ಓದಿದ್ದು 5ನೇ ತರಗತಿಯಾದರೂ, ಕೃಷಿಯಲ್ಲಿ ಪದವೀಧರ; ಬೀದರ್ ಜಿಲ್ಲೆಗೆ ಮಾದರಿಯಾದ ರೈತ
ಹನಿ ನೀರಾವರಿ ಮೂಲಕ 8 ಎಕರೆ ಜಮೀನಿನಲ್ಲಿ ಬಂಗಾರದಂತಹ ಬೆಳೆದ ತೆಗೆದಿದ್ದಾರೆ ರೈತ ಪಾಡುರಂಗ
ಭೂಮಿ ತಾಯಿಯನ್ನು ನಂಬಿದರೇ ಎಂದಿಗೂ ಕೈ ಬಿಡುವುದಿಲ್ಲ ಎನ್ನುವುದಕ್ಕೆ ಈ ಸ್ಟೋರಿಯೇ ಸಾಕ್ಷಿ. ಕೃಷಿ ಮುಂದೆ ಬೇರೆ ಎಲ್ಲ ಕೆಲಸ ನಶ್ವರ. ಕೃಷಿಯಲ್ಲಿರುವ ಲಾಭ ಬೇರೆ ಯಾವ ಉದ್ಯಮದಲ್ಲೂ ಇಲ್ಲ. ಆದರೆ ನಿಷ್ಠೆ ಮತ್ತು ಶ್ರದ್ಧೆಯಿಂದ, ಯೋಜಿತವಾಗಿ ಮತ್ತು ವೈಜ್ಞಾನಿಕವಾಗಿ ಕೃಷಿ ಮಾಡಿದರೆ ಸಫಲ ಕಂಡೇ ಕಾಣುತ್ತಾರೆ. ಇದೇ ರೀತಿ ಈ ರೈತ ಮಿಶ್ರ ಬೇಸಾಯ ಪದ್ಧತಿ ಅನುಸರಿಸಿಕೊಂಡು ಸಾಕಷ್ಟು ಲಾಭಗಳಿಸಿದ್ದಾರೆ.
ಬೀದರ್ ಜಿಲ್ಲೆ ಅಂದರೆ ನೆನಪಿಗೆ ಬರೋದು ಬಿಸಿಲು ನಾಡು ಎಂದು. ಸದಾ ಬರಗಾಲದಿಂದ ಕೂಡಿರುವ ನಾಡೆಂದು ಪ್ರಸಿದ್ಧಿ ಪಡೆದಿದೆ. ಆದರೆ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಕೊಡಂಬಳ ಗ್ರಾಮದ ರೈತ ಪಾಂಡುರಂಗ ಬರಡು ಭೂಮಿಯಲ್ಲಿ ಕಡಿಮೆ ನೀರಿನಲ್ಲಿ ಸಮಗ್ರ ಕೃಷಿ ಮಾಡುವುದರ ಮೂಲಕ ಬಂಗಾರ ಬೆಳದಿದ್ದಾರೆ. ಈ ಮೂಲಕ ಯಾವೊಬ್ಬ ಸರಕಾರಿ ನೌಕರರ ಪಡೆದುಕೊಳ್ಳುವ ಸಂಬಳಕ್ಕಿಂತ ಹೆಚ್ಚಿಗೆ ಹಣ ಗಳಿಸುತ್ತಿದ್ದಾರೆ. ಇವರು ಕೃಷಿಯಲ್ಲಿ ಹೊಸ ಪ್ರಯೋಗ ಮಾಡುವ ಮೂಲಕ ಬರಗಾಲದಲ್ಲಿ ನಿರಂತರ ಆದಾಯಗಳಿಸಿ ಜಿಲ್ಲೆಯ ರೈತರಿಗೆ ಮಾದರಿಯಾಗಿದ್ದಾರೆ.
