ಬೀದರ್: ನಾಳೆ ಸರ್ದಾರ್ ವಲ್ಲಭಬಾಯ್ ಪಟೇಲ್ ಪ್ರತಿಮೆ ಉದ್ಘಾಟಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ
ವಿಶ್ವದಲ್ಲಿಯೇ ಅತೀ ಎತ್ತರವಾದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆಯೊಂದು ಗುಜರಾತ್ನಲ್ಲಿ ನಿರ್ಮಾಣವಾಗಿದೆ. ಈಗ ಅದೇ ಮಾದರಿಯ ಪ್ರತಿಮೆಯೊಂದು ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗೊರ್ಟಾ (ಬಿ) ಗ್ರಾಮದಲ್ಲಿ ನಿರ್ಮಾಣವಾಗಿದ್ದು, ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರು ನಾಳೆ(ಮಾ.26) ಅದನ್ನ ಲೋಕಾರ್ಪಣೆಗೊಳಿಸಲಿದ್ದಾರೆ.
ಬೀದರ್: ಜಿಲ್ಲೆಯ ಹುಲಸೂರು ತಾಲೂಕಿನ ಗೊರ್ಟಾ ಗ್ರಾಮದಲ್ಲಿ ಸರ್ದಾರ್ ವಲ್ಲಭಬಾಯ್ ಪಟೇಲ್ ಪ್ರತಿಮೆ ನಿರ್ಮಾಣವಾಗಿದ್ದು ನಾಳೆ (ಮಾ.26) ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅವರಿಂದ ಲೋಕಾರ್ಪಣೆಗೊಳ್ಳಲಿದೆ. ರಾಜ್ಯ ಬಿಜೆಪಿ ಯುವ ಮೋರ್ಚಾ ಸಂಕಲ್ಪದಿಂದ ಶುರುವಾಗಿರುವ ಈ ಹುತಾತ್ಮ ಸ್ಮಾರಕವನ್ನ 2014 ಸೆಪ್ಟಂಬರ್ 17 ರಂದು ಆಗಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೂಮಿ ಪೂಜೆ ನೇರವೇರಿಸಿದ್ದರು. ಒಂದು ವರ್ಷದಲ್ಲಿ ಮುಗಿಯಬೇಕಿದ್ದ ಕಾಮಗಾರಿ ಎಂಟು ವರ್ಷದ ಬಳಿಕ ಮುಗಿದಿದ್ದು, ಭೂಮಿ ಪೂಜೆ ಮಾಡಿದ್ದ ಅಮಿತ್ ಶಾ ಅವರಿಂದಲೇ ಉದ್ಘಾಟನೆ ಯಾಗುತ್ತಿರುವುದು ಇಲ್ಲಿ ವಿಶೇಷವಾಗಿದೆ. ಇನ್ನು ವಿಧಾನ ಸಭಾ ಚುನಾವಣೆಯ ಹೊಸ್ತಿಲಲ್ಲಿ ಕಾರ್ಯಕ್ರಮ ಸಂಘಟಿಸಿರುವುದು ರಾಜಕೀಯ ದೃಷ್ಟಿಯಿಂದ ಮಹತ್ವ ಪಡೆದಿದೆ.
11 ಅಡಿ ಎತ್ತರವಿರುವ ಸರ್ದಾರ ವಲ್ಲಭವಾಯ್ ಪಟೇಲ್ ಮೂರ್ತಿ
ಗೊರ್ಟಾ ಗ್ರಾಮದ ಹೊರವಲಯದಲ್ಲಿರುವ 2 ಎಕರೆ 30 ಗುಂಟೆ ಪ್ರದೇಶದಲ್ಲಿ 30 ಅಡಿ ಉದ್ದದ ಉತಾತ್ಮರ ಸ್ಮಾಕರ, 103 ಅಡಿ ಉದ್ದದ ಧ್ವಜಸ್ಥಂಬ, ಧ್ವಜಸ್ಥಂಭದ ಮೇಲೆ 30 ಅಡಿ (600 ಚದರ್ ಅಡಿ) ರಾಷ್ಟ್ರಧ್ವಜ ಹಾರಾಡಲಿದೆ. ಇನ್ನು ಬೆಂಗಳೂರಿನ ಶಂಕರ್ ಶಿಲ್ಪಿ ಶಾಲೆಯಲ್ಲಿ ಕೆತ್ತಸಿರುವ 11 ಅಡಿ ಎತ್ತರವಿರುವ ಸರ್ದಾರ ವಲ್ಲಭವಾಯ್ ಪಟೇಲ್ ಅವರ ಮೂರ್ತಿಯನ್ನ ಸ್ಥಾಪಿಸಿಲಾಗಿದ್ದು, ನಾಳೆ ಅಮಿತ್ ಶಾ ರಿಂದ ಸರ್ದಾರ್ ವಲ್ಲಭಭಾಯ್ ಪಟೇಲ್ ಪುತ್ಥಳಿ ಲೋಕಾರ್ಪಣಗೊಳ್ಳಲಿದೆ ಎಂದು ಸಂಘಟಕರು ಹೇಳಿದ್ದಾರೆ.
