ಬೀದರ್, ಆ.07: ಬೀದರ್-ಕಮಲನಗರ ರಾಷ್ಟ್ರೀಯ ಹೆದ್ದಾರಿ ಇದೀಗ ಸಾವಿನ ಹೈವೇಯಾಗಿದೆ. ಕಳೆದ 6 ವರ್ಷದಲ್ಲಿ 126 ಜನ ಸಾವನ್ನಪ್ಪಿದರೆ, 564 ಜನರಿಗೆ ಗಾಯವಾಗಿದೆ. ಇನ್ನು ಕೆಲವರು ಶಾಶ್ವತ ಅಂಗವಿಕಲರಾಗಿದ್ದಾರೆ. ಇನ್ನು ರಾಷ್ಟ್ರೀಯ ಹೆದ್ದಾರಿ ಕಳಪೆ ಕಾಮಗಾರಿಯಿಂದ ರಸ್ತೆ ಅಪಘಾತದಲ್ಲಿ ಸಾವನ್ನಪುತ್ತಿರುವವರ ಸಂಖ್ಯೆ ಹೆಚ್ಚಳವಾಗಿದ್ದು, 2024ರ ಜನವರಿಯಿಂದ ಜುಲೈವರೆಗೆ 18 ಜನ ಮೃತಪಟ್ಟರೆ, 54 ಜನರಿಗೆ ಗಂಭೀರ ಗಾಯವಾಗಿದೆ.
ಬೀದರ್ ನಗರದ ಹೊರವಲಯದ ನೌಬಾದ್ನಿಂದ ಕಮಲನಗರ ಸಮೀಪದ ಮಹಾರಾಷ್ಟ್ರ ಗಡಿಯವರೆಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿದ್ದು, ಕಳೆದ ಆರು ತಿಂಗಳ ಹಿಂದೆಯಷ್ಟೇ ಉದ್ಘಾಟನೆ ಮಾಡಲಾಗಿದೆ. ಇನ್ನು ಈ ರಾಷ್ಟ್ರೀಯ ಹೆದ್ದಾರಿಯೂ ಜಿಲ್ಲೆಯ ಮೊದಲ ಸಿಮೆಂಟ್-ಕಾಂಕ್ರೀಟ್ (ಸಿಸಿ)ದ್ವಿಪಥ ರಾಷ್ಟ್ರೀಯ ಹೆದ್ದಾರಿ ಎನ್ನುವ ಹೆಸರು ಕೂಡ ಇದಕ್ಕೆ ಇದೆ. ಆದರೆ, ರಸ್ತೆಯುದ್ದಕ್ಕೂ ಸರಣಿ ಬಿರುಕುಗಳು ಕಾಣಿಸಿಕೊಂಡಿದ್ದು, ಪ್ರತಿದಿನವೂ ಇಲ್ಲಿ ರಸ್ತೆ ಅಫಗಾತಗಳು ಸಂಭವಿಸುತ್ತಿವೆ. ಈ ರಸ್ತೆ ಕಾಮಗಾರಿ ಆರಂಭವಾದಾಗಿನಿಂದಲೂ ಅಲ್ಲಲ್ಲಿ ರಸ್ತೆಯಲ್ಲಿ ಬಿರುಕು ಬಿಡುತ್ತಲೇ ಬಂದಿದೆ. ಬಿರುಕು ಬಿಟ್ಟಿದ್ದ ರಸ್ತೆಯನ್ನ ದುರಸ್ಥಿಕಾರ್ಯ ಮಾಡುತ್ತಲೇ ಈಗ ರಸ್ತೆ ಕಾಮಗಾರಿಯನ್ನ ಮಾಡಿ ಮುಗಿಸಲಾಗಿದೆ. ಹಾಳಾದ ಸ್ಥಳಗಳಲ್ಲೆಲ್ಲ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿದ್ದು, ಕಾಮಗಾರಿ ಗುಣಮಟ್ಟದ ಮೇಲೆ ಪ್ರಶ್ನೆ ಮೂಡಿದೆ.
ಇದನ್ನೂ ಓದಿ:ಸಾವಿನ ಹೆದ್ದಾರಿಯಾದ ಬೆಂಗಳೂರು ಹೈದರಾಬಾದ್ ರಸ್ತೆ: ಒಂದೇ ವರ್ಷದಲ್ಲಿ 76 ಅಪಘಾತ, 36 ಸಾವು
ರಸ್ತೆ ಕಾಮಗಾರಿ ಆರಂಭವಾದಾಗಿನಿಂದಲೂ ಇಲ್ಲಿ ಕಳಪೆ ಗುಣಮಟ್ಟದ ಕಾಮಗಾರಿ ಆಗುತ್ತಿದೆಯೆಂದು ಎಷ್ಟೋ ಸಲ ಅಧಿಕಾರಿಗಳಿಗೆ ಆಗಿನ ಸಂಸದ ಭಗವಂತ್ ಖೂಬಾ ಅವರ ಗಮನಕ್ಕೆ ತಂದರೂ ಕೂಡ ಅವರು ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ, ಈಗ ರಸ್ತೆ ಬಿರುಕು ಬಿಡುತ್ತಿದ್ದು, ಅಫಘಾತದಿಂದ ಜನ ಸಾಯುತ್ತಿದ್ದಾರೆಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನೌಬಾದ್-ಕಮಲನಗರ ಮಾರ್ಗದ ಕಾಮಗಾರಿಗೆ 2018ರ ಫೆಬ್ರುವರಿ 20ರಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಚಾಲನೆ ನೀಡಿದ್ದರು. ಆಗ ಮಾಡಿದ ಘೋಷಣೆಯ ಪ್ರಕಾರ 18 ತಿಂಗಳೊಳಗೆ ಕೆಲಸ ಮುಗಿಯಬೇಕಾಗಿತ್ತು. ಆದರೆ, 6 ವರ್ಷದ ಬಳಿಕ ಕಾಮಗಾರಿ ಮುಗಿದಿದ್ದು, ಈಗಷ್ಟೇ ಮಾಡಿದ ಹೆದ್ದಾರಿಯ ಅಲ್ಲಲ್ಲಿ ಸಾಕಷ್ಟು ದೊಡ್ಡ ಹಾಗೂ ಉದ್ದವಾದ ಬಿರುಕುಗಳು ಕಾಣಿಸಿಕೊಂಡಿವ ಕೆಲವೆಡೆ ರಸ್ತೆ ಮೇಲ್ಪದರ ಕಿತ್ತುತ್ತಿದ್ದರೆ, ಮತ್ತೆ ಕೆಲವು ಕಡೆ ಬೈಕ್ ನ ಗಾಲಿ ರಸ್ತೆಯಲ್ಲಿ ಸಿಲುಕಿಕೊಳ್ಳುವಷ್ಠು ಬಿರುಕು ಬಿಟ್ಟಿದೆ. ಇದರಿಂದಲೇ ಬೈಕ್ ಅಫಘಾತಗಳು ಸಂಬಂವಿಸುತ್ತಿದೆಂದು ಜನರು ಹೇಳುತ್ತಿದ್ದಾರೆ.
