ಪೇಪರ್ ಲೋಟದಲ್ಲಿ ಬಿಸಿ ಚಹಾ, ಕಾಫಿ ಕುಡಿಯುವವರೇ ಹಷಾರ್: ನಿಮಗೇ ಗೊತ್ತಿಲ್ಲದೇ ಹೊಟ್ಟೆ ಸೇರುತ್ತಿದೆ ಕ್ಯಾನ್ಸರ್

| Updated By: Ganapathi Sharma

Updated on: Dec 07, 2024 | 6:26 PM

ಬೆಳಗ್ಗೆದ್ದು ಒಂದು ಕಪ್ ಚಹಾ, ಕಾಫಿ ಹೀರಲಿಲ್ಲ ಅಂದರೆ ದಿನ ಆರಂಭವಾಗುವುದೇ ಕಷ್ಟ ಎಂಬ ಭಾವನೆ ಅನೇಕರಲ್ಲಿದೆ. ಮನೆಯಲ್ಲಿ ಸ್ಟೀಲ್ ಲೋಟದಲ್ಲಿ ಚಹಾ, ಕಾಫಿ ಹೀರುವುದೇನೋ ಸರಿ. ಆದರೆ, ಹೋಟೆಲ್​ನಲ್ಲಿ ಅಥವಾ ಅಂಗಡಿಗಳಲ್ಲಿ ಪೇಪರ್ ಲೋಟಗಳಲ್ಲಿ ಟೀ, ಕಾಫಿ ಹೀರುವವರು ಇನ್ನು ಎಚ್ಚರಿಕೆ ವಹಿಸಬೇಕಿದೆ. ಯಾಕೆ? ಇಲ್ಲಿದೆ ವಿವರ.

ಪೇಪರ್ ಲೋಟದಲ್ಲಿ ಬಿಸಿ ಚಹಾ, ಕಾಫಿ ಕುಡಿಯುವವರೇ ಹಷಾರ್: ನಿಮಗೇ ಗೊತ್ತಿಲ್ಲದೇ ಹೊಟ್ಟೆ ಸೇರುತ್ತಿದೆ ಕ್ಯಾನ್ಸರ್
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಡಿಸೆಂಬರ್ 7: ನಿಮಗಿಷ್ಟವಾದ ಚಹಾ ಅಥವಾ ಕಾಫಿಯನ್ನು ಪೇಪರ್ ಲೋಟದಲ್ಲಿ ಕುಡಿಯುತ್ತಿದ್ದರೆ ಇವಾಗಿನಿಂದಲೇ ನಿಲ್ಲಿಸಿ. ಚಹಾ, ಕಾಫಿ ಕುಡಿದರೆ ಮನಸಿಗೆ ಹಿತವೆನಿಸುತ್ತದೆ ಎಂದು ನಾವು ಸಿಕ್ಕ ಸಿಕ್ಕ ಕಡೆ ಪೇಪರ್‌ ಲೋಟದಲ್ಲಿ ಬಿಸಿ ಟೀ, ಕಾಫಿ ಕುಡಿಯುತ್ತಿದ್ದರೆ ಇದೇ ನಮ್ಮ ಆರೋಗ್ಯಕ್ಕೆ ಮಾರಕವಾಗಬಹುದು. ಪ್ಲೇಪರ್‌ ಲೋಟದಲ್ಲಿ ಆರೋಗ್ಯ ಹಾನಿಕಾರಕವಾಗಿರುವ ಅಂಶ ಇರುವುದು ಆಹಾರ ಸುರಕ್ಷತಾ ಇಲಾಖೆ ನಡೆಸಿದ ಪರೀಕ್ಷೆಯಿಂದ ಬಯಲಾಗಿದೆ. ಪೇಪರ್ ಲೋಟದಲ್ಲಿ ಕ್ಯಾನ್ಸರ್‌ ಕಾರಕ ಅಂಶ ಇದೆ ಎಂಬುದು ತಿಳಿದುಬಂದಿದೆ.

ಆಹಾರ ಸುರಕ್ಷತಾ ಇಲಾಖೆ ವರದಿಯಲ್ಲಿ ಏನಿದೆ?

ಆಹಾರ ಇಲಾಖೆ ಪೇಪರ್ ಲೋಟಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿದ್ದು, ಅವುಗಳ ಬಳಕೆಯಿಂದ ಕ್ಯಾನ್ಸರ್ ಬರುವ ಅಂಶ ಪತ್ತೆಯಾಗಿದೆ. ಪೇಪರ್ ಲೋಟದಲ್ಲಿ ಶೇಕಡಾ 20 ರಷ್ಟು ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ. ಇದರಿಂದಾಗಿ, ಅವುಗಳಲ್ಲಿ ಬಿಸಿಯಾದ ಟೀ, ಕಾಫಿ ಹಾಕಿದ್ರೆ ಪ್ಲಾಸ್ಟಿಕ್‌ ಕರಗುತ್ತದೆ. ಕರಗಿದ ಪ್ಲಾಸ್ಟಿಕ್ ಅಂಶ ಮನುಷ್ಯನ ದೇಹ ಸೇರಿದರೆ ಕ್ಯಾನ್ಸರ್ ಬರುವ ಸಾಧ್ಯತೆ ಅತೀ ಹೆಚ್ಚು. ಹೀಗಾಗಿ ಪ್ಲಾಸ್ಟಿಕ್ ಅಂಶ ಇಲ್ಲದ ಕಪ್​​ಗಳ ಬಳಕೆಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ ಎಂದು ಆಹಾರ ಮತ್ತು ಸುರಕ್ಷತಾ ಇಲಾಖೆಯ ಶ್ರೀನಿವಾಸ್ ತಿಳಿಸಿದ್ದಾರೆ.

ನಿಷೇಧವಾಗುತ್ತಾ ಪೇಪರ್ ಲೋಟ?

ಪ್ಲಾಸ್ಟಿಕ್ ಮಿಶ್ರಿತ ಪೇಪರ್ ಕಪ್ ಅಪಾಯಕರ ಎಂಬುದು ಬೀದಿ ಬದಿ ವ್ಯಾಪಾರಿಗಳಿಗೂ ಮನದಟ್ಟಾಗಿದೆ. ಹೀಗಾಗಿ‌ ಈಗಾಗಲೇ ಪ್ಲಾಸ್ಟಿಕ್ ಅಂಶ ಇರುವ ಪೇಪರ್ ಕಪ್ ಬಳಕೆ ಶೇಕಾಡ 90ರಷ್ಟು ಕಡಿಮೆ ಮಾಡಲಾಗಿದೆ ಎಂದು ಬೆಂಗಳೂರು ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಂಗಸ್ವಾಮಿ ತಿಳಿಸಿದ್ದಾರೆ.

ಇದನ್ನೂ ಓದಿ: ವಿಷ್ಣುವಿನ ರೀತಿ ಅನಂತಾಸನದಲ್ಲಿ ಮಲಗುವ ಅಭ್ಯಾಸವಿದ್ದರೆ ಈ ಸಮಸ್ಯೆ ಬರುವುದಿಲ್ಲ

ಒಟ್ಟಿನಲ್ಲಿ ಇನ್ಮುಂದೆ ಪೇಪರ್ ಕಪ್ ಬಳಸಿ ಬಿಸಿ ಬಿಸಿ ಚಹಾ, ಕಾಫಿ ಕುಡಿಯುವುದನ್ನು ನಿಲ್ಲಿಸುವುದು ಉತ್ತಮ. ಸಾಧ್ಯವಾದ್ರೆ ಮನೆಯಿಂದಲೇ ಕಪ್ ಕೊಂಡು ಹೋಗಿ ಕುಡಿಯುವುದ ಉತ್ತಮ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:26 pm, Sat, 7 December 24