ಹಣಕ್ಕಾಗಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತನಿಂದ ಕೊಲೆ ಬೆದರಿಕೆ, ಗುತ್ತಿಗೆದಾರ ಆತ್ಮಹತ್ಯೆ!

| Updated By: ರಮೇಶ್ ಬಿ. ಜವಳಗೇರಾ

Updated on: Dec 26, 2024 | 5:37 PM

ಕಂಟ್ರಿಮೇಡ್ ಪಿಸ್ತೂಲ್ ಹಾಗೂ 30 ಗುಂಡು ಖರೀದಿ ಮಾಡಿದ್ದ ಪ್ರಕರಣದಲ್ಲಿ ಈ ಹಿಂದೆ ಬಂಧನಕ್ಕೊಳಗಾಗಿದ್ದ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ಕಲಬುರಗಿ ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್‌ ರಾಜು ಕಪನೂರ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಟೆಂಡರ್ ಕೊಡುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಹಾಗೂ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಹಣಕ್ಕಾಗಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತನಿಂದ ಕೊಲೆ ಬೆದರಿಕೆ, ಗುತ್ತಿಗೆದಾರ ಆತ್ಮಹತ್ಯೆ!
ರಾಜು ಕಪನೂರು
Follow us on

ಕಲಬುರಗಿ, (ಡಿಸೆಂಬರ್ 26): ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಯುವ ಗುತ್ತಿಗೆದಾರ ಆತ್ಮಹತ್ಯೆಗೆ ಶರಣಾಗಿದ್ದಾನೆ. 7 ಪುಟಗಳ ಡೆತ್​ನೋಟ್​ ಬರೆದಿಟ್ಟು ಗುತ್ತಿಗೆದಾರ ಸಚಿನ್(26) ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿದ್ದು, ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಟ್ಟಿತೂಂಗಾವ್ ಗ್ರಾಮದ ಸಚಿನ್​ ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ರೈಲ್ವೆ ಟ್ರಾಕ್ ನಲ್ಲಿ ಪತ್ತೆಯಾಗಿದೆ. ಡೆತ್​ ನೋಟ್​ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ಕಲಬುರಗಿ ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್‌ ರಾಜು ಕಪನೂರು ವಿರುದ್ಧ ಕೆಲ ಗಂಭೀರ ಆರೋಪಗಳನ್ನು ಮಾಡಲಾಗಿದೆ.

15 ಲಕ್ಷಕ್ಕೂ ಹೆಚ್ಚು ಹಣ ಪಡೆದು ಟೆಂಡರ್ ನೀಡದೆ ವಂಚನೆ ಮಾಡಿದ್ದು, ಜೊತೆಗೆ 1 ಕೋಟಿ ರೂ. ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ರಾಜು ಕಪನೂರು ವಿರುದ್ಧ ಆರೋಪಿಸಲಾಗಿದೆ. ಇನ್ನು ಸಚಿನ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಡೆತ್​ ನೋಟ್​ನಲ್ಲಿ ಉಲ್ಲೇಖಿಸಿರುವ ಹೆಸರಿನವರನ್ನು ಕರೆಯಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಇದರ ನಡುವೆಯೇ ಪೊಲೀಸರು ಸಚಿನ್ ಮೃತದೇಹವನ್ನು ಬ್ರಿಮ್ಸ್ ಆಸ್ಪತ್ರೆಗೆ ರವಾನಿಸಿದ್ದು, ಈ ಸಂಬಂಧ ಬೀದರ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕಲಬುರಗಿ ಬಿಜೆಪಿ ಮುಖಂಡ ವಿಡಿಯೋ ರಿಲೀಸ್ ಮಾಡಿದ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ಬೆಂಬಲಿಗ ಅರೆಸ್ಟ್!

