ಆನ್​ಲೈನ್ ಗೇಮಿಂಗ್ ಅಡಿಕ್ಷನ್: ಯುವಜನತೆಯನ್ನು ಸಾವಿನತ್ತ ಸೆಳೆಯುತ್ತಿದೆ ಗೇಮಿಂಗ್ ಗೀಳು!

ಇಂದಿನ ಡಿಜಿಟಲ್ ಯುಗದಲ್ಲಿ ಆನ್‌ಲೈನ್ ಗೇಮಿಂಗ್ ವ್ಯಸನಕ್ಕೆ ತುತ್ತಾಗಿರುವ ಯುವಕರು ಹಗಲು ರಾತ್ರಿ ಗೇಮಿನಲ್ಲೇ ಮುಳುಗಿ ಸಮಯ ವ್ಯರ್ಥ ಮಾಡುವುದಲ್ಲದೇ ತಮ್ಮ ಪ್ರಾಣಕ್ಕೂ ಕಂಟಕ ತಂದುಕೊಳ್ಳುತ್ತಿದ್ದಾರೆ. ಇದರಿಂದ ಮಾನಸಿಕ ಒತ್ತಡಕ್ಕೊಳಗಾದವರು ಪ್ರಾಣವನ್ನೇ ಕಳೆದುಕೊಳ್ಳುವ ಹಂತಕ್ಕೆ ಹೋಗುತ್ತಾರೆ. ಇದಕ್ಕೆ ಉದಾಹರಣೆಯೆಂಬಂತೆ ಭಾರತದಲ್ಲಿ ಮಕ್ಕಳ ಪಬ್‌ಜಿ, ಫ್ರೀಫೈರ್‌ನಂತಹ ಆಟಗಳ ಗೀಳಿಗೆ ಇತ್ತೀಚೆಗೆ ಇಡೀ ಕುಟುಂಬವೇ ಪ್ರಾಣ ಕಳೆದುಕೊಂಡ ಘಟನೆಯ ಕುರಿತ ಮಾಹಿತಿ ಇಲ್ಲಿದೆ.

ಆನ್​ಲೈನ್ ಗೇಮಿಂಗ್ ಅಡಿಕ್ಷನ್: ಯುವಜನತೆಯನ್ನು ಸಾವಿನತ್ತ ಸೆಳೆಯುತ್ತಿದೆ ಗೇಮಿಂಗ್ ಗೀಳು!
ಯುವಜನತೆಯನ್ನು ಸಾವಿನತ್ತ ಸೆಳೆಯುತ್ತಿದೆ ಗೇಮಿಂಗ್ ಗೀಳು!

Updated on: Feb 10, 2026 | 2:19 PM

ಒಂದು ಕಾಲದಲ್ಲಿ ಮೈದಾನಕ್ಕಿಳಿದು ಆಡುವುದು, ದೋಸ್ತರೊಂದಿಗೆ ಹರಟೆ ಹೊಡೆಯುವುದೇ ಮಕ್ಕಳ ಮತ್ತು ಯುವಕರ ಪಾಲಿನ ಮನರಂಜನೆ ಆಗಿತ್ತು. ಆದರೆ ಇಂದಿನ ಡಿಜಿಟಲ್ ಯುಗದಲ್ಲಿ ಆನ್​ಲೈನ್​ ಗೇಮಿಂಗ್ (Online Gaming), ಈ ಎಲ್ಲಾ ಚಟುವಟಿಕೆಗಳಿಗೆ ಬ್ರೇಕ್ ಹಾಕಿದೆ. ಪಬ್​ಜಿ, ಫ್ರೀಫೈರ್ ಎಂದು ಅಡಿಕ್ಟ್ ಆಗಿರುವ ಇಂದಿನ ಯುವ ಸಮಾಜದಲ್ಲಿ ಜನರ ಜೀವಕ್ಕೂ ಬೆಲೆ ಇಲ್ಲದಂತಾಗಿದೆ. ಕೆಲ ವರ್ಷಗಳ ಹಿಂದೆ ಇದೇ ಗೇಮಿಂಗ್ ಗೀಳಿಗೆ ಬಿದ್ದು, ಯುವಕರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದರು. ಇಂದು ಆ ಗೀಳು ಇನ್ನೂ ವಿಕೋಪಕ್ಕೆ ತಿರುಗಿ ಇಡೀ ಕುಟುಂಬವೇ ಪ್ರಾಣ ಕಳೆದುಕೊಳ್ಳುವ ದುಸ್ಥಿತಿ ಬಂದಿದೆ. ಅದಕ್ಕೆ ಉದಾಹರಣೆಯಾಗಿ ಇತ್ತೀಚಿನ  ಪ್ರಕರಣಗಳು ದೇಶವನ್ನೇ ಬೆಚ್ಚಿಬೀಳಿಸಿವೆ.

