ಬೆಂಗಳೂರು, ಫೆಬ್ರವರಿ 25: ‘‘ರಾಜ್ಯ ಸರ್ಕಾರದ ಸಚಿವರಾಗಿ ಬೆಂಗಳೂರಿಗೆ ನೀವೇನು ಮಾಡಿದ್ದೀರಿ? ಮೊದಲು ಸ್ವಚ್ಛ ಮತ್ತು ಸರಿಯಾಗಿ ನಡೆದಾಡಬಲ್ಲಂಥ ನಗರವನ್ನು ನಮಗೆ ಕೊಡಿ’’ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಇನ್ಫೋಸಿಸ್ ಮಾಜಿ ಸಿಎಫ್ಓ ಮೋಹನ್ ದಾಸ್ ಪೈ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪ್ರಿಯಾಂಕ್ ಖರ್ಗೆ ಸಂದೇಶಕ್ಕೆ ಪ್ರತಿಕ್ರಿಯೆ ನೀಡಿರುವ ಪೈ, ಸಚಿವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅತಿ ಹೆಚ್ಚಿನ ಮೌಲ್ಯ ಹೊಂದಿರುವ ಹೆಚ್ಚು ಕಂಪನಿಗಳನ್ನು ಒಳಗೊಂಡಿರುವ ಭಾರತದ ನಗರಗಳ ಪೈಕಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ ಎಂಬ ಹರುನ್ ವರದಿಯನ್ನು ಪ್ರಿಯಾಂಕ್ ಖರ್ಗೆ ಎಕ್ಸ್ನಲ್ಲಿ ಹಂಚಿಕೊಂಡಿದ್ದರು. ಜತೆಗೆ ಬೆಂಗಳೂರಿನ ಹೆಗ್ಗಳಿಕೆಗಳನ್ನು ಪಟ್ಟಿ ಮಾಡಿದ್ದರು. ಇದು ಮೋಹನ್ ದಾಸ್ ಪೈ ಅವರನ್ನು ಕೆರಳಿಸಿದೆ. ಇದಕ್ಕೆ ಅವರು ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿದ್ದಾರೆ.
‘‘ಸಚಿವ ಪ್ರಿಯಾಂಕ್ ಖರ್ಗೆ ಅವರೇ, ಇದು ನಮಗೆ ಗೊತ್ತಿದೆ. ನಮ್ಮ ಜೀವನ ಮಟ್ಟವನ್ನು ಸುಧಾರಿಸಲು ಒಬ್ಬ ಸಚಿವರಾಗಿ ನೀವೇನು ಮಾಡಿದ್ದೀರಿ? ಸ್ವಚ್ಛ ನಗರ, ಗುಂಡಿಗಳಿಲ್ಲದ ರಸ್ತೆ ಮತ್ತು ಸರಿಯಾದ ಫುಟ್ಪಾತ್ ಅನ್ನು ಒದಗಿಸಿಕೊಡುವುದು ನಿಮ್ಮಿಂದ ಸಾಧ್ಯವಾಗಿಲ್ಲ. ಇದೇನು ದೊಡ್ಡ ರಾಕೆಟ್ ಸೈನ್ಸ್ ಅಲ್ಲ, ಸಾಧಾರಣ ನಿರ್ವಹಣೆ ಪ್ರಕ್ರಿಯೆ ಅಷ್ಟೇ. ದಯಮಾಡಿ ಡಿಕೆ ಶಿವಕುಮಾರ್ ಅವರ ಜೊತೆ ಮಾತನಾಡಿ ನಮಗೆ ಸ್ವಚ್ಛ ಮತ್ತು ನಡೆದಾಡಬಲ್ಲಂತಹ ನಗರವನ್ನು ಒದಗಿಸಿಕೊಡಿ. ಕಳೆದ ಎರಡು ವರ್ಷಗಳಿಂದ ನಮ್ಮ ಜೀವನ ದುಸ್ತರವಾಗಿದೆ’’ ಎಂದು ಮೋಹನ್ ದಾಸ್ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.
Minister @PriyankKharge We know all this, but tell us – what have you done as our Minister to improve our lives? You have not even ensured the city is clean with no potholes and good footpaths! This is not rocket science but regular maintenance work. Pl talk to Minister… https://t.co/v1ewx3GrAf
— Mohandas Pai (@TVMohandasPai) February 24, 2025
ಮೋಹನ್ ದಾಸ್ ಪೈ ಟೀಕೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಮೋಹನ್ ದಾಸ್ ಪೈ ಸುಮ್ಮನೇ ಸರ್ಕಾರವನ್ನು ಟೀಕೆ ಮಾಡುತ್ತಿದ್ದಾರೆ. ಅವರಿಗೆ ಕೇಂದ್ರದಲ್ಲಿ ಉನ್ನತ ಹುದ್ದೆ ಬೇಕಾಗಿದೆ. ರಾಜ್ಯಸಭೆ ಸದಸ್ಯ ಸ್ಥಾನ ಬೇಕಿದೆ ಅನಿಸುತ್ತೆ. ಅದಕ್ಕೆ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು ನಗರದಲ್ಲಿ ಒಂದು ಗುಂಡಿಯನ್ನು ಮುಚ್ಚುವ ಯೋಗ್ಯತೆ ಈ ಸರ್ಕಾರಕ್ಕಿಲ್ಲ: ಬಿವೈ ವಿಜಯೇಂದ್ರ
ಹಿಂದೆ ಮೋಹನ್ ದಾಸ್ ಪೈ ತಾನೇ ಬೇರೆ ಬೇರೆ ಹುದ್ದೆಯಲ್ಲಿದ್ದವರು. ರಾಜ್ಯದಲ್ಲಿ ಸರ್ಕಾರ ಬದಲಾವಣೆ ಆದ್ಮೇಲೆ ಇವರ ವರಸೆ ಬದಲಾಗಿದೆ. ಅದಕ್ಕಾಗಿಯೇ ಸಿದ್ದರಾಮಯ್ಯ, ಡಿಕೆಶಿ, ಪ್ರಿಯಾಂಕ್ ಖರ್ಗೆಯನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಅವರು ಈಗ ಸೋಷಿಯಲ್ ಮಿಡಿಯಾ ವಾರಿಯರ್ಸ್ ಆಗಿದ್ದಾರೆ. ಈ ಮೊದಲು 6 ತಿಂಗಳಿಗೆ ಒಮ್ಮೆ ಮಾತನಾಡುತ್ತಿದ್ದರು. ಈಗ ಪ್ರತಿ ವಾರವೂ ಸಚಿವರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಐಟಿ ಸರ್ವೀಸ್ ಕಡಿಮೆ ಆಗುವ ಹಾಗೆ ಟ್ರಂಪ್ ಮಾತನಾಡಿದ್ದಾರೆ. ಅದರ ಬಗ್ಗೆ ಪೈ ಮಾತನಾಡಲ್ಲ ಎಂದು ಪ್ರಿಯಾಂಕ್ ತಿರುಗೇಟು ನೀಡಿದ್ದಾರೆ.