Dividend Payout: ಎನ್ಎಚ್ಪಿಸಿಯಿಂದ ಸರ್ಕಾರಕ್ಕೆ ಮಧ್ಯಂತರ ಲಾಭಾಂಶವಾಗಿ 933.61 ಕೋಟಿ ವಿತರಣೆ
ಎನ್ಎಚ್ಪಿಸಿಯಿಂದ ಕೇಂದ್ರ ಸರ್ಕಾರಕ್ಕೆ 933.61 ಕೋಟಿ ರೂಪಾಯಿ ಮಧ್ಯಂತರ ಲಾಭಾಂಶವನ್ನು ಹಸ್ತಾಂತರ ಮಾಡಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.
ಸರ್ಕಾರಿ ಸ್ವಾಮ್ಯದ ಜಲವಿದ್ಯುತ್ ಕಂಪೆನಿ ಎನ್‌ಎಚ್‌ಪಿಸಿ ಲಿಮಿಟೆಡ್ನಿಂದ 2021-22ರ ಹಣಕಾಸು ವರ್ಷಕ್ಕೆ ಮಧ್ಯಂತರ ಲಾಭಾಂಶವಾಗಿ (Dividend) 933.61 ಕೋಟಿ ರೂಪಾಯಿಯನ್ನು ಪಾವತಿಸಲಾಗಿದೆ. ಕಂಪೆನಿಯ ಹೇಳಿಕೆಯಂತೆ, ಎನ್ಎಚ್ಪಿಸಿಯ ಸಿಎಂಡಿ ಆದ ಎ.ಕೆ.ಸಿಂಗ್ ಅವರು ಕೇಂದ್ರ ಸಚಿವರಾದ ಆರ್.ಕೆ.ಸಿಂಗ್ಗೆ ಡಿವಿಡೆಂಡ್ ಪೇಔಟ್ ಅಡ್ವೈಸ್ ಅನ್ನು ಗುರುವಾರದಂದು ಹಸ್ತಾಂತರಿಸಿದರು. 2020-21ರ ಸಾಲಿನ ಹಣಕಾಸಿನ ವರ್ಷಕ್ಕೆ ಅಂತಿಮ ಡಿವಿಡೆಂಡ್ ಆಗಿ 249.44 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರಕ್ಕೆ ಎನ್ಎಚ್ಪಿಸಿಯಿಂದ ಪಾವತಿ ಮಾಡಲಾಗಿತ್ತು. ಫೆಬ್ರವರಿ 11ನೇ ತಾರೀಕಿನಂದು ನಡೆದ ಸಭೆಯಲ್ಲಿ ಎನ್ಎಚ್ಪಿಸಿಯ ಮಂಡಳಿ ನಿರ್ದೇಶಕರು ಪ್ರತಿ ಈಕ್ವಿಟಿ ಷೇರಿಗೆ ಮಧ್ಯಂತರ ಡಿವಿಡೆಂಡ್ 1.31 ರೂಪಾಯಿ ಘೋಷಣೆ ಮಾಡಿದ್ದರು. ಅಂದರೆ, ಮುಖಬೆಲೆಯ 13.10ರಷ್ಟು ಆಗುತ್ತದೆ.
ಸದ್ಯಕ್ಕೆ ಎನ್ಎಚ್ಪಿಸಿಗೆ 8 ಲಕ್ಷಕ್ಕೂ ಹೆಚ್ಚು ಷೇರುದಾರರಿದ್ದಾರೆ. ಒಟ್ಟಾರೆಯಾಗಿ 2021-22ನೇ ಸಾಲಿಗೆ ಮಧ್ಯಂತರ ಲಾಭಾಂಶದ ಪಾವತಿ 1,315.90 ಕೋಟಿ ರೂಪಾಯಿ ಆಗುತ್ತದೆ. CPSEಗಳ ಬಂಡವಾಳ ಪುನರ್ರಚನೆಯ ಕುರಿತು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ (DIPAM) ಮಾರ್ಗಸೂಚಿಗಳ ಪ್ರಕಾರ, ಪ್ರತಿ CPSU ತೆರಿಗೆ ನಂತರದ ಲಾಭದ ಶೇ 30 ಅಥವಾ ನಿವ್ವಳ ಮೌಲ್ಯದ ಶೇ 5ರಷ್ಟು ಕನಿಷ್ಠ ವಾರ್ಷಿಕ ಲಾಭಾಂಶವನ್ನು ಪಾವತಿಸಬೇಕಾಗುತ್ತದೆ.
ಅಕ್ಟೋಬರ್ನಿಂದ ಆರಂಭವಾಗಿ ಡಿಸೆಂಬರ್ಗೆ ಕೊನೆಯಾಗುವ ತ್ರೈಮಾಸಿಕದಲ್ಲಿ ಎನ್‌ಎಚ್‌ಪಿಸಿ ತನ್ನ ಏಕೀಕೃತ ನಿವ್ವಳ ಲಾಭದಲ್ಲಿ ಸುಮಾರು ಶೇ 7.5ರಷ್ಟು ಕುಸಿತವನ್ನು, ಅಂದರೆ 889 ಕೋಟಿ ರೂಪಾಯಿ ವರದಿ ಮಾಡಿದೆ. 2021ರ ಅಕ್ಟೋಬರ್ನಿಂದ ಡಿಸೆಂಬರ್ನಲ್ಲಿ ಒಟ್ಟು ಆದಾಯ ರೂ. 2,373.72 ಕೋಟಿ ದಾಖಲಿಸಿದೆ.
ಇದನ್ನೂ ಓದಿ: ಕೋಲ್ ಇಂಡಿಯಾ ಮತ್ತು ಇತರ ಪಿಎಸ್ಯುಗಳಿಂದ ಕೇಂದ್ರ ಸರ್ಕಾರಕ್ಕೆ ಬಂಪರ್ ಡಿವಿಡೆಂಡ್