Chitra Santhe 20: ಕರ್ನಾಟಕ ಚಿತ್ರಕಲಾ ಪರಿಷತ್ ಚಿತ್ರಸಂತೆಗೆ 20ರ ಹರೆಯ, ಮುಂದಿನ ಭಾನುವಾರದಿಂದ ಪ್ರದರ್ಶನ, ಮನೆ ಮಾಡಿದೆ ಹಬ್ಬದ ವಾತಾವರಣ

| Updated By: ಸಾಧು ಶ್ರೀನಾಥ್​

Updated on: Jan 04, 2023 | 9:35 AM

ಬೆಂಗಳೂರು ಚಿತ್ರಸಂತೆ ಬೆರಗು ಮೂಡಿಸುವ ಬಣ್ಣದ ಲೋಕ. ದೇಶ ವಿದೇಶಗಳ 25ಕ್ಕೂ ಹೆಚ್ಚು ಪ್ರಕಾರಗಳ ಚಿತ್ರಗಳು ಅರಳಿ ನಿಲ್ಲುವ ಲೋಕ ಇದು. ನಿಜ ಅರ್ಥದಲ್ಲಿ ಒಂದೇ ಸೂರಿನಡಿ ತೆರೆದುಕೊಳ್ಳುವ ವೈವಿಧ್ಯ ವಿಶ್ವ -ಬೆಂಗಳೂರು ಚಿತ್ರಸಂತೆ.

Chitra Santhe 20: ಕರ್ನಾಟಕ ಚಿತ್ರಕಲಾ ಪರಿಷತ್ ಚಿತ್ರಸಂತೆಗೆ 20ರ ಹರೆಯ, ಮುಂದಿನ ಭಾನುವಾರದಿಂದ ಪ್ರದರ್ಶನ, ಮನೆ ಮಾಡಿದೆ ಹಬ್ಬದ ವಾತಾವರಣ
ಕರ್ನಾಟಕ ಚಿತ್ರಕಲಾ ಪರಿಷತ್: ಮುಂದಿನ ಭಾನುವಾರದಿಂದ ಪ್ರದರ್ಶನ
Follow us on

ಕರ್ನಾಟಕ ಚಿತ್ರಕಲಾ ಪರಿಷತ್ತಿನ (Chitrakala Parishath) ಪ್ರತಿಷ್ಠಿತ ಕಾರ್ಯಕ್ರಮ ‘ಚಿತ್ರಸಂತೆ‘ಗೆ ಈಗ 20 ವರ್ಷ. ಕಲಾವಿದರು ಹಾಗೂ ಕಲಾ ಪೋಷಕರ ನಡುವೆ ಕೊಂಡಿಯಂತೆ ಕೆಲಸ ಮಾಡುತ್ತಾ ಬಂದಿರುವ ‘ಚಿತ್ರಸಂತೆ’ (Chitra Santhe) ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲೂ ಮನ್ನಣೆ ಪಡೆದಿದೆ. ಇದಕ್ಕೆ ಜನ ಮನ್ನಣೆಯೂ ದೊರೆತಿದೆ. ಕಳೆದ ಆರು ದಶಕಗಳಿಂದ ದೃಶ್ಯಕಲಾ ಮಾಧ್ಯಮ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ಕೊಟ್ಟಿರುವ ಕರ್ನಾಟಕ ಚಿತ್ರಕಲಾ ಪರಿಷತ್ತು ಪ್ರತಿ ವರ್ಷದಂತೆ ಈ ವರ್ಷವೂ 2023 ಜನವರಿ 8ರಂದು ‘ಚಿತ್ರಸಂತೆ’ (art festival) ಏರ್ಪಡಿಸಿದೆ.

ಕಲಾಸಕ್ತರ ಕೈಗೆಟಕುವ ಬೆಲೆಯಲ್ಲಿ ಕಲಾಕೃತಿಗಳು ದೊರೆಯಬೇಕೆಂಬ ಮುಖ್ಯ ಉದ್ದೇಶದಿಂದ ಶುರುವಾದ ‘ಚಿತ್ರಸಂತೆ’ ಪ್ರಸ್ತುತ ದೇಶವಿದೇಶಗಳ ಒಂದು ಸಾವಿರಕ್ಕೂ ಹೆಚ್ಚು ಕಲಾವಿದರನ್ನು ಸೆಳೆಯುತ್ತಿದ್ದು, ಚಿತ್ರಸಂತೆಯನ್ನು ವೀಕ್ಷಿಸಲು ಬರುವವರ ಸಂಖ್ಯೆ ಮೂರು ಲಕ್ಷಕ್ಕೂ ಅಧಿಕವಾಗಿದೆ.

