Karnataka Politics: ಚುನಾವಣಾ ಪೂರ್ವ ಸಿದ್ಧತಾ ಕಾರ್ಯಕ್ರಮಗಳಿಗೆ ಬಿಜೆಪಿ ಟೀಂ ರೆಡಿ; ಹಳೇ ಮೈಸೂರು ಮೊದಲ ಟಾರ್ಗೆಟ್
ಚುನಾವಣಾ ಪೂರ್ವ ಸಿದ್ಧತಾ ಕಾರ್ಯಕ್ರಮಗಳಿಗೆ ಬಿಜೆಪಿ ಜವಾಬ್ದಾರಿ ಹಂಚಿಕೆ ಮಾಡಿದೆ. ಹಾಗೇ ಜಿಲ್ಲೆಗಳಲ್ಲಿ ಮೋರ್ಚಾಗಳ ಸಮಾವೇಶ, ಫಲಾನುಭವಿಗಳ ಸಮ್ಮೇಳನ, ವಿಡಿಯೋ ವ್ಯಾನ್ ಪ್ರಚಾರ, ಪ್ರಣಾಳಿಕೆ ತಯಾರಿ ಸಲಹಾ ಅಭಿಯಾನ ಪ್ರಾರಂಭಿಸಲಿದೆ.
ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ಎಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಈಗಿನಿಂದಲೇ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಪ್ರಜೆಗಳ ಮತ್ತಗಳನ್ನು ತಮ್ಮ ಬುಟ್ಟಿಯಲ್ಲಿ ಹಾಕಿಕೊಳ್ಳಲು ಮತ್ತ ಬುಟ್ಟಿಗಳನ್ನು ಎಣೆಯುತ್ತಿವೆ. ಇದರ ಭಾಗವಾಗಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ, ಬಿಜೆಪಿ ಪೇಜ್ ಪ್ರಮುಖರ ಸಮಾವೇಶ ನಡೆಸುತ್ತಿದೆ. ಇದಾದ ನಂತರ ರಾಜ್ಯದ ನಾಲ್ಕು ದಿಕ್ಕುಗಳಿಂದಲು ರಥಯಾತ್ರೆ ಆರಂಭಿಸಲು ಮುಂದಾಗಿದೆ. ಈ ನಡುವೆ ಚುನಾವಣಾ ಪೂರ್ವ ಸಿದ್ಧತಾ ಕಾರ್ಯಕ್ರಮಗಳಿಗೆ ಬಿಜೆಪಿ ಜವಾಬ್ದಾರಿ ಹಂಚಿಕೆ ಮಾಡಿದೆ. ಹಾಗೇ ಜಿಲ್ಲೆಗಳಲ್ಲಿ ಮೋರ್ಚಾಗಳ ಸಮಾವೇಶ, ಫಲಾನುಭವಿಗಳ ಸಮ್ಮೇಳನ, ವಿಡಿಯೋ ವ್ಯಾನ್ ಪ್ರಚಾರ, ಪ್ರಣಾಳಿಕೆ ತಯಾರಿ ಸಲಹಾ ಅಭಿಯಾನ ಪ್ರಾರಂಭಿಸಿದೆ.
ರಥ ಯಾತ್ರೆಗೆ ಉಸ್ತುವಾರಿಗಳನ್ನು ನೇಮಕ ಮಾಡಿದ ರಾಜ್ಯ ಬಿಜೆಪಿ
ಬಿಜೆಪಿ ರಾಜ್ಯದ ನಾಲ್ಕು ದಿಕ್ಕುಗಳಿಂದಲು ರಥಯಾತ್ರೆ ಆರಂಭಿಸಲು ಮುಂದಾಗಿದ್ದು, ನಾಲ್ಕು ತಂಡಗಳ ರಥಯಾತ್ರೆಗೂ ಮೂವರು ಉಸ್ತುವಾರಿಗಳನ್ನು ನೇಮಕ ಮಾಡಿದೆ. ಬಿಜೆಪಿ ರಾಜ್ಯಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಮೋರ್ಚಾಗಳ ಸಮಾವೇಶ ಆಯೋಜನೆ ಜವಾಬ್ದಾರಿ ನೀಡಲಾಗಿದೆ. ಹಾಲಪ್ಪ ಆಚಾರ್, ಎಸ್.ಟಿ.ಸೋಮಶೇಖರ್ ತಂಡಕ್ಕೆ ಫಲಾನುಭವಿಗಳ ಸಮ್ಮೇಳನ ಆಯೋಜನೆ ಹೊಣೆ ನೀಡಲಾಗಿದೆ.
