ತೈಲ ಬೆಲೆ ಏರಿಕೆ ಬಿಸಿ: ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಮರಳಿದ ರೈತರು; ಟ್ರ್ಯಾಕ್ಟರ್ ಬದಲಾಗಿ ಎತ್ತುಗಳಿಂದ ಉಳುಮೆ

ತೈಲ ಬೆಲೆ ಏರಿಕೆ ಕೃಷಿ ಕ್ಷೇತ್ರದ ಮೇಲೂ ಪರಿಣಾಮ ಬೀರಿದೆ. ಡೀಸೆಲ್ ದರ ಏರಿಕೆಯಿಂದ ಟ್ರ್ಯಾಕ್ಟರ್ ಬಾಡಿಗೆ ದುಬಾರಿಯಾಗಿದ್ದು, ರೈತರು ಕೃಷಿ ವೆಚ್ಚ ತಗ್ಗಿಸಲು ಮತ್ತೆ ಎತ್ತುಗಳ ಉಳುಮೆಯತ್ತ ಮುಖ ಮಾಡುತ್ತಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಈ ಬದಲಾವಣೆ ಸ್ಪಷ್ಟವಾಗಿದ್ದು, ಉಳುಮೆ ಎತ್ತುಗಳ ಖರೀದಿ ಜೋರಾಗಿದೆ.

ತೈಲ ಬೆಲೆ ಏರಿಕೆ ಬಿಸಿ: ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಮರಳಿದ ರೈತರು; ಟ್ರ್ಯಾಕ್ಟರ್ ಬದಲಾಗಿ ಎತ್ತುಗಳಿಂದ ಉಳುಮೆ
ಎತ್ತುಗಳಿಂದ ಉಳುಮೆ ಮಾಡುತ್ತಿರುವುದು
Image Credit source: tv9 kannada
Edited By:

Updated on: May 25, 2026 | 4:34 PM

ಬೀದರ್​​, ಮೇ 25: ರಾಜ್ಯದಲ್ಲಿ ತೈಲ ಬೆಲೆ ಏರಿಕೆಯ ಬಿಸಿ (Fuel Price Hike) ಇದೀಗ ನೇರವಾಗಿ ದೇಶದ ಅನ್ನದಾತನಿಗೂ ತಟ್ಟಿದೆ. ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಿಂದಾಗಿ ಕೃಷಿ ಚಟುವಟಿಕೆಗಳ ವೆಚ್ಚ ಗಗನಕ್ಕೇರಿದ್ದು, ರೈತರು ಕಂಗಾಲಾಗಿದ್ದಾರೆ. ಟ್ರ್ಯಾಕ್ಟರ್ ಬಾಡಿಗೆ ದರ ದುಬಾರಿಯಾದ ಹಿನ್ನೆಲೆಯಲ್ಲಿ, ಬೀದರ್ (bidar) ಜಿಲ್ಲೆಯ ರೈತರು ಮತ್ತೆ ಹಳೆಯ ಸಾಂಪ್ರದಾಯಿಕ ಕೃಷಿ ಪದ್ಧತಿಯತ್ತ ಮುಖ ಮಾಡಿದ್ದಾರೆ. ಟ್ರ್ಯಾಕ್ಟರ್ ಬದಲಿಗೆ ಎತ್ತುಗಳನ್ನು ಖರೀದಿಸಿ ಉಳುಮೆ ಮಾಡಲು ಮುಂದಾಗಿದ್ದು, ಜಾನುವಾರು ಮಾರುಕಟ್ಟೆಯಲ್ಲಿ ಎತ್ತುಗಳ ಖರೀದಿಗೆ ರೈತರು ಮುಗಿಬಿದ್ದಿದ್ದಾರೆ.

ಮುಖ್ಯಾಂಶಗಳು

  • ಬೀದರ್‌ನಲ್ಲಿ ಗಗನಕ್ಕೇರಿದ ಟ್ರ್ಯಾಕ್ಟರ್ ಬಾಡಿಗೆ
  • ಎತ್ತುಗಳ ಖರೀದಿಗೆ ಮುಗಿಬಿದ್ದ ರೈತರು
  • ಎತ್ತುಗಳಿಂದ ಉಳುಮೆಗೆ ಮುಂದಾದ ಅನ್ನದಾತರು