ದೇಶದ ಹಲವು ಭಾಗಗಳಲ್ಲಿ ಪಾರಂಪರಿಕ ಕಲಾವಿದರಿದ್ದಾರೆ. ವೃತ್ತಿನಿರತ ಕಲಾವಿದರ ಸಂಖ್ಯೆಯೂ ಸಾಕಷ್ಟಿದೆ. ದೇಶದುದ್ದಕ್ಕೂ ಕಲಾ ಶಾಲೆಗಳಿಂದ ಸಾವಿರಾರು ಕಲಾ ವಿದ್ಯಾರ್ಥಿಗಳು ಹೊರ ಬರುತ್ತಿದ್ದಾರೆ. ಒಟ್ಟಾರೆ ಕಲಾ ಸೃಷ್ಠಿ ನಿರಂತರವಾಗಿ ಏರುಮುಖದಲ್ಲೇ ಇದ್ದು, ಅದನ್ನು ಕಲಾಸಕ್ತರಿಗೆ ಮಾರಾಟ ಮಾಡುವ ಹಾದಿಗಳು ಬಹಳ ಕಡಿಮೆ. ಎಲ್ಲಾ ಕಲಾವಿದರು ಕಲಾ ಗ್ಯಾಲರಿಗಳಲ್ಲಿ ಪ್ರದರ್ಶನ ಏರ್ಪಡಿಸುವುದು ಅಸಾಧ್ಯ ಇದಕ್ಕೆ ಕಲಾ ಗ್ಯಾಲರಿಗಳ ಕೊರತೆ, ಕಾರಣ ಆಸಕ್ತರ ನಡುವೆ ಮುಖಾಮುಖಿಯೂ ವಿರಳ.

ಭಾರತದ ವಿವಿಧ ಪ್ರದೇಶಗಳಿಂದ ಕಲಾವಿದರು ತಮ್ಮ ಕಲಾಕೃತಿಗಳೊಂದಿಗೆ ಚಿತ್ರಸಂತೆಗೆ ಬರುವುದು ಈಗಂತೂ ವಾರ್ಷಿಕ ವಿಧಿಯಾಗಿದೆ. ಚಿತ್ರಸಂತೆಯ ಧ್ಯೇಯವಾಕ್ಯ “ಕಲೆ ಎಲ್ಲರಿಗಾಗಿ”. ರಸ್ತೆಯುದ್ದಕ್ಕೂ ಚಿತ್ರಕೃತಿಗಳ ಸಂತೆ ಜರುಗುವುದೊಂದು ಅಪರೂಪದ ವಿಷಯ. ಪರಿಷತ್ತಿನ ಪ್ರಾಂಗಣದಿಂದ ಮುಂಭಾಗದ ರಸ್ತೆಗೆ ವಿಸ್ತರಣೆಯಾದ ಚಿತ್ರಸಂತೆ 20 ವರ್ಷಗಳ ಬಳಿಕ ಇಡೀ ಕುಮಾರಕೃಪಾ ರಸ್ತೆಯಲ್ಲದೆ ಆಸುಪಾಸಿನ ಕಿರಿಯ ರಸ್ತೆಗಳಿಗೂ ವ್ಯಾಪಿಸಿದೆ.

ಕಲಾವಿದರಿಗೆ-ಕಲಾಸಕ್ತರಿಗೆ ಕಲಾ ವಿದ್ಯಾರ್ಥಿಗಳಿಗೆ ಚಿತ್ರಸಂತೆಯೊAದು ಹಬ್ಬದ ವಾತಾವರಣ ಕೊಡುತ್ತದೆ. ಚಿತ್ರಸಂತೆಯಲ್ಲಿ ಎಲ್ಲಾ ಪ್ರಕಾರಗಳ ಚಿತ್ರಕೃತಿಗಳು ದೊರೆಯುವುದೊಂದು ವಿಶೇಷ ಸಂಗತಿ. ಮೈಸೂರು ಸಾಂಪ್ರಾದಾಯಿಕ ಶೈಲಿ, ಮಧುಬನಿ, ತಂಜಾವೂರು ಶೈಲಿ, ರಾಜಸ್ಥಾನಿ, ಇನ್ನಿತರ ಭಾರತೀಯ ಕಲಾ ಪ್ರಕಾರದ ಬಹುತೇಕ ಎಲ್ಲಾ ಬಗೆಯ ಚಿತ್ರಗಳು ಪ್ರದರ್ಶನ ಹಾಗೂ ಮಾರಾಟಕ್ಕಿರುತ್ತದೆ. ಮೊದಲೇ ರಚನೆಯಾದ ಚಿತ್ರಗಳೇ ಅಲ್ಲದೆ ಸ್ಥಳದಲ್ಲೇ ಚಿತ್ರಗಳ ರಚನೆಗೊಳ್ಳುವುದು ‘ಚಿತ್ರಸಂತೆಯ ವಿಶೇಷ. ತಮ್ಮ ಚಿತ್ರವನ್ನು ತಾವೇ ಬರೆಸಿಕೊಳ್ಳುವವರೂ ಇಲ್ಲಿಗೆ ಬರುತ್ತಾರೆ.

