ಚಿಯಾ ಬೆಳೆಗಾರರಿಗೆ ತಟ್ಟಿದ ಯುದ್ಧದ ಬಿಸಿ: ಸರ್ರನೆ ಕುಸಿದ ದರ; ಬೀದರ್​​ ರೈತರು ಕಂಗಾಲು

ಗಲ್ಫ್ ಯುದ್ಧವೂ 30ನೇ ದಿನಕ್ಕೆ ಕಾಲಿಟ್ಟಿದೆ. ಇತ್ತ ರಾಜ್ಯದಲ್ಲಿ ಪ್ರತಿಯೊಂದು ಕ್ಷೇತ್ರದ ಮೇಲೆ ಅದರ ಎಫೆಕ್ಟ್ ಬೀರಿದೆ. ಈರುಳ್ಳಿ, ಟೊಮೆಟೊ ರೈತರು ಮಾತ್ರವಲ್ಲದೆ ಇದೀಗ ಚಿಯಾ ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ. ಕಾರಣ ಭಾರೀ ದರ ಇಳಿಕೆಯಾಗಿದೆ. ಇದು ಸಾಮಾನ್ಯವಾಗಿ ಬೀದರ್​ ರೈತರನ್ನ ಸಂಕಷ್ಟಕ್ಕೆ ಸಿಲುಕಿಸಿದೆ.

ಚಿಯಾ ಬೆಳೆಗಾರರಿಗೆ ತಟ್ಟಿದ ಯುದ್ಧದ ಬಿಸಿ: ಸರ್ರನೆ ಕುಸಿದ ದರ; ಬೀದರ್​​ ರೈತರು ಕಂಗಾಲು
ಚಿಯಾ ಬೆಳೆ
Image Credit source: tv9 kannada
Edited By:

Updated on: Mar 29, 2026 | 6:53 PM

ಬೀದರ್​, ಮಾರ್ಚ್​ 29: ಗಲ್ಫ್​​ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಚಿಯಾ (Chia) ಬೆಳೆಗಾರರಿಗೆ ತಟ್ಟಿದೆ. ಚಿಯಾ ಬೀಜದ ದರ ಅರ್ಧದಷ್ಟು ಇಳಿಕೆಯಾಗಿದ್ದು, ರೈತರಿಗೆ ಸಂಕಷ್ಟ ತಂದೊಡ್ಡಿದೆ. ಯುದ್ಧ ಮುಂದುವರೆದ ಹಿನ್ನಲೆ ರಫ್ತು ಮಾಡಲಾಗದೇ ಸಮಸ್ಯೆ ಉಂಟಾಗಿದ್ದು, ಚಿಯಾ ದರದಲ್ಲಿ (Rate) ಭಾರೀ ‌ಕುಸಿತವಾಗಿದೆ. ಸದ್ಯ ಇದು ರೈತರನ್ನ ಕಂಗಾಲು ಮಾಡಿದೆ.

ಒಂದೇ ತಿಂಗಳಲ್ಲಿ 10 ಸಾವಿರ ರೂ. ಇಳಿಕೆ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಚಿಯಾ ಬೆಳೆಗಾರರು ಸಂಕಷ್ಟಕ್ಕೆ ಸಿಲಿಕಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಚಿಯಾ ಬೆಳೆಗಾರರು ಗಂಭೀರ ಸಂಕಷ್ಟ ಎದುರಿಸುತ್ತಿದ್ದಾರೆ. ತಿಂಗಳ ಹಿಂದೆ ಪ್ರತಿ ಕ್ವಿಂಟಾಲ್‌ಗೆ 22 ಸಾವಿರ ರೂ.ಕ್ಕೆ ಮಾರಾಟವಾಗುತ್ತಿದ್ದ ಚಿಯಾ ಬೀಜ ಇದೀಗ 12 ಸಾವಿರ ರೂ.ಕ್ಕೆ ಭಾರೀ ಕುಸಿತ ಕಂಡಿದೆ. ಅಂದರೆ ಒಂದೇ ತಿಂಗಳಲ್ಲಿ 10 ಸಾವಿರ ರೂ. ರವರೆಗೆ ಇಳಿಕೆಯಾಗಿದ್ದು, ರೈತರಿಗೆ ದೊಡ್ಡ ನಷ್ಟ ಉಂಟಾಗಿದೆ.