ಡೆತ್ ನೋಟ್​ನಲ್ಲಿ ಕಲಬುರಗಿಯ ಮಾಜಿ ಕಾರ್ಪೊರೇಟ್ ರವಿ ಕಪನೂರು, ನಂದಕುಮಾರ್ ನಾಗಭುಜಂಗೆ, ಗೋರಖನಾಥ್ ಸೇರಿ 6 ಜನರ ವಿರುದ್ಧ ಜೀವ ಬೆದರಿಕೆ ಆರೋಪ ಮಾಡಲಾಗಿದೆ. 15 ಲಕ್ಷಕ್ಕೂ ಅಧಿಕ ಹಣ ತೆಗೆದುಕೊಂಡು ಟೆಂಡರ್ ನೀಡದೇ ದೋಖಾ ಹಾಗೂ 1 ಕೋಟಿ ರೂಪಾಯಿ ನೀಡದಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್​ನೋಟ್​ನಲ್ಲಿ ಉಲ್ಲೇಖಲಾಗಿದೆ.

ಈ ಹಿಂದೆ ಬೆಳಗಾವಿಯ ಗುತ್ತಿಗೆದಾರ ಸಂತೋಷ್​ ಎನ್ನುವರು ಸಹ ಅಂದಿನ ಸಚಿವ ಕೆಎಸ್ ಈಶ್ವರಪ್ಪ ಅವರ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯಲ್ಲಿ ಕೆಲಸ ಮಾಡಿದ್ದ ಹಣ ಮಂಜೂರು ಮಾಡದಿದ್ದಕ್ಕೆ ಸಂತೋಷ್ ಆತ್ಮಹತ್ಯೆಗೆ ಶರಣಾಗಿದ್ದರು. ಈ ಪ್ರಕರಣದಲ್ಲಿ ಕೆಎಸ್ ಈಶ್ವರಪ್ಪ ಅವರು ರಾಜೀನಾಮೆ ಕೊಡಬೇಕಾಗಿ ಬಂತು. ಇದೀಗ ಬೀದರ್​ನಲ್ಲಿ ಸಚಿನ್ ಆತ್ಮಹತ್ಯೆಯಲ್ಲಿ ಪ್ರಿಯಾಂಕ್ ಖರ್ಗೆ ಆಪ್ತನ ಹೆಸರು ಕೇಳಿಬಂದಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಪ್ರಿಯಾಂಕ್ ಖರ್ಗೆ ಹೇಳಿದ್ದಿಷ್ಟು

ತಮ್ಮ ಆಪ್ತನ ಮೇಲಿನ ಆರೋಪಕ್ಕೆ ಖುದ್ದು ಸಚಿವ ಪ್ರಿಯಾಂಕ್ ಖರ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನನಗೂ ಈಗಷ್ಟೆ ವಿಚಾರ ಗೊತ್ತಾಯ್ತು. ಮಾಧ್ಯಮಗಳಲ್ಲಿ ಬಂದಿದೆ ನಾನೇ ಆಗ್ರಹ ಮಾಡುತ್ತೇನೆ. ಕಾಂಗ್ರೆಸ್ ಪಕ್ಷದವರೇ ಆಗಿರಲಿ, ನನ್ನ ಆಪ್ತನೇ ಆಗಿರಲಿ. ಅದು ನನ್ನ ಇಲಾಖೆಗೆ ಬರುತ್ತೆ. ತನಿಖೆ ಮಾಡಿಸುತ್ತೇನೆ. ಇಲಾಖಾ ತನಿಖೆ ಕೂಡ ಮಾಡಿಸುತ್ತೇನೆ. ನಾನು ಯಾವುದೇ ಮುಚ್ಚುಮರೆ ಮಾಡಲ್ಲ. ತನಿಖೆ ಮಾಡಿಸಲ್ಲ ಅಂತ ಹೇಳಲ್ಲ. ತನಿಖೆಯಿಂದ ಸತ್ಯಾಸತ್ಯತೆ ಹೊರಗೆ ಬರಲಿ. ಸಮಗ್ರ ತನಿಖೆಯಾಗಲಿ ಎಂದು ಗೃಹ ಸಚಿವರಿಗೆ ನಾನೇ ಮನವಿ ಮಾಡುತ್ತೆನೆ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 5:12 pm, Thu, 26 December 24