
ಬೀದರ್, ಸೆಪ್ಟೆಂಬರ್ 17: ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ರೈತರೊಬ್ಬರು ಕಡಿಮೆ ನೀರಿನಲ್ಲಿ ಸಾವಯವ ಪದ್ಧತಿ ಹಾಗೂ ಹನಿ ನೀರಾವರಿ ಅಳವಡಿಸಿಕೊಂಡು ಪಪ್ಪಾಯಿ ಬೆಳೆ ಬೆಳೆಸಿದ್ದಾರೆ. ಎರಡು ಎಕರೆಯಲ್ಲಿ ಉತ್ತಮ ಇಳುವರಿ ಪಡೆಯುತ್ತಿರುವ ಬೀದರ್ನ ಬಸವಕಲ್ಯಾಣ ತಾಲೂಕಿನ ಇಸ್ಲಾಂಪುರ ಗ್ರಾಮದ ರೈತ ವೆಂಕಟ್ ರೆಡ್ಡಿ, ಇತರೆ ರೈತರಿಗೆ ಮಾದರಿಯಾಗಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ವೆಂಕಟ್ ರೆಡ್ಡಿ ಅವರು ತಮ್ಮ ಎರಡು ಎಕರೆ ಜಮೀನಿನಲ್ಲಿ ಪಪ್ಪಾಯಿ ಕೃಷಿ ಆರಂಭಿಸಿದ್ದರು. ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದರೂ, ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯೊಂದಿಗೆ ಸುಮಾರು 1,900 ಪಪ್ಪಾಯಿ ಸಸಿಗಳನ್ನು ನಾಟಿ ಮಾಡಿದ್ದರು. ಆದರೆ ಸಸಿಗಳು ಬೆಳೆದು ದೊಡ್ಡದಾಗುವ ವೇಳೆಗೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಲಿಲ್ಲ. ಪರಿಣಾಮವಾಗಿ ಜಮೀನಿನ ಬಾವಿಯ ನೀರಿನ ಮಟ್ಟವೂ ಕುಸಿಯತೊಡಗಿತು.
ಇಂತಹ ಪರಿಸ್ಥಿತಿಯಲ್ಲಿ ಬೆಳೆ ಒಣಗುವ ಆತಂಕ ಎದುರಾದರೂ, ವೆಂಕಟ್ ರೆಡ್ಡಿ ಅವರು ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮುಂದಾದರು. ಜಮೀನಿನಲ್ಲಿ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿ, ಪ್ರತಿ ಗಿಡಕ್ಕೂ ಅಗತ್ಯವಿರುವಷ್ಟು ಮಾತ್ರ ನೀರು ತಲುಪುವಂತೆ ವ್ಯವಸ್ಥೆ ಮಾಡಿದರು. ಇದರಿಂದ ನೀರಿನ ವ್ಯರ್ಥ ಬಳಕೆಯನ್ನು ಕಡಿಮೆ ಮಾಡಿ, ಬರಗಾಲದಲ್ಲಿಯೂ ಬೆಳೆಯನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು.
ಹನಿ ನೀರಾವರಿಯ ಜೊತೆಗೆ ಪಪ್ಪಾಯಿ ಬೆಳೆಯಲ್ಲಿ ಸಾವಯವ ಕೃಷಿ ಪದ್ಧತಿಗೂ ರೈತ ಆದ್ಯತೆ ನೀಡಿದ್ದಾರೆ. ಗಿಡಗಳ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಸಾವಯವ ರೀತಿಯಲ್ಲಿ ಒದಗಿಸಿ, ಉತ್ತಮ ಗುಣಮಟ್ಟದ ಹಣ್ಣು ಪಡೆಯಲು ಪ್ರಯತ್ನಿಸಿದ್ದಾರೆ. ಸದ್ಯ ಜಮೀನಿನಲ್ಲಿರುವ ಪಪ್ಪಾಯಿ ಗಿಡಗಳು ಉತ್ತಮವಾಗಿ ಬೆಳೆದಿದ್ದು, ಹಣ್ಣುಗಳಿಂದ ತುಂಬಿಕೊಂಡಿವೆ. ಒಂದು ಗಿಡದಿಂದ ಸುಮಾರು 60ರಿಂದ 70 ಕೆ.ಜಿ.ವರೆಗೆ ಇಳುವರಿ ಪಡೆಯುವ ನಿರೀಕ್ಷೆ ಇದೆ. ಒಂದೊಂದು ಪಪ್ಪಾಯಿ ಹಣ್ಣು ಸುಮಾರು 3ರಿಂದ 5 ಕೆ.ಜಿ.ವರೆಗೆ ತೂಕ ಹೊಂದಿದೆ ಎಂದು ರೈತರು ತಿಳಿಸಿದ್ದಾರೆ.

