ಬೀದರ್​ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ: ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಣೆ

| Updated By: ರಮೇಶ್ ಬಿ. ಜವಳಗೇರಾ

Updated on: Dec 29, 2024 | 2:19 PM

ಬೀದರ್‌ನಲ್ಲಿ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಆಪ್ತನ ಹೆಸರು ಬರೆದಿಟ್ಟು ಸಚಿನ್ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಬಿಜೆಪಿ ನಾಯಕರು, ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಇನ್ನು ಸಚಿನ್ ನಿವಾಸಕ್ಕೆ ಬಿಜೆಪಿ ನಿಯೋಗ ಭೇಟಿ ನೀಡುವ ಮೊದಲೇ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿ ಮೃತ ಸಚಿನ್ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿದ್ದಾರೆ.

ಬೀದರ್​ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ: ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಣೆ
ಸಚಿನ್ ನಿವಾಸಕ್ಕೆ ಈಶ್ವರ್ ಖಂಡ್ರೆ ಭೇಟಿ
Follow us on

ಬೀದರ್, (ಡಿಸೆಂಬರ್ 29): ಬೀದರ್‌ನಲ್ಲಿ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಇದರ ಮಧ್ಯ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಇಂದು (ಡಿಸೆಂಬರ್ 29) ಕಟ್ಟಿತೂಗಾಂವ್​ನಲ್ಲಿರುವ ಸಚಿನ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಮೃತ ಸಚಿನ್​ ಕುಟುಂಬಸ್ಥರಿಗೆ 10 ಲಕ್ಷ ರೂ. ಪರಿಹಾರ ನೀಡುವಾಗಿ ಘೋಷಿಸಿದರು. ಬಿಜೆಪಿ ನಿಯೋಗ ಭೇಟಿ ಮೊದಲೇ ಈಶ್ವರ್ ಖಂಡ್ರೆ ಭೇಟಿ ನೀಡಿ ಪರಿಹಾರ ಘೋಷಿಸಿದ್ದಾರೆ.

ಕುಟುಂಬಸ್ಥರ ಭೇಟಿ ಬಳಿಕ ಮಾಧ್ಯಮದವರ ಜೊತೆಗೆ ಮಾತಾಡಿದ ಖಂಡ್ರೆ, ಸಚಿನ ಆತ್ಮಹತ್ಯೆ ಒಂದು‌ ನೋವಿನ ಸಂಗತಿಯಾಗಿದೆ.‌ ಇದು ಖೇದಕರ ಸಂಗತಿ. ನಾನು ನಮ್ಮ ಸರಕಾರ ಸಚಿನ್ ಕುಟುಂಬಸ್ಥರ ಜೊತೆಗೆ ಇದ್ದೇವೆ. ನಾನು ಸಚಿನ್ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದ್ದೇನೆ. ಸಚಿನ್ ಆತ್ಮಹತ್ಯೆ ಕೇಸ್ ನಿರ್ಲಕ್ಷ್ಯ ಮಾಡಿದ ಪೊಲೀಸರು ಮೇಲೆ ಕ್ರಮವಾಗುತ್ತೆ. ಈ‌ ಕೇಸ್ ರೈಲ್ವೇ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಕೇಸ್ ತನಿಕೆ ನ್ಯಾಯಯುತವಾಗಿ ನಡೆಯುತ್ತೆ. ಈ ಪ್ರಕರಣದಲ್ಲಿ ಯಾರೇ ಇರಲಿ ಅವರ ಮೇಲೆ ಕಾನೂನು ರೀತಿ ಕ್ರಮವಾಗುತ್ತದೆ. ಸಚಿನ್ ಕುಟುಂಬಕ್ಕೆ ಸರಕಾರ ಹಾಗೂ ಖಾಸಗಿಯಾಗಿ 10 ಲಕ್ಷ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಬೀದರ್​ನಲ್ಲಿ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ: ಇಬ್ಬರು ಪೊಲೀಸರ ತಲೆದಂಡ

ನಾನು ಮೊನ್ನೆಯೇ ಬರಬೇಕಾಗಿತ್ತು ಬರಲು ಆಗಲಿಲ್ಲ. ಬೆಳಗಾವಿ ಕಾರ್ಯಕ್ರಮ ಮಾಜಿ ಪ್ರಧಾನಿ ಅವರ ಮರಣ ಕಾರಣಕ್ಕೆ ಬರಲಿಲ್ಲ. ಈ ಆತ್ಮಹತ್ಯೆ ಪ್ರಕರಣಕ್ಕೆ ಸಂಭವಿಸಿದಂತೆ ಪ್ರಿಯಾಂಕ ಖರ್ಗೆ ಅವರು ಈ ಕೇಸ್ ಅನ್ನ ನಾನೆ ತನಿಖೆ ಮಾಡಿಸುತ್ತೇನೆ ಎಂದು ಹೇಳಿದ್ದಾರೆ. ಸಚಿನ್ ಮರಣ ಪತ್ರವನ್ನ ಎಫ್ ಎಸ್ ಎಲ್ ಗೆ ಕಳುಹಿಸುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ನ ಐದು ಗ್ಯಾರಂಟಿಯಲ್ಲಿ ಗುತ್ತಿಗೆದಾರ ಆತ್ಮಹತ್ಯೆ ಆರನೇ ಗ್ಯಾರಂಟಿ ಎನ್ನುವ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿದ ಈಶ್ವರ್ ಖಂಡ್ರ, ಐದು ಗ್ಯಾರಂಟಿ ಸಕ್ಸಸ್ ಆಗಿವೆ. ಅದೆ ಹೊಟ್ಟೆ ಕಿಚ್ಚಿನಿಂದ ಬಿಜೆಪಿಯವರು ಹೀಗೆ ಮಾತಾಡುತ್ತಿದ್ದಾರೆ. ಈ ನೆಲದ ಕಾನೂನಿನ ಅಡಿಯಲ್ಲಿ ನಮ್ಮ ಸರಕಾರ ಕೆಲಸ ಮಾಡುತ್ತೇ. ಸಚಿನ್ ಆತ್ಮಹತ್ಯೆ ಕೇಸ್ ನಾವು ನಿಷ್ಪಕ್ಷಪಾತವಾಗಿ ತನಿಖೆ ಮಾಡಿಸುತ್ತೇವೆ ಎಂದು ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟರು.

ಬೀದರ್‌ನಲ್ಲಿ ಯುವ ಗುತ್ತಿಗೆದಾರ ಸಚಿನ್ (26 ವರ್ಷ) ಬಾಲ್ಕಿಯಲ್ಲಿ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಅತ್ಮಹತ್ಯೆಗೆ ಶರಣಾಗಿದ್ದಾನೆ. ಡೆತ್ ನೋಟ್ ಬರೆದಿಟ್ಟು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತನ ಹೆಸರು ತಳಕು ಹಾಕಿಕೊಂಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ಎಂಬುವವರು 15 ಲಕ್ಷಕ್ಕೂ ಅಧಿಕ ಹಣ ತೆಗೆದುಕೊಂಡು ಟೆಂಡರ್‌ ನೀಡದೆ ವಂಚನೆ ಮಾಡಿದ್ದು, ಮಾತ್ರವಲ್ಲದೆ 1 ಕೋಟಿ ಹಣ ನೀಡುವಂತೆ ಒತ್ತಡ, ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಡೆತ್​ನೋಟ್​ನಲ್ಲಿ ಉಲ್ಲೇಖವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಗರು ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