ಗಾಂಧಿ ಗ್ರಾಮ ಪುರಸ್ಕೃತ ಪಂಚಾಯತ್​​ ವ್ಯಾಪ್ತಿಯಲ್ಲಿಲ್ಲ ಕನಿಷ್ಠ ಮೂಲಸೌಕರ್ಯ: ಹನಿ ನೀರಿಗೂ ಜನರ ಪರದಾಟ!

ಬೀದರ್‌ನ ಜಂಬಗಿ ಗ್ರಾಮ ಪಂಚಾಯತ್‌ಗೆ ಗಾಂಧಿ ಗ್ರಾಮ ಪುರಸ್ಕಾರ ದೊರೆತಿದ್ದರೂ, ಕನಿಷ್ಠ ಮೂಲಸೌಕರ್ಯ, ವಿಶೇಷವಾಗಿ ಕುಡಿಯುವ ನೀರಿನ ಕೊರತೆಯಿಂದ ಜನರು ತೀವ್ರವಾಗಿ ಪರದಾಡುತ್ತಿದ್ದಾರೆ. ಜಲ ಜೀವನ ಮಿಷನ್ ಯೋಜನೆ ವಿಫಲವಾಗಿದ್ದು, ಗ್ರಾಮಸ್ಥರು ಬೋರ್‌ವೆಲ್ ನೀರನ್ನೇ ಅವಲಂಬಿಸಿದ್ದಾರೆ. ಈ ಪ್ರಶಸ್ತಿ ಮಾನದಂಡಗಳ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಿದ್ದು, ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕೋರಿದ್ದಾರೆ.

ಗಾಂಧಿ ಗ್ರಾಮ ಪುರಸ್ಕೃತ ಪಂಚಾಯತ್​​ ವ್ಯಾಪ್ತಿಯಲ್ಲಿಲ್ಲ ಕನಿಷ್ಠ ಮೂಲಸೌಕರ್ಯ: ಹನಿ ನೀರಿಗೂ ಜನರ ಪರದಾಟ!
ನೀರಿಗಾಗಿ ಮಹಿಳೆಯರ ಪರದಾಟ
Image Credit source: Tv9 Kannada
Edited By:

Updated on: Apr 16, 2026 | 5:27 PM

ಬೀದರ್​​, ಏಪ್ರಿಲ್​​ 16: ತೆಲಂಗಾಣ ರಾಜ್ಯದ ಜೊತೆ ಗಡಿ ಹಂಚಿಕೊಂಡಿರುವ ಬೀದರ್ ಜಿಲ್ಲೆಯ ಔರಾದಾ ತಾಲೂಕಿನ ಜಂಬಗಿ ಗ್ರಾಮ ಪಂಚಾಯತ್​​ 2025ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ. ಹೀಗಿದ್ದರೂ ಈ ಪಂಚಾಯತ್​​ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಎಂಬುದು ಮಾತ್ರ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ಕುಡಿಯುವ ನೀರಿಗೂ ಜನರು ಪರದಾಡಬೇಕಾದ ಸ್ಥಿತಿ ಇದ್ದು, ಸ್ವಚ್ಛತೆ ಎಂಬುದಂತೂ ಬಲು ದೂರದ ಮಾತು. ಜಂಬಗಿ ಸೇರಿದಂತೆ ಐದು ಗ್ರಾಮಗಳು ಈ ಪಂಚಾಯತ್​​ ವ್ಯಾಪ್ತಿಗೆ ಬರುತ್ತವೆ. 13 ತಾಂಡಾಗಳನ್ನು ಹೊಂದಿರುವ ಈ ಪಂಚಾಯತ್​​ಗೆ ಒಟ್ಟು 28 ಜನ ಸದಸ್ಯರಿದ್ದಾರೆ. ಆದರೂ ಜನರ ಪರದಾಟ ಕೇಳೋರು ಮಾತ್ರ ಯಾರೂ ಇಲ್ಲ ಎನ್ನುವ ಸ್ಥಿತಿ ಇಲ್ಲಿಯದ್ದು.

