Winzo game Fraud: ಎಐ ಬಳಸಿ 700 ಕೋಟಿ ರೂ. ವಂಚನೆ! ವಿಂಜೋ ಗೇಮಿಂಗ್ ವಿರುದ್ಧ ಇ.ಡಿ ಚಾರ್ಜ್‌ಶೀಟ್
ವಿಂಜೋ ಗೇಮಿಂಗ್ ಆ್ಯಪ್ ಅಕ್ರಮ ಹಣಕಾಸು ಮತ್ತು ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ಪೂರ್ಣಗೊಳಿಸಿ ಚಾರ್ಜ್‌ಶೀಟ್ ಸಲ್ಲಿಸಿದೆ. 3,522 ಕೋಟಿ ರೂ. ಅಕ್ರಮ ಹಣಕಾಸು ವಹಿವಾಟು ಹಾಗೂ ಬಳಕೆದಾರರಿಗೆ 734 ಕೋಟಿ ರೂ. ವಂಚಿಸಿರುವುದು ಪತ್ತೆಯಾಗಿದೆ. ಎಐ ತಂತ್ರಜ್ಞಾನ ಬಳಸಿ ಗ್ರಾಹಕರಿಗೆ ಕೋಟಿ ರೂಗಳ ವಂಚನೆ ಮಾಡಲಾಗಿದೆ ಎಂದು ತನಿಖೆ ವೇಳೆ ತಿಳಿದುಬಂದಿದ್ದು, 690 ಕೋಟಿ ರೂ. ಆಸ್ತಿ ಜಪ್ತಿ ಮಾಡಲಾಗಿದೆ.

ಬೆಂಗಳೂರು, ಜನವರಿ 26: ವಿಂಜೋ ಗೇಮಿಂಗ್ ಆ್ಯಪ್‌ಗೆ (WinZo gaming app) ಸಂಬಂಧಿಸಿದ ಅಕ್ರಮ ಹಣಕಾಸು ಮತ್ತು ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ಪೂರ್ಣಗೊಳಿಸಿ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದೆ. ತನಿಖೆ ವೇಳೆ ಭಾರೀ ಪ್ರಮಾಣದ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಸಂಬಂಧಿಸಿದ ಸ್ಫೋಟಕ ಮಾಹಿತಿಗಳು ಬೆಳಕಿಗೆ ಬಂದಿವೆ.
690 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಸೀಜ್
2021–22ರ ಸಾಲಿನಲ್ಲಿ ಮಾತ್ರವೇ ಸುಮಾರು 3,522 ಕೋಟಿ ರೂಪಾಯಿ ಅಕ್ರಮ ಹಣಕಾಸು ವಹಿವಾಟು ನಡೆಸಿರುವುದು ಪತ್ತೆಯಾಗಿದೆ. ಇದರಲ್ಲಿ 734 ಕೋಟಿ ರೂಪಾಯಿ ಮೊತ್ತವನ್ನು ನೇರವಾಗಿ ಬಳಕೆದಾರರಿಂದ ವಂಚಿಸಿರುವುದಾಗಿ ಇ.ಡಿ ತಿಳಿಸಿದೆ. ಹೀಗಾಗಿ ಜನರನ್ನು ವಂಚಿಸುವ ಉದ್ದೇಶದಿಂದಲೇ ವಿಂಜೋ ಗೇಮಿಂಗ್ ಆ್ಯಪ್ ರೂಪಿಸಲಾಗಿದೆ ಎಂದು ಅಧಿಕಾರಿಗಳು ತನಿಖೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ಪ್ರಕರಣವು ಬೆಂಗಳೂರು ಸೈಬರ್ ಕ್ರೈಮ್ ಪೊಲೀಸ್ ಠಾಣೆ ಸೇರಿದಂತೆ ರಾಜಸ್ಥಾನ, ನವದೆಹಲಿ ಹಾಗೂ ಗುರುಗ್ರಾಮ್‌ನಲ್ಲಿ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಇ.ಡಿ ಅಧಿಕಾರಿಗಳು 2025ರ ನವೆಂಬರ್ 18 ಮತ್ತು ಡಿಸೆಂಬರ್ 30ರಂದು ವಿಂಜೋಗೆ ಸಂಬಂಧಿಸಿದ ಹಲವು ಕಚೇರಿಗಳ ಮೇಲೆ ದಾಳಿ ನಡೆಸಿ ವ್ಯಾಪಕ ಪರಿಶೀಲನೆ ನಡೆಸಿದ್ದರು. ಈ ವೇಳೆ ಬ್ಯಾಂಕ್ ಖಾತೆಗಳ ಹಣ, ಮ್ಯೂಚ್ಯುವಲ್ ಫಂಡ್ಸ್, ಸ್ಥಿರ ಠೇವಣಿಗಳು ಹಾಗೂ ಕ್ರಿಪ್ಟೋ ಕರೆನ್ಸಿ ವಾಲೆಟ್‌ಗಳನ್ನು ಸೇರಿಸಿ ಸುಮಾರು 690 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಸೀಜ್ ಮಾಡಲಾಗಿತ್ತು.
ಇದನ್ನೂ ಓದಿ ತುಮಕೂರು: ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಕಾರು; ಸ್ಥಳದಲ್ಲೇ ಮೂವರ ದುರ್ಮರಣ!
25 ಕೋಟಿ ಗ್ರಾಹಕರಿಗೆ ಮೋಸ
ವಿಂಜೋ ಆ್ಯಪ್‌ನಲ್ಲಿ 100ಕ್ಕೂ ಹೆಚ್ಚು ಆನ್‌ಲೈನ್ ಗೇಮಿಂಗ್ ಮಾದರಿಗಳನ್ನು ಪರಿಚಯಿಸಿ, ಆರಂಭದಲ್ಲಿ ಹೆಚ್ಚು ಆದಾಯ ಬರುತ್ತದೆ ಎಂಬ ನಂಬಿಕೆ ಹುಟ್ಟಿಸಲಾಗುತ್ತಿತ್ತು. ದೇಶಾದ್ಯಂತ ಸುಮಾರು 25 ಕೋಟಿ ಜನರು ಈ ಆ್ಯಪ್ ಬಳಸುತ್ತಿದ್ದಂತೆ, ಎಐ ತಂತ್ರಜ್ಞಾನ ಬಳಸಿ ಆಟಗಾರರನ್ನು ಸೋಲಿಸಿ ವ್ಯವಸ್ಥಿತವಾಗಿ ವಂಚನೆ ನಡೆಸಲಾಗಿದೆ ಎಂಬ ವಿಷಯ ತನಿಖೆಯಲ್ಲಿ ಹೊರಬಿದ್ದಿದೆ. ಅಕ್ರಮ ಹಣವನ್ನು ಯುಎಸ್ ಹಾಗೂ ಸಿಂಗಾಪುರ ಮೂಲದ ಶೆಲ್ (ಇಂಧನ ಮತ್ತು ಪೆಟ್ರೋಕೆಮಿಕಲ್ ಕಂಪನಿ) ಕಂಪನಿಗಳ ಮೂಲಕ ವಿದೇಶಗಳಿಗೆ ವರ್ಗಾಯಿಸಿರುವುದೂ ಪತ್ತೆಯಾಗಿದೆ. ಸದ್ಯ ಇ.ಡಿ ಚಾರ್ಜ್‌ಶೀಟ್ ಸಲ್ಲಿಸಿದ್ದು, ಪ್ರಕರಣದ ಮುಂದಿನ ವಿಚಾರಣೆ ಕೋರ್ಟ್‌ನಲ್ಲಿ ನಡೆಯಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.