ಸರ್ಕಾರಿ ಗುತ್ತಿಗೆ ಕಾಮಗಾರಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ ವಿಧೇಯಕ ಮಂಡನೆ, ವಿಧೇಯಕದಲ್ಲೇನಿದೆ?

ಕರ್ನಾಟಕ ಸರ್ಕಾರದ ಗುತ್ತಿಗೆ ಕಾಮಗಾರಿಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲು ನೀಡಲು ಸಿದ್ದರಾಮ್ಯಯ ಸರ್ಕಾರ ತೀರ್ಮಾನಿಸಿದ್ದು, 2025ನೇ ಸಾಲಿನ ಬಜೆಟ್​ನಲ್ಲಿ ಘೋಷಿಸಿದಂತೆ ಇಂದು (ಮಾರ್ಚ್​ 18) ಹಲವರ ವಿರೋಧಗಳ ನಡುವೆಯೇ ವಿಧಾನಸಭೆಯಲ್ಲಿ ಮುಸ್ಲಿಮರಿಗೆ ಸರ್ಕಾರಿ ಗುತ್ತಿಗೆ ಕಾಮಗಾರಿಗಳಲ್ಲಿ ಶೇ.4 ರಷ್ಟು ಮೀಸಲಾತಿ ನೀಡುವ ಹಾಗೂ ಹಿಂದುಳಿದ ವರ್ಗಗಳಿಗೆ ಸರಕು ಮತ್ತು ಸೇವೆಗಳಲ್ಲಿ ಮೀಸಲಾತಿ ಕಲ್ಪಿಸುವ ವಿಧೇಯಕ ಮಂಡಿಸಲಾಯ್ತು. ಇನ್ನು ಈ ವಿಧೇಯದಲ್ಲೇನಿದೆ? ಕಾನೂನು ಸಚಿವರು ಹೇಳಿದ್ದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಸರ್ಕಾರಿ ಗುತ್ತಿಗೆ ಕಾಮಗಾರಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ ವಿಧೇಯಕ ಮಂಡನೆ, ವಿಧೇಯಕದಲ್ಲೇನಿದೆ?
Muslims Reservation bill

Updated on: Mar 18, 2025 | 4:33 PM

ಬೆಂಗಳೂರು, (ಮಾರ್ಚ್​ 18): ತೀವ್ರ ವಿರೋಧದ ನಡುವೆಯೂ ಮುಸ್ಲಿಮರಿಗೆ( Reservation for Muslims) ಸರ್ಕಾರಿ ಗುತ್ತಿಗೆ ಕಾಮಗಾರಿಗಳಲ್ಲಿ ಶೇ.4 ರಷ್ಟು ಮೀಸಲಾತಿ ನೀಡುವ ಹಾಗೂ ಹಿಂದುಳಿದ ವರ್ಗಗಳಿಗೆ ಸರಕು ಮತ್ತು ಸೇವೆಗಳಲ್ಲಿ ಮೀಸಲಾತಿ ಕಲ್ಪಿಸುವ ವಿಧೇಯಕವನ್ನು ವಿಧಾನಸಭೆಯಲ್ಲಿಂದು ಮಂಡಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದಂತೆ ಹಿಂದುಳಿದ ವರ್ಗಗಳಿಗೆ ಹಾಗೂ ಅಲ್ಪಸಂಖ್ಯಾತರಿಗೆ ಸಾರ್ವಜನಿಕ ಸರಕು ಹಾಗೂ ಸರ್ಕಾರಿ ಗುತ್ತಿಗೆಗಳಲ್ಲಿ ಮೀಸಲಾತಿ ನೀಡುವ ವಿಧೇಯಕವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌ ವಿಧಾನಸಭೆಯಲ್ಲಿಂದು ಮಂಡಿಸಿದರು. ಬಜೆಟ್‌ನ ಆಯವ್ಯಯಕ್ಕೆ ವಿಧಾನಮಂಡಲ ಇನ್ನೂ ಅಂಗೀಕಾರ ನೀಡಿಲ್ಲ. ಅದಕ್ಕೂ ಮೊದಲೇ ವಿಧೇಯಕವನ್ನು ಮಂಡಿಸಿ ಮಂಡಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಬಹುತೇಕ ಬಜೆಟ್‌ ಘೋಷಣೆಗಳು ಆಯವ್ಯಯದ ಅಂಗೀಕಾರದ ಬಳಿಕ ಮೂರ್ನಾಲ್ಕು ತಿಂಗಳಾದ ಮೇಲೆ ವಿಧೇಯಕಗಳಾಗುತ್ತವೆ. ಆದರೆ ಮುಖ್ಯಮಂತ್ರಿಯವರ ಪರವಾಗಿ ಇಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ತಿದ್ದುಪಡಿ ವಿಧೇಯಕ-2025ಅನ್ನು ಮಂಡಿಸಿದರು. ಈವರೆಗೂ ಸರ್ಕಾರಿ ಗುತ್ತಿಗೆಯಲ್ಲಿ ಎಸ್‌‍ಸಿ ಹಾಗೂ ಎಸ್‌‍ಟಿಗಳಿಗೆ ಮಾತ್ರ ಮೀಸಲಾತಿ ಇದ್ದು, ಇದೀಗ ಪ್ರವರ್ಗ 2 ಬಿಗೆ ಬರುವ ಮುಸ್ಲಿಮರಿಗೂ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: ಮುಸ್ಲಿಮರಿಗೆ ಶೇ 4 ಮೀಸಲಾತಿ: ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನಿಸಲಾಗ್ತಿದೆ ಎಂದ ಬೊಮ್ಮಾಯಿ

