Karnataka Weather Updates: ಬೆಂಗಳೂರು: ಕರ್ನಾಟಕ ರಾಜ್ಯಾದ್ಯಂತ ಕೆಲವೆಡೆ ಸುರಿದ ಮಳೆಯಿಂದ ಜನ ಜೀವನ ತತ್ತರಿಸಿದೆ. ಸದ್ಯ ಮಳೆ ನಿಂತರೂ ಮರದ ಹನಿ ನಿಲ್ಲದು ಅನ್ನೋಹಾಗೆ ರಾಜ್ಯದಲ್ಲಿ ವರುಣನ ಅಬ್ಬರ ಕಡಿಮೆಯಾಗಿದ್ರು ಕೂಡ ಮಳೆ ಸೃಷ್ಟಿಸಿರುವ ಅವಾಂತರದಿಂದ ಮುಕ್ತಿ ಸಿಕ್ಕಿಲ್ಲ. ಆದ್ರೆ ಮಳೆಯಿಂದ ತತ್ತರಿಸಿರೋ ರಾಜ್ಯಕ್ಕೆ ಈಗ ಮತ್ತೊಂದು ಆಘಾತ ಉಂಟಾಗಿದೆ. ನವೆಂಬರ್ 26ಕ್ಕೆ ಮತ್ತೆ ವರುಣನ ಆರ್ಭಟ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ಸಿಕ್ಕಿದೆ.
ನವೆಂಬರ್ 26ರಿಂದ ಡಿಸೆಂಬರ್ 15ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ತಮಿಳುನಾಡು, ಆಂಧ್ರಪ್ರದೇಶದಲ್ಲಿ ಭಾರಿ ಮಳೆಯಾಗಲಿದ್ದು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಸೈಕ್ಲೋನ್ ಆಗಿ ಬದಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ತಮಿಳುನಾಡು, ಕೇರಳ, ಆಂಧ್ರ ಕರಾವಳಿಯಲ್ಲಿ ಹೆಚ್ಚು ಮಳೆಯಾಗಲಿದ್ದು ಪುದುಚೆರಿ, ಚೆನ್ನೈ, ನೆಲ್ಲೂರಿನಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ನೆರೆ ರಾಜ್ಯಗಳಲ್ಲಿ ಮಳೆ ಹಿನ್ನೆಲೆ ನವೆಂಬರ್ 26ರಿಂದ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಸದ್ಯ ವರುಣ ಕೊಂಚ ಬಿಡುವು ಕೊಟ್ಟಿದ್ದಾನೆ. ಮಳೆ ಸದ್ಯ ನಿಂತಿದ್ದು ಮಳೆಯ ಪರಿಣಾಮಕ್ಕೆ ಮಾತ್ರ ಇನ್ನೂ ಮುಕ್ತಿ ಸಿಕ್ಕಿಲ್ಲ. ಈ ನಡುವೆ ಈಗ ಮತ್ತೆ ನವೆಂಬರ್ 26 ರಿಂದ ಭಾರಿ ಮಳೆಯಾಗುವ ಮುನ್ಸೂಚನೆ ಸಿಕ್ಕಿದ್ದು ಆತಂಕ ಹೆಚ್ಚಾಗಿದೆ.
ಇಂದು, ನಾಳೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ
ಇನ್ನು ಬೆಂಗಳೂರು, ಗ್ರಾಮಾಂತರ ಭಾಗದಲ್ಲಿ ಮಳೆ ಎಚ್ಚರಿಕೆ ಇಲ್ಲ. ಇಂದು, ನಾಳೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಬೆಂಗಳೂರಲ್ಲಿ ಇಂದು, ನಾಳೆ ಮಳೆಯಾಗುವ ಸಾಧ್ಯತೆ ಕಡಿಮೆ ಎಂದು ಹವಾಮಾನ ಇಲಾಖೆ ತಜ್ಞ ಸದಾನಂದ ಅಡಿಗ ಮಾಹಿತಿ ನೀಡಿದ್ದಾರೆ.
ತಮಿಳುನಾಡಿನಲ್ಲಿ ವಿಪರೀತ ಮಳೆ ಸುರಿಯಲು ಪ್ರಾರಂಭಿಸಿ ಅದಾಗಲೇ ವಾರದ ಮೇಲಾಯಿತು. ಅದರೊಂದಿಗೆ ಆಂಧ್ರಪ್ರದೇಶ, ಕೇರಳ, ಪುದುಚೇರಿಯಲ್ಲೂ ಒಂದೇಸಮ ಮಳೆಯಾಗುತ್ತಿದೆ. ಐಎಂಡಿ ದಕ್ಷಿಣ ತಮಿಳುನಾಡು, ಪುದುಕೊಟ್ಟೈ ಮತ್ತು ಡೆಲ್ಟಾ ಜಿಲ್ಲೆಗಳಲ್ಲಿ ಅಲ್ಲಲ್ಲಿ ಇಂದು ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹಳದಿ ಅಲರ್ಟ್ ಘೋಷಿಸಲಾಗಿದೆ. ಇನ್ನು ಮುಂದಿನ ಐದು ದಿನಗಳ ಕಾಲ ತಮಿಳುನಾಡಿನ ಎರೋಡ್, ನಮಕ್ಕಲ್, ಕಲ್ಲಕುರಿಚಿ ಮತ್ತು ಪೆರಂಬಲೂರ್ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಮಳೆಗೆ ಬೆಳೆ ನಾಶ; ದುಬಾರಿಯಾಗಲಿದೆ ತರಕಾರಿ, ಹೂವು, ಹಣ್ಣಿನ ಬೆಲೆ
Published On - 11:00 am, Tue, 23 November 21