ಸಮಗ್ರ ಬೇಸಾಯದ ಮೂಲಕ ತಿಂಗಳಿಗೆ ಹತ್ತಾರು ಸಾವಿರ ರೂಪಾಯಿ ಆದಾಯ ಪಡೆಯುತ್ತಿರುವ ಪಾಂಡುರಂಗ್ ಓದಿದ್ದು ಐದನೇ ತರಗತಿ. ಇವರು ತಮ್ಮ 8 ಎಕರೆ ಜಮೀನಿನಲ್ಲಿ ಪಪ್ಪಾಯಿ, ಬಾಳೆ, ಚೆಂಡೂ ಹೂವು, ಟೋಮ್ಯಾಟೋ, ಶುಂಠಿ ವಿವಿಧ ತರಕಾರಿ ಬೆಳೆಯುತ್ತಿದ್ದಾರೆ. ಮಿಶ್ರ ಬೇಸಾಯ ಮಾಡುವುದರಿಂದ ಆಗುವ ಲಾಭವೇನೆಂದರೇ ಒಂದು ಬೆಳೆ ಫಸಲು ಕೊಡುವುದನ್ನು ನಿಲ್ಲಿಸಿದ ಕೂಡಲೇ ಇನ್ನೊಂದು ಬೇಳೆ ಫಸಲು ಕೊಡಲು ಆರಂಭಿಸುತ್ತದೆ. ಇದರಿಂದ ಪ್ರತಿ ತಿಂಗಳು ಆದಾಯ ಗಳಿಸುವ ಮೂಲಕ ಪಾಂಡುರಂಗ್ ಕೃಷಿಯಲ್ಲಿ ಯಶಸ್ವಿಯಾಗಿದ್ದಾರೆ.
ಪಾಂಡುರಂಗ್ ತಂದೆಯವರ ಕಾಲದಲ್ಲಿ ಉದ್ದು, ಸೋಯಾ ಮತ್ತು ಹೆಸರು ಬೆಳೆಗೆ ಸೀಮಿತವಾಗಿದ್ದ ಭೂಮಿಯಲ್ಲಿ ತರಹೇವಾರಿ ಬೆಳೆ ಬೆಳೆಸಲಾಗುತ್ತಿದೆ. ಮಿಶ್ರ ಬೇಸಾಯವು ಅವರಿಗೆ ಮೇಲಿಂದ ಮೇಲೆ ಆದಾಯ ತಂದುಕೊಡುತ್ತಿದೆ. ಮಳೆಯ ಕೊರತೆ, ನೈಸರ್ಗಿಕ ವಿಕೋಪದಿಂದ ಒಂದು ಬೆಳೆ ಕೈಕೊಟ್ಟಾಗ ಮತ್ತೊಂದು ಬೆಳೆ ಕೈಹಿಡಿಯುತ್ತಿದೆ. ಈಗ ತಮ್ಮ ಐದು ಎಕರೆಯಷ್ಟು ಜಮೀನಿನಲ್ಲಿ ಅಪ್ಪಾಯಿ ನಾಟಿ ಮಾಡಿದ್ದಾರೆ. ಪಪ್ಪಾಯಿ ಈಗ ಕಟಾವಿಗೆ ಬಂದಿದ್ದು, ಈಗಾಗಲೇ ಮೂರು ಸಲ ಕಟಾವು ಮಾಡಲಾಗಿದ್ದು 5 ಟನ್ ಪಪ್ಪಾಯಿ ಮಾರಾಟ ಮಾಡಲಾಗಿದೆ. ಪಪ್ಪಾಯಿಯ ಜೊತೆಗೆ ಚೆಂಡು ಹೂವನ್ನು ಕೂಡಾ ಬೆಳೆಸಲಾಗಿದೆ.