ಎರಡು ಎಕರೆಯಲ್ಲಿ ಬೆಳೆದಿರುವ ಪಪ್ಪಾಯಿ ಬೆಳೆಯಿಂದ ಸುಮಾರು 25 ಲಕ್ಷ ರೂಪಾಯಿ ಆದಾಯ ಬರುವ ನಿರೀಕ್ಷೆಯನ್ನು ವೆಂಕಟ್ ರೆಡ್ಡಿ ಹೊಂದಿದ್ದಾರೆ. ಮಳೆ ಕೊರತೆ ಮತ್ತು ನೀರಿನ ಅಭಾವದ ನಡುವೆಯೂ ಉತ್ತಮ ಇಳುವರಿ ಸಿಗುತ್ತಿರುವುದು ರೈತನಲ್ಲಿ ಸಂತಸ ಮೂಡಿಸಿದೆ. ಪಪ್ಪಾಯಿ ಬೆಳೆಗೆ ನೀರು ಮತ್ತು ನಿರ್ವಹಣೆಯ ಅಗತ್ಯವಿದ್ದರೂ, ಲಭ್ಯವಿರುವ ನೀರನ್ನು ಮಿತವಾಗಿ ಬಳಸಿಕೊಂಡು ಹನಿ ನೀರಾವರಿ ಮೂಲಕ ಕೃಷಿ ಮಾಡಿದರೆ ಬರಗಾಲದಲ್ಲಿಯೂ ಉತ್ತಮ ಫಲಿತಾಂಶ ಪಡೆಯಬಹುದು ಎಂಬುದನ್ನು ವೆಂಕಟ್ ರೆಡ್ಡಿ ಅವರ ಜಮೀನು ತೋರಿಸಿಕೊಟ್ಟಿದೆ.
ಬೀದರ್ ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ಅನೇಕ ರೈತರು ಬೆಳೆಗಳ ಬಗ್ಗೆ ಆತಂಕದಲ್ಲಿದ್ದಾರೆ. ಸೂಕ್ತ ಸಮಯದಲ್ಲಿ ಮಳೆಯಾಗದ ಕಾರಣ ಹಲವೆಡೆ ಬೆಳೆಗಳು ಒಣಗುವ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಕಡಿಮೆ ನೀರಿನಲ್ಲಿ ಪಪ್ಪಾಯಿ ಬೆಳೆ ಬೆಳೆಸಿ ಉತ್ತಮ ಇಳುವರಿ ಪಡೆಯುತ್ತಿರುವ ವೆಂಕಟ್ ರೆಡ್ಡಿ ಅವರ ಪ್ರಯತ್ನ ಗಮನ ಸೆಳೆದಿದೆ.
ಇದನ್ನೂ ಓದಿ: ಕಲ್ಯಾಣ ಕರ್ನಾಟಕದಲ್ಲಿ ಅಪೌಷ್ಟಿಕತೆ: 5 ವರ್ಷದೊಳಗಿನ ಶೇ 40ಕ್ಕೂ ಹೆಚ್ಚು ಮಕ್ಕಳ ತೂಕ ಕಡಿಮೆ
ನೀರಿನ ಕೊರತೆ ಇದೆ ಎಂದು ಕೃಷಿಯನ್ನು ಕೈಬಿಡದೆ, ನೀರಿನ ಸದ್ಬಳಕೆ, ಹನಿ ನೀರಾವರಿ ಮತ್ತು ಸಾವಯವ ಪದ್ಧತಿಯನ್ನು ಅಳವಡಿಸಿಕೊಂಡರೆ ಬರಗಾಲದಲ್ಲಿಯೂ ಪರ್ಯಾಯ ಬೆಳೆಗಳ ಮೂಲಕ ಆದಾಯ ಗಳಿಸಬಹುದು ಎಂಬ ಸಂದೇಶವನ್ನು ಈ ರೈತರ ಕೃಷಿ ನೀಡುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