ಈ ವಿಧೇಯಕದಲ್ಲಿ ಏನಿದೆ?

ಈ ವಿಧೇಯಕದ ಪ್ರಕಾರ, ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ, ಕರ್ನಾಟಕ ಗ್ರಾಮಸ್ವರಾಜ್ಯ ಮತ್ತು ಪಂಚಾಯತ್‌ ರಾಜ್‌, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ನಗರಸಭೆಗಳು, ಪುರಸಭೆಗಳು, ಪಟ್ಟಣ ಪಂಚಾಯಿತಿ, ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಸರ್ಕಾರಿ ಗುತ್ತಿಗೆಗಳಲ್ಲಿ ಮೀಸಲಾತಿ ನೀಡಲು ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ
ಮುಸ್ಲಿಮರಿಗೆ ಶೇ 4 ಮೀಸಲಾತಿ ಸುಪ್ರೀಂ​ನಲ್ಲಿ ಪ್ರಶ್ನಿಸಲಾಗ್ತಿದೆ: ಬೊಮ್ಮಾಯಿ
ಮುಸ್ಲಿಂ ಮೀಸಲಾತಿ ಶೇ 10ಕ್ಕೆ ಏರಿಕೆ ಮನವಿ ಬಗ್ಗೆ ಪರಿಶೀಲನೆಗೆ ಜಮೀರ್ ಸೂಚನೆ
ಸದ್ದಿಲ್ಲದೇ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಘೋಷಿಸಿದ ಸಿದ್ದರಾಮಯ್ಯ!
ವಕ್ಫ್ ಆಸ್ತಿ, ಮುಸ್ಲಿಂ ಸ್ಮಾಶನಗಳ ರಕ್ಷಣೆಗೆ 150 ಕೋಟಿ ರೂ: ಸಿದ್ದರಾಮಯ್ಯ

2025-26ನೇ ಸಾಲಿನ ಆಯವ್ಯಯದ ಭಾಷಣದಲ್ಲಿ ಪ್ರಸ್ತಾವಿಸಲಾದ ಭರವಸೆಯಂತೆ ನಿರುದ್ಯೋಗ ಸಮಸ್ಯೆ ನಿವಾರಿಸಲು ಈ ವಿಧೇಯಕ ರೂಪಿಸಿರುವುದಾಗಿ ತಿಳಿಸಲಾಗಿದೆ. ಸರ್ಕಾರಿ ನಿರ್ಮಾಣ ಕಾಮಗಾರಿಗಳ ಪೈಕಿ ಶೇ.4 ರಷ್ಟನ್ನು ಮೀರದಂತೆ ಹಿಂದುಳಿದವರ ಪ್ರವರ್ಗ 2 ಬಿ ಗೆ ಸೇರಿದ ವ್ಯಕ್ತಿಗಳಿಗೆ ಪಾಲ್ಗೊಳ್ಳಲು ಪ್ರೋತ್ಸಾಹಿಸುವ ಉದ್ದೇಶವನ್ನು ವಿಧೇಯಕ ಹೊಂದಿದೆ.

