ಪ್ರೇಮಿಗೆ ಜಾಮೀನು ಕೊಡಿಸಲು ಬೆಂಗಳೂರಿನಿಂದ ಡ್ರಗ್ಸ್ ಸಾಗಿಸಿದ ಯುವತಿ: ವಿಜಯವಾಡ ರೈಲ್ವೆ ನಿಲ್ದಾಣದಲ್ಲಿ 110 ಗ್ರಾಂ ಎಂಡಿಎಂಎ ವಶ, ಇಬ್ಬರ ಬಂಧನ

ವಿಜಯವಾಡ ರೈಲ್ವೆ ನಿಲ್ದಾಣದಲ್ಲಿ ಬೃಹತ್ ಪ್ರಮಾಣದ ಎಂಡಿಎಂಎ ಡ್ರಗ್ಸ್ ಸಾಗಿಸುತ್ತಿದ್ದ ನಾಗಸೌಮ್ಯಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರೇಮಿಯ ಜಾಮೀನಿಗೆ ಹಣ ಗಳಿಸಲು ಈ ಕೃತ್ಯಕ್ಕೆ ಮುಂದಾಗಿದ್ದ ನಾಗಸೌಮ್ಯ, ಬೆಂಗಳೂರಿನಿಂದ ವಿಜಯವಾಡಕ್ಕೆ ಡ್ರಗ್ಸ್ ಸಾಗಾಟಕ್ಕಿಳಿದಿದ್ದಳು. ಈ ಜಾಲದ ಪ್ರಮುಖ ಆರೋಪಿ ಬಶೀರ್ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್ ದಂಧೆ ನಡೆಸುತ್ತಿದ್ದ. ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.

ಪ್ರೇಮಿಗೆ ಜಾಮೀನು ಕೊಡಿಸಲು ಬೆಂಗಳೂರಿನಿಂದ ಡ್ರಗ್ಸ್ ಸಾಗಿಸಿದ ಯುವತಿ: ವಿಜಯವಾಡ ರೈಲ್ವೆ ನಿಲ್ದಾಣದಲ್ಲಿ 110 ಗ್ರಾಂ ಎಂಡಿಎಂಎ ವಶ, ಇಬ್ಬರ ಬಂಧನ
ಬೆಂಗಳೂರಿನಿಂದ ಡ್ರಗ್ಸ್​​ ಸಾಗಿಸಿದ ಯುವತಿ

Updated on: Oct 15, 2026 | 4:31 PM

ವಿಜಯವಾಡ, ಅ.15: ಜೈಲಿನಲ್ಲಿರುವ ತನ್ನ ಪ್ರೇಮಿಗೆ ಜಾಮೀನು ಕೊಡಿಸಲು ಹಣದ ಅಗತ್ಯವಿದ್ದ ಕಾರಣ, ಸುಲಭವಾಗಿ ಹಣ ಸಂಪಾದಿಸುವ ಆಸೆಗೆ ಬಿದ್ದು ಡ್ರಗ್ಸ್ ಸಾಗಾಟಕ್ಕಿಳಿದ ನಾಗಸೌಮ್ಯ ಎನ್ನುವ ಯುವತಿ ರೈಲ್ವೆ ಪೊಲೀಸರ ಅತಿಥಿಯಾಗಿದ್ದಾಳೆ. ಬೆಂಗಳೂರಿನಿಂದ ವಿಜಯವಾಡಕ್ಕೆ ಸಾಗಿಸುತ್ತಿದ್ದ ಬೃಹತ್ ಪ್ರಮಾಣದ ಎಂಡಿಎಂಎ (MDMA) ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಮುಖ ಆರೋಪಿ ಬಶೀರ್‌ನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.

ನಾಗಸೌಮ್ಯಳ ಪ್ರಿಯತಮ ಮೂರು ತಿಂಗಳ ಚಿತ್ತೂರಿನಲ್ಲಿ ಡ್ರಗ್ಸ್ ದಂಧೆ ಕೇಸ್‌ನಲ್ಲಿ ಸಿಲುಕಿ ಅರೆಸ್ಟ್ ಆಗಿದ್ದನು. ಆತನಿಗೆ ಜಾಮೀನು ಕೊಡಿಸಲು ಹಣ ಬೇಕಿದ್ದ ಕಾರಣ, ನಾಗಸೌಮ್ಯ ಡ್ರಗ್ಸ್ ಸಾಗಿಸುವ ಕೆಲಸಕ್ಕೆ ಒಪ್ಪಿಕೊಂಡಿದ್ದಳು. ಬೆಂಗಳೂರಿನಿಂದ ವಿಜಯವಾಡಕ್ಕೆ ಸುರಕ್ಷಿತವಾಗಿ ಡ್ರಗ್ಸ್ ತಲುಪಿಸಿದರೆ 50 ಸಾವಿರ ರೂಪಾಯಿ ನೀಡುವುದಾಗಿ ಬಶೀರ್ ಎಂಬಾತ ಆಮಿಷ ಒಡ್ಡಿದ್ದನು. ಸುಲಭವಾಗಿ ಹಣ ಸಿಗುತ್ತದೆ ಎಂದು ನಂಬಿ ನಾಗಸೌಮ್ಯ ಈ ಕೃತ್ಯಕ್ಕೆ ಮುಂದಾಗಿದ್ದಾಳೆ.

