Russia Ukraine Crisis: ಉಕ್ರೇನ್ ಕಹಿ ನೆನಪು; ಒಂದೇ ತಿಂಗಳಿಗೆ ತವರಿಗೆ ವಾಪಸ್ಸಾದ ಮೈಸೂರು ವಿದ್ಯಾರ್ಥಿ

ಜೀವ ಉಳಿಸಿಕೊಂಡು ಬಂದಿರುವುದು ಖುಷಿ ಕೊಟ್ಟಿದೆ. ಆದರೆ ನಮ್ಮ ಕನಸಿನ ವೈದ್ಯ ಶಿಕ್ಷಣದ ಗತಿಯೇನೆಂಬ ಆತಂಕಕಾಡುತ್ತಿದೆ. ತುಂಬಾ ಕನಸು ಕಟ್ಟಿಕೊಂಡು ವೈದ್ಯನಾಗಲೇಬೇಕು ಎಂದು ಹೋಗಿದ್ದೆ. ಆದರೆ ಈಗ ದಿಕ್ಕೇ ತೋಚದಂತಾಗಿದೆ. ನಮ್ಮ ಸರ್ಕಾರದ ಮೇಲೆ ಭರವಸೆಯಿದೆ.

Russia Ukraine Crisis: ಉಕ್ರೇನ್ ಕಹಿ ನೆನಪು; ಒಂದೇ ತಿಂಗಳಿಗೆ ತವರಿಗೆ ವಾಪಸ್ಸಾದ ಮೈಸೂರು ವಿದ್ಯಾರ್ಥಿ
ರಕ್ಷಿತ್ ಡಿ. ಆಚಾರ್
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Mar 11, 2022 | 2:11 PM

ಮೈಸೂರು: ಉಕ್ರೇನ್ (Ukraine) ಹೆಸರು ಕೇಳಿದರೆ ಎಲ್ಲರೂ ಬೆಚ್ಚಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಭಾರತದಿಂದ ಉಕ್ರೇನ್‌ಗೆ ವೈದ್ಯರಾಗುವ ಮಹತ್ತರ ಕನಸು ಕಟ್ಟಿಕೊಂಡು ಹೋಗಿದ್ದ ವಿದ್ಯಾರ್ಥಿಗಳು ಉಕ್ರೇನ್ ಹೆಸರು ಕೇಳಿದರೆ ಕನಸಿನಲ್ಲೂ ಬೆಚ್ಚಿ ಬೀಳುತ್ತಿದ್ದಾರೆ. ಇದಕ್ಕೆ ಕಾರಣ ಆ ವಿದ್ಯಾರ್ಥಿಗಳಿಗೆ ಅಲ್ಲಿ ಆದ ಭೀಭತ್ಸ ಅನುಭವ. ಆ ಕುರಿತಾಗಿ ವಿದ್ಯಾರ್ಥಿ ರಕ್ಷಿತ್ ಡಿ. ಆಚಾರ್ ಟಿವಿ 9ನೊಂದಿಗೆ ತಮ್ಮ ಅನುಭವ ಹಂಚಿಕೊಂಡಿದ್ದು ಹೀಗೆ.