ಚೆಂಡೂ ಹೂವು ಎರಡು ಕ್ವಿಂಟಾಲ್ ಮಾರಾಟ ಮಾಡಲಾಗಿದೆ ಅದರಿಂದಲೂ ಹಣ ಬಂದಿದೆ. ಇದರ ಜೊತೆಗೆ ಟೊಮ್ಯಾಟೋ ಬೆಳೆ ಹಾಕಲಾಗಿದೆ, ಶುಂಠಿ ಬೆಳೇಯೂ ಕೂಡಾ ಹಾಕಲಾಗಿದೆ ಒಂದೇ ಬೆಳೆಯನ್ನ ಬೆಳೆಸಿಕೊಂಡು ವರ್ಷ ಗಟ್ಟಲೇ ಕಾಯುವುದರ ಬದಲಿಗೆ ಒಂದು ಬೆಳೆಯ ಜೊತೆಗೆ ವಿವಿಧ ಬೆಳೆಯನ್ನು ಬೆಳೆದರೆ ಆದಾಯವೂ ಹೆಚ್ಚಾಗುತ್ತೆಂದು ಪಾಂಡುರಂಗ್ ನಂಬಿಕೊಂಡಿದ್ದಾರೆ. ಹೀಗಾಗಿ ಒಂದೇ ಬೆಳೆಯನ್ನು ನಂಬಿಕೊಂಡು ಬಿತ್ತನೆ ಮಾಡದೆ ಒಂದೆ ಜಮೀನಿನಿನಲ್ಲಿ ವಿವಿಧ ಬೆಳೆಯನ್ನು ಇವರು ಬೆಳೆಯುತ್ತಿದ್ದಾರೆ.
ನೀರಿನ ಉಳಿತಾಯಕ್ಕಾಗಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಸಮರ್ಥ ನೀರಿನ ಬಳಕೆಗಾಗಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಹನಿ ನೀರಾವರಿಯಲ್ಲಿ ಇಸ್ರೇಲ್ ತಂತ್ರಜ್ಞಾನ ಅಳವಡಿಸಿಕೊಳ್ಳುವ ಇಂಗಿತ ಹೊಂದಿದ್ದಾರೆ. ಟ್ರ್ಯಾಕ್ಟರ್, ಪವರ್ ಟಿಲ್ಲರ್ ಮುಂತಾದ ಕೃಷಿ ಉಪಕರಣ ಮತ್ತು ಕೃಷಿ ಯಂತ್ರೋಪಕರಣಗಳನ್ನು ಸಮರ್ಪಕವಾಗಿ ಉಪಯೋಗಿಸುತ್ತಿದ್ದಾರೆ. ಸಾಧಕ ರೈತನ ಬಗ್ಗೆ ಇಲ್ಲಿನ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು ರೈತರು ಒಂದೇ ಬೆಳೆಗೆ ಸೀಮಿತವಾಗದೆ ಸಮಗ್ರ ಪದ್ದತಿ ಮೂಲಕ ಕೃಷಿ ಮಾಡಿದರೇ ಒಂದು ಬೆಳೆ ಕೈಕೊಟ್ಟರು ಇನ್ನೊಂದು ಕೈ ಹಿಡಿಯುತ್ತದೆಂದು ತೋಟಗಾರಿಕೆ ಇಲಾಕೆಯ ಅಧಿಕಾರಿಗಳು ಹೇಳುತ್ತಿದ್ದಾರೆ.
ವೈಜ್ಜಾನಿಕವಾಗಿ ಸಮಗ್ರ ಕೃಷಿ ಪದ್ದತ್ತಿಯನ್ನ ಅಳವಡಿಸಿಕೊಂಡು ಲಕ್ಷ ಲಕ್ಷ ರೂಪಾಯಿ ಆದಾಯವನ್ನು ಹೇಗೇ ಘಳಿಸಬುದೆಂದು ರೈತ ಪಾಂಡುರಂಗ್ ತೋರಿಸಿಕೊಟ್ಟು ಜಿಲ್ಲೆಗೆ ಮಾದರಿ ರೈತನಾಗಿ ನಿಂತಿದ್ದಾರೆ.
ಸುರೇಶ್ ನಾಯಕ್ ಟಿವಿ9 ಬೀದರ್-99809-14145