ಭಾವ ಚಿತ್ರಗಳೊಂದಿಗೆ ವ್ಯಂಗ್ಯ ಚಿತ್ರಗಳೂ ಚಿತ್ರಸಂತೆಯಲ್ಲಿ ಹೊರ ಹೊಮ್ಮುತ್ತವೆ. ಸಾಮಾನ್ಯರಿಗೂ ಕೈಗೆಟಕುವ ಬೆಲೆಗಳಲ್ಲಿ ಚಿತ್ರಕೃತಿಗಳು ಸಂತೆಯಲ್ಲಿ ಲಭ್ಯ. ಸಾವಿರಗಳಿಂದ ಲಕ್ಷದವರೆಗೂ ಇವುಗಳ ಬೆಲೆಗಳಿರುವುದುಂಟು. ಲಕ್ಷಗಟ್ಟಲೆ ಆಗಮಿಸುವ ಕಲಾಸಕ್ತರಿಗೆ, ಕಲಾವಿದರಿಗೆ ಬೆಂಗಳೂರು ಮಹಾನಗರ ಪಾಲಿಕೆ, ಮಹಾನಗರ ಸಾರಿಗೆ ಸಂಸ್ಥೆ, ಪೊಲೀಸ್, ಆರೋಗ್ಯ ಇಲಾಖೆ, ಅಗ್ನಿಶಾಮಕ, ವಿದ್ಯುತ್, ಬ್ಯಾಂಕ್‌ಗಳೂ ಅನುಕೂಲಗಳನ್ನು ಕಲ್ಪಿಸುತ್ತಿದ್ದು. ಕರ್ನಾಟಕ ಸರ್ಕಾರ ಸಂತೆಗಾಗಿ ಪ್ರತಿವರ್ಷ ಅನುದಾನವನ್ನು ಕೂಡ ಮಾಡುತ್ತಿದೆ.

ಚಿತ್ರಕಲಾ ಪರಿಷತ್ತು ಕೆಲವು ಬ್ಯಾಂಕ್‌ಗಳ ನೆರವಿನಿಂದ ಸಂಚಾರಿ, ಎ.ಟಿ.ಎಂ, ವ್ಯವಸ್ಥೆಯನ್ನು ‘ಚಿತ್ರಸಂತೆ’ ಸ್ಥಳದ ಸಮೀಪ ಮಾಡುತ್ತಿದ್ದು, ಕಲಾವಿದರಿಗೆ ತಮ್ಮ ಚಿತ್ರಕೃತಿಗಳನ್ನು ಪ್ರದರ್ಶಿಸಲು ರಸ್ತೆಯ ಇಕ್ಕೆಲಗಳಲ್ಲೂ ಮಳಿಗೆಗಳನ್ನು ನೀಡುತ್ತದೆ. ಕಲಾವಿದರಿಗೆ ಉಪಹಾರ, ಕುಡಿಯುವ ನೀರನ್ನು ಒದಗಿಸುತ್ತದೆ. ಪರಿಷತ್ತಿನ ಏಳಿಗೆಯಲ್ಲಿ ಕೈ ಜೋಡಿಸಿದ ಕಲಾ ಪೋಷಕ ಎಚ್.ಕೆ. ಕೇಜ್ರಿವಾಲ್, ಡಿ. ದೇವರಾಜ ಅರಸು, ಎಂ. ಆರ್ಯಮೂರ್ತಿ ಹಾಗೂ ವೈ. ಸುಬ್ರಮಣ್ಯರಾಜು ಅವರ ಜ್ಞಾಪಕಾರ್ಥ ಪುರಸ್ಕಾರಗಳನ್ನು ಇದೇ ಸಂದರ್ಭದಲ್ಲಿ ಪ್ರದಾನ ಮಾಡಲಾಗುವುದು. ಈ ಪುರಸ್ಕಾರ ತಲಾ ರೂ. 50,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ವೈವಿಧ್ಯ ಬಣ್ಣಗಳ ಲೋಕ:

