ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ ಬೇಗ ಪರಿಹಾರ ಬಿಡುಗಡೆ ಮಾಡಬೇಕು: ಸಿಎಂ ಸಿದ್ದರಾಮಯ್ಯಗೆ ತೇಜಸ್ವಿ ಸೂರ್ಯ ಆಗ್ರಹ

| Updated By: Ganapathi Sharma

Updated on: Dec 04, 2023 | 7:35 PM

ಮಾಧ್ಯಮದವರ ಮುಂದೆಯೇ ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ಪರಿಹಾರ ಕೊಡುತ್ತೇವೆ ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದರು. ಇದೀಗ ಅವರು ಯಾರೆಂಬುದೇ ಗೊತ್ತಿಲ್ಲವೆಂಬ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಮುಖ್ಯಮಂತ್ರಿಗಳು ಎಲ್ಲರ ಕ್ಷಮೆ ಕೇಳಬೇಕು ಎಂದು ತೇಜಸ್ವಿ ಸೂರ್ಯ ಆಗ್ರಹಿಸಿದರು.

ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ ಬೇಗ ಪರಿಹಾರ ಬಿಡುಗಡೆ ಮಾಡಬೇಕು: ಸಿಎಂ ಸಿದ್ದರಾಮಯ್ಯಗೆ ತೇಜಸ್ವಿ ಸೂರ್ಯ ಆಗ್ರಹ
ತೇಜಸ್ವಿ ಸೂರ್ಯ
Follow us on

ನವದೆಹಲಿ, ಡಿಸೆಂಬರ್ 4: ಕ್ಯಾಪ್ಟನ್ ಪ್ರಾಂಜಲ್ (Capt Pranjal) ಯಾರೆಂದೇ ಗೊತ್ತಿಲ್ಲವೆಂಬ ರೀತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಮಾಧ್ಯಮಗಳ ಮುಂದೆ ಮಾತನಾಡಿದ್ದು ಬಹಳ ಬೇಸರ ತರಿಸಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಹೇಳಿದರು. ದೆಹಲಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುತಾತ್ಮ ಯೋಧ ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದರು. ಈ ಬಗ್ಗೆ ವಿಚಾರಿಸಲು 2 ದಿನದ ಹಿಂದೆ ನಾನು ಪ್ರಾಂಜಲ್ ತಂದೆಗೆ ಫೋನ್ ಮಾಡಿದ್ದೆ. ಸರ್ಕಾರದ ವತಿಯಿಂದ ಯಾರಾದರೂ ಫೋನ್ ಮಾಡಿ ಮಾತನಾಡಿದರೇ ಎಂದು ಕೇಳಿದೆ. ಅವರ ತಂದೆ ‘ಇವತ್ತಿನವರೆಗೂ ಸಹ ನನಗೆ ಯಾವುದೇ ಫೋನ್ ಬಂದಿಲ್ಲ’ ಅಂತ ಹೇಳಿದರು ಎಂದರು.

ಪ್ರಾಂಜಲ್ ಕುಟುಂಬಕ್ಕೆ ಪರಿಹಾರದ ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ ಎಂದು ಸೂರ್ಯ ಹೇಳಿದರು.

ಪರಿಹಾರದ ಹಣ ಬಿಡುಗಡೆ ವಿಚಾರವಾಗಿ ಮಾಧ್ಯಮದವರು ಮುಖ್ಯಮಂತ್ರಿಗಳ ಬಳಿ ಪ್ರಶ್ನೆ ಕೇಳಿದರೆ, ‘ಯಾರು ಪ್ರಾಂಜಲ್ ಅಂದ್ರೆ, ನಾವೆಲ್ಲಿ ಪರಿಹಾರ ಕೊಡ್ತೀವಿ ಅಂತ ಹೇಳಿದ್ವಿ’ ಎಂದು ಸಿಎಂ ಬೇಜವಾಬ್ದಾರಿಯುತವಾಗಿ ಮಾತನಾಡಿದ್ದಾರೆ. ಓರ್ವ ಯೋಧನ ಬಗ್ಗೆ ಹೀಗೆ ಮುಖ್ಯಮಂತ್ರಿಗಳು ಮಾತನಾಡಿದ್ದು ನೋಡಿ ಬಹಳ ಬೇಸರವಾಗಿದೆ ಎಂದು ತೇಜಸ್ವಿ ಸೂರ್ಯ ಹೇಳಿದರು.

ಇದನ್ನೂ ಓದಿ: ದೇಶಕ್ಕಾಗಿ ಮಣಿದ ವೀರಯೋಧ ಕ್ಯಾಪ್ಟನ್ ಪ್ರಾಂಜಲ್ ತಂದೆ ಹೇಳಿದ್ದೇನು ಗೊತ್ತಾ?

ಮಾಧ್ಯಮದವರ ಮುಂದೆಯೇ ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ಪರಿಹಾರ ಕೊಡುತ್ತೇವೆ ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದರು. ಇದೀಗ ಅವರು ಯಾರೆಂಬುದೇ ಗೊತ್ತಿಲ್ಲವೆಂಬ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಇದರಿಂದ ಬೇರೆ ಯೋಧರಿಗೂ ಸಹ ನನ್ನ ಪರಿಸ್ಥಿತಿ ಹೀಗಾದರೆ ಎಂಬ ಯೋಚನೆ ಮೂಡಬಹುದು. ಮುಖ್ಯಮಂತ್ರಿಗಳು ಎಲ್ಲರ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದರು.

ಈ ಕೂಡಲೇ ಪರಿಹಾರದ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸುತ್ತೇನೆ. ಪ್ರಾಂಜಲ್ ಮೃತದೇಹ ಬೆಂಗಳೂರಿಗೆ ಬಂದಾಗ ಮುಖ್ಯಮಂತ್ರಿಗಳ ಕಣ್ಣಲ್ಲೂ ಸಹ ನೀರಿತ್ತು. ಅವರೂ ಸಹ ಭಾವುಕರಾಗಿದ್ದರು. ಆದರೆ, 15 ದಿನ ಆಯ್ತು, ಇನ್ನೂ ಪರಿಹಾರ ಬಿಡುಗಡೆ ಮಾಡಿಲ್ಲ. ಆದಷ್ಟು ಬೇಗ ಪರಿಹಾರ ಹಣ ಬಿಡುಗಡೆ ಮಾಡಬೇಕಾಗಿರುವುದು ಅವರ ಜವಾಬ್ದಾರಿ ಎಂದು ಸೂರ್ಯ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:35 pm, Mon, 4 December 23