ಜನಸ್ನೇಹಿ ಕಚೇರಿಯಾಗಿ ಬದಲಾದ ಬೀದರ್​ ಎಸ್ಪಿ ಆಫೀಸ್; ಜನರಲ್ಲಿನ ಭಯ, ಆತಂಕ ದೂರ

ಎಸ್ಪಿ ಕಚೇರಿಗೆ ಹೋಗೋದು ಅಂದರೆ ಸಹಜವಾಗಿಯೇ ಜನರಲ್ಲಿ ಭಯ ಆತಂಕ ಇರುತ್ತದೆ. ಅದರಲ್ಲಿಯೂ ಎಸ್ಪಿಯವರ ಬಳಿ ಹೋಗಿ ತಮ್ಮ ಸಮಸ್ಯೆ ಹೇಳೋದು ಅಂದರೆ ಚಳಿಯಲ್ಲಿಯೂ ಕೂಡ ಕೆಲವರು ಬೆವರುತ್ತಾರೆ. ಆದರೆ, ಗಡೀ ಜಿಲ್ಲೆ ಬೀದರ್​ನಲ್ಲಿರುವ ಜಿಲ್ಲಾ ಪೋಲೀಸ್ ಕಚೇರಿ ಮಾತ್ರ ಜನಸ್ನೇಹಿಯಾಗಿ ಬದಲಾಗಿದೆ. ಅದು ಹೇಗೇ ಅಂತೀರಾ? ಈ ಸ್ಟೋರಿ ಓದಿ.

ಜನಸ್ನೇಹಿ ಕಚೇರಿಯಾಗಿ ಬದಲಾದ ಬೀದರ್​ ಎಸ್ಪಿ ಆಫೀಸ್; ಜನರಲ್ಲಿನ ಭಯ, ಆತಂಕ ದೂರ
ಬೀದರ್​ ಎಸ್ಪಿ ಆಫೀಸ್​
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: May 22, 2024 | 7:42 PM

ಬೀದರ್, ಮೇ.22: ತೆಲಗಾಂಣ-ಮಹಾರಾಷ್ಟ್ರ ಎರಡು ರಾಜ್ಯದ ಗಡೀ ಹಂಚಿಕೊಂಡಿರುವ ಬೀದರ್(Bidar) ಜಿಲ್ಲೆಯಲ್ಲಿ ಕಳೆದೆರಡು ವರ್ಷದಿಂದ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತಿದೆ. ರಸ್ತೆ ಅಪಘಾತಗಳು, ಈ ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇಕಡಾ 20ರಷ್ಟು ಕಡಿಮೆಯಾಗಿವೆ. ಅದಕ್ಕೆಲ್ಲ ಕಾರಣ ಅಂದರೆ ಬೀದರ್ ಜಿಲ್ಲೆಗೆ ಎಸ್ಪಿಯಾಗಿ ಬಂದಿರುವ ಚನ್ನಬಸವಣ್ಣ ಎಸ್.ಎಲ್.(Channabasavanna S.L) ಅವರು. ಇವರು ಜಿಲ್ಲೆಗೆ ಬಂದಾಗಿನಿಂದಲೂ ಹೊಸ ಹೊಸ ಬದಲಾವಣೆಗಳನ್ನ ಮಾಡುವುದರ ಮೂಲಕ ಜನಸ್ನೇಹಿ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.

ಹೊಸ ಹೊಸ ಬದಲಾವಣೆ

ರಸ್ತೆ ಅಪಘಾತಗಳನ್ನ ಕಡಿಮೆ ಮಾಡುವ ಉದ್ದೇಶದಿಂದ ಹತ್ತಾರು ಟ್ರಾಫಿಕ್ ಜಾಗೃತಿ ಮೂಡಿಸುವುದರ ಜೊತೆಗೆ ದಂಡದ ಬದಲು ಹೆಲ್ಮೆಟ್ ಕೊಡುವುದರ ಮೂಲಕ ರಸ್ತೆ ಅಫಘಾದಿಂದಾಗಿ ಮೃತಪಡುವರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುವಂತೆ ಮಾಡಿದರು. ಈಗ ಮತ್ತೊಂದು ಹೊಸ ಪ್ರಯೋಗವನ್ನ ಮಾಡುವುದರ ಮೂಲಕ ಸಾರ್ವಜನಿಕರಿಗೆ ಇನಷ್ಟು ಹತ್ತಿರವಾಗಿದ್ದಾರೆ. ಎಸ್ಪಿ ಕಚೇರಿ ಒಳಗೆ ಕಾಲಿಡುತ್ತಿದಂತೆ ಬೀದರ್ ಭಾಷೆಯಾದ ಹೆಲ್ಮೆಟ್ ಹಾಕೋ ಬಟಾ ಎನ್ನುವ ಅಕ್ಷರ ನಮಗೆ ಕಾಣಿಸುತ್ತದೆ.

