ಯಡಿಯೂರಪ್ಪ ಚೆನ್ನಾಗಿ ಕೆಲಸ ಮಾಡ್ತಿದ್ದಾರೆ..ಕರ್ನಾಟಕ ರಾಜಕೀಯದಲ್ಲಿ ಅಸ್ಥಿರತೆ ಇಲ್ಲ: ಜೆ.ಪಿ.ನಡ್ಡಾ
CM B.S.Yediyurappa: ಬಿಎಸ್ವೈ ಎಲ್ಲವನ್ನೂ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. 2 ವರ್ಷ ಪೂರೈಸಿದ ಅವರನ್ನು ಶ್ಲಾಘಿಸಬೇಕು. ಕರ್ನಾಟಕದಲ್ಲಿ ರಾಜಕೀಯ ಅಸ್ಥಿರತೆ ಇಲ್ಲ ಎಂದೂ ಜೆ.ಪಿ.ನಡ್ಡಾ ಹೇಳಿದ್ದು ಈಗ ಅಚ್ಚರಿಗೆ ಕಾರಣವಾಗಿದೆ.
ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ (CM B.S.Yediyurappa) ನವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುತ್ತಾರೆ. ಇಂದು ಸಂಜೆ ಹೊತ್ತಿಗೆ ಅದರ ಬಗ್ಗೆ ಸ್ಪಷ್ಟ ನಿರ್ಧಾರ ಹೊರಬರಲಿದೆ ಎಂಬ ಮಾತು ಕೇಳಿಬಂದಿತ್ತು. ಆದರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ(J.P.Nadda) ಗೋವಾದಲ್ಲಿ ನೀಡಿದ ಹೇಳಿಕೆ ತುಂಬ ಕುತೂಹಲ ಮೂಡಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಯಾವುದೇ ರಾಜಕೀಯ ಅಸ್ಥಿರತೆ ಇಲ್ಲ ಎಂದಿದ್ದಾರೆ.
ಅಷ್ಟೇ ಅಲ್ಲ, ಸಿಎಂ ಯಡಿಯೂರಪ್ಪನವರಿಗೆ ಜೆ.ಪಿ.ನಡ್ಡಾ ಶಹಬಾಸ್ಗಿರಿಯನ್ನೂ ಕೊಟ್ಟಿದ್ದಾರೆ. ಬಿಎಸ್ವೈ ಎಲ್ಲವನ್ನೂ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. 2 ವರ್ಷ ಪೂರೈಸಿದ ಅವರನ್ನು ಶ್ಲಾಘಿಸಬೇಕು. ಕರ್ನಾಟಕದಲ್ಲಿ ರಾಜಕೀಯ ಅಸ್ಥಿರತೆ ಇಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
ಹಾಗೇ, ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇರುವ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಅವರು, ದೆಹಲಿಯೇ ಬೇರೆ..ಕರ್ನಾಟಕ ರಾಜಕಾರಣವೇ ಬೇರೆ. ಅದನ್ನು ಆಯಾ ರಾಜ್ಯಗಳ ರಾಜಕೀಯ ಸ್ಥಿತಿಗೆ ಅನುಗುಣವಾಗಿ, ಚುನಾವಣೆಯ ವೇಳೆ, ಚುನಾವಣಾ ಸಮಿತಿ ನಿರ್ಧಾರ ಮಾಡುತ್ತದೆ ಎಂದಿದ್ದಾರೆ.
ಕರ್ನಾಟಕ ರಾಜಕಾರಣದಲ್ಲಿ ಕಳೆದ ಒಂದು ವಾರದಿಂದಲೂ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಜೋರಾಗಿ ಚರ್ಚೆ ನಡೆಯುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುತ್ತಾರೋ ಅಥವಾ ರಾಜೀನಾಮೆ ನೀಡುತ್ತಾರೋ ಎಂಬುದು ಇಂದು ಸಂಜೆ ಹೊತ್ತಿಗೆ ನಿರ್ಣಯವಾಗುತ್ತದೆ. ಹೈಕಮಾಂಡ್ನಿಂದ ಅಧಿಕೃತ ಸಂದೇಶ ಬರುತ್ತದೆ ಎಂದೇ ಹೇಳಲಾಗಿತ್ತು. ಆದರೆ ಇಂದು ಗೋವಾಕ್ಕೆ ಹೋಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಮಾತುಗಳನ್ನು ಆಡಿದ್ದು ಸಹಜವಾಗಿಯೇ ಅಚ್ಚರಿಗೆ ಕಾರಣವಾಗಿದೆ. ಅಂದರೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರಾ ಅಥವಾ ಕೊನೇ ಕ್ಷಣದವೆರೆಗೂ ಗುಟ್ಟು ಬಿಟ್ಟುಕೊಡಬಾರದು ಎಂಬ ತೀರ್ಮಾನಕ್ಕೆ ಬಿಜೆಪಿ ಹೈಕಮಾಂಡ್ ಬಂದಿದೆಯಾ ಎಂಬ ಅನುಮಾನ ಕಾಡುತ್ತಿದೆ.
ಇದನ್ನೂ ಓದಿ: ಕುಸ್ತಿಪಟು ಪ್ರಿಯಾ ಮಲಿಕ್ ಅವರಿಗೆ ಅಭಿನಂದಿಸುವ ಭರದಲ್ಲಿ ಎಡವಟ್ಟು ಮಾಡಿಕೊಂಡ ಇಶಾಂತ್ ಶರ್ಮಾ- ಹನುಮಾ ವಿಹಾರಿ
CM BS Yediyurappa: ಬೇರೆ ಯಾರಿಗೂ ಸಿಗದ ಸ್ಥಾನಮಾನ ನನಗೆ ದೊರೆತಿದೆ: ಸಿಎಂ ಯಡಿಯೂರಪ್ಪ
Published On - 4:27 pm, Sun, 25 July 21