
ಬೆಂಗಳೂರು, ಜೂನ್ 07: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬೆಂಗಳೂರು (Bengaluru) ಪೂರ್ವ ನಗರ ನಿಗಮವು (ಬಿಇಸಿಸಿ) ಕೆ.ಆರ್. ಪುರಂ ಮತ್ತು ದೊಡ್ಡನೆಕ್ಕುಂದಿ ವಾರ್ಡ್‌ಗಳಲ್ಲಿ ಬೃಹತ್ ಸ್ವಚ್ಛತಾ ಆಂದೋಲನ ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಾಚರಣೆಯಲ್ಲಿ ಒಟ್ಟು 100 ಟನ್‌ಗೂ ಹೆಚ್ಚು ಕಟ್ಟಡದ ಅವಶೇಷಗಳು ಮತ್ತು ಕಸವನ್ನು ತೆರವುಗೊಳಿಸಲಾಗಿದ್ದು, 18 ಬ್ಲಾಕ್ ಸ್ಪಾಟ್‌ಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿದೆ ಎಂದು ಬಿಇಸಿಸಿ ಕಮಿಷನರ್ ಡಿ.ಎಸ್. ರಮೇಶ್ ತಿಳಿಸಿದ್ದಾರೆ.
ಈ ಬೃಹತ್ ಸ್ವಚ್ಛತಾ ಕಾರ್ಯಕ್ಕಾಗಿ ನಿಗಮವು 1,600 ಪೌರಕಾರ್ಮಿಕರು, ಆಟೋ ಟಿಪ್ಪರ್ ಚಾಲಕರು, ಮಾರ್ಷಲ್‌ಗಳು ಮತ್ತು ಸ್ವಯಂಸೇವಕರನ್ನು ನಿಯೋಜಿಸಿತ್ತು. ಕಸ ವಿಲೇವಾರಿ ಮಾಡಲು 14 ಟ್ರ್ಯಾಕ್ಟರ್‌ಗಳು, 6 ಟಿಪ್ಪರ್ ಲಾರಿಗಳು, 6 ಕಾಂಪಾಕ್ಟರ್ ವಾಹನಗಳು, 20 ಆಟೋ ಟಿಪ್ಪರ್‌ಗಳು ಮತ್ತು 3 ಹಿಟಾಚಿ ಯಂತ್ರಗಳನ್ನು ಬಳಸಿಕೊಳ್ಳಲಾಯಿತು. ಗಂಗಾಶೆಟ್ಟಿ ಕೆರೆ ಆವರಣ, ಸರ್ಕಾರಿ ಶಾಲೆ-ಕಾಲೇಜುಗಳು ಮತ್ತು ಸರ್ಕಾರಿ ಆಸ್ಪತ್ರೆ ಸೇರಿದಂತೆ ಪ್ರಮುಖ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಲಾಯಿತು. ಇದರೊಂದಿಗೆ ಮುಖ್ಯ ರಸ್ತೆಗಳು, ವಾರ್ಡ್ ರಸ್ತೆಗಳು, ರಸ್ತೆ ವಿಭಜಕಗಳು, ಬಸ್ ತಂಗುದಾಣಗಳು, ಉದ್ಯಾನವನಗಳು ಮತ್ತು ಪಾದಚಾರಿ ಮಾರ್ಗಗಳನ್ನು ಸಲೀಸಾಗಿ ಅಚ್ಚುಕಟ್ಟಾಗಿಸಲಾಯಿತು.
ಪರಿಸರ ದಿನದ ನೆನಪಿಗಾಗಿ ವೆಂಗಯ್ಯನ ಕೆರೆ ಆವರಣದಲ್ಲಿ 60 ಸಸಿಗಳನ್ನು ನೆಡಲಾಯಿತು. ನಗರದ ಇತರ ಭಾಗಗಳಲ್ಲೂ ಹೆಚ್ಚು ಸಸಿಗಳನ್ನು ನೆಡಲು ಸೂಕ್ತ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಕಮಿಷನರ್ ಸೂಚಿಸಿದ್ದಾರೆ. ನಗರದ ಸೌಂದರ್ಯವನ್ನು ಹೆಚ್ಚಿಸುವ ಭಾಗವಾಗಿ ಹಲವಾರು ಸರ್ಕಾರಿ ಕಟ್ಟಡಗಳ ಕಾಂಪೌಂಡ್ ಗೋಡೆಗಳ ಮೇಲೆ ಆಕರ್ಷಕ ಭಿತ್ತಿಚಿತ್ರಗಳು ಮತ್ತು ಕಲಾಕೃತಿಗಳನ್ನು ಬಿಡಿಸಲಾಗಿದೆ.
ಪ್ಲಾಸ್ಟಿಕ್ ಬಳಸಿದವರಿಗೆ ದಂಡದ ಬರೆ
ಸ್ವಚ್ಛತೆಯ ಜೊತೆಗೆ ನಿಗಮದ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಬಳಕೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದ ಆರೋಪದ ಮೇಲೆ ಒಟ್ಟು 26 ಪ್ರಕರಣಗಳನ್ನು ದಾಖಲಿಸಲಾಗಿದೆ. ನಿಯಮ ಉಲ್ಲಂಘಿಸಿದವರಿಂದ ಒಟ್ಟು 30,000 ರೂಪಾಯಿ ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.