ಇದನ್ನೂ ಓದಿ:ಚುನಾವಣಾ ಚಾಲುಕ್ಯ ಅಮಿತ್ ಶಾಗೆ ನೀಡಲು ಸಿದ್ದವಾಗಿರುವ ಬೆಳ್ಳಿ ಗದೆ ಹೇಗಿದೆ ನೋಡಿ
ಇತಿಹಾಸ
ಇನ್ನು ಇಡೀ ದೇಶದ ಜನತೆ 1947 ಆಗಸ್ಟ್ 15 ಬ್ರಿಟಿಷರಿಂದ ಮುಕ್ತಿ ಪಡೆದ ಸಂಭ್ರಮದಲ್ಲಿತ್ತು. ಆದರೆ ಹೈದರಾಬಾದ್ ಕರ್ನಾಟಕ ಭಾಗದ ಜನ ಬ್ರಿಟಿಷರಿಂದ ಸ್ವಾತಂತ್ರ್ಯಗೊಂಡರೂ ನಿಜಾಮರ ಆಡಳಿತದಿಂದ ಮುಕ್ತಿ ಪಡೆಯಲು 13 ತಿಂಗಳು ಹೋರಾಟ ಮಾಡಬೇಕಾಯಿತು. ಭಾರತ ಸ್ವಾತಂತ್ರ್ಯದ ನಂತರವೂ ಅನೇಕ ತಿಂಗಳು ಹೈದರಾಬಾದ್ಕರ್ನಾಟಕ ಭಾಗ ನಿಜಾಮರ ಆಡಳಿತದಲ್ಲಿಯೇ ಉಳಿದಿತ್ತು. ಭಾರತ ಒಕ್ಕೂಟ ವ್ಯಾಪ್ತಿಗೆ ಬರಲು ನಿಜಾಮರು ಒಪ್ಪಿರಲಿಲ್ಲ. ರಜಾಕರು(ಸೇವಕರು) ನಿಜಾಮರ ಪರವಾಗಿದ್ದು, ಭಾರತದ ಒಕ್ಕೂಟ ವ್ಯವಸ್ಥೆಗೆ ಸೇರಬೇಕು ಎಂದು ಒತ್ತಾಯಿಸಿದ್ದವರ ಮೇಲೆ ದಾಳಿ ನಡೆಸಿದರು. ಈ ಹತ್ಯಾಕಾಂಡದಲ್ಲಿ ಹಲವರು ಅಸುನೀಗಿದರು ಎಂಬುದು ಹಿನ್ನೆಲೆ.
ಮಹತ್ವ ಪಡೆದುಕೊಂಡ ಗೋರ್ಟಾ ಗ್ರಾಮ
1948ರ ಮೇ ತಿಂಗಳಲ್ಲಿ ಗೋರ್ಟಾ ಸೇರಿದಂತೆ ಈ ಭಾಗದ ವಿವಿಧ ಗ್ರಾಮಗಳಲ್ಲಿ ವಿಮೋಚನಾ ಹೋರಾಟದ ಭಾಗವಾಗಿ ದಾಳಿ, ಘರ್ಷಣೆಗಳು ನಡೆದಿವೆ. ಈ ಗೋರ್ಟಾ ಗ್ರಾಮದಲ್ಲಿ ಹೆಚ್ಚಿನ ಜನರು ಮೃತಪಟ್ಟ ಕಾರಣಕ್ಕೆ ಈ ಗ್ರಾಮ ಮಹತ್ವ ಪಡೆದುಕೊಂಡಿದೆ. ಆದರೆ ಎಷ್ಟು ಜನರು ಸತ್ತರು ಎಂಬ ಖಚಿತ ಮಾಹಿತಿ ಇಲ್ಲ. ಆಗಿನ ಕೇಂದ್ರ ಸರ್ಕಾರದ ಸೂಚನೆಯಂತೆ ಈ ಭಾಗದಲ್ಲಿ ನಷ್ಟ, ಸಾವಿನ ಸ್ಥಿತಿ ಅಧ್ಯಯನಕ್ಕೆ ಆಗಮಿಸಿದ್ದ ಕನ್ನಯ್ಯಲಾಲ್ ಮಕ್ಹನ್‌ಲಾಲ್ ಮುನ್ಷಿ ಅವರು ‘ದ ಎಂಡ್ ಆಫ್ ಆ್ಯನ್ ಎರಾ’ ಪುಸ್ತಕದ ಬಿಟ್ವೀನ್ದ ಡೆವಿಲ್ ಅಧ್ಯಾಯದಲ್ಲಿ ಗ್ರಾಮಸ್ಥರೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ 200ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಎಂದು ದಾಖಲಿಸಿದ್ದಾರೆಂದು ಇತಿಹಾಸಕಾರರು ಹೇಳುತ್ತಾರೆ.