ಆಡಳಿತ ಮತ್ತು ಪಾರದರ್ಶಕತೆ, ಸ್ವಚ್ಛತೆ ಮತ್ತು ಹಸಿರು, ಮೂಲಸೌಕರ್ಯ ಮತ್ತು ಅಭಿವೃದ್ಧಿ, ಆರ್ಥಿಕ ಸ್ವಾವಲಂಬನೆ ಸೇರಿದಂತೆ ಹತ್ತು ಹಲವು ಮಾನದಂಡಗಳ ಆಧಾರದಲ್ಲಿ ಸರ್ಕಾರ ಗಾಂಧಿ ಗ್ರಾಮ ಪುರಸ್ಕಾರ ನೀಡುತ್ತದೆ. ಆದರೆ ಅದೇ ಪ್ರಶಸ್ತಿಗೆ ಭಾಜನವಾಗಿರುವ ಈ ಪಂಚಾಯತ್​​ನಲ್ಲಿ ಜನ, ಜಾನುವಾರುಗಳು ಹನಿ ನೀರಿಗೂ ಪರದಾಡಬೇಕಿದೆ. ಗ್ರಾಮದಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ ಮನೆ ಮನೆಗೆ ನಲ್ಲಿಗಳನ್ನ ಅಳವಡಿಸಿದ್ದಾರೆಯಾದರೂ ಅವುಗಳಲ್ಲಿ ಈವರೆಗೆ ಒಂದು ಹನಿ ನೀರು ಬಂದದ್ದನ್ನೂ ಕಂಡವರಿಲ್ಲ. ಹೀಗಾಗಿ ನೀರು ಬೇಕೆಂದರೆ ಕಿಲೋಮೀಟರ್​​ಗಟ್ಟಲೆ ದೂರವನ್ನು ಗ್ರಾಮಸ್ಥರು ಸಾಗಲೇಬೇಕಿದೆ. ಈ ವಿಚಾರದ ಬಗ್ಗೆ ಹತ್ತಾರು ಸಲ ಗ್ರಾಮಸ್ಥರು ಮೆಲಾಧಿಕಾರಿಗೆ ಗಮನಕ್ಕೆ ತಂದರು ಕೂಡ ಯಾವುದೆ ಪ್ರಯೋಜನವಾಗಿಲ್ಲ. ಹೀಗಾಗಿ ಗ್ರಾಮಸ್ಥರು ಬೋರ್​​ವೆಲ್​​ ನೀರನ್ನೇ ಅವಲಂಬಿಸಿ ಬದುಕಬೇಕಿದೆ ಎಂಬುದು ಸ್ಥಳೀಯ ಮಹಿಳೆಯರ ಆಕ್ರೋಶ.

ಇದನ್ನೂ ಓದಿ: ಈರುಳ್ಳಿ ಬೀಜದ ದರ ಅರ್ಧದಷ್ಟು ಇಳಿಕೆ; ರೈತರಲ್ಲಿ ಕಣ್ಣೀರು ತರಿಸಿದ ಈರುಳ್ಳಿ

ಹೀಗೆ ಹತ್ತಾರು ಸಮಸ್ಯೆಗಳಿಂದ ಬಳಲುತ್ತಿರುವ ಜಂಬಗಿ ಗ್ರಾಮ ಪಂಚಾಯತ್​​ಗೆ ಅದ್ಯಾವ ಮಾನದಂಡ ಪರಿಗಣಿಸಿ ಸರ್ಕಾರ ಗಾಂಧಿ ಗ್ರಾಮ ಪುರಸ್ಕಾರ ನೀಡಿದೆಯೋ ಗೊತ್ತಿಲ್ಲ. ಗ್ರಾಮದಲ್ಲಿರುವ ಸಮಸ್ಯೆಗಳನ್ನು ಪಂಚಾಯತ್​​ ಶೀಘ್ರ ಪರಿಹರಿಸಿದರೆ ಅದುವೇ ನಮಗೆ ದೊಡ್ಡ ಸಹಾಯ ಎಂದು ಗ್ರಾಮಸ್ಥರು ಅಲವತ್ತುಕೊಂಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Suresh Naik

ಸುರೇಶ ನಾಯಕ ಮೂಲತಃ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದರು. ಓದಿದ್ದು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2009 ರಿಂದ ಅಂದರೆ ಕಳೆದ 16 ವರ್ಷದಿಂದ ದೃಷ್ಯ ಮಾಧ್ಯಮ ಕ್ಷೇತ್ರದಲ್ಲಿದ್ದು ಸಮಯ ಸುದ್ದಿ ವಾಹಿನಿಯ ಇನ್ ಪೂಟ್ ವಿಭಾಗದಲ್ಲಿ, ಜೊತೆಗೆ ಕಸ್ತೂರಿ ಸುದ್ದಿವಾಹಿನಿಯ ಹುಬ್ಬಳ್ಳಿ ವರದಿಗಾರನಾಗಿ ನಾಲ್ಕು ವರ್ಷ ಕೆಲಸ ಮಾಡಿದ ಅನುಭವವಿದೆ. 2014 ಪೆಬ್ರುವರಿ 01 ರಿಂದ ಟಿವಿ9 ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, 10 ವರ್ಷ ಪೂರೈಸಿದ್ದಾರೆ. ಟಿವಿ9 ನ ಆರಂಭದಲ್ಲಿ ಬಾಗಲಕೋಟೆ ಜಿಲ್ಲೆಯ ವರದಿಗಾರನಾಗಿ ಸಧ್ಯ ಬೀದರ್ ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ, ಮಾನವೀಯ ಕಳಕಳಿಯ ವರದಿ, ರೈತರ ಸಮಸ್ಯೆಗಳ ಕುರಿತು ಹೆಚ್ಚಿನ ಒತ್ತು ಕೊಟ್ಟು ತಮ್ಮ ಸುದ್ದಿಯ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಕಾಡು ಸುತ್ತೋದು, ಸಂಗೀತ ಕೇಳೋದು, ಇವರ ಹವ್ಯಾಸವಾಗಿದೆ...

Read More
Follow Us