ಎದುರಾಳಿಗಳ ಹಣಿಯಲು HIV ಸೋಂಕಿತರಿಂದ ಹನಿಟ್ರ್ಯಾಪ್? ಬಿಜೆಪಿ ಶಾಸಕನ ವಿರುದ್ಧ ಸ್ಫೋಟಕ ಆರೋಪ

ರಾಜಕಾರಣ ಅಂದ್ರೆ, ಹಣಿಯೋಕೆ ನೂರಾರು ತಂತ್ರ-ಪ್ರತಿತಂತ್ರ ಹೆಣಿಯೋದು ಕಾಮನ್. ಆರೋಪ-ಪ್ರತ್ಯಾರೋಪಗಳಂತೂ ತೀರ ಮಾಮೂಲಿ. ಆದ್ರೆ, ಬಿಜೆಪಿ ಶಾಸಕ ಮುನಿರತ್ನ ಪ್ರಕರಣದಲ್ಲಿ ಇದೆಲ್ಲವೂ ತಲೆಕೆಳಗಾಗಿದೆ. ಸಂತ್ರಸ್ತ್ರೆ ಬಿಚ್ಚಿಡ್ತಿರೋ ಒಂದೊಂದು ಮಾಹಿತಿಯೂ ರಾಜಕಾರಣಿಗಳ ಎದೆ ನಡುಗಿಸುತ್ತಿದೆ. ಅತ್ಯಾಚಾರ ಮಾಡಿ, ಅದೇ ಸಂತ್ರಸ್ತ್ರರಿಂದ ಖೆಡ್ಡಾ ತೋಡ್ತಿದ್ದ ಆರೋಪದಲ್ಲಿ, ಮತ್ತೊಂದು ಸ್ಫೋಟಕ ವಿಚಾರವೇ ಬಯಲಾಗಿದೆ. ಈ ಕುರಿತು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಎದುರಾಳಿಗಳ ಹಣಿಯಲು HIV ಸೋಂಕಿತರಿಂದ ಹನಿಟ್ರ್ಯಾಪ್? ಬಿಜೆಪಿ ಶಾಸಕನ ವಿರುದ್ಧ ಸ್ಫೋಟಕ ಆರೋಪ
ಮುನಿರತ್ನ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Sep 20, 2024 | 9:18 PM

ಬೆಂಗಳೂರು, (ಸೆಪ್ಟೆಂಬರ್ 20): ಹಿಂದೆಂದೂ ಕಂಡಿರಲಿಲ್ಲ. ಯಾರೊಬ್ಬರೂ ಕೇಳಿರಲಿಲ್ಲ. ಇಷ್ಟು ದಿನ ಹನಿಟ್ರ್ಯಾಪ್ ಅಂದ್ರೆ, ಬೆಚ್ಚಿ ಬೀಳ್ತಿದ್ದವರ ಮುಂದೆ ಇದ್ಯಾವ ಮಹಾ ಅನ್ನೋ ಲೆವಲ್​ಗೆ ಪ್ರಕರಣವೊಂದು ತೆರೆದುಕೊಳ್ತಿದೆ. ಹೌದು.. ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದಲ್ಲಿ ಸ್ಫೋಟಕ ಆರೋಪವೊಂದು ಕೇಳಿಬಂದಿದೆ. ಸಂತ್ರಸ್ತ್ರೆ ಕೊಟ್ಟಿರುವ ದೂರು ಕಂಡು ಇಡೀ ರಾಷ್ಟ್ರ ರಾಜಕಾರಣ ದಂಗು ಬಡಿದಂತಾಗಿದೆ. ಮುನಿರತ್ನ ವಿರುದ್ಧ ಕೇಳಿಬಂದಿರೋ ಆರೋಪ ನೋಡಿದ್ರೆ, ಹೀಗೂ ಮಾಡುವುದಕ್ಕೆ ಸಾಧ್ಯವೇ? ಇಂತಹದ್ದು ನಡೆಯುತ್ತಾ? ಎನ್ನುವ ಭೀತಿ ಹುಟ್ಟಿದೆ.

ಜಾಮೀನು ಸಿಕ್ತಿದ್ದಂತೆ ಅರೆಸ್ಟ್!

