ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ: ಕರ್ನಾಟಕದಲ್ಲಿ ಅಲರ್ಟ್, ಬೇರೆ ರಾಜ್ಯದ ಕೋಳಿಗಳಿಗೆ ನಿರ್ಬಂಧ

| Updated By: Ganapathi Sharma

Updated on: Feb 19, 2025 | 7:23 AM

ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಹಕ್ಕಿ ಜ್ವರ ಪ್ರಕರಣಗಳು ಹೆಚ್ಚಾಗಿವೆ. ಇತ್ತ ಕರ್ನಾಟಕದಲ್ಲಿ ಹಕ್ಕಿಜ್ವರದ ಪತ್ತೆಯಾಗಿಲ್ಲದಿದ್ದರೂ ಆತಂಕ ಎದುರಾಗಿದೆ. ಸದ್ಯ ರಾಜ್ಯದ ಹಲವೆಡೆ ಈಗಾಗಲೇ ಮುನ್ನೆಚ್ಚರಿಕಾ ಕ್ರಮವಾಗಿ ಹೊರ ರಾಜ್ಯಗಳ ಕೋಳಿ, ಮೊಟ್ಟೆಗಳ ಆಮದು ಸ್ಥಗಿತಗೊಳಿಡಲಾಗಿದೆ. ಇತ್ತ ಬೆಂಗಳೂರಿನಲ್ಲೂ ಚಿಕನ್ ವ್ಯಾಪಾರಿಗಳು ಅಲರ್ಟ್ ಆಗಿದ್ದಾರೆ.

ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ: ಕರ್ನಾಟಕದಲ್ಲಿ ಅಲರ್ಟ್, ಬೇರೆ ರಾಜ್ಯದ ಕೋಳಿಗಳಿಗೆ ನಿರ್ಬಂಧ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಫೆಬ್ರವರಿ 19: ಪಕ್ಕದ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಮಹಾರಾಷ್ಟ್ರದ 7 ಜಿಲ್ಲೆಗಳಲ್ಲಿ ಹುಲಿ, ಚಿರತೆ, ಕಾಗೆಗಳಲ್ಲೂ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಹಕ್ಕಿಜ್ವರದಿಂದ ಕಾಗೆಗಳು ಮೃತಪಟ್ಟ ಬಗ್ಗೆ ವರದಿಯಾಗಿದೆ. ಆಂಧ್ರ, ತೆಲಂಗಾಣದಲ್ಲಿ H5N1 ವೈರಸ್​ನಿಂದ ಉಂಟಾಗುವ ಸೋಂಕಿನಿಂದ ಕೋಳಿಗಳು ಮತಪಡುತ್ತಿವೆ. ಪರಿಣಾಮವಾಗಿ ಕರ್ನಾಟಕದ ಗಡಿ ಭಾಗಗಳಲ್ಲಿ ಆತಂಕ ಮನೆ ಮಾಡಿದೆ.

ತೆಲಂಗಾಣ, ಆಂಧ್ರ ಪ್ರದೇಶಗಳಲ್ಲಿ ಕೋಳಿಗಳ ಮಾರಣಹೋಮವೇ ನಡೆಯುತ್ತಿದೆ. ಸಂಯುಕ್ತ ನೆಲ್ಲೂರು ಜಿಲ್ಲೆಯ ಗುಡೂರು, ಸುಳ್ಳೂರುಪೇಟ, ನಾಯ್ಡುಪೇಟ ಮತ್ತು ವೆಂಕಟಗಿರಿ ಪ್ರದೇಶಗಳಲ್ಲಿ ಚಿಕನ್ ಶಾಪ್​ಗಳಲ್ಲಿ ನೂರಾರು ಕೋಳಿಗಳು ಸಾಯುತ್ತಿವೆ. ಜನ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಕೋಳಿ ಖರೀದಿಗೆ ಜನ ಹಿಂದೇಟು ಹಾಕ್ತಿದ್ದು, ಚಿಕನ್ ಶಾಪ್ ಮಾಲೀಕರು ಅಂಗಡಿಗಳನ್ನು ಬಂದ್ ಮಾಡುತ್ತಿದ್ದಾರೆ.

ಹೀಗೆ ಸತ್ತ ಕೋಳಿಗಳನ್ನ ಮಣ್ಣು ಮಾಡುತ್ತಿಲ್ಲ. ಬದಲಾಗಿ ಮೀನುಗಳಿಗೆ ಆಹಾರವಾಗಿ ಹಾಕಲಾಗುತ್ತಿದೆ. ಇದೇ ಮೀನುಗಳನ್ನು ತಿನ್ನುವ ಜನರ ಆರೋಗ್ಯ ಸ್ಥಿತಿ ಹದಗೆಡುತ್ತಿದೆ. ನಗರಸಭೆ, ಪುರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಲ್ಲಿನ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಳಿ, ಮೊಟ್ಟೆ ಆಮದು ಸ್ಥಗಿತ

ಬೇರೆ ರಾಜ್ಯಗಳಿಂದ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಬೀದರ್‌, ಬೆಳಗಾವಿ, ಬಳ್ಳಾರಿ ಸೇರಿದಂತೆ ಗಡಿ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಬೇರೆ ರಾಜ್ಯಗಳಿಂದ ಬರುವ ಕೋಳಿ ಹಾಗೂ ಮೊಟ್ಟೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಆದರೆ, ರಾಜ್ಯದಲ್ಲಿ ಹಕ್ಕಿಜ್ವರ ಇಲ್ಲದಿದ್ರೂ, ಬಿಸಿಲಿನ ತಾಪದ ಪರಿಣಾಮ ಕೋಳಿ ಮಾಂಸ ವ್ಯಾಪಾರ ಕಡಿಮೆಯಾಗಿದೆ.

ಬೀದರ್ ಗಡಿಯಲ್ಲಿಯೂ ಹೈಅಲರ್ಟ್

ಮಹಾರಾಷ್ಟ್ರದ ಲಾತೂರ್​ನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯ ಗಡಿಭಾಗದ ತಾಲೂಕುಗಳಲ್ಲಿ ಪಶುಸಂಗೋಪನಾ ಇಲಾಖೆ ಹೈಅಲರ್ಟ್ ಘೋಷಿಸಿದೆ. ಮಹಾರಾಷ್ಟ್ರದಿಂದ ತರುವ ಕೋಳಿ ಮಾಂಸ, ಮೊಟ್ಟೆ ಸಾಗಣೆ, ಮಾರಾಟಕ್ಕೆ ನಿಷೇಧ ವಿಧಿಸಿದೆ. ಭಾಲ್ಕಿ, ಕಮಲನಗರ, ಬಸವಕಲ್ಯಾಣ, ಔರಾದ್ ತಾಲೂಕಿನ ಗಡಿಯಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿ ತಪಾಸಣೆ ಮಾಡಲಾಗ್ತಿದೆ.

ಹಕ್ಕಿಜ್ವರದ ಲಕ್ಷಣಗಳೇನು?

ಜ್ವರ, ಕೆಮ್ಮು, ಗಂಟಲು ನೋವು, ಸ್ನಾಯು ನೋವು, ವಾಂತಿಬೇಧಿ, ನೆಗಡಿ, ಉಸಿರಾಟದ ತೊಂದರೆ ಇವುಗಳು ಹಕ್ಕಿಜ್ವರದ ಲಕ್ಷಣಗಳಾಗಿವೆ. ಈ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. 2020 ರಲ್ಲಿ ರಾಜ್ಯದಲ್ಲಿ ರಂಗನತಿಟ್ಟುವಿನಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿತ್ತು.

ಇದನ್ನೂ ಓದಿ: ಅನ್ನ ಬಸಿದ ನೀರು ಚೆಲ್ಲದಿರಿ, ಮೂತ್ರನಾಳದ ಸೋಂಕನ್ನು ನಿವಾರಿಸುವ ಶಕ್ತಿ ಇದರಲ್ಲಿದೆ

ಸದ್ಯ ರಾಜ್ಯದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿಲ್ಲ. ಆದರೆ, ರಾಜ್ಯಾದ್ಯಂತ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