ಇದನ್ನೂ ಓದಿ:Whitefield Metro Station Inauguration Live: ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ ಪ್ರಧಾನಿ ಮೋದಿ
ನಿಜಾಮರ ಆಡಳಿತದ ಪರ ಇದ್ದ ರಜಾಕಾರರ ವಿರುದ್ಧ ಹೋರಾಡಿ ಗೋರ್ಟಾ ಗ್ರಾಮದಲ್ಲಿ ಅನೇಕರು ಹುತಾತ್ಮರಾದರು. ಈ ಭಾಗದಲ್ಲಿ ಕೋಮು ದಳ್ಳುರಿ ಭುಗಿಲೆದ್ದಿತ್ತು. ಪಟೇಲ್ ಅಂಥಹವರು ಪರಿಸ್ಥಿತಿಯನ್ನು ನಿಯಂತ್ರಿಸಿ ಈ ಭಾಗಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಇದರ ಫಲವೆಂಬಂತೆ ಹತ್ಯಾಕಾಂಡದ ಘಟನೆಗೆ ಸಾಕ್ಷಿಯಾಗಿದ್ದ ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಗೋರ್ಟಾ(ಬಿ) ಗ್ರಾಮಕ್ಕೀಗ ರಾಜಕಳೆ ಬಂದಿದೆ. ಗೋರ್ಟಾ ಹತ್ಯಾಕಾಂಡದಲ್ಲಿ ಮಡಿದವರ ಸವಿನೆನಪಿಗಾಗಿ ಈ ಗ್ರಾಮದಲ್ಲಿ ಹುತಾತ್ಮರ ಸ್ಮಾರಕ ನಿರ್ಮಾಣ, ಸರ್ದಾರ್ ವಲ್ಲಭಭಾಯ್ ಪಟೇಲ್‌ರ ಪ್ರತಿಮೆ ಸ್ಥಾಪನೆ ಕಾರ್ಯ ಮುಗಿದಿದ್ದು ನಾಳೆ ಲೋಕಾರ್ಪಣೆಗೊಳ್ಳಲಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದಡಿ ಕಾರ್ಯಕ್ರಮ ಆಯೋಜನೆ
ಹುತಾತ್ಮರ ಸ್ಮಾರಕ ಬಿಜೆಪಿ ಯುವ ಮೊರ್ಚಾ ಕನಸಿನ ಕೂಸಾಗಿದ್ದರು ಕೂಡ 26 ರಂದು ನಡೆಯಲಿರುವ ಉದ್ಘಾಟನೆ ಕಾರ್ಯಕ್ರಮ ಪಕ್ಷದ ಬದಲಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಡಿ ಈ ಕಾರ್ಯಕ್ರಮ ನಡೆಯುತ್ತಿರುವುದು ಹಲವಾರು ಚರ್ಚಗೆ ಕಾರಣವಾಗಿದೆ. ಆಮಂತ್ರಣ ಪತ್ರಿಕೆ ಸಿದ್ದವಾಗಿದ್ದು ಎಲ್ಲೂ ಕೂಡ ಬಿಜೆಪಿ ಪಕ್ಷದ ಹೆಸರು ಧ್ವಜ ಬಳಸಿಲ್ಲ ಸಂಘದ ಅಧೀನದಲ್ಲಿ ನಡೆಯುವ ಕೇಶವ ಕಾರ್ಯ ಸಂವರ್ಧನ ಸಮೀತಿ ಇದರ ಹೊಣೆ ಹೊತ್ತಿದೆ. ಹೀಗಾಗಿ ಉದ್ಘಾಟನಾ ಸಮಾರಂಭವನ್ನ ಸಮೀತಿ ಪರವಾಗಿಯೇ ಆಯೋಜಿಸಲಾಗಿದೆ. ಇನ್ನು ನಾಳೆ ಬೆಳಗ್ಗೆ 10 ಗಂಟೆಗೆ ಅಮಿತ್ ಶಾ ಸ್ಮಾರಕ ಲೋಕಾರ್ಪಣೆಗೊಳಿಸುವರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಅನೇಕ ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ. ಗೋರ್ಟಾ ಗ್ರಾಮದಲ್ಲಿ ನಡೆದ ಹತ್ಯಾಕಾಂಡವನ್ನು ದಕ್ಷಿಣದ ಜಲಿಯನ್ ವಾಲಾಬಾಗ್ ಘಟನೆ ಎಂದು ಬಿಂಬಿಸಲಾಗುತ್ತದೆ. ಇಂಥಹ ಸ್ಥಳದಲ್ಲಿ ಹುತಾತ್ಮರ ಸ್ಮಾರಕವನ್ನು ಕಾರ್ಯಕರ್ತರಿಂದಲೇ ದೇಣಿಗೆ ಸಂಗ್ರಹಿಸಿ ನಿರ್ಮಿಸಲು ಬಿಜೆಪಿ ಯುವ ಮೋರ್ಚಾ ಮುಂದಾಗಿದ್ದು ಹೆಮ್ಮೆಯ ವಿಚಾರವಾಗಿದೆ.
ವರದಿ: ಸುರೇಶ್ ನಾಯಕ್ ಟಿವಿ9 ಬೀದರ್
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:11 pm, Sat, 25 March 23