ಎಸ್.ವಿ.ರಾಘವೇಂದ್ರ ತಂಡಕ್ಕೆ ವಿಡಿಯೋ ವ್ಯಾನ್ ಪ್ರಚಾರದ ಹೊಣೆ ನೀಡಲಾಗಿದೆ. ಡಾ. ಕೆ ಸುಧಾಕರ್, ಬಿ.ಸಿ.ನಾಗೇಶ್ ಅವರಿಗೆ ಪ್ರಣಾಳಿಕೆ ತಯಾರಿ ಸಲಹಾ ಅಭಿಯಾನದ ಹೊಣೆ ನೀಡಲಾಗಿದೆ. ರಥಯಾತ್ರೆ ಸಂಚಾಲಕರಾಗಿ ಸಚಿವ ಸಿ.ಸಿ. ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ. ಸಹ-ಸಂಚಾಲಕರಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಮತ್ತು ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ ನೇಮಕಗೊಂಡಿದ್ದಾರೆ.
ನಾಲ್ಕು ರಥಯಾತ್ರೆಗಳಿಗೂ ಪ್ರತ್ಯೇಕ ಸಂಚಾಲಕರ ನೇಮಕ
ಯಾತ್ರೆ-1
ಎಂ ರಾಜೇಂದ್ರ- ರಾಜ್ಯ ಉಪಾಧ್ಯಕ್ಷ
ಎಸ್. ದತ್ತಾತ್ರಿ – ಮಾಜಿ ಶಿವಮೊಗ್ಗ ಜಿಲ್ಲಾಧ್ಯಕ್ಷ
ಕಿಶೋರ್ – ಉಡುಪಿ ಜಿಲ್ಲಾ ಉಪಾಧ್ಯಕ್ಷ
ಯಾತ್ರೆ – 2
ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ
ಜಿಲ್ಲಾ ಪ್ರಭಾರಿ ಸಚ್ಚಿದಾನಂದ ಮೂರ್ತಿ
ವಿಧಾನಪರಿಷತ್ ಸದಸ್ಯ-ಅ. ದೇವೇಗೌಡ
ಯಾತ್ರೆ- 3
ಮಾಜಿ ವಿಧಾನ ಪರಿಷತ್ ಸದಸ್ಯಅರುಣ್ ಶಹಾಪುರ
ಒಬಿಸಿ ಮೋರ್ಛಾ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬಿ
ಮಲ್ಲಿಕಾರ್ಜುನ ಬಾಳಿಕಾಯಿ – ಯುವ ಮೋರ್ಛಾ ಪ್ರಧಾನ ಕಾರ್ಯದರ್ಶಿ
ಯಾತ್ರೆ – 4
ವಿಧಾನ ಪರಿಷತ್ ಸದಸ್ಯ ರಘುನಾಥ್ ರಾವ್ ಮಲ್ಕಾಪುರೆ,
ಮಾಜಿ ಎಂಎಲ್ಸಿ ಅಮರನಾಥ್ ಪಾಟೀಲ್
ವಿಭಾಗ ಉಸ್ತುವಾರಿ ಸಿದ್ದೇಶ್ ಪಾಟೀಲ್
ಒಕ್ಕಲಿಗ ಅಸ್ಮಿತೆಯ ಮೇಲೆ ಸಂಘಟನೆಗೆ ಬಿಜೆಪಿ ಮುಂದು
ಹಳೆ ಮೈಸೂರು ಭಾಗದ ಬಿಜೆಪಿ ಸಂಘಟನಾ ಪ್ರಯತ್ನಕ್ಕೆ ಪೆಟ್ಟು ಹೆಚ್.ಡಿ. ಕುಮಾರಸ್ವಾಮಿ ನೀಡುತ್ತಿದ್ದಾರೆ. ಈ ಹಿನ್ನೆಲೆ ಒಕ್ಕಲಿಗ ಅಸ್ಮಿತೆಯ ಮೇಲೆ ಸಂಘಟನೆಗೆ ಬಿಜೆಪಿ ಮುಂದಾಗಿದೆ. ಅದಕ್ಕಾಗಿ ನಾಲ್ಕು ರಥಯಾತ್ರೆಗಳ ಪೈಕಿ ಎರಡನ್ನು ಹಳೆ ಮೈಸೂರು ಭಾಗದಿಂದ ಆರಂಭಿಸಲು ಬಿಜೆಪಿ ಮುಂದಾಗಿದೆ.
ಬ್ರಾಹ್ಮಣ ಸಿಎಂ ಮೈಂಡ್ ಗೇಮ್ನಿಂದ ಒಕ್ಕಲಿಗ ಮತಗಳು ಜೆಡಿಎಸ್ನತ್ತಲೇ ಕ್ರೋಢೀಕರಣವಾಗುವ ಆತಂಕ ಬಿಜೆಪಿ ಎದುರಿಸುತ್ತಿದೆ. ಹೀಗಾಗಿ ಹಳೆ ಮೈಸೂರು ಭಾಗದಲ್ಲಿ ಇನ್ನಷ್ಟು ಅಗ್ರೆಸ್ಸಿವ್ ಆಗಿ ಪಕ್ಷ ಸಂಘಟನೆಗೆ ಬಿಜೆಪಿ ನಿರ್ಧರಿಸಿದೆ. ವಿಜಯ ಸಂಕಲ್ಪ ಅಭಿಯಾನ ಮತ್ತು ಮನೆ ಮನೆ ಸಂಪರ್ಕ ಅಭಿಯಾನ ಚುರುಕುಗೊಳಿಸಲು ಸೂಚನೆ ನೀಡಿದೆ.
ಈಗಾಗಲೇ ಬಿಜೆಪಿ ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆತರಲು ಪ್ಲಾನ್ ಮಾಡಿದ್ದಾರೆ. ಮೋದಿ ಕಾರ್ಯಕ್ರಮ ಮತ್ತಷ್ಟು ಪರಿಣಾಮಕಾರಿಯಾಗಿ ಸಂಘಟಿಸಲು ನಿರ್ಧರಿಸಲಾಗಿದೆ. ಹಳೆ ಮೈಸೂರು ಭಾಗದ ಎರಡು ರಥಯಾತ್ರೆಯ ಪೈಕಿ ಒಂದು ಕೆಂಪೇಗೌಡ ಪ್ರತಿಮೆ ಬಳಿಯಿಂದ ಆರಂಭವಾಗುತ್ತದೆ. ಇನ್ನೊಂದು ಮಲೆ ಮಹದೇಶ್ವರ ಬೆಟ್ಟದಿಂದ ಆರಂಭವಾಗಲಿದೆ. ಒಕ್ಕಲಿಗ ಮತ್ತು ದಲಿತ ವೋಟ್ ಬ್ಯಾಂಕ್ ದೃಷ್ಟಿಯಿರಿಸಿಕೊಂಡು ಹಳೆ ಮೈಸೂರು ಭಾಗದ ಯಾತ್ರೆಯ ರೂಟ್ ಮ್ಯಾಪ್ ಸಿದ್ದಪಡಿಸಿದೆ.
ದಲಿತರ ಮತ ಸೆಳೆಯಲು ಚಾಮರಾಜನಗರದಲ್ಲಿ ಬಿಜೆಪಿ ರಥಯಾತ್ರೆ
ದಲಿತರ ಮತ ಸೆಳೆಯಲು ಚಾಮರಾಜನಗರದಲ್ಲಿ ಬಿಜೆಪಿ ರಥಯಾತ್ರೆ ಮಾಡಲು ಮುಂದಾಗಿದೆ. ದಲಿತ ನಾಯಕರ ಮುಂದಾಳತ್ವದಲ್ಲಿ ರಥಯಾತ್ರೆ ನಡೆಯಲಿದೆ. ಎನ್ ಮಹೇಶ್, ಚಲವಾದಿ ನಾರಾಯಣಸ್ವಾಮಿ ಸೇರಿದಂತೆ ದಲಿತರಿಗೆ ಮಣೆ ಹಾಕಲಾಗಿದೆ. ಒಕ್ಕಲಿಗ ಮತ್ತು ದಲಿತ ಕಾಂಬಿನೆಷನ್ ಮೂಲಕ ಜೆಡಿಎಸ್ಗೆ ಕೌಂಟರ್ ನೀಡಲು ಹೊರಟಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:20 am, Wed, 8 February 23