ಬಿಜೆಪಿ ಶಾಸಕ ಮುನಿರತ್ನಗೆ ಜಾತಿ ನಿಂದನೆ, ಜೀವ ಬೆದರಿಕೆ ಕೇಸ್​ನಲ್ಲಿ ನಿನ್ನೆ (ಸೆ.19) ಜಾಮೀನು ಸಿಕ್ಕಿತ್ತು. ಇಂದು ಇನ್ನೇನು ಜೈಲಿನಿಂದ ಮೈ ಮುರಿದು ಹೊರಬರಬೇಕು ಅನ್ನುವಷ್ಟರಲ್ಲಿ ಮತ್ತೆ ಅರೆಸ್ಟ್ ಆಗಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಮುನಿರತ್ನರನ್ನ ಮತ್ತೆ ಅರೆಸ್ಟ್ ಮಾಡಿದ್ರು. ಇವತ್ತು ಹಾರೋಹಳ್ಳಿ ಬಳಿ ಇರುವ ಆಸ್ಪತ್ರೆಯಲ್ಲಿ ಒಂದೂವರೆ ಗಂಟೆಗಳ ಕಾಲ ವೈದ್ಯಕೀಯ ಪರೀಕ್ಷೆ ನಡೆಸಿದ್ರು. ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಕೋರಿದ್ದ ಅರ್ಜಿ ವಿಚಾರಣೆಯನ್ನ ಸೆಪ್ಟೆಂಬರ್ 23ಕ್ಕೆ ಮುಂದೂಡಲಾಗಿದೆ. ಮತ್ತೊಂದ್ಕಡೆ ದೂರುದಾರೆ ಮಹಿಳೆಯನ್ನ ರಾಮನಗರ ಜಿಲ್ಲೆಯ ರೆಸಾರ್ಟ್​​ಗೆ ಕರೆದೊಯ್ದು ಮಹಜರು ನಡೆಸಲಾಗಿದೆ.

ಇದನ್ನೂ ಓದಿ: ಜೈಲು ಬಾಗಿಲಲ್ಲೇ ಬಂಧನ: ಠಾಣೆಯಲ್ಲೇ ಶಾಸಕ ಮುನಿರತ್ನಗೆ ಚಾಪೆ, ದಿಂಬು ವ್ಯವಸ್ಥೆ

ಎದುರಾಳಿಗಳ ಹಣಿಯಲು HIV ಸೋಂಕಿತರಿಂದ ಹನಿಟ್ರ್ಯಾಪ್?

ಮುನಿರತ್ನ ವಿರುದ್ಧ ಭಯಾನಕ ಆರೋಪವೇ ಕೇಳಿಬಂದಿದೆ. ಅದೇನಂದ್ರೆ ಮುನಿರತ್ನ ತಮ್ಮ ಎದುರಾಳಿಗಳನ್ನ ಹಣಿಯೋಕೆ HIV ಸೋಂಕಿತರನ್ನ ಬಿಡುತ್ತಿದ್ದರು ಎನ್ನುವ ಆರೋಪ ಕೇಳಿಬಂದಿದೆ. ಇನ್ಸ್​ಪೆಕ್ಟರ್​ಗಳು, ಜನಪ್ರತಿನಿಧಿಗಳು, ಕಾರ್ಪೊರೇಟರ್​ಗಳಿಗೂ ಮುನಿರತ್ನ ಗಾಳ ಹಾಕುತ್ತಿದ್ದರಂತೆ. ಅಷ್ಟೇ ಅಲ್ಲದೆ ಹೆಚ್ಐವಿ ದೃಢಪಟ್ಟ ಸೋಂಕಿತರನ್ನೇ ಕಳುಹಿಸಿ ಹನಿಟ್ರ್ಯಾಪ್ ಮಾಡುತ್ತಿದ್ದರಂತೆ. ಹೀಗಂತಾ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಈ ಆರೋಪ ಹೊರ ಬರುತ್ತಿದ್ದಂತೆಯೇ ರಾಜ್ಯ ರಾಜಕಾರಣ ರಣರಣ ಅಂತಿದೆ.

ಅಶೋಕ್​ಗೆ ಏಡ್ಸ್ ಸೋಂಕು ಅಂಟಿಸಲು ಯತ್ನ

ಮುನಿರತ್ನ ಬಿಜೆಪಿ ನಾಯಕರ ವಿರುದ್ಧವೇ ಏಡ್ಸ್​ ಅಂಟಿಸೋದಕ್ಕೆ ಯತ್ನಿಸಿದ್ದ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿ ಹೊಸ ಬಾಂಬ್ ಸಿಡಿಸಿದೆ.ಅಶೋಕ್ ಅವರಿಗೆ ಏಡ್ಸ್ ಸೋಂಕು ತಗುಲಿಸಲು ಪ್ರಯತ್ನಿಸಿದ್ದ ಸಂಗತಿ ಹೊರಬಂದಿದೆ ಎಂದು ಬರೆದುಕೊಂಡಿದೆ. ಮುನಿರತ್ನರ ದ್ವೇಷದ ರಾಜಕೀಯಕ್ಕೆ, ಭ್ರಷ್ಟಾಚಾರಕ್ಕೆ ಗುರಿಯಾದವರಲ್ಲಿ ಬಿಜೆಪಿ ನಾಯಕರೂ ಹೊರತಾಗಿಲ್ಲ. ಮಾಧ್ಯಮ ವರದಿಗಳ ಪ್ರಕಾರ ಸ್ವತಃ ಬಿಜೆಪಿ ನಾಯಕ ಅಶೋಕ್ ಅವರಿಗೆ ಏಡ್ಸ್ ಸೋಂಕು ತಗುಲಿಸಲು ಪ್ರಯತ್ನಿಸಿದ್ದ ಅಘಾತಕಾರಿ ಸಂಗತಿ ಹೊರಬಂದಿದೆ. ಇಂತಹ ವಿಕೃತರತ್ನನನ್ನು ತಲೆ ಮೇಲೆ ಹೊತ್ತು ಮೆರೆಸುವ ಬಿಜೆಪಿ ಪಕ್ಷದ ನಾಯಕರು HIV ಪರೀಕ್ಷೆ ಮಾಡಿಸಿಕೊಂಡು ಏಡ್ಸ್ ನಿಯಂತ್ರಣದ ಅಭಿಯಾನಕ್ಕೆ ಸಹಕರಿಸಬೇಕು ಎಂದು ಟ್ವೀಟ್ ಮಾಡಿದೆ.