ಘಟನೆ-1: ಗಾಜಿಯಾಬಾದ್ – ಆಟದ ಅಂತಿಮ ಟಾಸ್ಕ್‌ಗಾಗಿ ಮೂವರು ಸಹೋದರಿಯರ ಬಲಿ

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನೆಲೆಸಿದ್ದ 12, 14 ಮತ್ತು 16 ವರ್ಷದ ಮೂವರು ಸಹೋದರಿಯರು ಕೋರಿಯನ್ ಲವ್ ಗೇಮ್​ ಒಂದಕ್ಕೆ ಇನ್ನಿಲ್ಲದಂತೆ ಅಡಿಕ್ಟ್ ಆಗಿದ್ದರು. ಕೋವಿಡ್ ಸಮಯದಲ್ಲಿ ಮೂವರು ಟೈಮ್ ಪಾಸ್​ಗೆಂದು ಈ ಗೇಮ್​ ಆಡಲು ಶುರು ಮಾಡಿದ್ದರೂ ಕ್ರಮೇಣ ಅದು ಚಟವಾಗಿ ಪರಿಣಮಿಸಿತ್ತು. ಎಷ್ಟರ ಮಟ್ಟಿಗೆಂದರೆ ಅಕ್ಕ-ತಂಗಿಯರೆಲ್ಲರೂ ಶಾಲೆಗೆ ಹೋಗುವುದನ್ನೂ ನಿಲ್ಲಿಸಿದ್ದರು. ಇವರ ವರ್ತನೆಗೆ ಬೇಸತ್ತ ತಂದೆ-ತಾಯಿ ಆಟವಾಡಬೇಡಿ ಎಂದು ತಡೆದಾಗ, ಮಾನಸಿಕ ಒತ್ತಡಕ್ಕೆ ಸಿಲುಕಿದ ಮಕ್ಕಳು, ಬೆಳಗಿನ ಜಾವ 2 ಗಂಟೆಗೆ, ಹೌಸಿಂಗ್ ಸೊಸೈಟಿಯ 9ನೇ ಮಹಡಿಯಿಂದ ಒಬ್ಬೊಬ್ಬರಾಗಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ ಬೆಂಗಳೂರು: ಫ್ರೀಫೈರ್ ಗೇಮ್​​ಗೆ ಅಡಿಕ್ಟ್! ಅಕ್ಕನ ಮಗನನ್ನೇ ಕೊಂದ ಮಾವ

ಘಟನೆ – 2: ಬೆಂಗಳೂರು – ಗೇಮ್ ಚಟಕ್ಕೆ ಬಿದ್ದವನ ಕೊಲೆ, ಬಳಿಕ ಸಾಮೂಹಿಕ ಆತ್ಮಹತ್ಯೆ

ಸೋಲದೇವನಹಳ್ಳಿಯಲ್ಲಿ ಫ್ರೀಫೈರ್ ಗೇಮ್‌ಗೆ ಅಡಿಕ್ಟ್ ಆಗಿದ್ದ ಬಾಲಕ ಅಮೋಘಕೀರ್ತಿ ಹಣಕ್ಕಾಗಿ ಮನೆಯವರನ್ನು ಪೀಡಿಸುತ್ತಿದ್ದ. ಇದರಿಂದ ಬೇಸತ್ತ ಆತನ ಮಾವ ನಾಗಪ್ರಸಾದ್ ಬಾಲಕನನ್ನೇ ಕೊಲೆ ಮಾಡಿದ್ದ. ಈ ಅಪರಾಧದ ಪಶ್ಚಾತ್ತಾಪ, ಸಮಾಜದ ಒತ್ತಡ ಮತ್ತು ಮನೋವ್ಯಥೆ ಕುಟುಂಬವನ್ನು ಸಂಪೂರ್ಣವಾಗಿ ಕುಗ್ಗಿಸಿತ್ತು. ಕೊಲೆ ಬಳಿಕ ಜೈಲು ಸೇರಿದ್ದವ ನಂತರ ಜಾಮೀನಿನ ಮೇಲೆ ಹೊರಬಂದು ಟೆಂಪಲ್ ರನ್ ಮಾಡಿದರೂ ಮನಸ್ಸಿಗೆ ಶಾಂತಿ ಸಿಕ್ಕಿರಲಿಲ್ಲ. ಕೊನೆಗೆ ಬಿಹಾರ ಪ್ರವಾಸದ ವೇಳೆ ನಾಗಪ್ರಸಾದ್ ಸೇರಿದಂತೆ ಕುಟುಂಬದ ನಾಲ್ವರೂ ನಿದ್ದೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಲಕನೊಬ್ಬನ ಗೇಮಿಂಗ್ ಚಟ ಇಡೀ ಕುಟುಂಬವನ್ನೇ ಸುಡುಗಾಡು ಸೇರಿಸಿದೆ.