ಬೆಂಗಳೂರಿನಿಂದ ವಿಜಯವಾಡಕ್ಕೆ ಸುಮಾರು 110 ಗ್ರಾಂ ಎಂಡಿಎಂಎ ಡ್ರಗ್ಸ್ ಅನ್ನು ಈಕೆ ಸಾಗಿಸುತ್ತಿದ್ದಳು. ಈ ಬಗ್ಗೆ ಮುಂಚಿತವಾಗಿ ಖಚಿತ ಮಾಹಿತಿ ಪಡೆದ ಸರ್ಕಾರಿ ರೈಲ್ವೆ ಪೊಲೀಸರು (GRP) ಹಾಗೂ ಈಗಲ್ (Eagle) ಬೃಂದಗಳು ಹೈ ಅಲರ್ಟ್ ಆಗಿದ್ದು, ವಿಜಯವಾಡ ರೈಲು ನಿಲ್ದಾಣದಲ್ಲಿ ನಿಗಾ ಇರಿಸಿ ಈಕೆಯನ್ನು ಅರೆಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ದಸರಾ ಸಂಭ್ರಮದ ನಡುವೆ ವಸಂತ ಕುಟುಂಬಕ್ಕೆ ಅಘಾತ: ಅಭಿಮನ್ಯು ಆನೆ ಮಾವುತನ ಪತ್ನಿ ಸಾವು

ಕಾಲೇಜು ವಿದ್ಯಾರ್ಥಿಗಳೇ ಟಾರ್ಗೆಟ್?

ನಾಗಸೌಮ್ಯಳನ್ನು ವಿಚಾರಣೆ ನಡೆಸಿದಾಗ ಈ ಜಾಲದ ಹಿಂದೆ ಬಶೀರ್ ಪ್ರಮುಖ ಪಾತ್ರವಿರುವುದು ಬೆಳಕಿಗೆ ಬಂದಿದ್ದು, ಪೊಲೀಸರು ಆತನನ್ನೂ ಕೂಡ ಬಂಧಿಸಿದ್ದಾರೆ. ಕಾಲೇಜುಗಳನ್ನು ಪ್ರಮುಖವಾಗಿ ಗುರಿಯಾಗಿಸಿಕೊಂಡು, ಅಲ್ಲಿನ ವಿದ್ಯಾರ್ಥಿಗಳ ಮೂಲಕ ಬಶೀರ್ ಡ್ರಗ್ಸ್ ಮಾರಾಟ ಜಾಲ ನಡೆಸುತ್ತಿದ್ದಾನೆ ಎಂಬ ಗಂಭೀರ ಆರೋಪವಿದೆ. ಈ ಕುರಿತು ಕೌಂಟರ್ ಇಂಟೆಲಿಜೆನ್ಸ್ ವಿಭಾಗದಿಂದಲೂ ಪೊಲೀಸರಿಗೆ ಹಿಂದೆ ಮಾಹಿತಿ ಲಭಿಸಿತ್ತು.

ಬಶೀರ್ ಬಂಧನದ ಬಳಿಕ ಡ್ರಗ್ಸ್ ಜಾಲದ ಮತ್ತಷ್ಟು ಅಚ್ಚರಿಯ ಸಂಗತಿಗಳು ಹೊರಬರುವ ಸಾಧ್ಯತೆಯಿದೆ. ಆತನ ಕಾಲ್‌ಡೇಟಾ, ಕಾಂಟಾಕ್ಟ್ ಲಿಸ್ಟ್ ಹಾಗೂ ಹಣಕಾಸು ವ್ಯವಹಾರಗಳ ಮೇಲೆ ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ. ಡ್ರಗ್ಸ್ ಕಳ್ಳಸಾಗಣೆ ಮೂಲಕ ಬಂದ ಹಣವು ಬೇರೆ ಯಾವುದಾದರೂ ಕಾನೂನುಬಾಹಿರ ಚಟುವಟಿಕೆಗಳಿಗೆ ಅಥವಾ ಇತರ ಅಪರಾಧಗಳಿಗೆ ಬಳಕೆಯಾಗಿದೆಯೇ ಎಂಬ ಕೋನದಲ್ಲೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಒಟ್ಟಿನಲ್ಲಿ, ಹಣದ ಆಸೆಗೆ ಬಿದ್ದು ಕೊರಿಯರ್‌ಗಳಾಗಿ ಬದಲಾಗುತ್ತಿರುವ ಯುವಜನತೆ ಹಾಗೂ ಅವರ ಹಿಂದೆ ಇರುವ ದೊಡ್ಡ ಡ್ರಗ್ಸ್ ನೆಟ್‌ವರ್ಕ್ ಅನ್ನು ಬೇಧಿಸಲು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us