ದಸರಾ ಸಂಭ್ರಮದ ನಡುವೆ ವಸಂತ ಕುಟುಂಬಕ್ಕೆ ಅಘಾತ: ಅಭಿಮನ್ಯು ಆನೆ ಮಾವುತನ ಪತ್ನಿ ಸಾವು
ಮೈಸೂರು ದಸರಾ ಸಂಭ್ರಮದ ವೇಳೆ ಅಭಿಮನ್ಯು ಆನೆಯ ಮಾವುತ ವಸಂತ ಅವರ ಪತ್ನಿ ಅಂಬಿಕಾ ನಿಧನರಾಗಿದ್ದಾರೆ. ಈ ದುರ್ಘಟನೆ ದಸರಾ ಗಜಪಡೆ ಹಾಗೂ ಮಾವುತ ಕುಟುಂಬಗಳಲ್ಲಿ ತೀವ್ರ ಶೋಕ ತಂದಿದೆ. ಆರೋಗ್ಯ ಹದಗೆಟ್ಟು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ವೈಯಕ್ತಿಕ ದುಃಖದ ನಡುವೆಯೂ ಕರ್ತವ್ಯ ಪ್ರಜ್ಞೆ ಮೆರೆದು ಕಾವಾಡಿ ರಾಜು ಅಭಿಮನ್ಯು ಹೊಣೆ ವಹಿಸಿಕೊಂಡಿದ್ದಾರೆ. ವಸಂತ ಕುಟುಂಬಕ್ಕೂ ಅಭಿಮನ್ಯುಗೂ ಅವಿನಾಭಾವ ಸಂಬಂಧವಿದೆ.

ಮೈಸೂರು, ಅ.15: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂಭ್ರಮದ ವೇಳೆ ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಆನೆಯ ಮಾವುತ ವಸಂತ ಅವರ ಪತ್ನಿ ಅಂಬಿಕಾ (35) ಅವರು ಅನಾರೋಗ್ಯದಿಂದ ಮೈಸೂರಿನಲ್ಲಿ ನಿಧನರಾಗಿದ್ದಾರೆ. ಈ ದುರ್ಘಟನೆಯು ದಸರಾ ಗಜಪಡೆ ಹಾಗೂ ಮಾವುತರು-ಕಾವಾಡಿಗರ ಕುಟುಂಬಗಳಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ. ಈ ಬಾರಿಯ ಮೈಸೂರು ದಸರೆಯಲ್ಲಿ ನಿಶಾನೆ ಆನೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಮುಖ ಆನೆ ಅಭಿಮನ್ಯುವಿನೊಂದಿಗೆ ಮಾವುತ ವಸಂತ ಅವರ ಕುಟುಂಬವು ಕಾಡಿನಿಂದ ನಾಡಿಗೆ ಅಂದರೆ ಮೈಸೂರು ಅರಮನೆಯಂಗಳಕ್ಕೆ ಬಂದು ಬೀಡುಬಿಟ್ಟಿತ್ತು.
ಅರಮನೆ ಆವರಣದಲ್ಲಿದ್ದ ವಸಂತ ಅವರ ಪತ್ನಿ ಅಂಬಿಕಾ ಅವರಿಗೆ ಮೂರು ದಿನಗಳ ಹಿಂದೆ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ತೀವ್ರ ವ್ಯತ್ಯಯ ಉಂಟಾಗಿತ್ತು. ತಕ್ಷಣವೇ ಅವರನ್ನು ಮೈಸೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಕಳೆದ ಎರಡು ದಿನಗಳಿಂದ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದು, ಇಂದು (ಅಕ್ಟೋಬರ್ 15) ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಅಂಬಿಕಾ ಕೊನೆಯೆಳೆದಿದ್ದಾರೆ.