ಕೃಷಿ ಕ್ಷೇತ್ರಕ್ಕೂ ಹೊಡೆದ ನೀಡಿದ ತೈಲ ಬೆಲೆ ಏರಿಕೆ

ರಾಜ್ಯದಲ್ಲಿ ತೈಲ ಬೆಲೆ ಏರಿಕೆಯಾಗಿರುವುದು ಕೃಷಿ ಕ್ಷೇತ್ರದ ಮೇಲೂ ಗಂಭೀರ ಪರಿಣಾಮ ಬೀರಿದೆ. ಬಿತ್ತನೆಗೂ ಮುನ್ನ ಹೊಲ ಹದಗೊಳಿಸಲು ಬಳಸುವ ಟ್ರ್ಯಾಕ್ಟರ್ ಬಾಡಿಗೆ ದರದಲ್ಲಿ ಭಾರೀ ಏರಿಕೆಯಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿಂದೆ ಒಂದು ಎಕರೆ ಹೊಲಕ್ಕೆ ನೇಗಿಲು ಹೊಡೆಯಲು ಎರಡು ಸಾವಿರ ರೂ. ಒಳಗೇ ಟ್ರ್ಯಾಕ್ಟರ್ ಸಿಗುತ್ತಿತ್ತು. ಆದರೆ ಇದೀಗ ಅದೇ ಕೆಲಸಕ್ಕೆ ಎರಡೂವರೆ ಸಾವಿರ ರೂಪಾಯಿವರೆಗೂ ಬಾಡಿಗೆ ವಸೂಲಿ ಮಾಡಲಾಗುತ್ತಿದೆ. ಇದರಿಂದ ಬೇಸತ್ತ ರೈತರು, ಕೃಷಿ ವೆಚ್ಚವನ್ನು ಕಡಿಮೆ ಮಾಡಲು ಮತ್ತೆ ಸಾಂಪ್ರದಾಯಿಕ ಎತ್ತುಗಳ ಉಳುಮೆಯತ್ತ ಒಲವು ತೋರುತ್ತಿದ್ದಾರೆ. ಟ್ರ್ಯಾಕ್ಟರ್ ಬಾಡಿಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ, ಎತ್ತುಗಳನ್ನು ಖರೀದಿಸುವುದೇ ದೀರ್ಘಾವಧಿ ಲಾಭಕ್ಕೆ ಸೂಕ್ತ ಎಂಬ ನಿರ್ಧಾರಕ್ಕೆ ಅನ್ನದಾತರು ಬಂದಿದ್ದಾರೆ.

ಜೋಡೆತ್ತುಗಳಿಗೆ ನಾಲ್ಕು ಲಕ್ಷ ರೂ 

ಇನ್ನು ಬೀದರ್ ಜಿಲ್ಲೆಯ ಔರಾದ್ ಎಪಿಎಂಸಿ ಜಾನುವಾರು ಮಾರುಕಟ್ಟೆಯಲ್ಲಿ ಉಳುಮೆ ಎತ್ತುಗಳ ಖರೀದಿ ಜೋರಾಗಿ ನಡೆಯುತ್ತಿದೆ. ಕೇವಲ ಸ್ಥಳೀಯ ರೈತರು ಮಾತ್ರವಲ್ಲದೆ, ನೆರೆಯ ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದಲೂ ನೂರಾರು ರೈತರು ಇಲ್ಲಿಗೆ ಆಗಮಿಸಿ ಎತ್ತುಗಳನ್ನು ಖರೀದಿಸುತ್ತಿದ್ದಾರೆ.

Bullock

ಎತ್ತುಗಳ ಮಾರಾಟ ಜೋರು

ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಜೋಡಿ ಉಳುಮೆ ಎತ್ತುಗಳ ಬೆಲೆ ಒಂದೂವರೆ ಲಕ್ಷ ರೂಪಾಯಿಯಿಂದ ಬರೋಬ್ಬರಿ ನಾಲ್ಕು ಲಕ್ಷ ರೂಪಾಯಿವರೆಗೆ ಮಾರಾಟವಾಗುತ್ತಿದೆ. ತೀವ್ರ ಬಿರು ಬಿಸಿಲಿನಿಂದಾಗಿ ಮೇವು ಮತ್ತು ನೀರಿನ ಕೊರತೆ ಎದುರಾಗುತ್ತಿದ್ದರೂ ಸಹ, ಕೃಷಿ ವೆಚ್ಚವನ್ನು ಸರಿದೂಗಿಸಲು ರೈತರು ಎತ್ತುಗಳನ್ನು ಸಾಕಲು ತೀವ್ರ ಆಸಕ್ತಿ ತೋರಿಸುತ್ತಿದ್ದಾರೆ.

ಇದನ್ನೂ ಓದಿ: ದೇಶಕ್ಕೆ ಅನ್ನ ನೀಡುವ ರೈತರಿಗೂ ತಟ್ಟಿದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಿಸಿ

ಸುಮಾರು 15 ವರ್ಷಗಳ ಹಿಂದೆ ಬಹುತೇಕ ರೈತರು ಎತ್ತುಗಳನ್ನೇ ಬಳಸಿ ಕೃಷಿ ಮಾಡುತ್ತಿದ್ದರು. ಆ ಬಳಿಕ ಆಧುನಿಕತೆಗೆ ತೆರೆದುಕೊಂಡು ಯಾಂತ್ರೀಕೃತ ಕೃಷಿಯತ್ತ ಮುಖ ಮಾಡಿದ್ದ ರೈತರು, ಈಗ ತೈಲ ಬೆಲೆ ಏರಿಕೆಯ ಹೊಡೆತಕ್ಕೆ ಸಿಲುಕಿ ಮತ್ತೆ ಸಾಂಪ್ರದಾಯಿಕ ಉಳುಮೆ ಪದ್ಧತಿಗೆ ಮರಳುವಂತಾಗಿದೆ. ಒಟ್ಟಾರೆಯಾಗಿ, ಡೀಸೆಲ್ ಬೆಲೆ ಏರಿಕೆಯ ಪರಿಣಾಮ ಕೃಷಿ ಕ್ಷೇತ್ರದ ಚಿತ್ರಣವನ್ನೇ ಬದಲಿಸುತ್ತಿದ್ದು, ಯಾಂತ್ರೀಕೃತ ಕೃಷಿಯಿಂದ ಸಾಂಪ್ರದಾಯಿಕ ಕೃಷಿಯತ್ತ ಅನ್ನದಾತರು ಮರಳುತ್ತಿರುವುದು ಬೀದರ್ ಜಿಲ್ಲೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:24 pm, Mon, 25 May 26

Loading...
Unable to load recommendations.
Follow Us