ರಾಹುಲ್ ಗಾಂಧಿ ಜೊತೆ ಸತೀಶ್ ಸೈಲ್; ಇದು ಕಾಂಗ್ರೆಸ್‌ನ ಗುಣ ಎಂದ ಬಿಜೆಪಿ ನಾಯಕ ಆರ್. ಅಶೋಕ್
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅಪರಾಧಿ ಎಂದು ಕೋರ್ಟ್ ಇಂದು ಘೋಷಿಸಿದೆ. ಅವರಿಗೆ 7 ವರ್ಷ ಜೈಲು ಶಿಕ್ಷೆಯನ್ನೂ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಆರ್. ಅಶೋಕ್ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ಬೆಂಗಳೂರು: 200 ಕೋಟಿ ರೂ. ಮೌಲ್ಯದ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಇಂದು ಮಹತ್ವದ ತೀರ್ಪು ಹೊರಬಿದ್ದಿದೆ. ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅಪರಾಧಿ ಎಂದು ಘೋಷಿಸಿದ್ದ ಜನಪ್ರತಿನಿಧಿಗಳ ಕೋರ್ಟ್ ಇಂದು 7 ವರ್ಷ ಜೈಲು ಶಿಕ್ಷೆ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಎಕ್ಸ್ನಲ್ಲಿ ರಾಹುಲ್ ಗಾಂಧಿ ಜೊತೆ ಸತೀಶ್ ಸೈಲ್ ಇರುವ ಫೋಟೋವೊಂದನ್ನು ಪೋಸ್ಟ್ ಮಾಡಿರುವ ವಿಪಕ್ಷ ನಾಯಕ ಆರ್. ಅಶೋಕ್ ಇದು ಕಾಂಗ್ರೆಸ್‌ನ ಡಿಎನ್‌ಎ ಎಂದು ಟೀಕಿಸಿದ್ದಾರೆ.
ಈ ಫೋಟೋದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಇರುವ ವ್ಯಕ್ತಿ ಸತೀಶ್ ಸೈಲ್. ಇವರು ಕರ್ನಾಟಕದ ಕಾಂಗ್ರೆಸ್ ಶಾಸಕ. 200 ಕೋಟಿ ರೂ. ಮೌಲ್ಯದ ಕಬ್ಬಿಣದ ಅದಿರನ್ನು ಕದ್ದು ಅಕ್ರಮವಾಗಿ ರಫ್ತು ಮಾಡಿದ ಅಪರಾಧಿ. ಇದೀಗ ಆತನಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಇದು ಕಾಂಗ್ರೆಸ್‌ನ ಗುಣ ಮತ್ತು ಡಿಎನ್‌ಎ ಎಂದು ಆರ್. ಅಶೋಕ್ ಪೋಸ್ಟ್ ಮಾಡಿದ್ದಾರೆ.
The man in the picture with @RahulGandhi is Mr.Satish Sail, @INCIndia MLA from Karnataka, convicted of stealing and illegally exporting Rs.200 Cr worth of iron ore.
He is now sentenced to 7 years in jail.
This is the character and DNA of Congress. pic.twitter.com/u6kDt3GDlI
— R. Ashoka (@RAshokaBJP) October 26, 2024
ಬೇಲೆಕೇರಿ ಬಂದರಿನಿಂದ ಅದಿರನ್ನು ಅಕ್ರಮವಾಗಿ ವಿದೇಶಕ್ಕೆ ಸಾಗಾಟ ಮಾಡಿದ ಪ್ರಕರಣದಲ್ಲಿ ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅಪರಾಧಿ ಎಂದು ಜನಪತ್ರಿನಿಧಿಗಳ ವಿಶೇಷ ನ್ಯಾಯಾಲಯ ಈ ಹಿಂದೆ ತೀರ್ಪು ನೀಡಿತ್ತು. ಇಂದು ಶಾಸಕ ಸತೀಶ್ ಸೈಲ್ ಸೇರಿದಂತೆ 7 ಜನರ ಶಿಕ್ಷೆ ಪ್ರಮಾಣ ಪ್ರಕಟಿಸಿದೆ. ಶಾಸಕ ಸತೀಶ್ ಸೈಲ್ಗೆ 7 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ.