ಸಾವು ಸಂಭವಿಸಿದ ಬೆನ್ನಲ್ಲೇ ಮುಂಜಾನೆಯೇ ಮೃತ ಅಂಬಿಕಾ ಅವರ ಪಾರ್ಥಿವ ಶರೀರವನ್ನು ಮತ್ತಿಗೋಡು ಆನೆ ಕ್ಯಾಂಪ್ಗೆ ರವಾನಿಸಲಾಗಿದೆ. ದಸರಾ ಗಜಪಡೆಯ ಇತರ ಮಾವುತರು ಹಾಗೂ ಕಾವಾಡಿಗರು ಅಂತ್ಯಕ್ರಿಯೆಯ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲು ಮೈಸೂರಿನಿಂದ ತೆರಳಿದ್ದಾರೆ. ಮಾವುತರ ಕುಟುಂಬದಲ್ಲಿ ಶೋಕ ಮಡುಗಟ್ಟಿದ್ದರೂ, ದಸರಾ ಕರ್ತವ್ಯದ ನಿಟ್ಟಿನಲ್ಲಿ ಅಭಿಮನ್ಯು ಆನೆಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಕಾವಾಡಿ ರಾಜು ಅವರು ವಹಿಸಿಕೊಳ್ಳಲಿದ್ದಾರೆ. ವಸಂತ ಅವರ ಪತ್ನಿ ಅಂಬಿಕಾ ಅವರು ಅಭಿಮನ್ಯುಗೂ ತನ್ನ ಮಗನಂತೆ ಪ್ರೀತಿಯನ್ನು ತೋರಿಸಿದರು. ಅಭಿಮನ್ಯು ಕೂಡ ಅವರ ಕುಟುಂಬದಲ್ಲಿ ಒಬ್ಬನಾಗಿದ್ದ.
ಮೈಸೂರು ದಸರಾದಲ್ಲಿ ಚಿನ್ನದ ಅಂಬಾರಿ ಹೊರಬಲ್ಲ ಹೆಮ್ಮೆಯ ಆನೆ ಕ್ಯಾಪ್ಟನ್ ಅಭಿಮನ್ಯು ಮತ್ತು ಅವನ ಮಾವುತ ಜೆ.ಎಸ್. ವಸಂತ ಹಾಗೂ ಅವರ ಕುಟುಂಬದ ನಡುವಿನ ಬಾಂಧವ್ಯವು ಕೇವಲ ಒಬ್ಬ ಯಜಮಾನ ಮತ್ತು ಪ್ರಾಣಿಯ ನಡುವಿನ ಸಂಬಂಧವಲ್ಲ; ಅದು ಪೀಳಿಗೆಯಿಂದ ಪೀಳಿಗೆಗೆ ಬೆಸೆದುಕೊಂಡಿರುವ ರಕ್ತಸಂಬಂಧಕ್ಕೂ ಮಿಗಿಲಾದ ಅಪೂರ್ವ ಒಡನಾಟವಾಗಿದೆ. ಅಭಿಮನ್ಯು ಮತ್ತು ವಸಂತ ಅವರ ಕುಟುಂಬದ ನಡುವಿನ ಗಾಢವಾದ ಬಾಂಧವ್ಯ ಹೊಂದಿದ್ದ, ವಸಂತ ಅವರ ಕುಟುಂಬವು ಮೂರನೇ ಪೀಳಿಗೆಯಿಂದ ಆನೆಗಳ ಸೇವೆಯಲ್ಲಿ ತೊಡಗಿಸಿಕೊಂಡಿದೆ. 1977ರಲ್ಲಿ ಕೊಡಗಿನ ಕಾಡುಗಳಲ್ಲಿ ಅಭಿಮನ್ಯುವನ್ನು ಸೆರೆಹಿಡಿದ ದಿನದಿಂದಲೂ ವಸಂತ ಅವರ ತಂದೆ ಸಣ್ಣಪ್ಪ ಅವರೇ ಅಭಿಮನ್ಯುವಿನ ಮುಖ್ಯ ಮಾವುತರಾಗಿದ್ದರು. ಹೀಗಾಗಿ, ಅಭಿಮನ್ಯು ಆನೆ ವಸಂತ ಅವರ ಕುಟುಂಬದಲ್ಲಿ ಒಬ್ಬ ಸದಸ್ಯನಂತೆಯೇ ಬೆಳೆದಿದೆ.