ಇದನ್ನೂ ಓದಿ:ಚಾಮರಾಜನಗರ: ಕುದೇರು ಪೊಲೀಸ್ ಠಾಣೆಗೆ ರಾಜ್ಯದಲ್ಲೇ ನಂಬರ್ ಓನ್ ಸ್ಥಾನ

ವರ್ಲಿ ಚಿತ್ರಕಲೆಯಲ್ಲಿಯೇ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಟ್ರಾಫಿಕ್ ಬಗ್ಗೆ ಅರಿವು

ಇಡೀ ಎಸ್ಪಿ ಕಚೇರಿ ಗೋಡೆಗಳ ಮೇಲೆ ವರ್ಲಿಕಲೆಯನ್ನ ಬಿಡಿಸಲಾಗಿದ್ದು, ವರ್ಲಿಕಲೆಯಿಂದ ಗೋಡೆಗಳು ಕಂಗೊಳಿಸುತ್ತಿವೆ. ವರ್ಲಿ ಚಿತ್ರಕಲೆಯಲ್ಲಿಯೇ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಟ್ರಾಫಿಕ್ ಬಗ್ಗೆ ಅರಿವು ಮೂಡಿಸುವ ಚಿತ್ರ, 112 ಬಗ್ಗೆ ಮಾಹಿತಿ ಹೆಲ್ಪ ಲೈನ್ ಬಗ್ಗೆ ಮಾಹಿತಿಯನ್ನ ಗೋಡೆಗಳ ಮೇಲೆ ಚಿತ್ರಿಸಲಾಗಿದೆ. ಜಿಲ್ಲಾ ಪೊಲೀಸ್ ಕಚೇರಿಗೆ ಬರುವ ಸಾರ್ವಜನಿಕರಿಗೆ ವರ್ಲಿ ಚಿತ್ರದ ಮೂಲಕ ಸಾರ್ವಜನಿಕರಿಗೆ ತಿಳುವಳಿಕೆ ಅರಿವು ಮೂಡಿಸಲಾಗುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನ ಭೇಟಿಯಾಗಲು ಬರುವ ಸಾರ್ವಜನಿಕರಿಗೆ ವಿಭಿನ್ನವಾದಂತಹ ನೀರಿಕ್ಷಣಾ ಕೊಠಡಿ (ವೇಟಿಂಗ್ ಹಾಲ್) ನಿರ್ಮಾಣ ಮಾಡಲಾಗಿದೆ.

ಅಪರಾಧಗಳ ಬಗ್ಗೆ ಜಾಗೃತಿ, ಓದಲು ಪುಸ್ತಕ

ಈ ವೇಟಿಂಗ್ ಹಾಲ್​ನಲ್ಲಿ ದೊಡ್ಡ ಟಿವಿಯೊಂದನ್ನ ಹಾಕಲಾಗಿದೆ. ಅದರಲ್ಲಿ ಸೈಬರ್ ಅಪರಾಧದ ಬಗ್ಗೆ ಜಾಗೃತಿ ಮೂಡಿಸುವ ವಿಡಿಯೋಗಳು, ಟ್ರಾಫಿಕ್ ಬಗ್ಗೆ ಅರಿವು ಮೂಡಿಸುವ ವಿಡಿಯೋಗಳು, ಹೆಲ್ಮೆಟ್ ಹಾಕದೆ ಬೈಕ್ ಓಡಿಸಿ ರಸ್ತೆ ಅಪಘಾತವಾದರೆ ಏನಾಗುತ್ತದೆಂದು ವಿಡಿಯೋಗಳ ಮೂಲಕ ತೋರಿಸುವ ಚಿತ್ರಗಳನ್ನ ಇಲ್ಲಿ ಪ್ರಸಾರ ಮಾಡಲಾಗುತ್ತಿದೆ. ಇನ್ನು ಕೆಲವರಿಗೆ ಪುಸ್ತಕ ಓದುವ ಹವ್ಯಾಸ ಇರುತ್ತದೆ. ಅಂತಹವರಿಗಾಗಿ ಗಡಿ ನಾಡು ಸಾಹಿತಿಗಳು ಬರೆಂದತಹ ಪುಸ್ತಕಗಳು, ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿಗಳನ್ನ ಇಲ್ಲಿ ಇಡಲಾಗಿದೆ. ಅದನ್ನ ಓದಬಹುದು ಆ ಪುಸ್ತಕ ಅವರಿಗೆ ಇಷ್ಟವಾದರೆ ಉಚಿತವಾಗಿ ಅಲ್ಲಿರುವ ಸಿಬ್ಬಂದಿಯ ಗಮನಕ್ಕೆ ತಂದು ತೆಗೆದುಕೊಂಡು ಸಹ ಹೋಗಬಹುದು.

