ಪ್ರಾಣವನ್ನೇ ಪಣಕ್ಕಿಟ್ಟು ಪಕ್ಷಿಯನ್ನು ರಕ್ಷಿಸಿದ ವಿಡಿಯೋ ವೈರಲ್, ನೆಟ್ಟಿಗರ ಮನಗೆದ್ದ ಬೆಂಗಳೂರು ಟ್ರಾಫಿಕ್ ಪೊಲೀಸ್ ಪೇದೆ
ಬೆಂಗಳೂರಿನ ಟ್ರಾಫಿಕ್ ಪೊಲೀಸರೊಬ್ಬರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಮೊಬೈಲ್ ಟವರ್ ಏರಿ ಪಕ್ಷಿ ಜೀವ ರಕ್ಷಿಸಿದ್ದಾರೆ. ಇದೀಗ ಆ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಮನಗೆದ್ದಿದೆ.
ಬೆಂಗಳೂರು: ಸಾರ್ವಜನಿಕರು ರಸ್ತೆ ಸಂಚಾರ ನಿಯಮ ಪಾಲನೆ ಮಾಡಲು ಟ್ರಾಫಿಕ್ ಪೊಲೀಸ್ರು (Bengaluru Traffic Police) ಒಂದು ರೀತಿಯಲ್ಲಿ ಕಾವಲುಗಾರರಾಗಿದ್ದಾರೆ. ಜೊತೆಗೆ ಪೊಲೀಸರು ತಮ್ಮ ಕೈಲಾದ ಸಹಾಯವನ್ನು ಸಾರ್ವಜನಿಕರಿಗೆ ಮಾಡುತ್ತಿದ್ದು, ಆಗಾಗ ಸುದ್ದಿಯಾಗುತ್ತಿರುತ್ತಾರೆ. ಈಗ ಬೆಂಗಳೂರಿನ ಟ್ರಾಫಿಕ್ ಪೊಲೀಸರೊಬ್ಬರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಪಕ್ಷಿಯ (Bird) ಪ್ರಾಣ ಉಳಿಸಿದ್ದಾರೆ. ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣಳಲ್ಲಿ ವೈರಲ್ (Viral Video) ಆಗಿದೆ. ಅಲ್ಲದೇ ಅವರ ಕಾರ್ಯಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಹೌದು…ಬೆಂಗಳೂರಿನ ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯ ಸುರೇಶ್ ಎನ್ನುವವರು ಜೀವದ ಹಂಗು ತೊರೆದು ಮೊಬೈಲ್ ಟವರ್ ಏರಿ ಸಿಲುಕಿಕೊಂಡು ಒದ್ದಾಡುತ್ತಿದ್ದ ಪಕ್ಷಿಯನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ತಮ್ಮ ಪ್ರಾಣವನ್ನು ಲೆಕ್ಕಿಸದೆ, ಪಕ್ಷಿಯ ಪ್ರಾಣವನ್ನು ಉಳಿಸಿದ ಆರಕ್ಷಕನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ವಿಡಿಯೋವನ್ನು ಬೆಂಗಳೂರಿನ ಪಶ್ಚಿಮ ಟ್ರಾಫಿಕ್ ವಿಭಾಗದ ಉಪ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್ ಜೈನ್ ಅವರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು, 2.26 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ಇದೇ ವಿಡಿಯೋವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೂಡಾ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು, ‘ನಮ್ಮ ಸಂಚಾರ ಪೊಲೀಸರು ರಕ್ಷಣಾ ಕಾರ್ಯದಲ್ಲೂ ಸೈ ಎನಿಸಿಕೊಂಡಿದ್ದಾರೆ. ರಾಜಾಜಿನಗರದ ಟ್ರಾಫಿಕ್ ಪೊಲೀಸ್ ಸುರೇಶ್ ಅವರು, ಟವರ್‌ನಲ್ಲಿ ಸಿಲುಕಿದ್ದ ಕಾಗೆಯನ್ನು ಅತ್ಯಂತ ಕಾಳಜಿಯಿಂದ ರಕ್ಷಣೆ ಮಾಡಿದ್ದಾರೆ. ಅವರ ಸಮಯ ಪ್ರಜ್ಞೆ ಹಾಗೂ ಕರ್ತವ್ಯ ಪ್ರಜ್ಞೆಗೆ ಅಭಿನಂದನೆಗಳು ಅಂದು ಬರೆದುಕೊಂಡಿದ್ದಾರೆ. ಅಲ್ಲದೇ ಮಾಜಿ ಸಚಿವ ಸುರೇಶ್ ಕುಮಾರ್ ಸಹ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.
