ಇಡಿ ದಾಳಿ ಬೆನ್ನಲ್ಲೇ ದೆಹಲಿಗೆ ಲಗ್ಗೆ ಇಟ್ಟ ಜಮೀರ್ ಅಹ್ಮದ್ ಖಾನ್; ಕಾನೂನು ಪಂಡಿತರೊಂದಿಗೆ ಚರ್ಚೆ
ಇಡಿ ರೇಡ್ ಬಳಿಕ ಜಮೀರ್ ಅಹ್ಮದ್ ಖಾನ್ ಅವರ ದೆಹಲಿ ಭೇಟಿ ಸಹಜವಾಗಿಯೇ ಕುತೂಹಲ ಮೂಡಿಸಿತ್ತು. ದೆಹಲಿ ರೌಂಡಪ್ ಹಿಂದಿನ ಉದ್ದೇಶವೇನು? ಅಲ್ಲಿ ಯಾರೊಂದಿಗೆ ಮಾತುಕತೆ ನಡೆಸಿದ್ದಾರೆ? ಅವರ ತಂತ್ರಗಾರಿಕೆ ಏನು? ಎಂಬ ಪ್ರಶ್ನೆಗಳು ಎದ್ದಿದ್ದವು.
ಬೆಂಗಳೂರು: ಇಡಿ ದಾಳಿ (ED Raid) ಬಳಿಕ ರಾಷ್ಟ್ರ ರಾಜಧಾನಿ ದೆಹಲಿಗೆ ಲಗ್ಗೆ ಇಟ್ಟಿರುವ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ (Zameer Ahmed Khan) ಇಡಿ ನೋಟಿಸ್ಗೆ (ED Notice) ಪ್ರತ್ಯುತ್ತರ ಕೊಡಲು ಸಂಪೂರ್ಣ ಸಿದ್ಧತೆ ನಡೆಸುತ್ತಿದ್ದಾರೆ. ಯಾವುದೇ ಕ್ಷಣದಲ್ಲಿ ಇಡಿ ನೋಟಿಸ್ ಕೈಸೇರುವ ಸಾಧ್ಯತೆ ಇರುವುದರಿಂದ ದೆಹಲಿಯಲ್ಲಿ ಕೆಲ ಪ್ರಮುಖರನ್ನು ಭೇಟಿ ಮಾಡಿ ಬಂದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇಡಿ ರೇಡ್ ಬಳಿಕ ಜಮೀರ್ ಅಹ್ಮದ್ ಖಾನ್ ಅವರ ದೆಹಲಿ ಭೇಟಿ ಸಹಜವಾಗಿಯೇ ಕುತೂಹಲ ಮೂಡಿಸಿತ್ತು. ದೆಹಲಿ ರೌಂಡಪ್ ಹಿಂದಿನ ಉದ್ದೇಶವೇನು? ಅಲ್ಲಿ ಯಾರೊಂದಿಗೆ ಮಾತುಕತೆ ನಡೆಸಿದ್ದಾರೆ? ಅವರ ತಂತ್ರಗಾರಿಕೆ ಏನು? ಎಂಬ ಪ್ರಶ್ನೆಗಳು ಎದ್ದಿದ್ದವು. ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಡಿಕೆಶಿ ಭೇಟಿ ನಂತರ ದೆಹಲಿಯಲ್ಲಿ ಕೆಲವು ರಾಜಕಾರಣಿಗಳ ಸಂಪರ್ಕ ಸಾಧಿಸಿರುವ ಜಮೀರ್, ಒಂದಷ್ಟು ವಿಚಾರಗಳ ಬಗ್ಗೆ ಮಾತುಕತೆ ನಡೆಸಿರುವುದು ತಿಳಿದುಬಂದಿದೆ.
