ಸದ್ದಿಲ್ಲದೇ ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಘೋಷಿಸಿದ ಸಿದ್ದರಾಮಯ್ಯ!
ಖ್ಯಾತ ಕವಿ ಕೆ. ಎಸ್. ನಿಸಾರ್ ಅಹಮದ್ ಅವರ ನಿತ್ಯೋತ್ಸವ ಹಾಡಿನ ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ, ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ, ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ ಹಾಡನ್ನು ಉಲ್ಲೇಖಿಸಿದ ಸಿಎಂ ಸಿದ್ದರಾಮಯ್ಯನವರು 2025ನೇ ಸಾಲಿನ ತಮ್ಮ ಬಜೆಟ್ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಭರ್ಜರಿ ಕೊಡುಗೆ ನೀಡಿದ್ದಾರೆ. ಅದರಲ್ಲೂ ವಿರೋಧದ ನಡುವೆಯೂ ಸರ್ಕಾರಿಗೆ ಗುತ್ತಿಗೆಯಲ್ಲಿ ಸಿಎಂ ಮೀಸಲಾತಿ ಘೋಷಿಸಿದ್ದಾರೆ.

ಬೆಂಗಳೂರು, (ಮಾರ್ಚ್ 07): ಸಿದ್ದರಾಮಯ್ಯ(Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರದ(Karnataka Congress Government) ಇಂದಿನ 2025ನೇ ಸಾಲಿನ ಬಜೆಟ್ನಲ್ಲಿ (Karnataka Budget 2025) ಮುಸ್ಲಿಂ (Muslim)ಸಮುದಾಯಕ್ಕೆ ಭರಪೂರ ಕೊಡುಗೆಗಳನ್ನು ನೀಡಿದ್ದಾರೆ. ಮೌಲಾನಾ ಆಜಾದ್ ಶಾಲೆಗಳ ಉನ್ನತೀಕರಣ, ವಸತಿ ಶಾಲೆಗಳಲ್ಲಿ ವಾಣಿಜ್ಯ ವಿಭಾಗದ ಪ್ರಾರಂಭ, ಮತ್ತು ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿ ಸೇರಿದಂತೆ ಸಿದ್ದರಾಮಯ್ಯನವರು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಭರ್ಜರಿ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಂರಿಗೆ ಮೀಸಲಾತಿ ನೀಡಿದ್ದಾರೆ. ಹಲವರ ವಿರೋಧದ ನಡುವೆಯೂ ಸದ್ದಿಲ್ಲದೇ ಸಿದ್ದರಾಮಯ್ಯನವರು ಇಂದಿನ ಬಜೆಟ್ನಲ್ಲಿ ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಪರಿಶಿಷ್ಟ ಜಾತಿ-ಪಂಗಡ, ಹಿಂದುಳಿದವರಿಗೆ ನೀಡಿರುವಂತೆ ಮುಸ್ಲಿಮರಿಗೂ ಶೇ 4ರಷ್ಟು ಮೀಸಲಾತಿ ಕಲ್ಪಿಸಿದ್ದಾರೆ.
ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ 2 ಕೋಟಿ ರೂಪಾಯಿಯವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿ ನೀಡಿದ್ದಾರೆ. ಇದಕ್ಕಾಗಿ ಎಸ್ಸಿಪಿ ಟಿಎಸ್ಪಿ ಯೋಜನೆಗೆ 42018 ಕೋಟಿ ರೂ. ಮೀಸಲು ಇಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿನ ಬಜೆಟ್ನಲ್ಲಿ ಘೋಷಿಸಿದ್ದಾರೆ. ಇದರ ಜೊತೆಗೆ ಮುಸ್ಲಿಮರಿಗೂ ಸಹ ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಶೇ 04ರಷ್ಟು ಮೀಸಲಾತಿ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: Karnataka Budget 2025 LIVE: ರಫ್ತಿನಲ್ಲಿ ದೇಶದಲ್ಲಿ ಕರ್ನಾಟಕ ರಾಜ್ಯ ನಂಬರ್ 1
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದಾಗಿನಿಂದ ಇದು ಮುಸ್ಲಿಂ ಓಲೈಕೆ ಸರ್ಕಾರ ಎಂಬ ಹಣೆ ಪಟ್ಟಿ ಹೊತ್ತಿದೆ.. ಬಿಜೆಪಿಗರು ಕೂಡ ಈ ನಿಟ್ಟಿನಲ್ಲಿ ಟೀಕಿಸಿದ್ದಾರೆ. ಈಗ ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಂರಿಗೆ ಶೇಕಡಾ 4 ರಷ್ಟು ಮೀಸಲಾತಿ ನೀಡಿರುವುದು ಮತ್ತಷ್ಟು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