ಇದನ್ನೂ ಓದಿ: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಕಾಂಗ್ರೆಸ್ ಭ್ರಷ್ಟತೆಗೆ ಹಿಡಿದ ಕೈಗನ್ನಡಿ; ಪ್ರಲ್ಹಾದ್ ಜೋಶಿ ಟೀಕೆ
ಪ್ರಕರಣದ ವಾದ-ಪ್ರತಿವಾದ ಆಲಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಕ್ಟೋಬರ್ 24 ರಂದು ಶಾಸಕ ಸತೀಶ್ ಸೈಲ್ ದೋಷಿ ಎಂದು ತೀರ್ಪು ನೀಡಿತ್ತು. ಇಂದು ತೀರ್ಪು ಪ್ರಕಟವಾಗಿದ್ದರೂ ಸತೀಶ ಸೈಲ್ ಅವರು ಹೈಕೋರ್ಟಿನಲ್ಲಿ ತೀರ್ಪನ್ನು ಪ್ರಶ್ನಿಸಿದ ನಂತರ ಹೈಕೋರ್ಟ್ ಯಾವ ತೀರ್ಮಾನಕ್ಕೆ ಬರುತ್ತದೆ ಎಂಬುದರ ಮೇಲೆ ಸತೀಶ್ ಸೈಲ್ ಅವರ ರಾಜಕೀಯ ಭವಿಷ್ಯ ನಿಂತಿದೆ.
ಏನಿದು ಪ್ರಕರಣ?:
ಬಳ್ಳಾರಿ, ಹೊಸಪೇಟೆ, ಸಂಡೂರು, ಚಿತ್ರದುರ್ಗದ ಅರಣ್ಯ ಪ್ರದೇಶಗಳಿಂದ ಅಕ್ರಮವಾಗಿ ಭಾರಿ ಪ್ರಮಾಣದ ಕಬ್ಬಿಣದ ಅದಿರು ವಿದೇಶಕ್ಕೆ ರಫ್ತಾಗುತ್ತಿತ್ತು. 2010ರ ಮಾರ್ಚ್ 20ರಂದು ಅರಣ್ಯ ಇಲಾಖೆ 350 ಕೋಟಿ ರೂ. ಮೌಲ್ಯದ ಬರೋಬ್ಬರಿ 8.5 ಲಕ್ಷ ಮೆಟ್ರಿಕ್ ಟನ್ ಅದಿರು ಮುಟ್ಟುಗೋಲು ಹಾಕಿಕೊಂಡಿತ್ತು.
ಈ ಅದಿರನ್ನು ಕಾಯ್ದುಕೊಳ್ಳುವಂತೆ ಬೇಲೆಕೇರಿ ಬಂದರು ನಿರ್ವಹಿಸುತ್ತಿದ್ದ ಬಂದರು ಇಲಾಖೆಗೆ ಅರಣ್ಯ ಇಲಾಖೆಯು ಸೂಚನೆಯನ್ನು ನೀಡಿತ್ತು. ಕೆಲವು ತಿಂಗಳ ಬಳಿಕ ಅರಣ್ಯ ಇಲಾಖೆ ತಂಡ ಮರು ಪರಿಶೀಲಿಸಿದಾಗ ಬಂದರಿನಲ್ಲಿ ಕೇವಲ 2 ಲಕ್ಷ ಮೆಟ್ರಿಕ್ ಟನ್ ಅದಿರು ಮಾತ್ರ ಇತ್ತು. 250 ಕೋಟಿ ರೂ. ಅದಿರು ನಾಪತ್ತೆ ಬಗ್ಗೆ ಬಂದರು ಅಧಿಕಾರಿ, ಅದಿರು ಸಾಗಣೆ ಕಂಪನಿಗಳ ವಿರುದ್ಧ ಅರಣ್ಯ ಇಲಾಖೆಯು ದೂರು ನೀಡಿತ್ತು.