ಇದನ್ನೂ ಓದಿ:ಬೀದರ್ ನಗರಸಭೆಯ ಆದಾಯ ಮೂಲವೇ ತೆರಿಗೆ ಹಣ, ಅದರೆ ಆಸ್ಪತ್ರೆಯೊಂದು 10 ವರ್ಷದಿಂದ ತೆರಿಗೆಯನ್ನೇ ಕಟ್ಟಿಲ್ಲ!

ಇದರ ಜೊತೆಗೆ ವೇಟಿಂಗ್ ಹಾಲ್​ನ ಗೋಡೆಗಳ ಮೇಲೆ ಸಂವಿಧಾನದ ಪೀಠಿಕೆಯನ್ನ ದೊಡ್ಡ ಫೋಟೋ ಪ್ರೇಮ್ ಮಾಡಿ ಹಾಕಲಾಗಿದೆ. ಇದರ ಜೊತೆಗೆ ಹಿಂದೂ, ಕ್ರೈಸ್ತ, ಮುಸ್ಲಿಂ, ಸಿಖ್ಖರು, ಬೌಧರು, ಜೈನರ ತಮ್ಮ ತಮ್ಮ ಧರ್ಮದ ಗ್ರಂಥದಲ್ಲಿ ಬರೆದ ಒಳ್ಳೆಯ ವಿಚಾರವನ್ನ ಫೋಟೋ ಪ್ರೇಮ್ ಮಾಡಿ ಗೋಡೆಯ ಮೇಲೆ ಹಾಕಲಾಗಿದೆ. ಎಸ್ಪಿಯವರನ್ನ ಭೇಟಿಯಾಗಲು ಬರುವ ಸಾರ್ವಜನಿಕರ ಟೈಮ್ ವೆಸ್ಟ್ ಆಗಬಾರದು, ಎಸ್ಪಿ ಕಚೇರಿ ಅಂದರೆ ಭಯವನ್ನ ಹೋಗಲಾಡಿಸುವ ಉದ್ದೇಶದಿಂದ ರಾಜ್ಯದಲ್ಲಿ ಎಲ್ಲಿಯೂ ಇಲ್ಲದ ಅತ್ಯುತ್ತಮ ವೇಟಿಂಗ್ ಹಾಲ್​ನ್ನ ನಿರ್ಮಾಣಮಾಡಲಾಗಿದೆ.

ಸಾರ್ವಜನಿಕರಿಗೆ ಪೋಲೀಸ್ ಅಂದರೆ ಭಯವಿದೆ. ಅದನ್ನ ಹೋಗಲಾಡಿಸಬೇಕು, ಪೋಲೀಸರೆಂದರೆ ಜನರು ಭಯ ಬಿಟ್ಟು ಪೊಲೀಸರ ಜೊತೆಗೆ ಬೆರೆಯುವಂತಾ ವಾತಾವರಣ ಕಲ್ಪಿಸಬೇಕು ಎನ್ನುವ ಉದ್ಧೇಶದಿಂದ ಕೆಲಸ ಮಾಡುತ್ತಿದ್ದೆನೆಂದು ಎಸ್ಪಿ ಹೇಳುತ್ತಿದ್ದಾರೆ. ಬೀದರ್​ನ ಎಸ್ಪಿ ಕಚೇರಿ ರಾಜ್ಯದಲ್ಲಿಯೇ ಮಾದರಿಯಾಗಿ ನಿಂತಿದೆ. ಜನಸ್ನೇಹಿ ಪೊಲೀಸ್ ಎನ್ನುವ ಹೆಸರನ್ನೂ ಕೂಡ ಗಳಿಸುಕೊಂಡಿದೆ. ಜನರು ಎಸ್ಪಿ ಕಚೇರಿಗೆ ಹೋದ ತಕ್ಷಣವೇ ಅರ್ಧ ಸಮಸ್ಯೆ ಬಗೆಹರಿದಿರುತ್ತದೆ. ಅವರ ಮನಸ್ಸು ಕೂಡ ಹಗುರಾಗುತ್ತದೆ. ಅಂತಹ ವಾತಾವರಣ ಅಲ್ಲಿ ಸೃಷ್ಟಿಯಾಗಿದ್ದು, ಸಾರ್ವಜನಿಕರ ಮೆಚ್ಚುಗೆಗೂ ಕೂಡ ಪಾತ್ರವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