ಬಿಜಿ ರಾಮಕೃಷ್ಣಗೆ ಉತ್ತಮ ಶಿಕ್ಷಕ ಪ್ರಶಸ್ತಿ ತಡೆ ವಿಚಾರ: ನಿರ್ಧಾರ ಹಿಂಪಡೆಯದಿದ್ದರೆ ಪ್ರತಿಭಟನೆ, ಶಾಸಕ ಶ್ರೀವತ್ಸ
ಬಿ.ಜಿ.ರಾಮಕೃಷ್ಣಗೆ ಉತ್ತಮ ಶಿಕ್ಷಕ ಪ್ರಶಸ್ತಿ ತಡೆ ಹಿಡಿದ ವಿಚಾರವಾಗಿ ಮೈಸೂರಿನಲ್ಲಿ ಟಿವಿ9ಗೆ ಕೃಷ್ಣರಾಜ ಬಿಜೆಪಿ ಶಾಸಕ ಶ್ರೀವತ್ಸ ಹೇಳಿದ್ದು, ಇದು ಹಿಂದೂ ವಿರೋಧಿ, ಕೋಮುವಾದಿ ನಿರ್ಧಾರ. ಕೂಡಲೇ ನಿರ್ಧಾರ ಹಿಂಪಡೆಯದಿದ್ದರೆ ಪ್ರತಿಭಟನೆ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನಿಡಿದ್ದಾರೆ.
ಮೈಸೂರು, ಸೆಪ್ಟೆಂಬರ್ 05: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿಜಿ ಅವರು ರಾಜ್ಯಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಆದರೆ ಹಿಜಾಬ್ ಪರರ ವಿರೋಧ ವ್ಯಕ್ತ ಬೆನ್ನಲ್ಲೇ ಸರ್ಕಾರ ಪ್ರಶಸ್ತಿ ತಡೆಹಿಡಿದಿತ್ತು. ಸದ್ಯ ಈ ವಿಚಾರವಾಗಿ ಕೃಷ್ಣರಾಜ ಬಿಜೆಪಿ ಶಾಸಕ ಶ್ರೀವತ್ಸ (MLA Srivatsa) ಪ್ರಕ್ರಿಯಿಸಿದ್ದು, ಇದು ಹಿಂದೂ ವಿರೋಧಿ, ಕೋಮುವಾದಿ ನಿರ್ಧಾರ ಎಂದು ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ಕೂಡಲೇ ನಿರ್ಧಾರ ಹಿಂಪಡೆಯದಿದ್ದರೆ ಪ್ರತಿಭಟನೆ ಮಾಡುತ್ತೇವೆ. ಪಕ್ಷದ ಹಿರಿಯರ ಜತೆ ಚರ್ಚೆ ನಡೆಸಿ ಪ್ರತಿಭಟನೆ ಮಾಡುತ್ತೇವೆ. ಸರ್ಕಾರದ ನಿರ್ಧಾರಗಳು ಮುಖ್ಯಮಂತ್ರಿ ಗಮನಕ್ಕೆ ಬರುತ್ತಿಲ್ಲ. ಪ್ರಶಸ್ತಿ ಘೋಷಣೆ ಮಾಡುವ ಮುನ್ನ ಏಕೆ ಈ ಬಗ್ಗೆ ಯೋಚಿಸಿಲ್ಲ. ಘೋಷಣೆ ಮಾಡಿದ ನಂತರ ತಡೆ ಹಿಡಿದಿರುವುದು ಯಾಕೆ? ದಿನೇಶ್ ಕುಮಾರ್ ವರ್ಗಾವಣೆ ವಿಚಾರದಲ್ಲೂ ಇದೇ ರೀತಿ ಆಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ಇದು ಸರ್ಕಾರ ನಡೆದುಕೊಳ್ಳೋ ರೀತಿನಾ ಎಂದ ನಾರಾಯಣಸ್ವಾಮಿ
ಬೆಂಗಳೂರಿನಲ್ಲಿ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯಿಸಿದ್ದು, ರಾಮಕೃಷ್ಣಗೆ ಪ್ರಶಸ್ತಿ ಕೊಟ್ಟಿದ್ದು ಉತ್ತಮ ಶಿಕ್ಷಕ ಅಂತ. ಯಾರೋ ದೂರು ಕೊಟ್ಟಿದ್ದಾರೆ ಎಂದು ವಾಪಸ್ ತೆಗೆದುಕೊಂಡಿದ್ದಾರೆ. ಅಲ್ಲಿಗೆ ಹಿಜಾಬ್ ಬಗ್ಗೆ ಮಾತಾಡಿದರೆ ಉತ್ತಮ ಅಂತ ಅಲ್ಲ. ಇದು ಸರ್ಕಾರ ನಡೆದುಕೊಳ್ಳುವ ರೀತಿನಾ? ಅವರು ಉತ್ತಮ ಶಿಕ್ಷಕ ಅಂತ ಪ್ರಶಸ್ತಿ ಕೊಟ್ಟಿದ್ದು ತಾನೆ? ಇದು ಡಬಲ್ ಸ್ಟಾಂಡರ್ಡ್ ಧೋರಣೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉತ್ತಮ ಶಿಕ್ಷಕರ ಪ್ರಶಸ್ತಿಗೂ ತಟ್ಟಿದ ಹಿಜಾಬ್ ವಿವಾದ: ಕುಂದಾಪುರ ಪ್ರಾಂಶುಪಾಲರ ಪ್ರಶಸ್ತಿಗೆ ಆಕ್ಷೇಪ, ತಡೆಹಿಡಿದ ಸರ್ಕಾರ
ಇವರು ರಾಜಕೀಯ ಉದ್ದೇಶಕ್ಕಾಗಿ ಬಳಕೆ ಮಾಡುತ್ತಿದ್ದಾರೆ ಅನ್ಸುತ್ತೆ. ಸಮಿತಿ ಸೂಚಿಸಿದ್ದಕ್ಕೆ ಪ್ರಶಸ್ತಿ ಕೊಡುವುದು. ಈ ರೀತಿಯ ಕಾರ್ಯದಲ್ಲಿ ಸರ್ಕಾರಗಳು ತೊಡಗಬಹುದೇ? ಇದನ್ನ ಅವರು ಮರುಪರಿಶೀಲನೆ ಮಾಡಬೇಕು. ಇದಕ್ಕೆ ಅವಕಾಶ ನೀಡಬಾರದು. ಇದರಿಂದ ಸಮಾಜದಲ್ಲಿ ವೈಷಮ್ಯ ಹೆಚ್ಚು ಬೆಳೆಯುತ್ತವೆ. ಇದನ್ನ ದೊಡ್ಡ ಸಮಸ್ಯೆ ಮಾಡಬೇಡಿ, ಶಾಲೆಗಳು ಪವಿತ್ರವಾಗಿರುವುದಕ್ಕೆ ಬಿಡಿ. ಮಕ್ಕಳ ಮನಸ್ಸಿನಲ್ಲಿ ಇದು ಹೋಗುವುದಕ್ಕೆ ಕೊಡಬೇಡಿ ಅಂತ ಮನವಿ ಮಾಡುತ್ತೇನೆ. ಅವರಿಗೆ ದೂರು ಕೊಟ್ಟವರು ಯಾರು? ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.