ಹಿಂದೆಯೇ ಸಿಎಂ ಭೇಟಿ ಮಾಡಿದ್ದ ಮುಸ್ಲಿಂ ನಿಯೋಗ
ಕಳೆದ ಜನವರಿಯಲ್ಲಿ ಜಮೀರ್ ಅಹಮದ್ ಖಾನ್ ನೇತೃತ್ವದಲ್ಲಿ ಮುಸ್ಲಿಂ ಜನಪ್ರತಿನಿಧಿಗಳ ನಿಯೋಗ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ, ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ. 4 ರಷ್ಟು ಮೀಸಲಾತಿಯನ್ನು ಕಲ್ಪಿಸಬೇಕು ಎಂದು ಮನವಿ ಮಾಡಿದ್ದರು. ಬಜೆಟ್ ಅಧಿವೇಶನದಲ್ಲೇ ಇದನ್ನ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದವು, ಸಿಎಂ ಕೂಡ ಅಂದು ಸಕರಾತ್ಮಕವಾಗಿ ಸ್ಪಂದಿಸಿದ್ದು, ಬಜೆಟ್ನಲ್ಲಿ ಘೋಷಿಸಿವುದಾಗಿ ಘೋಷಣೆ ಮಾಡಿದ್ದರು. ಇದರ ಬೆನ್ನಲ್ಲೇ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದಕ್ಕೆ ವಿಪಕ್ಷ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಸಿದ್ದರಾಮಯ್ಯನವರ ನಡೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗೆ ಗ್ರಾಸವಾಗಿತ್ತು. ಆದರೂ ಸಹ ಸದ್ದಿಲ್ಲದೇ ಸಿಎಂ ಸಿದ್ದರಾಮಯ್ಯನವರು ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ4ರಷ್ಟು ಮೀಸಲಾತಿ ಘೋಷಿಸಿ ಬಿಟ್ಟಿದ್ದಾರೆ.
ಪ್ರಸ್ತುತ ಯಾರಿಗೆ ಎಷ್ಟು ಮೀಸಲಾತಿ ಇದೆ?
ಸರ್ಕಾರಿ ಗುತ್ತಿಗೆಯಲ್ಲಿ ಹಾಲಿ ಇರುವ ಮೀಸಲಾತಿ ಎಷ್ಟು ಅಂತ ನೋಡೋದಾದ್ರೆ ಎಸ್‌ಸಿ-ಎಸ್‌ಟಿ ಸಮುದಾಯಕ್ಕೆ ಶೇಕಡಾ 24 ರಷ್ಟಿದೆ. ಇನ್ನೂ ಒಬಿಸಿ- ಪ್ರವರ್ಗ 1 ಶೇಕಡಾ 4 ರಷ್ಟು ಮೀಸಲಾತಿ ಇದ್ದರೆ, ಒಬಿಸಿ- ಪ್ರವರ್ಗ 2ಗೆ ಶೇಕಡಾ 15 ರಷ್ಟು ಮೀಸಲಾತಿ ಇದ್ದು ಒಟ್ಟು ಶೇಕಡಾ 43 ರಷ್ಟು ಮೀಸಲಾತಿಯನ್ನು ಕೊಡಲಾಗಿದೆ. ಇದೀಗ ಮುಸ್ಲಿಂ ಹಾಗೂ ಎಸ್‌ಸಿ-ಎಸ್ಟಿ ಸಮುದಾಯಕ್ಕೂ ಸಹ ಗುತ್ತಿಗೆಯಲ್ಲಿ ಮೀಸಲಾತಿ ಹೆಚ್ಚಿಸಿದೆ.
ಮತ್ತಷ್ಟು ಕೆಂಗಣ್ಣಿಗೆ ಗುರಿಯಾದ ಕಾಂಗ್ರೆಸ್ ಸರ್ಕಾರ
ರಾಜ್ಯದಲ್ಲಿ ಈ ಹಿಂದೆ ವಕ್ಫ್ ಆಸ್ತಿ ವಿವಾದದಲ್ಲೇ ಸರ್ಕಾರ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು, ಸರ್ಕಾರ ಮುಸ್ಲಿಂರ ಹಿಂದೆ ಬಿದ್ದಿದೆ. ವೋಟ್ ಬ್ಯಾಂಕ್‌ಗಾಗಿ ಮುಸ್ಲಿಂ ಓಲೈಕೆ ಮಾಡುತ್ತಿದೆ ಎಂದು ಬಿಜೆಪಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅನಂತರ ಮುಸ್ಲಿಂರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡಬೇಕು ಎಂದು ಸರ್ಕಾರ ಮುಂದಾಗಿದ್ದಾಗ ಬಿಜೆಪಿಗರು ಬಿಸಿಮುಟ್ಟಿಸಿದ್ದರು. ಈಗ ಬಜೆಟ್ ಅಧಿವೇಶನದಲ್ಲೇ ಮೀಸಲಾತಿ ಜಾರಿ ತಂದಿದ್ದಾರೆ. ಇದಕ್ಕೆ ಬಿಜೆಪಿ ರಾಜ್ಯಾದ್ಯಂತ ಹೋರಾಟ ರೂಪಿಸುವ ಸಾಧ್ಯತೆಯೂ ಇದ್ದು, ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: ಕರ್ನಾಟಕ ಬಜೆಟ್ ಮುಖ್ಯಾಂಶಗಳು
ಇನ್ನಷ್ಟು ಕರ್ನಾಟಕ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