ಒಂದೇ ತಿಂಗಳಲ್ಲಿ ತವರಿಗೆ: ಉಕ್ರೇನ್ ರಷ್ಯಾ ಯುದ್ದ ಆರಂಭವಾಗುವ ಮುನ್ನ ಹಾಗೂ ಆರಂಭವಾದ ನಂತರ ದೇಶದ ಸಾವಿರಾರು ವಿದ್ಯಾರ್ಥಿಗಳು ರಾಜ್ಯದ ಹಲವು ವಿದ್ಯಾರ್ಥಿಗಳು ಉಕ್ರೇನ್‌ನಿಂದ ತಾಯ್ನಾಡಿಗೆ ಮರಳಿದ್ದಾರೆ. ಒಬ್ಬಬ್ಬರದ್ದು ಒಂದೊಂದು ಮನಕಲಕುವ ಕಥೆಗಳು. ಕೆಲವರು ಅಂತಿಮ ವರ್ಷದ ಪೂರೈಕೆಯ ಸನಿಹದಲ್ಲಿ ವಾಪಸ್ಸಾಗಿದ್ದರೆ ಮತ್ತೆ ಕೆಲವರು ಓದು ಅರ್ಧಕ್ಕೆ ನಿಂತಿದೆ. ಆದರೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ದೊಡ್ಡಹೆಜ್ಜೂರು ಗ್ರಾಮದ ರಕ್ಷಿತ್ ಡಿ. ಆಚಾರ್ ವೈದ್ಯಕೀಯ ಕೋರ್ಸ್ ಆರಂಭಿಸುವ ಮುನ್ನವೇ ಮರಳಿ ಮೈಸೂರಿಗೆ ಬಂದಿದ್ದಾನೆ. ಸೀಟ್ ಸಿಕ್ಕ ನಂತರ ರಕ್ಷಿತ್ ತಡ ಮಾಡಲಿಲ್ಲ. ಕಳೆದ ತಿಂಗಳು ಫೆಬ್ರವರಿ 11ರಂದು ಉಕ್ರೇನ್‌ಗೆ ಹಾರಿದ್ದ. ಹೋದ ಎರಡೇ ದಿನಕ್ಕೆ ಅಂದರೆ ಫೆಬ್ರವರಿ 13ರಂದು ಕಾಲೇಜಿನಲ್ಲಿ ಅಡ್ಮಿಷನ್ ಸಹಾ ಆಯಿತು. ಕಾಲೇಜು, ಅಲ್ಲಿನ ವಾತಾವರಣಕ್ಕೆ ರಕ್ಷಿತ್ ಹೊಂದಿಕೊಳ್ಳತೊಡಗಿದ್ದ. ಅಲ್ಲಿ ಭಾರತದವರು ಅದರಲ್ಲೂ ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಕಾರಣ ರಕ್ಷಿತ್‌ಗೆ ಅಷ್ಟೇನು ಸಮಸ್ಯೆಯಾಗಲಿಲ್ಲ. ಎಲ್ಲವೂ ಅಂದುಕೊಂಡಂತೆ ಆಗಿತ್ತು. ಅಲ್ಲಿನ ಊಟ ನೆಲ ಜನ ಪರಿಸ್ಥಿತಿ ಎಲ್ಲರ ಜೊತೆ ರಕ್ಷಿತ್ ಹೊಂದುಕೊಂಡಿದ್ದ.

12 ದಿನಕ್ಕೆ ಯುದ್ದದ ಕಾರ್ಮೋಡ: ಎಸ್ ರಕ್ಷಿತ್ ಕಾಲೇಜಿಗೆ ಹೋಗಲು ಆರಂಭಿಸಿ ಕೇವಲ 12 ದಿನ ಆಗಿತ್ತು ಅಷ್ಟೇ. ಉಕ್ರೇನ್‌ನಲ್ಲಿ ಯುದ್ದದ ಕಾರ್ಮೋಡ ಕವಿದು ಬಿಟ್ಟಿತು. ರಕ್ಷಿತ್ ಇದ ಕಾರ್ಕಿವ್ ನಗರದಲ್ಲಿ ಅಲ್ಲಿ ಚಳಿ ಬೇರೆ ಹೆಚ್ಚಾಗಿತ್ತು. ಜೊತೆಗೆ ಯುದ್ದದ ಕಾರ್ಮೋಡ. ಓದು ಸಾಧ್ಯವಿಲ್ಲ ಅನ್ನೋದಂತು ಸ್ಪಷ್ಟವಾಗಿತ್ತು ಆದರೆ ದೇಶಕ್ಕೆ ಮರುಳುವುದು ಹೇಗೆ ಎಂಬ ಚಿಂತೆ ಕಾಡತೊಡಗಿತ್ತು. ಇತ್ತ ಯುದ್ಧದ ವಿಷಯ ತಿಳಿದು ಮನೆಯವರು ಗಾಬರಿಯಾಗಿದ್ದರು. ಮನೆಯವರು ನಿರಂತರವಾಗಿ ಕರೆ ಮಾಡಿ ವಿಚಾರಿಸುತ್ತಿದ್ದರು. ಇನ್ನು ರಕ್ಷಿತ್ ಹೊಸಬನಾಗಿದ್ದರಿಂದ ಊಟ ತಿಂಡಿ ಹೇಗೆಂದು ಸಹಾ ತಿಳಿದಿರಲಿಲ್ಲ. ಎಲ್ಲಿ ಹೋಗೋದು ಏನು ಮಾಡೋದು ಅನ್ನೋದೆ ಗೊತ್ತಿಲ್ಲದೆ ರಕ್ಷಿತ್ ಸಂಪೂರ್ಣ ಕಂಗಾಲಾಗಿದ್ದ. ಒಂದೆಡೆ ರಷ್ಯಾದ ಶೆಲ್‌ದಾಳಿ ದಿನೇ ದಿನೇ ಹೆಚ್ಚಾಗುತ್ತಿತ್ತು. ಗುಂಡಿನ ಸದ್ದು ಕೇಳುತ್ತಲೇ ಇತ್ತು. ಅಪಾರ ಚಳಿ ನಡುಗಿಸಿತ್ತು, ಕರ್ಫ್ಯೂ ಘೋಷಣೆಯಾದ ತಕ್ಷಣ ವಿದ್ಯಾರ್ಥಿಗಳೆಲ್ಲಾ ಹಾಸ್ಟೆಲ್‌ನ ಬಂಕರ್‌‌ಗೆ ಶಿಫ್ಟ್ ಆದರು. ಸುಮಾರು 600 ವಿದ್ಯಾರ್ಥಿಗಳಿಗೆ ಬಂಕರ್‌ನಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಕೆಲ ದಿನ ಎರಡು ಹೊತ್ತು ಊಟ ನೀಡಿದರೆ. ನಂತರ ಕೆಲ ದಿನ ಬ್ರೆಡ್ – ಚಾಕೊಲೇಟ್, ನೀರೇ ಆಹಾರವಾಗಿತ್ತು. ಮುಂದೇನು ಎಂಬ ಭಯ ಎಲ್ಲರಲ್ಲೂ ಆವರಿಸಿತ್ತು.

