್ನು ಸಹ ಅವಲೋಕಿಸಿ ಮೌಲ್ಯಯುತ ಸಲಹೆಗಳನ್ನು ನೀಡಬಹುದಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
ನಿರಾಶಾದಾಯಕ ನುಡಿಗಳು, ವಿವಾದಾತ್ಮಕ ಹೇಳಿಕೆಗಳನ್ನು ಪರಿಗಣಿಸಲಾಗುವುದಿಲ್ಲ. ಗರಿಷ್ಠ ಎರಡು ಸಾಲುಗಳಲ್ಲಿ ಈ ಘೋಷವಾಕ್ಯಗಳು ಇರಬೇಕು. ರಚನೆಕಾರರ ಹೆಸರನ್ನು ಕಡ್ಡಾಯವಾಗಿ ನಮೂದಿಸಬೇಕು. chairman.kanpra@gmail.com ಗೆ ಘೋಷವಾಕ್ಯ ಕಳುಹಿಸಬೇಕು. ಜೂನ್ 30 ಕೊನೆಯ ದಿನಾಂಕ. ಸಂಪರ್ಕ ಸಂಖ್ಯೆ ಮತ್ತು ವಿಳಾಸ ಕಡ್ಡಾಯವಾಗಿ ನಮೂದಿಸಬೇಕು’ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ವಿಧಾನಸೌಧ ಪ್ರವಾಸ ಇಂದಿನಿಂದ ಆರಂಭ: ಟಿಕೆಟ್ ಬುಕ್ಕಿಂಗ್ ಎಲ್ಲಿ ಮಾಡಬೇಕು, ದರ ಎಷ್ಟು? ಇಲ್ಲಿದೆ ವಿವರ
2025ರ ಜನವರಿ 27 ರಂದು ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಕನ್ನಡಾಂಬೆ ಭುವನೇಶ್ವರಿ ದೇವಿಯ ಕಂಚಿನ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗಿದೆ. ಈ ಕಂಚಿನ ಪ್ರತಿಮೆಯನ್ನು ಶಿಲ್ಪಿ ಶ್ರೀಧರ್ ಮೂರ್ತಿ ನಿರ್ಮಾಣ ಮಾಡಿದ್ದಾರೆ. ಭುವನೇಶ್ವರಿ ದೇವಿ ಪ್ರತಿಮೆ 43.6 ಅಡಿ ಎತ್ತರ ಇದೆ. ಬರೋಬ್ಬರಿ 21.24 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಈ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆಗೊಳಿಸಿದರು.