ಜನರಿಗೆ ನೀರು ಸಿಗುವಂತೆ ಮಾಡಿದ ಬೀದರ್ನ ಶ್ರೀ ಕ್ಷೇತ್ರ ಗುಪ್ತಲಿಂಗೇಶ್ವರ ದೇವಾಲಯ
ಬೀದರ್ನಲ್ಲಿರುವ ದೇವಸ್ಥಾನದ ಬೆಟ್ಟದಲ್ಲಿ ಮಾತ್ರ ನೀರಿನ ಸೇಲೆ ನಿರಂತರವಾಗಿದ್ದು ಶತಮಾನಗಳಿಂದ ಎಂದೂ ಕೂಡಾ ಬೆಟ್ಟದಿಂದ ನೀರು ಬರುವುದು ನಿಂತಿಲ್ಲ. ಎಲ್ಲಿಂದ ನೀರು ಹರಿದು ಬರುತ್ತದೆಂಬುವುದು ಮಾತ್ರ ಇಲ್ಲಿ ನಿಗೂಢವಾಗಿದೆ. ಈ ನಿಗೂಢ ರಹಸ್ಯದ ಕಥೆ ಕುತೂಹಲ ಕೆರಳಿಸುತ್ತೆ.

ಬೀದರ್: ಬೇಸಿಗೆ ಬಂದರೆ ಸಾಕು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತದೆ. ಬಾವಿ, ಬೋರ್ವೆಲ್ನಲ್ಲಿಯೂ ನೀರು ಖಾಲಿಯಾಗಿ ಪ್ರಾಣಿಪಕ್ಷಿಗಳು ಮಾತ್ರವಲ್ಲದೆ ಜನರೂ ನೀರಿಗಾಗಿ ಹಾಹಾಕಾರ ಪಡುವಂತಾಗುತ್ತದೆ. ಆದರೇ ಆ ದೇವಸ್ಥಾನದ ಬೆಟ್ಟದಲ್ಲಿ ಮಾತ್ರ ನೀರಿನ ಸೆಲೆ ನಿರಂತರವಾಗಿದ್ದು ಶತಮಾನಗಳಿಂದ ಎಂದೂ ಕೂಡಾ ಬೆಟ್ಟದಿಂದ ನೀರು ಬರುವುದು ನಿಂತಿಲ್ಲ. ಯಾವ ಭಾಗದಿಂದ ನೀರು ಹರಿದು ಬರುತ್ತದೆಂಬುವುದು ನಿಗೂಢವಾಗಿದೆ. ಈ ನಿಗೂಢ ರಹಸ್ಯದ ಕಥೆ ಕುತೂಹಲ ಕೆರಳಿಸುತ್ತೆ.
ಗುಪ್ತಲಿಂಗೇಶ್ವರ ದೇವಾಲಯ ಜಿಲ್ಲೆಯ ಭಾಲ್ಕಿ ತಾಲೂಕಿನ ಖಾನಾಪುರ ಗ್ರಾಮದ ಬಳಿಯ ಬೆಟ್ಟದಲ್ಲಿ ಶ್ರೀ ಕ್ಷೇತ್ರ ಗುಪ್ತಲಿಂಗೇಶ್ವರ ದೇವಾಲಯವಿದೆ. ಇದು ಐದಾರು ಶತಮಾನ ಪುರಾತನ ದೇವಾಲಯ. ಈ ಗುಪ್ತಲಿಂಗವಿರುವ ಬೆಟ್ಟ ಹಲವಾರು ವಿಸ್ಮಯಗಳನ್ನೊಳಗೊಂಡಿದೆ. ಪಕ್ಕದ ಆಂದ್ರ, ತೆಲಂಗಾಣ ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಇಲ್ಲಿಗೆ ಭಕ್ತರು ಬರುತ್ತಾರೆ ಅಮಾವಾಸ್ಯೆ ಹಾಗೂ ಹುಣ್ಣಿಮೆಯಂದು ಸಾಕಷ್ಟು ಪ್ರಮಾಣಲ್ಲಿ ಭಕ್ತರು ಇಲ್ಲಿಗೆ ಬಂದು ದೇವರ ದರ್ಶನ ಪಡೆದು ಹೋಗುತ್ತಾರೆ.
ಇನ್ನೂ ಗುಪ್ತಲಿಂಗ ದೇವಸ್ಥಾನದ ಸುತ್ತಮುತ್ತ ಸಾಕಷ್ಟೂ ಪ್ರಮಾಣದಲ್ಲಿ ಅರಣ್ಯ ಪ್ರದೇಶವಿದ್ದು ದೇವಸ್ಥಾನದಲ್ಲಿ ನೀರಿನ ಝರಿ ಬತ್ತಿರುವ ಉದಾಹರಣೆಗಳೇ ಇಲ್ಲ. ಇಲ್ಲಿನ ನೀರನ್ನು ಕುಡಿದರೆ ಮತ್ತು ಸ್ನಾನ ಮಾಡಿದರೆ ರೋಗ ವಾಸಿಯಾಗುತ್ತದೆ ಎಂದು ಭಕ್ತರು ನಂಬಿದ್ದಾರೆ. ಇಲ್ಲಿಗೆ ಬರುವ ಭಕ್ತರು ಈ ನೀರಿನಲ್ಲಿ ಸ್ನಾನ ಮಾಡುತ್ತಾರೆ. ಜೊತೆಗೆ ನೀರನ್ನು ಔಷಧಿ ರೂಪದಲ್ಲಿಯೂ ಪ್ರತಿನಿತ್ಯ ಕುಡಿಯುವುದರಿಂದ ನಮ್ಮ ದೇಹದಲ್ಲಿರುವ ಖಾಯಿಲಿಗಳು ವಾಸಿಯಾಗುತ್ತದೆ. ಚರ್ಮರೋಗ ನಿವಾರಣೆಗೆ ರಾಮಬಾಣದಂತೆ ಕೆಲಸ ಮಾಡುತ್ತದೆಂಬ ಭಾವನೆ ಇಲ್ಲಿಗೆ ಬರುವ ಭಕ್ತರದ್ದು.
ಗುಹೆಯ ಶಿವಲಿಂಗದ ಮೂಲಕ ನೀರು ಹರಿದು ಬರುವುದು ವಿಶೇಷ ಗುಹೆಯಲ್ಲಿರುವ ಶಿವಲಿಂಗದ ಮೂಲಕವೂ ನೀರು ಹರಿದು ಬರುವುದು ಕೂಡ ಇಲ್ಲಿನ ವಿಶೇಷ. ಇಲ್ಲಿನ ನೀರಿನ ಝರಿ ದಿನದ 24 ಗಂಟೆಯೂ ಧುಮ್ಮಿಕ್ಕುತ್ತದೆ. ಇಲ್ಲಿ ಬೆಟ್ಟದ ಅಂಚಿನಿಂದ ಬರುವ ನೀರು ನಂದಿ ಬಾಯಿಯಿಂದ ಕಿರು ಕಲ್ಯಾಣಿಗೆ ಬಂದು ಬೀಳುತ್ತದೆ. ನೀರಿನ ಹರಿವು ಸದಾ ಒಂದೇ ಸಮನಾಗಿರುತ್ತದೆ. ಶುದ್ಧ ಕುಡಿಯುವ ನೀರಿನ ಘಟಕಗಳು ಇರದ ಕಾಲದಲ್ಲಿ ಸುತ್ತಮುತ್ತಲಿನ ಗ್ರಾಮದ ಜನರು ವಾಹನಗಳಲ್ಲಿ ಇಲ್ಲಿಗೆ ಬಂದು ನೀರು ತುಂಬಿಕೊಂಡು ಹೋಗುತ್ತಿದ್ದರು ಎಂದು ಹಿರಿಯರು ಹೇಳುತ್ತಾರೆ.
ಪ್ರಾಣಿ ಪಕ್ಷಿಗಳ ನೀರಿನ ದಾಹ ತೀರಿಸಲು ದೇವಸ್ಥಾನ ನೆರವು ಆದರೀಗ ಮನೆಮನೆಗೆ ನೀರು ಬರುತ್ತಿರುವುದರಿಂದ ದೇವಸ್ಥಾನದಿಂದ ನೀರು ತೆಗೆದುಕೊಂಡು ಹೋಗುವುದು ಈಗ ನಿಂತಿದೆ. ದೇವಸ್ಥಾನಕ್ಕೆ ಬರುವವರು, ಇಲ್ಲಿಂದ ನೀರು ತೆಗೆದುಕೊಂಡು ಹೋಗುತ್ತಾರೆ. ಪ್ರಾಣಿ ಪಕ್ಷಿಗಳ ನೀರಿನ ದಾಹ ಕೂಡ ಈ ಸ್ಥಳ ತಣಿಸುತ್ತಿದೆ. ಎಲ್ಲಾ ಕಾಲಗಳಲ್ಲಿಯೂ ನೀರು ನಿರಂತರವಾಗಿ ಹರಿಯುತ್ತಲೇ ಇರುವುದರಿಂದ ದೇವಾಲಯ ಭಕ್ತರನ್ನ ಸೆಳೆಯುತ್ತಿದೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಗುಪ್ತಲಿಂಗನ ದರ್ಶನ ಪಡೆಯಲು ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.
ಆದರೆ ಈ ದೇವಸ್ಥಾನದ ಕುರಿತು ಅದೆಷ್ಟೋ ಜನರಿಗೆ ಗೊತ್ತಿಲ್ಲ ಎನ್ನುವುದು ಬೇಸರದ ವಿಚಾರ. ಸರಕಾರ ಮತ್ತು ಸಮಾಜ ಸಹ ಇಂತಹ ಐತಿಹಾಸಿಕ ದೇವಸ್ಥಾನವನ್ನ ಗುರುತಿಸಿ, ದೇವಸ್ಥಾನದ ಜೀರ್ಣೋದ್ಧಾರ ಮಾಡಬೇಕಾಗಿದೆ.
ವಿಶ್ವದ ವಿಶಿಷ್ಟ ಹಾಗೂ ತಲೆಕೆಳಗಾಗಿರುವ ಏಕೈಕ ದೇವಾಲಯ, ಇರೋದೆಲ್ಲಿ ಗೊತ್ತಾ?