ಬೆಂಗಳೂರು ಚಿತ್ರಸಂತೆ ಬೆರಗು ಮೂಡಿಸುವ ಬಣ್ಣದ ಲೋಕ. ದೇಶ ವಿದೇಶಗಳ 25ಕ್ಕೂ ಹೆಚ್ಚು ಪ್ರಕಾರಗಳ ಚಿತ್ರಗಳು ಅರಳಿ ನಿಲ್ಲುವ ಲೋಕ ಇದು. ಸಾಂಪ್ರದಾಯಿಕ ಚಿತ್ರಕಲೆ, ಸಮಕಾಲೀನ ಚಿತ್ರಶೈಲಿ, ಪಾಶ್ಚಿಮಾತ್ಯ ಚಿತ್ರಕೃತಿ, ಜಲವರ್ಣ, ತೈಲವರ್ಣ, ಕೋಲಾಜ್, ಲಿಥೋಗ್ರಾಫ್, ಡೂಡಲ್, ಉಬ್ಬು ಚಿತ್ರಗಳು, ಮಿಶ್ರಮಾಧ್ಯಮ, ಗ್ರಾಫಿಕ್, ಛಾಯಾಚಿತ್ರ, ಪೆನ್ಸಿಲ್ ಚಿತ್ರ, ಗಾಜಿನ ಮೇಲೆ ಅರಳುವ ಚಿತ್ರಗಳು ಹೀಗೆ ನಿಜ ಅರ್ಥದಲ್ಲಿ ಒಂದೇ ಸೂರಿನಡಿ ತೆರೆದುಕೊಳ್ಳುವ ವೈವಿಧ್ಯ ವಿಶ್ವ -ಬೆಂಗಳೂರು ಚಿತ್ರಸಂತೆ.

ಅನುಭವ ನುಡಿ ಜೀವನ ಅನುಭವದಿಂದ ವ್ಯಕ್ತವಾಗುವ ಚಿತ್ರಕೃತಿಗಳನ್ನು ನೋಡುವುದೇ ಉಲ್ಲಾಸಮಯ ಎನ್ನುತ್ತಾರೆ ಇಸ್ರೊ ಮಾಜಿ ಅಧ್ಯಕ್ಷ ಕಿರಣ್ ಕುಮಾರ್. ರಸ್ತೆಯ ಅಂಚಿನಲ್ಲಿ ಬಗೆ ಬಗೆಯ ಚಿತ್ರಗಳನ್ನು ನೋಡುವುದೇ ಆನಂದ. ಇದು ಮನಸ್ಸನ್ನು ಪ್ರಪುಲ್ಲಗೊಳಿಸುವ ಸನ್ನಿವೇಶ ಎನ್ನುವ ಆಲೆನ್ಸ್ ಅಮೇರಿಕಾದಿಂದ ಚಿತ್ರಸಂತೆ ನೋಡಲೆಂದು ಬಂದವರು. ಹಳೆ-ಹೊಸ ಕಲಾವಿದರರಿಗೆ ಇದೊಂದು ಸೂಕ್ತ ವೇದಿಕೆ ಎನ್ನುವ ಅಭಿಪ್ರಾಯ ಚಿತ್ರಕಲಾ ಪರಿಷತ್ತಿನ ಹಳೆಯ ವಿದ್ಯಾರ್ಥಿನಿ ಶ್ರಾವಣಿ ಅವರದು.