ಇದನ್ನೂ ಓದಿ: ಕಬ್ಬಿಗೆ ಗುಡ್‌ ಬೈ ಹೇಳಿ ಬಹುಬೇಡಿಕೆ ಬೆಳೆಯತ್ತ ಮುಖಮಾಡಿದ ಗಡಿ ಜಿಲ್ಲೆಯ ರೈತರು: ಕೈತುಂಬಾ ಲಾಭ

ಚಿಯಾ ಬೀಜವನ್ನು ಹೆಚ್ಚಿನ ಪ್ರಮಾಣದಲ್ಲಿ ಗಲ್ಫ್​ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ. ಆದರೆ ಯುದ್ಧದ ಪರಿಣಾಮ ರಫ್ತು ವ್ಯವಹಾರದಲ್ಲಿ ಅಡಚಣೆ ಉಂಟಾಗಿ, ಬೇಡಿಕೆ ಕಡಿಮೆಯಾಗಿದೆ. ಇದರ ಪರಿಣಾಮವೇ ಮಾರುಕಟ್ಟೆಯಲ್ಲಿ ಚಿಯಾ ಬೆಲೆ ಕುಸಿತಕ್ಕೆ ಕಾರಣ. ಉತ್ಪಾದನಾ ವೆಚ್ಚ ಹೆಚ್ಚಿರುವ ಈ ಬೆಳೆಯಲ್ಲಿ ಇಂತಹ ದರ ಕುಸಿತದಿಂದ ರೈತರು ಸಂಕಷ್ಟಕ್ಕೀಡಾಗಿದ್ದು, ಸರ್ಕಾರದಿಂದ ತಕ್ಷಣ ನೆರವು ಮತ್ತು ಪರ್ಯಾಯ ಮಾರುಕಟ್ಟೆ ವ್ಯವಸ್ಥೆಗಳ ಅಗತ್ಯವಿದೆ ಎಂಬುದು ರೈತರ ಮನವಿ.

ಚಿಯಾ ಬೆಳೆಯನ್ನ ಹೆಚ್ಚಾಗಿ ಬೆಳೆಯುದೇಕೆ?

ಬೀದರ್ ಜಿಲ್ಲೆಯೊಂದರಲ್ಲೇ ಸುಮಾರು 3 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಚಿಯಾ ಬೆಳೆಯನ್ನ ಬೆಳೆಯುತ್ತಿದ್ದಾರೆ. ಚಿಯಾ ಧಾನ್ಯದಲ್ಲಿ ಅಧಿಕ ಕ್ಯಾಲ್ಸಿಯಂ, ಮ್ಯಾಗ್ನಿಷಿಯಂ, ಫಾಸ್ಫರಸ್​​ ಎಂಬ ಔಷಧಿ ಗುಣಗಳು ಹಾಗೂ ಪೌಷ್ಟಿಕಾಂಶವಿದ್ದು, ಗಲ್ಫ್​ ರಾಷ್ಟ್ರಕ್ಕೆ ಹೆಚ್ಚಾಗಿ ರಫ್ತು ಆಗುತ್ತಿತ್ತು. ಈ ಬೆಳೆ ಜಾನುವಾರು ಅಥವಾ ಕಾಡುಪ್ರಾಣಿಗಳ ಹಾವಳಿ ಇಲ್ಲದೆ ನೆಮ್ಮದಿಯಿಂದ ರೈತ ಬೆಳೆಯಬಹುದಾಗಿದೆ. ಇನ್ನೂ ಚಿಯಾ ಬೆಳೆಗೆ ಅಂತಾರಾಷ್ಟ್ರಿಯ ಮಟ್ಟದಲ್ಲಿ ಬಹುಬೇಡಿಕೆಯಿರುವ ಸಿರಿಧಾನ್ಯವಾಗಿದ್ದು, ಒಣ ಹವಾಮಾನದಲ್ಲಿ, ವಾರಕ್ಕೊಂದು ಬಾರಿ ತುಂತುರು ನೀರಾವರಿ ನೀಡಿದರೆ ಸಾಕು. 90 ರಿಂದ 100 ದಿನದಲ್ಲಿ ಫಸಲು ಪಡೆಯಬಹುದು.