ವಸಂತ ಅವರು ಚಿಕ್ಕಂದಿನಿಂದಲೇ ಅಭಿಮನ್ಯುವಿನ ಜೊತೆ ಬೆಳೆದವರು. ಆರಂಭದಲ್ಲಿ ತಮ್ಮ ತಂದೆ ಸಣ್ಣಪ್ಪ ಅವರ ಜೊತೆ ಸಹಾಯಕನಾಗಿ (ಕಾವಾಡಿಯಾಗಿ) ಅಭಿಮನ್ಯುವಿನ ಆರೈಕೆ ಮಾಡಲು ಆರಂಭಿಸಿದ ವಸಂತ, ತಂದೆಯ ನಿವೃತ್ತಿಯ ನಂತರ ಅಭಿಮನ್ಯುವಿನ ಮುಖ್ಯ ಮಾವುತರಾಗಿ ಜವಾಬ್ದಾರಿ ವಹಿಸಿಕೊಂಡರು. ಮಾವುತ ವಸಂತ ಅವರೇ ಹೇಳಿಕೊಳ್ಳುವಂತೆ, “ಅಭಿಮನ್ಯು ಮತ್ತು ನನ್ನ ನಡುವಿನ ಸಂಬಂಧ ಒಂದು ಜೀವ, ಎರಡು ದೇಹ ಇದ್ದಂತೆ”. ಅಭಿಮನ್ಯುವಿನ ಸ್ವಭಾವ, ಕೋಪ, ಪ್ರೀತಿ ಎಲ್ಲವೂ ವಸಂತ ಅವರಿಗೆ ಮಾತ್ರ ಸುಲಭವಾಗಿ ಅರ್ಥವಾಗುತ್ತದೆ. ಇವರಿಬ್ಬರ ಅನುಮತಿಯಿಲ್ಲದೆ ಅಭಿಮನ್ಯುವಿನ ಹತ್ತಿರ ಬೇರೆ ಯಾರೂ ಸುಲಭವಾಗಿ ಸುಳಿಯಲು ಸಾಧ್ಯವಿಲ್ಲ.
ಇದನ್ನೂ ಓದಿ: ಚಿನ್ನದ ಅಂಬಾರಿ ಹೊರಲು ಪ್ರಶಾಂತ ಸಿದ್ಧ: ಆಯ್ಕೆ ಪ್ರಕ್ರಿಯೆ ಎಷ್ಟು ಸವಾಲಾಗಿತ್ತು ಎಂಬುದನ್ನು ವಿವರಿಸಿದ ಸಿಸಿಎಫ್ ರವಿಶಂಕರ್
2002ರಲ್ಲಿ ಮಸ್ತಿಗುಡಿ ಅರಣ್ಯ ಪ್ರದೇಶದಲ್ಲಿ ನಡೆದ ಹುಲಿ ಕಾರ್ಯಾಚರಣೆಯ ಸಮಯದಲ್ಲಿ, ಉಳಿದೆಲ್ಲ ಆನೆಗಳು ಹೆದರಿ ಓಡಿದರೂ ಅಭಿಮನ್ಯು ಮಾತ್ರ ಹಿಂದೆ ಸರಿಯದೆ ಧೈರ್ಯದಿಂದ ನಿಂತು ತನ್ನ ಮಾವುತ ವಸಂತ ಅವರ ಪ್ರಾಣವನ್ನು ಕಾಪಾಡಿದ್ದ. ಈ ಘಟನೆ ಅವರಿಬ್ಬರ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿತು. ಮಾವುತ ವಸಂತ ಅವರ ಕುಟುಂಬಕ್ಕೆ ಅಭಿಮನ್ಯು ಮತ್ತು ದೇಶದ ಸೇವೆ ಎಷ್ಟು ಮುಖ್ಯವಾಗಿತ್ತು ಎಂದರೆ, ಹಿಂದೆ ಕಾಡಾನೆ ಹಿಡಿಯುವ ಕಾರ್ಯಾಚರಣೆಯಲ್ಲಿದ್ದಾಗ ವಸಂತ ಅವರ ಮಗ ತೀರಿಹೋದ ಸುದ್ದಿಯಾದರೂ, ಹಾಗೂ ಇನ್ನೊಂದು ಸಂದರ್ಭದಲ್ಲಿ ತಾಯಿ ಅಗಲಿದಾಗಲೂ ಅವರು ಕರ್ತವ್ಯದ ಜಾಗದಿಂದ ಕದಲದೆ ಅಭಿಮನ್ಯುವಿನ ಜೊತೆಗಿದ್ದು ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದರು. ಇಂತಹ ನೋವಿನಲ್ಲೂ ಅವರು ತೋರಿದ ತ್ಯಾಗಕ್ಕೆ ಹಾಗೂ ವನ್ಯಜೀವಿ ಸಂರಕ್ಷಣೆಯ ಸೇವೆಗೆ ವಸಂತ ಅವರಿಗೆ ಮುಖ್ಯಮಂತ್ರಿಗಳ ಪದಕವೂ ಲಭಿಸಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