ಇದನ್ನೂ ಓದಿ ಫ್ರೀಫೈರ್​​ಗೆ ಅಡಿಕ್ಟ್ ಆಗಿದ್ದ ಅಕ್ಕನ ಮಗನನ್ನೇ ಕೊಂದಿದ್ದ ಮಾವ ಸೇರಿ ಕುಟುಂಬದ ನಾಲ್ವರು ಬಿಹಾರದಲ್ಲಿ ಆತ್ಮಹತ್ಯೆಗೆ ಶರಣು!

ಕೇವಲ ಮಾನಸಿಕ ಒತ್ತಡ ಮಾತ್ರವಲ್ಲ, ದೈಹಿಕವಾಗಿಯೂ ಪರಿಣಾಮ ಬೀರುತ್ತೆ ಆನ್​ಲೈನ್ ಗೇಮ್!

ಆನ್​ಲೈನ್ ಗೇಮ್​ ಕೇವಲ ಮಾನಸಿಕ ಮಾತ್ರವಲ್ಲದೆ ದೈಹಿಕವಾಗಿಯೂ ಮಾರಕವಾಗಿದೆ ಎಂಬುದಕ್ಕೆ ಮೀರತ್​ನ ಘಟನೆಯೊಂದು ಸಾಕ್ಷಿಯಾಗಿದೆ.  22 ವರ್ಷದ ಮೊಹಮ್ಮದ್ ಕೈಫ್ ಪಬ್‌ಜಿ ಗೇಮ್‌ಗೆ ತೀವ್ರವಾಗಿ ಅಡಿಕ್ಟ್ ಆಗಿದ್ದ. ರಾತ್ರಿ 3 ಗಂಟೆಗೆ ಪಬ್‌ಜಿ ಆಡುತ್ತಿದ್ದಾಗಲೇ ಅವನಿಗೆ ಹೈಪರ್‌ಟೆನ್ಷನ್ ಉಂಟಾಗಿ, ಮೆದುಳಿನಲ್ಲಿ ರಕ್ತಸ್ರಾವವಾಗಿತ್ತು. ರಕ್ತದೊತ್ತಡ 300ಕ್ಕಿಂತ ಹೆಚ್ಚಾಗಿತ್ತು. ಎರಡು ದಿನಗಳ ಚಿಕಿತ್ಸೆ ಬಳಿಕವೂ ಕೈಫ್ ಪ್ರಾಣ ಕಳೆದುಕೊಂಡಿದ್ದಾನೆ. ವೈದ್ಯರ ಪ್ರಕಾರ, ಡೋಪಮೈನ್ ಹೆಚ್ಚಳ, ನಿದ್ರಾಹೀನತೆ ಮತ್ತು ಮಾನಸಿಕ ಒತ್ತಡವೇ ಈ ಸಾವಿಗೆ ಕಾರಣ. ಇದು ನೇರವಾಗಿ ಆತ್ಮಹತ್ಯೆಯಲ್ಲದಿದ್ದರೂ, ಗೇಮ್ ಗೀಳಿಗೆ ಬಿದ್ದ ಯುವಕ ಹೊರಗಿನ ಪ್ರಪಂಚವನ್ನೇ ಮರೆತು, ತನ್ನ ಆರೋಗ್ಯವನ್ನೂ ಲೆಕ್ಕಿಸದೆ, ಹಗಲು ರಾತ್ರಿ ಗೇಮ್ ಆಡಿ ತನ್ನ ಪ್ರಾಣವನ್ನು ತಾನೆ ಕಳೆದುಕೊಂಡ ಘಟನೆಯಾಗಿದೆ.