ಕಡಿಮೆ ಖರ್ಚು: ಹೆಚ್ಚು ಲಾಭ

ಒಂದು ಎಕರೆ ಪ್ರದೇಶಕ್ಕೆ 3 ರಿಂದ 4 ಸಾವಿರ ರೂ ವೆಚ್ಚ ಬರಲಿದ್ದು, ಪೈರು ಬೆಳೆಸಿ ನಾಟಿ ಅಥವಾ ಬಿತ್ತನೆ ಬೀಜ ನೇರವಾಗಿ ಸಾಲು ಬಿಟ್ಟು ಬೆಳೆಯಬಹುದು. ಒಮ್ಮೆ ಮಾತ್ರ ರಾಸಾಯನಿಕ ಗೊಬ್ಬರ ಹಾಕಿದರೆ ಸಾಕು. ಸ್ಥಳಿಯ ವಾತಾವರಣಕ್ಕೆ ಬೆಳೆಯಬಹುದಾದ ವಾಣಿಜ್ಯ ಬೆಳೆ ಚಿಯಾ ಎಕರೆಗೆ 4 ರಿಂದ 5 ಕ್ವಿಂಟಲ್ ಇಳುವರಿ ಸಿಗಲಿದೆ. ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ 14 ರಿಂದ 19 ಸಾವಿರ ರೂ.ವರೆಗೆ ದರವಿದ್ದು, ರೈತರು ಹೆಚ್ಚಿನ ಲಾಭ ಪಡೆಯಬಹುದಾಗಿದೆ. ಹೀಗಾಗಿ ಹೆಚ್ಚಿನ ರೈತರು ಚಿಯಾ ಬೆಳೆಯನ್ನ ಬೆಳೆಯುತ್ತಿದ್ದರು. ಆದರೆ ಯುದ್ದ ಹಿನ್ನಲೆ ದರದಲ್ಲಿ ಕುಸಿತವಾಗಿದ್ದು, ನಮಗೆ ದಿಕ್ಕೆ ತೋಚದಂತಾಗಿದ್ದು ಸರಕಾರ ಏನಾದರೂ ಸಹಾಯ ಮಾಡಿ ಎಂದು ರೈತ ಬಸವರಾಜ್​​ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಬೀದರ್​​ ರೈತನ ಕೈಹಿಡಿದ ಹಳದಿ ಸುಂದರಿ: ವರ್ಷಕ್ಕೆ ಲಕ್ಷಾಂತರ ರೂ ಆದಾಯ, ಆಧುನಿಕ ಯುಗದಲ್ಲಿ ಕೃಷಿ ಕ್ರಾಂತಿ

ಬೀದರ್ ಜಿಲ್ಲೆಯ ಬಹುತೇಕ ರೈತರು ಚಿಯಾ ಕೃಷಿಯಲ್ಲಿ ತೊಡಗಿದ್ದಾರೆ. ಒಮ್ಮೆ ನಾಟಿ ಮಾಡಿದ ನಂತರ ಯಾವುದೇ ಖರ್ಚು ಇಲ್ಲದೇ ಶೂನ್ಯ ಬಂಡವಾಳದಲ್ಲಿ ಬೆಳೆಯಬಹುದಾದ ಬೆಳೆ ಇದಾಗಿದೆ. ಆದರೆ ಯುದ್ದದಿಂದಾಗಿ ದರ ಕುಸಿತವಾಗಿದ್ದು ರೈತರನ್ನ ಕಂಗಾಲು ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Suresh Naik

ಸುರೇಶ ನಾಯಕ ಮೂಲತಃ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದರು. ಓದಿದ್ದು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2009 ರಿಂದ ಅಂದರೆ ಕಳೆದ 16 ವರ್ಷದಿಂದ ದೃಷ್ಯ ಮಾಧ್ಯಮ ಕ್ಷೇತ್ರದಲ್ಲಿದ್ದು ಸಮಯ ಸುದ್ದಿ ವಾಹಿನಿಯ ಇನ್ ಪೂಟ್ ವಿಭಾಗದಲ್ಲಿ, ಜೊತೆಗೆ ಕಸ್ತೂರಿ ಸುದ್ದಿವಾಹಿನಿಯ ಹುಬ್ಬಳ್ಳಿ ವರದಿಗಾರನಾಗಿ ನಾಲ್ಕು ವರ್ಷ ಕೆಲಸ ಮಾಡಿದ ಅನುಭವವಿದೆ. 2014 ಪೆಬ್ರುವರಿ 01 ರಿಂದ ಟಿವಿ9 ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, 10 ವರ್ಷ ಪೂರೈಸಿದ್ದಾರೆ. ಟಿವಿ9 ನ ಆರಂಭದಲ್ಲಿ ಬಾಗಲಕೋಟೆ ಜಿಲ್ಲೆಯ ವರದಿಗಾರನಾಗಿ ಸಧ್ಯ ಬೀದರ್ ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ, ಮಾನವೀಯ ಕಳಕಳಿಯ ವರದಿ, ರೈತರ ಸಮಸ್ಯೆಗಳ ಕುರಿತು ಹೆಚ್ಚಿನ ಒತ್ತು ಕೊಟ್ಟು ತಮ್ಮ ಸುದ್ದಿಯ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಕಾಡು ಸುತ್ತೋದು, ಸಂಗೀತ ಕೇಳೋದು, ಇವರ ಹವ್ಯಾಸವಾಗಿದೆ...

Read More
Follow Us