ಚಿತ್ರಸಂತೆಯಲ್ಲಿ ಜನ ಜಾಗೃತಿ:

ಚಿತ್ರಸಂತೆಯಲ್ಲಿ ಬಹುತೇಕ ಚಿತ್ರಗಳೆಲ್ಲ ಒಂದಲ್ಲ ಒಂದು ಕಥೆಗಳನ್ನು ಹೇಳುತ್ತವೆ. ಜನ ಜಾಗೃತಿಗಾಗಿ ಚಿತ್ರಗಳು ಇಲ್ಲಿಯೇ ಅರಳುತ್ತವೆ. ರೈತರ ಕಷ್ಟಕಾರ್ಪಣ್ಯ, ನೀರಿನ ಅಭಾವ, ಹೆಣ್ಣು ಭ್ರೂಣ ಹತ್ಯೆ, ಇನ್ನಿತರ ವಿಚಾರಗಳನ್ನು ಜನರಿಗೆ ತಿಳಿಸುವ ಚಿತ್ರಗಳು ಇಲ್ಲಿ ಕಾಣಸಿಗುತ್ತವೆ. ಬೆಂಗಳೂರು ಚಿತ್ರಸಂತೆಯಲ್ಲಿ ಒಮ್ಮೆ ಪಾಲ್ಗೊಂಡ ಹೊರ ರಾಜ್ಯಗಳ ಹಲವು ಕಲಾವಿದರು ನಿರಂತರವಾಗಿ ಬರುತ್ತಿದ್ದಾರೆ.

ಆಂಧ್ರ ಪ್ರದೇಶದ ವೃತ್ತಿಪರ ಕಲಾವಿದ ವೆಂಕಟರಮಣ ಏಳು ವರ್ಷಗಳಿಂದ ಸಂತೆಗೆ ಬರುತ್ತಿದ್ದಾರೆ. ಚರ್ಮದ ಮೇಲೆ ಚಿತ್ರ ಬಿಡಿಸುವ ಇವರು ಗ್ರಾಹಕರಿಗೆ ಹೊರೆಯಾಗದಂತೆ ಕಡಿಮೆ ಬೆಲೆಗೆ ಮಾರಾಟ ಮಾಡುವೆ ಎನ್ನುವ ವೆಂಕಟರಮಣ ಸ್ಥಳದಲ್ಲೇ ಚಿತ್ರ ರಚನೆ ಮಾಡುವುದರಲ್ಲಿ ನಿಪುಣರು.

ಹತ್ತು ವರ್ಷಗಳಿಂದ ಬೆಂಗಳೂರು ಚಿತ್ರಸಂತೆಗೆ ಹಾಜರಿ ಹಾಕುವ ಪುಣೆಯ ಕಲಾವಿದ ನಾಗೇಂದ್ರ ಬಿಡಿಸುವುದು ಹೆಚ್ಚಾಗಿ ಭಾವಚಿತ್ರಗಳನ್ನು ಜಲವರ್ಣ ಹಾಗೂ ಪೆನ್ಸಿಲ್ ಕಲರ್‌ಗಳಲ್ಲಿ ಇವರ ಚಿತ್ರಗಳು ಮೂಡಿ ಬರುತ್ತವೆ.

ವಿಕಲಚೇತನರಿಗೆ ಪ್ರೋತ್ಸಾಹ:

ವಿಕಲಚೇತನ ಕಲಾ ಪ್ರತಿಭೆಗಳಿಗೆ ‘ಚಿತ್ರಸಂತೆ’ಯಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ವಿಕಲಚೇತನರಿಗೆ ಅನುಕೂಲವಾಗುವಂತೆ (ಕುಡಿಯವ ನೀರು-ಶೌಚಾಲಯ ವ್ಯವಸ್ಥೆ) ಮಳಿಗೆಗಳನ್ನು ಕೊಟ್ಟು ಪ್ರೋತ್ಸಾಹ ಮಾಡುತ್ತಿದ್ದು, ಕೆಲವು ವಿಕಲಚೇತನರು ವೀಲ್‌ಚೇರ್ ಮೂಲಕ ಸಂತೆಗೆ ಬಂದು ತಮ್ಮ ಕೃತಿಗಳನ್ನು ಪ್ರದರ್ಶಿಸುವುದರ ಜೊತೆಗೆ ಕೆಲವರು ಸ್ಥಳದಲ್ಲೇ ಚಿತ್ರ ಬಿಡಿಸಿಕೊಡುತ್ತಿದ್ದಾರೆ. ರಾಜ್ಯದ ಕೆಲವು ವಿಕಲಚೇತನ ವಿದ್ಯಾಸಂಸ್ಥೆಗಳು ತಮ್ಮ ಪ್ರತಿಭಾವಂತ ಕಲಾವಿದ್ಯಾರ್ಥಿಗಳೊಂದಿಗೆ ಚಿತ್ರಸಂತೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗುತ್ತಿದೆ.

Published On - 3:54 pm, Tue, 3 January 23