The hidden and unexplored side of a policemen. Well done Mr Suresh from @rajajinagartrps pic.twitter.com/D9XwJ60Npz
— Kuldeep Kumar R. Jain, IPS (@DCPTrWestBCP) December 30, 2022
ನೆಟ್ಟಿಗರು ಸುರೇಶ್ ಅವರ ಧೈರ್ಯ ಮತ್ತು ನಿಸ್ವಾರ್ಥತೆಯನ್ನು ಶ್ಲಾಘಿಸಿದ್ದರೆ, ಇನ್ನೂ ಕೆಲವರು ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಸಲಹೆ ನೀಡಿದ್ದಾರೆ. ಅಲ್ಲದೇ ಇದು ಅವರ ಕರ್ತವ್ಯವನ್ನು ಮೀರಿದೆ. ದಯವಿಟ್ಟು ಅವರಿಗೆ ಸೂಕ್ತ ಪ್ರಶಸ್ತಿ ನೀಡಿ ಗೌರವಿಸಿ ಎಂದು ಬರೆದುಕೊಂಡಿದ್ದಾರೆ. ಎಲ್ಲ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಎಂದು ಹೇಗೆ ಒತ್ತಾಯಿಸುತ್ತೀರೋ, ಹಾಗೆಯೇ ಪೊಲೀಸರ ಸುರಕ್ಷತೆಯ ಬಗ್ಗೆಯೂ ಆದ್ಯತೆ ನೀಡಬೇಕು. ಅವರಿಗೂ ಮನೆ ಹಾಗೂ ಕುಟುಂಬ ಎಂಬುದು ಇದೆ ಎಂದು ಮತ್ತೊಬ್ಬ ನೆಟ್ಟಿಗ ಹೇಳಿದ್ದಾರೆ. ಇನ್ನು ಸರ್, ಸುರಕ್ಷತೆ ಮತ್ತು ಮುನ್ನೆಚ್ಚರಿಕೆ ಇಲ್ಲದೆ ದಯವಿಟ್ಟು ಇಂತಹ ಕ್ರಮಗಳನ್ನು ಪ್ರೋತ್ಸಾಹಿಸಬೇಡಿ. ಏನಾದರೂ ಹೆಚ್ಚು ಕಡಿಮೆಯಾದರೆ ಅವರ ಜೀವನದುದ್ದಕ್ಕೂ ಅವರ ಕುಟುಂಬದೊಂದಿಗೆ ಯಾರೂ ಬೆಂಬಲವಾಗಿ ನಿಲ್ಲುವುದಿಲ್ಲ ಎಂಬುದು ನಮಗೆ ಗೊತ್ತಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಒಟ್ಟಿನಲ್ಲಿ ಟ್ರಾಫಿಕ್ ಪೊಲೀಸ್ ಸುರೇಶ್ ಅವರು ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ತಮ್ಮ ಪ್ರಾಣವನ್ನು ಲೆಕ್ಕಿಸದೆ ಪಕ್ಷಿಯನ್ನು ರಕ್ಷಿಸಿದ ಈ ವಿಡಿಯೋ ನೆಟ್ಟಿಗರ ಮನಗೆದಿದ್ದು, ಸುರಕ್ಷತಾ ಕ್ರಮಗಳನ್ನು ಕೈಗೊಂಡ ಬಳಿಕವೇ ಇಂತಹ ಸಾಹಸಕ್ಕೆ ಕೈ ಹಾಕುವಂತೆ ನೆಟ್ಟಿಗರು ಸಲಹೆ ಕೂಡ ಕೊಟ್ಟಿದ್ದಾರೆ.
ಇನ್ನಷ್ಟು ಬೆಂಗಳೂರು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 6:53 pm, Tue, 3 January 23