ಇನ್ನು 2018 ರಿಂದ 2024 ರವೆಗೆ ಈ ಆರು ವರ್ಷದ ಅವಧಿಯಲ್ಲಿ ಈ ರಸ್ತೆಯಲ್ಲಿ ಓಡಾಡುವ ಬೈಕ್ ಹಾಗೂ ವಾಹನ ಸವಾರರು ಮೃತಪಟ್ಟಿರುವ ವಿವರಣೆ ನೋಡುವುದಾದರೆ.
ವರ್ಷ | ಸಾವು | ಗಾಯಗೊಂಡವರ ಸಂಖ್ಯೆ |
2018 | 17 | 70 |
2019 | 13 | 70 |
2020 | 16 | 37 |
2021 | 13 | 66 |
2022 | 21 | 78 |
2023 | 28 | 89 |
2024 | 18 | 54 |
ಇನ್ನೂ ಈ ರಸ್ತೆ ಅಪಘಾತದಿಂದಾಗಿ ಶಾಸ್ವತವಾಗಿ ಅಂಗವಿಕಲಾರದರೂ ಕೂಡಾ ಇದರಲ್ಲಿ ಕೆಲವರಿದ್ದಾರೆ. ಇಷ್ಟೇಲ್ಲ ಅಫಘಾತಗಳು ನಡೆಯಲಿಕ್ಕೆ ಕಾರಣವೆಂದರೆ ಅವೈಜ್ಜಾನಿ ರಸ್ತೆ ಕಾಮಗಾರಿ, ಮಂದಗತಿಯ ರಸ್ತೆ ಕಾಮಗಾರಿ ಜೊತೆಗೆ ಕಳಪೆಗುಣಮಟ್ಟದ ರಸ್ತೆ ಕಾಮಗಾರಿಯಿಂದಾಗಿ ಇಷ್ಟೊಂದು ರಸ್ತೆ ಅಪಘಾತಗಳು ಇಲ್ಲಿ ನಡೆದಿವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಮಾಡಿದ ರಸ್ತೆ ಕಳಪೆಯಾಗುವುದಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ, ಬೀದರ್ನಿಂದ ಕಮಲನಗರ ಮಹಾರಾಷ್ಟ್ರ ವರೆಗೆ ಮಾಡಿದ ರಸ್ತೆ ಕಳಪೆಗುಣಮಟ್ಟದಿಂದ ಕೂಡಿದ್ದು, ರಸ್ತೆ ಅಫಘಾತದಿಂದಾಗಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. 54.37 ಕಿಲೋಮೀಟರ್ ಉದ್ದದ ಈ ಹೆದ್ದಾರಿಗೆ ಸುಮಾರು 396 ಕೋಟಿ ರೂಪಾಯಿ ಹಣವನ್ನ ವೆಚ್ಚ ಮಾಡಲಾಗಿದೆ. ಗುಜರಾತ್ ಮೂಲದ ಕಂಪನಿ ಗುತ್ತಿಗೆ ವಹಿಸಿಕೊಂಡಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಉಸ್ತುವಾರಿ ನೋಡಿಕೊಳ್ಳುತ್ತಿದೆ. ಮೂಲಗಳ ಪ್ರಕಾರ 1 ಕಿಮೀ ಉದ್ದದ ಕಾಮಗಾರಿಗೆ ಸುಮಾರು 5 ಕೋಟಿ ರೂಪಾಯಿ ವ್ಯಯಿಸಲಾಗಿದೆ. ಇಷ್ಟಾದರೂ ಉದ್ಘಾಟನೆ ಬೆನ್ನಲೇ ಅಲ್ಲಲ್ಲಿ ಹೆದ್ದಾರಿ ಹಾಳಾಗಿ ರಿಪೇರಿ ಮಾಡುವ ಹಂತಕ್ಕೆ ಬಂದಿರುವುದು ಸಹಜವೇ ಅಕ್ರಮದ ವಾಸನೆ ಬರಲಾರಂಭಿಸಿದ್ದು, ಹಲವು ಸಂಶಯಗಳಿಗೆ ಎಡೆಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:53 pm, Wed, 7 August 24