ಇದನ್ನೂ ಓದಿ ಆನ್​ಲೈನ್ ಗೇಮ್ ಆಡಬೇಡಿ ಎಂದಿದ್ದಕ್ಕೆ ಮೂವರು ಸಹೋದರಿಯರು 9ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ

 ಆನ್‌ಲೈನ್ ಗೇಮಿಂಗ್ ವಿರುದ್ದ ಕರ್ನಾಟಕದ ಧ್ವನಿ

ಇಂತಹ ಹಲವು ಘಟನೆಗಳು ಕಳೆದ ಹಲವು ವರ್ಷಗಳಿಂದ ನಡೆಯುತ್ತಿದ್ದರೂ, ರಾಜ್ಯದಲ್ಲಿ ಆನ್‌ಲೈನ್ ಗೇಮಿಂಗ್ ಹಾಗೂ ಜೂಜಾಟದ ವಿರುದ್ಧ ವಿವಿಧ ಹಂತಗಳಲ್ಲಿ ರಾಜಕೀಯ ವಲಯದಿಂದ ಗಟ್ಟಿ ಧ್ವನಿಗಳು ಕೇಳಿಬಂದಿವೆ. 2021ರಲ್ಲಿ ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯಿದೆಯನ್ನು ಮಂಡಿಸುವ ಮೂಲಕ ಆನ್‌ಲೈನ್ ಗೇಮಿಂಗ್ ನಿಷೇಧಕ್ಕೆ ಆಗಿನ ಗೃಹ ಸಚಿವರಾಗಿದ್ದ ಅರಗ ಜ್ಞಾನೇಂದ್ರ ಪ್ರಮುಖ ಪಾತ್ರ ವಹಿಸಿದ್ದರು.

ಬೆಂಗಳೂರಿನ ಕೆಂಗೇರಿಯಲ್ಲಿ ನಡೆದ ಆನ್‌ಲೈನ್ ಜೂಜಾಟ ನಿಷೇಧಕ್ಕೆ ಆಗ್ರಹಿಸಿದ ಬೃಹತ್ ವಿದ್ಯಾರ್ಥಿ ರ್ಯಾಲಿಯಲ್ಲಿ ಶಾಸಕ ಎಸ್.ಟಿ. ಸೋಮಶೇಖರ್ ಭಾಗವಹಿಸಿ ಬೆಂಬಲ ಸೂಚಿಸಿದ್ದರು. ಮಾಜಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಆನ್‌ಲೈನ್ ಗೇಮಿಂಗ್‌ನಿಂದ ಸಮಾಜಕ್ಕೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಂಪುಟ ಸಭೆಯಲ್ಲಿ ನಿಷೇಧದ ಪರವಾಗಿ ಧ್ವನಿ ಎತ್ತಿದ್ದರು. ಇತ್ತೀಚೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಆನ್‌ಲೈನ್ ಬೆಟ್ಟಿಂಗ್ ಹಾಗೂ ಗೇಮಿಂಗ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕಾನೂನು ತರಲು ಸರ್ಕಾರ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದ್ದರು.

ಇದನ್ನೋ ಓದಿ ಹೆಡ್​ಫೋನ್ ಹಾಕಿಕೊಂಡು ಪಬ್​​ಜಿ ಆಡುತ್ತಿದ್ದ ವ್ಯಕ್ತಿಗೆ ಇದ್ದಕ್ಕಿದ್ದಂತೆ ಹೆಚ್ಚಾಯ್ತು ರಕ್ತದೊತ್ತಡ, ಮೆದುಳಿನಲ್ಲಿ ರಕ್ತಸ್ರಾವವಾಗಿ ಸಾವು

ಕಳೆದ ಒಂದು ವರ್ಷದಲ್ಲಿ ಭಾರತದ 100ಕ್ಕೂ ಹೆಚ್ಚು ಜೀವಗಳು ಇದೇ ಗೇಮ್ ಗೀಳಿಗೆ ಬಲಿಯಾಗಿವೆ. ಅಪ್ರಾಪ್ತರಿಗೆ ಟಾಸ್ಕ್ ಆಧಾರಿತ, ಹಿಂಸಾತ್ಮಕ ಹಾಗೂ ಮಾನಸಿಕ ಒತ್ತಡ ನೀಡುತ್ತಿರುವ ಈ ಆನ್​ಲೈನ್ ಗೇಮ್​ಗಳು ಇನ್ನೆಷ್ಟು ಜೀವಗಳನ್ನು ಬಲಿಪಡೆಯಬೇಕೆಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 1:09 pm, Tue, 10 February 26