ನಡೆದುಕೊಂಡು ರೈಲು ನಿಲ್ದಾಣಕ್ಕೆ ಪಯಣ: ಬಂಕರ್‌ನಲ್ಲಿದ್ದವರಿಗೆ ಉಕ್ರೇನ್‌ನ ಹಾಗೂ ಭಾರತ ರಾಯಭಾರ ಕಚೇರಿಯಿಂದ ರುಮೇನಿಯಾ ಗಡಿಯತ್ತ ತೆರಳಲು ಸೂಚನೆ ನೀಡಲಾಯಿತು. ಅವರ ಸೂಚನೆಯಂತೆ ರಕ್ಷಿತ್ ಸೇರಿ ಎಲ್ಲಾ ವಿದ್ಯಾರ್ಥಿಗಳು ಸುಮಾರು 10 ಕಿ.ಮೀ ದೂರದ ಪೊಲಿಕ್ವಿವಿಸ್ಕಾ ರೈಲ್ವೆ ಸ್ಟೇಷನ್‌ಗೆ ತಲುಪಿದರು. ನಡೆದು ಬಂದ ಆಯಾಸದ ನಡುವೆಯೂ ತವರು ತಲುಪವ ಸಂತೋಷ ಸಂಭ್ರಮ ಮನದಲ್ಲಿತ್ತು. ಆದರೆ ಅಲ್ಲಿ ಇವರಿಗೆ ರೈಲು ಹತ್ತಲು ಬಿಡಲಿಲ್ಲ. ಕೆಲ ಹೆಣ್ಣು ಮಕ್ಕಳಿಗೆ ಮಾತ್ರ ಅವಕಾಶ ಮಾಡಿ ಕೊಡಲಾಯಿತು. ನಂತರ ರಾಯಭಾರಿ ಕಚೇರಿಯವರು ಪಿಸೋಚಿನ್ ಹಳ್ಳಿಗೆ ಬರುವಂತೆ ಸೂಚನೆ ನೀಡಿದರು. ಆ ಹಳ್ಳಿ ಅಲ್ಲಿಂದ ಸುಮಾರು 20 ಕಿ.ಮೀ ದೂರದಲ್ಲಿತ್ತು. ಮೊದಲೇ ನಡೆದು ಸುಸ್ತಾಗಿದ್ದ ವಿದ್ಯಾರ್ಥಿಗಳಿಗೆ ಪಿಸೋಚಿನ್ ಹಳ್ಳಿ ದೂರದ ಬೆಟ್ಟದಂತೆ ಗೋಚರಿಸುತಿತ್ತು. ಅಲ್ಲಿಗೆ ಹೋದ ಮೇಲೆ ಊರು ತಲುಪುವ ನಂಬಿಕೆ ಇರಲಿಲ್ಲ. ಇಷ್ಟೆಲ್ಲಾ ಸಂಕಷ್ಟಗಳ ನಡುವೆ ರಕ್ಷಿತ್ ಹಾಗೂ 400 ವಿದ್ಯಾರ್ಥಿಗಳು ಪಿಸೋಚಿನ್ ಹಳ್ಳಿವರೆಗೆ ಕಷ್ಟಪಟ್ಟು ನಡೆದುಕೊಂಡು ಹೋದರು. ಅಲ್ಲಿನ ಹಳ್ಳಿ ಜನರು ಪ್ರೀತಿ ಇವರನ್ನು ಮಂತ್ರ ಮುಗ್ದರನ್ನಾಗಿಸಿತು. ಅಲ್ಲಿನ ಹಳ್ಳಿಯ ಜನ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಊಟ ತಿಂಡಿ ಕೊಟ್ಟು ಎಲ್ಲರನ್ನು ಸಂತೈಸಿದರು. ಒಟ್ಟು ನಾಲ್ಕು ದಿನ ರಕ್ಷಿತ್ ಹಾಗೂ ಇತರ ವಿದ್ಯಾರ್ಥಿಗಳು ಅಲ್ಲೇ ಕಾಲ‌ ಕಳೆದರು. ಅದರಲ್ಲಿ ಎರಡು ದಿನ ಎರಡು ಪೀಸ್ ಬ್ರೆಡ್ ಸೂಪ್‌ನಲ್ಲೇ ಕಾಲ ಕಳೆಯಲಾಯಿತು.