ಇದನ್ನೂ ಓದಿ: ಬೇಲೆಕೇರಿ ಅದಿರು ಅಕ್ರಮ: ಸತೀಶ್ ಸೈಲ್ ಪಾತ್ರವೇನು? 14 ವರ್ಷ ಹಿಂದಿನ ಪ್ರಕರಣದ ಸಮಗ್ರ ಮಾಹಿತಿ ಇಲ್ಲಿದೆ
ಈ ಅಕ್ರಮವೆಸಗಿದ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತರು ಸರ್ಕಾರಕ್ಕೆ ವರದಿ ಸಲ್ಲಿಸಿ ಒತ್ತಾಯ ಮಾಡಿದ್ದರು. ಆಗ ಹಗರಣ ಬೆಳಕಿಗೆ ಬಂದಿತ್ತು. 2010ರ ಜೂ.23ರಂದು ಸರ್ಕಾರ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿತ್ತು. 2011ರಲ್ಲಿ ಪ್ರಕರಣವನ್ನು ಸುಪ್ರೀಂಕೋರ್ಟ್ ಸಿಬಿಐಗೆ ವಹಿಸಿತ್ತು.
ಸುಪ್ರೀಂಕೋರ್ಟ್ 2009ರಿಂದ ಮೇ 2010ರ ನಡುವೆ ರಾಜ್ಯದಲ್ಲಿನ ನಡೆದ ಅಕ್ರಮ ಗಣಿಗಾರಿಕೆ ಮತ್ತು ಅಕ್ರಮ ಅದಿರು ಸಾಗಣೆ ಕುರಿತು ತನಿಖೆ ನಡೆಸುವಂತೆ ಸೂಚಿಸಿತ್ತು. ಅದರಂತೆ ಸಿಬಿಐ 2013ರ ಸೆ.13 ರಂದು ಕೇಸ್ ದಾಖಲಿಸಿ ತನಿಖೆಕೈಗೊಂಡಿತ್ತು. ಸತೀಶ್ ಸೈಲ್ ಮಾಲಿಕತ್ವದ ಕಂಪನಿ ಸುಮಾರು 7.23 ಲಕ್ಷ ಟನ್ ಮೆಟ್ರಿಕ್ ಅದಿರನ್ನು ಬೇಲೆಕೇರಿ ಮೂಲಕ ವಿದೇಶಕ್ಕೆ ರಫ್ತು ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿತ್ತು. ಬೇಲೆಕೇರಿ ಬಂದರಿನ ಮೂಲಕ ಸುಮಾರು 88.06 ಲಕ್ಷ ಮೆಟ್ರಿಕ್ ಟನ್ ಅದಿರನ್ನು 73 ರಫ್ತು ಕಂಪನಿಗಳ ಮೂಲಕ ವಿದೇಶಕ್ಕೆ ರವಾನೆ ಮಾಡಲಾಗಿತ್ತು ಎಂಬುದನ್ನು ಕೇಂದ್ರೀಯ ಸಮಿತಿ ಪ್ರಾಧಿಕಾರ (ಸಿಇಸಿ) ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಆರೋಪಿಗಳ ಜತೆ ಸಂಚು ರೂಪಿಸಿ ಸತೀಶ್ ಸೈಲ್ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ್ದರು. ಹೀಗೆ ರಫ್ತಾಗಿರುವ ಅದಿರಿನಲ್ಲಿ 7.23 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಸತೀಶ್ ಸೈಲ್ ಒಡೆತನದ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ.ಲಿ. ಕಂಪನಿಯೇ ರಫ್ತು ಮಾಡಿತ್ತು ಎಂದು ಸಿಬಿಐ ಆರೋಪಿಸಿತ್ತು. ಆ ಪ್ರಕರಣದಲ್ಲಿ ಸತೀಶ್ ಸೈಲ್ ಅಪರಾಧಿ ಎಂದು ಸಾಬೀತಾಗಿದೆ.
ಇನ್ನಷ್ಟು ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