ಯಾವಾಗ ಮುನಿರತ್ನ HIV ಸೋಂಕಿತರನ್ನ ಹನಿಟ್ರ್ಯಾಪ್​ಗೆ ಬಿಡುತ್ತಿದ್ದ ಎನ್ನುವ ವಿಚಾರ ಕಿವಿಗೆ ಬಿತ್ತೋ, ಕಾಂಗ್ರೆಸ್ ನಾಯಕರು ಕಣ್ಣು ಕೆಂಪಾಗಿದೆ. ಜೆಡಿಎಸ್-ಬಿಜೆಪಿ ನಾಯಕರನ್ನ ಎಳೆತಂದಿರೋ ಕೈ ಕಲಿಗಳು ಮಾತಲ್ಲೇ ಕತ್ತಿ ಝಳಪಿಸಿದ್ದಾರೆ. ಕಾಂಗ್ರೆಸ್​​ ನಾಯಕರ ಆರೋಪಗಳಿಗೆ ಬಿಜೆಪಿ ನಾಯಕರು ತಿರುಗೇಟು ಕೊಟ್ಟಿದ್ದಾರೆ. ಮುನಿರತ್ನ ಪ್ರಕರಣದಿಂದ ಅಂತರ ಕಾಯ್ದುಕೊಂಡೇ ಕಾಂಗ್ರೆಸ್ ವಿರುದ್ಧ ವಾಗ್ಬಾಣ ಬಿಡ್ತಿದ್ದಾರೆ.

ಬಿಜೆಪಿ-ಕಾಂಗ್ರೆಸ್ ಮಧ್ಯೆ ಒಕ್ಕಲಿಗರ ಫೈಟ್!

ಮುನಿರತ್ನ ವಿರುದ್ಧ ಕಾಂಗ್ರೆಸ್ ಒಕ್ಕಲಿಗ ಅಸ್ತ್ರ ಪ್ರಯೋಗ ಮಾಡ್ತಿದೆ. ಇದರ ಭಾಗವಾಗಿಯೇ ಒಕ್ಕಲಿಗ ಸಮುದಾಯದ ಸಚಿವರು, ಶಾಸಕರ ನಿಯೋಗ ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿದೆ. ಅಟ್ರಾಸಿಟಿ ಕೇಸ್ ದುರ್ಬಳಕೆ ಸಂಬಂಧ ಪ್ರಕರಣ ತನಿಖೆಗೆ ಎಸ್ಐಟಿಗೆ ವಹಿಸುವಂತೆ ಸಿಎಂ ಮುಂದೆ ಪಟ್ಟು ಹಿಡಿದಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟ ವಿಪಕ್ಷ ನಾಯಕ ಅಶೋಕ್, ಕಾಂಗ್ರೆಸ್ ಅಂದ್ರೆ ಡಬಲ್ ಸ್ಟ್ಯಾಂಡರ್ಡ್ ಅಂತಾ ಜರಿದಿದ್ದಾರೆ.

ಜಾತಿ ನಿಂದನೆ..ಅಟ್ರಾಸಿಟಿ..ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿರುವ ಮುನಿರತ್ನ ವಿರುದ್ಧ ಘನ ಗಂಭೀರವಾದ ಆರೋಪವೇ ಕೇಳಿಬಂದಿದೆ. ಒಂದು ವೇಳೆ ಸಂತ್ರಸ್ತ್ರೆ HIV ಸೋಂಕಿತರ ಬಗ್ಗೆ ಹೇಳಿರುವುದು ನಿಜವಾದ್ರೆ, ಬಿಜೆಪಿ ಶಾಸಕನಿಗೆ ಮತ್ತಷ್ಟು ಉರುಳು ಸುತ್ತಿಕೊಳ್ಳೋದಂತೂ ಸುಳ್ಳಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.