ಅಧಿಸೂಚನಾ ಇಲಾಖೆಗಳಲ್ಲಿ ನಿರ್ಮಾಣ ಕಾಮಗಾರಿಗಳ ಹೊರತಾಗಿ ಸರಕು ಮತ್ತು ಸೇವೆಗಳ ಸಂಗ್ರಹಣೆಯಲ್ಲಿ ಅನುಸೂಚಿತ ಜಾತಿಗಳು ಹಾಗೂ ಅನುಸೂಚಿತ ಬುಡಕಟ್ಟುಗಳು ಹಾಗೂ ಹಿಂದುಳಿದ ವರ್ಗಗಳಲ್ಲಿ ಶೇ.1 ಕೋಟಿ ರೂ.ವರೆಗೂ ಸರಕು -ಸೇವೆಗಳಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಪರಿಶಿಷ್ಟ ಜಾತಿಗಳಿಗೆ ಶೇ.17.15 ರಷ್ಟು, ಪರಿಶಿಷ್ಟ ಪಂಗಡಗಳಿಗೆ ಶೇ.6.95 ರಷ್ಟು, ಪ್ರವರ್ಗ 2 ಎ ಗೆ ಶೇ.15 ರಷ್ಟು, ಪ್ರವರ್ಗ 2 ಬಿ ಗೆ ಶೇ.4 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ.

ಸರ್ಕಾರಿ ನಿರ್ಮಾಣ ಕಾಮಗಾರಿಗಳಲ್ಲಿ 1 ಕೋಟಿ ರೂ.ಗಳ ಮೀಸಲಾತಿಯನ್ನು 2 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಇದರಲ್ಲಿ ಈವರೆಗೂ ಎಸ್‌‍ಸಿ/ಎಸ್‌‍ಟಿಗಳಿಗೆ ಮಾತ್ರ ಮೀಸಲಾತಿ ಇದ್ದು, ಇದೀಗ ಪ್ರವರ್ಗ 2 ಬಿಗೆ ಬರುವ ಮುಸ್ಲಿಮರಿಗೂ ಅವಕಾಶ ಕಲ್ಪಿಸಲಾಗಿದೆ. ನಿರ್ದಿಷ್ಟ ಸಮುದಾಯದ ವ್ಯಕ್ತಿಗಳಿಂದ ಟೆಂಡರ್‌ ಸ್ವೀಕರಿಸದಿದ್ದಲ್ಲಿ ಅಂತಹ ಸರಕು ಮತ್ತು ಸೇವೆಗಳ ಸಂಗ್ರಹಣೆಯ ಆಹ್ವಾನಗಳಿಗೆ ಪ್ರತಿಕ್ರಿಯಿಸಿದ ಇತರ ಟೆಂಡರ್‌ದಾರರಿಗೆ ಅವಕಾಶ ನೀಡಲು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

ಈ ವಿಧೇಯಕದ ಬಗ್ಗೆ ಕಾನೂನು ಸಚಿವರ ಹೇಳಿದ್ದೇನು?

ಇನ್ನು ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ 4% ಮೀಸಲಾತಿ ವಿಧೇಯಕ ಮಂಡನೆ ಬಳಿಕ ಟಿವಿ9ಗೆ ಪ್ರತಿಕ್ರಿಯಿಸಿರುವ ಕಾನೂನು ಸಚಿವ ಎಚ್​ಕೆ ಪಾಟೀಲ್, ಸದನದಲ್ಲಿ ಆ ವಿಷಯ ಬಂದಾಗ ಉತ್ತರ ಕೊಡುತ್ತೇವೆ. ಬಿಜೆಪಿಯವರು ರಾಜಕೀಯ ಬಿಟ್ಟು ಬೇರೆ ಏನೂ ಮಾಡುತ್ತಿಲ್ಲ. ಸರ್ವಜನಾಂಗದ ಶಾಂತಿಯ ತೋಟ ಮಾಡಲು ಹೊರಟಿದ್ದೇವೆ. ಆದ್ರೆ, ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ನಾವು ಯಾರನ್ನೂ ತುಷ್ಟೀಕರಣ ಮಾಡುವ ಅವಶ್ಯಕತೆ ಇಲ್ಲ. ಯಾರ ತುಷ್ಟೀಕರಣವೂ ಇಲ್ಲ, ತಿರಸ್ಕಾರವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:32 pm, Tue, 18 March 25