ಕೊನೆಗೂ ಬಂತು ಬಸ್ ರುಮೇನಿಕ್ಕೆ ಬಸ್‌ನಲ್ಲಿ ಪ್ರಯಾಣ: ಕೊನೆಗೂ ಪಿಸೋಚಿನ್‌‌ಗೆ ಬಸ್‌ಗಳು ಬಂದವು. ಅದರಲ್ಲಿ ನೂರು ವಿದ್ಯಾರ್ಥಿಗಳು ತಲಾ 500 ಡಾಲರ್ ಹಣ ನೀಡಿ ಬಸ್‌ಗಳಲ್ಲಿ ಹೊರಟರು. ಉಳಿದವರಿಗೆ ಆತಂಕ ಮತ್ತಷ್ಟು ಹೆಚ್ಚಾಗಿತ್ತು. ಆದರೆ ಉಳಿದ ವಿದ್ಯಾರ್ಥಿಗಳಿಗೆ ಭಾರತೀಯ ರಾಯಭಾರ ಕಚೇರಿಯಿಂದ ಉಚಿತವಾಗಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಅವರು ವ್ಯವಸ್ಥೆ ಮಾಡಿದ್ದ ಬಸ್‌ಗಳಲ್ಲಿ ಇಡೀ ದಿನ ಪಯಣಿಸಿ ಕೊನೆಗೂ ಎಲ್ಲರೂ ರುಮೇನಿಯಾ ಗಡಿ ಸೇರಿಕೊಂಡರು‌. ಗಡಿಯಲ್ಲಿ ಅದಾಗಲೇ ಸಾಕಷ್ಟು ಜನರು ಜಮಾಯಿಸಿದ್ದರು. ಸುಮಾರು 8 ಗಂಟೆಗಳ ಕಾಲ ಕ್ಯೂನಲ್ಲಿ ನಿಂತು ವೀಸಾ ಪಾಸ್‌ಪೋರ್ಟ್ ಚೆಕಪ್ ಆದ ನಂತರ ಎಲ್ಲರೂ ಗಡಿ ಪ್ರವೇಶಿಸಿದರು. ಅಂದೇ ರುಮೆನಿಯಾದ ಸಕ್ಟಿವಾ ವಿಮಾನ ನಿಲ್ದಾಣದಿಂದ ರಕ್ಷಿತ್ ಸೇರಿ 300 ವಿದ್ಯಾರ್ಥಿಗಳು ಭಾರತದತ್ತ ಪ್ರಯಾಣ ಬೆಳೆಸಿದರು. ರಕ್ಷಿತ್ ಹಾಗೂ ಎಲ್ಲಾ ವಿದ್ಯಾರ್ಥಿಗಳು ದೆಹಲಿ ಮೂಲಕವಾಗಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿದರು. ರಕ್ಷಿತ್ ಬರಮಾಡಿಕೊಳ್ಳಲು ಕುಟುಂಬದ ಸದಸ್ಯರು ವಿಮಾನ ನಿಲ್ದಾಣಕ್ಕೆ ಹೋಗಿದ್ದರು. ಅಲ್ಲಿ ಮನೆಯವರನ್ನು ಕಂಡ ರಕ್ಷಿತ್‌ಗೆ ಹೋದ ಜೀವ ಬಂದಂತಾಯಿತು. ಮನೆಯವರಿಗೂ ರಕ್ಷಿತ್ ನೋಡಿದ್ದು ಎಲ್ಲಿಲ್ಲದ ಖುಷಿ ಕೊಟ್ಟಿತು. ಯಾಕಂದ್ರೆ ಮನೆ ಮಂದಿಯೆಲ್ಲಾ ವಿಚಾರ ಗೊತ್ತಾದ ದಿನದಿಂದ ಊಟ ತಿಂಡಿ ಮಾಡದೆ ಮಗನ ಬರುವಿಕೆಯ ನಿರೀಕ್ಷೆಯಲ್ಲೇ ಇದ್ದರು. 24 ಗಂಟೆ ಟಿವಿ ಮುಂದೆಯೇ ಕುಳಿತು ಉಕ್ರೇನ್‌ನ ಆಗು ಹೋಗುಗಳ‌ನ್ನೇ ನೋಡುತ್ತಿದ್ದರು. ಇದೀಗ ಮನೆ ಮಗ ಬಂದಿದ್ದು ಎಲ್ಲರಿಗೂ ಹೋದ ಜೀವ ಬಂದಂತಾಗಿದೆ.