ಇದೇ ವೇಳೆ ಕಾನೂನು ಪಂಡಿತರು, ಅಡ್ವೋಕೇಟ್ಗಳನ್ನೂ ಸಂಪರ್ಕಿಸಿ ಇಡಿ ರೇಡ್ ನಂತರ ಮುಂದಿನ ಕಾನೂನು ಹೋರಾಟ ಕುರಿತು ಮಹತ್ವದ ಮಾತುಕತೆ ನಡೆಸಿರುವುದು ಗೊತ್ತಾಗಿದೆ. ಇಡಿ ನೋಟಿಸ್ ಬಳಿಕ ಉತ್ತರಿಸುವುದು ಹೇಗೆ? ಯಾವೆಲ್ಲಾ ಅಂಶಗಳನ್ನ ಒಳಗೊಂಡಂತೆ ಇಡಿ ನೋಟಿಸ್ ಗೆ ಉತ್ತರಿಸಬೇಕಿದೆ? ಯಾವ-ಯಾವ ಡಾಕ್ಯುಮೆಂಟ್ ಸಿದ್ದತೆ ಮಾಡಿಕೊಳ್ಳಬೇಕು? ದಾಖಲೆಗಳ ಸಿದ್ದತೆ ಹೇಗೆ? ಯಾವ ದಾಖಲೆಗಳನ್ನ ಇಡಿ ಅಧಿಕಾರಿಗಳಿಗೆ ಒದಗಿಸಬೇಕಿದೆ? ಯಾವೆಲ್ಲ ಅಂಶಗಳನ್ನ ದಾಖಲೆ ಒಳಗೊಂಡಿರಬೇಕು? ಎನ್ನುವ ಬಗ್ಗೆ ಸಲಹೆ ಪಡೆದು ಬಂದಿದ್ದಾರೆ ಎನ್ನಲಾಗಿದೆ.
ರೇಡ್ ವೇಳೆ ಇಡಿ ವಶಕ್ಕೆ ಪಡೆದ ದಾಖಲೆಗಳಿಗೆ ಪ್ರತಿ ದಾಖಲೆಗಳ ಸಿದ್ದತೆ ನಿಟ್ಟಿನಲ್ಲಿ ಕಾನೂನು ಪಂಡಿತರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವ ಜಮೀರ್, ತನಿಖೆಯನ್ನು ಎದುರಿಸುವ ಮಾರ್ಗೋಪಾಯಗಳ ಕುರಿತು ಮಾತನಾಡಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ. ದೆಹಲಿ ಭೇಟಿ ವೇಳೆ ಕೆಲವು ಅಧಿಕಾರಿಗಳನ್ನೂ ಸಂಪರ್ಕಿಸಿರುವ ಜಮೀರ್, ಇಡಿ ವಿಚಾರಣೆ ವೇಳೆ ಯಾವೆಲ್ಲ ಪ್ರಶ್ನೆಗಳು ಎದುರಾಗಲಿದೆ? ಇಡಿ ಅಧಿಕಾರಿಗಳ ನೋಟಿಸ್ಗೆ ಯಾವೆಲ್ಲಾ ಡಾಕ್ಯುಮೆಂಟ್ ಅವಶ್ಯಕ ಎಂದು ಅವರನ್ನೂ ಕೇಳಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ದೆಹಲಿಯಿಂದ ಬೆಂಗಳೂರಿಗೆ ವಾಪಸ್; ಶನಿವಾರ, ಭಾನುವಾರ ಯಾವ ED ಕಚೇರಿ ತೆರೆದಿರುತ್ತೆ ಎಂದ ಜಮೀರ್
ಶಾಸಕ ಜಮೀರ್ಗೆ ಕಾಡ್ತಿದ್ಯಾ ಇ.ಡಿ. ಬಂಧನ ಭೀತಿ? ನನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದ ಜಮೀರ್ ದೆಹಲಿಗೆ ಹೋಗಿದ್ದೇಕೆ?
(Zameer Ahmed Khan Delhi visit after ED Raid here are the reasons)