ರಕ್ಷಿತ್ ಡಿ ಆಚಾರ್ – ವಿದ್ಯಾರ್ಥಿ: ಜೀವ ಉಳಿಸಿಕೊಂಡು ಬಂದಿರುವುದು ಖುಷಿ ಕೊಟ್ಟಿದೆ. ಆದರೆ ನಮ್ಮ ಕನಸಿನ ವೈದ್ಯ ಶಿಕ್ಷಣದ ಗತಿಯೇನೆಂಬ ಆತಂಕಕಾಡುತ್ತಿದೆ. ತುಂಬಾ ಕನಸು ಕಟ್ಟಿಕೊಂಡು ವೈದ್ಯನಾಗಲೇಬೇಕು ಎಂದು ಹೋಗಿದ್ದೆ. ಆದರೆ ಈಗ ದಿಕ್ಕೇ ತೋಚದಂತಾಗಿದೆ. ನಮ್ಮ ಸರ್ಕಾರದ ಮೇಲೆ ಭರವಸೆಯಿದೆ. ಇಲ್ಲೇ ನಮಗೆ ವೈದ್ಯಕೀಯ ಕೋರ್ಸ್ ಮುಗಿಸಲು ಅವಕಾಶ ಕಲ್ಪಿಸುತ್ತಾರೆ ಅನ್ನುವ ವಿಶ್ವಾಶವಿದೆ. ಮಗ ಡಾಕ್ಟರ್ ಆಗುತ್ತಾನೆಂದು ಸಾಲ ಮಾಡಿ ವಿದೇಶಕ್ಕೆ ಕಳುಹಿಸಿದ್ದೆ, ಆತ ಅಪಾಯಕ್ಕೆ ಸಿಲುಕಿದ ದಿನದಿಂನದ ಊಟ ನಿದ್ದೆ ಮಾಡಿರಲಿಲ್ಲ. ಏನಾದರಾಗಲಿ ಮೊದಲು ಮಗ ವಾಪಸ್ಸು ಬರಲಿ ಎಂದು ಕಾಯುತ್ತಿದ್ದೆ. ಸದ್ಯ ಸರಕಾರದ ನೆರವಿನಿಂದ ವಾಪಾಸ್ಸಾಗಿದ್ದಾರೆ. ಅದೇ ರೀತಿ ಮುಂದಿನ ಶಿಕ್ಷಣದ ವಿಚಾರವಾಗಿ ಸರಕಾರ ನೆರವಿಗೆ ಬರಲಿ ಎಂದು ರಕ್ಷಿತ್ ತಂದೆ ಹೇಳಿದರು.

ವರಿದಿ: ರಾಮ್ ಟಿವಿ9 ಮೈಸೂರು

ಇದನ್ನೂ ಓದಿ:

ವಿಜಯನಗರದಲ್ಲಿ ವಕೀಲರ ಮೇಲೆ ಚಾಕುವಿನಿಂದ ಹಲ್ಲೆ, ಬೆಂಗಳೂರಿನಲ್ಲಿ ಖಾಸಗಿ ಫೈನಾನ್ಸ್​​ನ 7 ಕಾರ್​ಗಳಿಗೆ ಬೆಂಕಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada