ಮೊದಲ ಬಾರಿಗೆ ಡಿಕೆಶಿ ವಿರುದ್ಧ ಅಬ್ಬರಿಸಿ ತೊಡೆ ತಟ್ಟಿದ ವಿಜಯೇಂದ್ರ, ಡಿಸಿಎಂ ತಾಕತ್ತಿಗೆ ಸವಾಲ್

ಕಾಂಗ್ರೆಸ್​​ನಲ್ಲಿ ಸಿಎಂ ಕುರ್ಚಿ ಕದನಕ್ಕೆ ಅಲ್ಪವಿರಾಮದ ಹೊತ್ತಿನಲ್ಲೇ ಸಿಎಂ ಸಿದ್ದರಾಮಯ್ಯಗೆ ಔಟ್​ಗೋಯಿಂಗ್ ಸಿಎಂ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ ನೀಡಿದ್ದು, ಸಿಎಂ ಆಪ್ತರನ್ನ ಕೆರಳಿಸುವಂತೆ ಮಾಡಿದೆ. ಇದರ ನಡುವೆ ವಿಜಯೇಂದ್ರ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಆರೋಪ ಪ್ರತ್ಯಾರೋಪ ತಾರಕಕ್ಕೇರಿದ್ದು, ಉಭಯ ನಾಯಕರು ವೈಯಕ್ತಿಕ ದಾಳಿಗೆ ಇಳಿದಿದ್ದಾರೆ.

ಮೊದಲ ಬಾರಿಗೆ ಡಿಕೆಶಿ ವಿರುದ್ಧ  ಅಬ್ಬರಿಸಿ ತೊಡೆ ತಟ್ಟಿದ ವಿಜಯೇಂದ್ರ, ಡಿಸಿಎಂ ತಾಕತ್ತಿಗೆ ಸವಾಲ್
By Vijayendra

Updated on: Dec 18, 2025 | 4:31 PM

ಬೆಳಗಾವಿ, (ಡಿಸೆಂಬರ್ 18):ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra)ನಡುವಿನ ಮಾತಿನ ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದೇ ಮೊದಲ ಬಾರಿಗೆ ವಿಜಯೇಂದ್ರ, ಡಿಕೆಶಿ ವಿರುದ್ಧ ಗಟ್ಟಿ ಧ್ವನಿಯಲ್ಲಿ ಅಬ್ಬರಿಸಿ ತೊಡೆ ತಟ್ಟಲು ಪ್ರಯತ್ನಿಸಿದ್ದಾರೆ. ರಾಜ್ಯದ ಖಜಾನೆ ಲೂಟಿ ಮಾಡಿ ಕಾಂಗ್ರೆಸ್‌ (Congress) ತನ್ನ ಹೈಕಮಾಂಡ್‌ ತೃಪ್ತಿ ಪಡಿಸುತ್ತಿದೆ ಎಂಬ ವಿಜಯೇಂದ್ರ ಹೇಳಿಕೆಗೆ ಕೆಂಡಮಂಡಲಾದ ಡಿಕೆ ಶಿವಕುಮಾರ್, ಕಲೆಕ್ಷನ್‌ ಕಿಂಗ್‌ ಅಂದ್ರೆ ಅದು ವಿಜಯೇಂದ್ರ. ಅವರಪ್ಪನ ಹೆಸರು ಕೆಡಿಸಿದ್ದು ವಿಜಯೇಂದ್ರ, ಅವರ ಕಲೆಕ್ಷನ್‌, ವರ್ಗಾವಣೆ ದಂಧೆ ಎಲ್ಲವನ್ನ ಬಿಚ್ಚಿಡಬೇಕಾ ಎಂದು ತಿರುಗೇಟು ನೀಡಿದ್ದಾರೆ. ಇದಕ್ಕೆ ವಿಜಯೇಂದ್ರ ಪ್ರತಿಕ್ರಿಯಿಸಿ, ಡಿಕೆಶಿ ತಾಕತ್ತಿಗೆ ಸವಾಲು ಹಾಕಿದ್ದಾರೆ.

ಅಧಿಕಾರದ ಮದ ಮಾತನಾಡಿಸಿದೆ

ಬೆಳಗಾವಿಯಲ್ಲಿಂದು ಮಾತನಾಡಿರುವ  ವಿಜಯೇಂದ್ರ,   ಡಿ.ಕೆ.ಶಿವಕುಮಾರ್ ಮನಬಂದಂತೆ ಮಾತಾಡಿದ್ದಾರೆ. ಅಧಿಕಾರದ ಮದ ಮಾತನಾಡಿಸಿರಬಹುದು.ಯಾರಿಗೋ ದಬ್ಬಾಳಿಕೆ ಮಾಡಿದಂತೆ ನನಗೆ ಮಾಡುವುದಕ್ಕೆ ಬರಬೇಡಿ. ನಾನು ಒಬ್ಬ ಪ್ರತಿನಿಧಿ ಹಾಗೂ ಒಂದು ಪಕ್ಷದ ರಾಜ್ಯಾಧ್ಯಕ್ಷನಾಗಿದ್ದೇನೆ. ಬಿ.ಎಸ್​.ಯಡಿಯೂರಪ್ಪನವರ ವಿರುದ್ಧ ಹೇಗೆ ಷಡ್ಯಂತ್ರ ಮಾಡಿದ್ದರೋ ಗೊತ್ತಿದೆ. ಅದನ್ನೆಲ್ಲಾ ಈಗ ಮಾತನಾಡುವುದಕ್ಕೆ ಬರಬೇಡಿ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ನೋಡಿ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ಡಿಕೆಶಿ ಬಣಕ್ಕೆ ಮತ್ತೆ ರಾಜಣ್ಣ ಟಾಂಗ್

ಡಿಕೆಶಿ ತಾಕತ್ತಿಗೆ ವಿಜಯೇಂದ್ರ ಸವಾಲ್

ಡಿಕೆ ಶಿವಕುಮಾರ್​​ ಅವರಿಂದ ನಾನು ಪಾಠ ಕಲಿಯುವ ಅಗತ್ಯ ಇಲ್ಲ. ಭ್ರಷ್ಟಾಚಾರದ ಪಿತಾಮಹ ಯಾರು ಎಂದು ಕೇಳಿದರೆ ರಾಜ್ಯದಲ್ಲಿ ಡಿಕೆಶಿ ಹೆಸರೇ ಹೇಳ್ತಾರೆ. ನನ್ನ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿಹಿಡಿದು ಮಾತನಾಡಲಿ. ನಾವೇನು ಹೆದರಿಕೊಂಡು ಓಡಿ ಹೋಗ್ತಿದ್ದೀವಾ? ಕಾಂಗ್ರೆಸ್​ನವರ ಯೋಗ್ಯತೆ ಏನು ಅನ್ನೋದು ಇಡೀ ದೇಶಕ್ಕೆ ಗೊತ್ತಿದೆ. ತಾಕತ್ತು ಇದ್ದರೆ ಅದೇನು ಬಿಚ್ಚಿಡ್ತಾರೋ ಬಿಚ್ಚಿಡ್ಲಿ ಎಂದು ಸವಾಲ್ ಹಾಕಿದ್ದಾರೆ.

ಈ ಸರ್ಕಾರದ ಯೋಗ್ಯತೆಗೆ ಒಂದು ಗುಂಡಿ ಮುಚ್ಚೋದಕ್ಕೂ ಸಾಧ್ಯ ಆಗಿಲ್ಲ.ಡಿಕೆ ಶಿವಕುಮಾರ್ ಭ್ರಷ್ಟಾಚಾರ ಬಗ್ಗೆ ಮಾತನಾಡದಿದ್ದರೆ ಒಳ್ಳೆಯದು. ಭ್ರಷ್ಟಾಚಾರದ ಪಿತಾಮಹ ಯಾರು ಎಂದು ಕೇಳಿದರೆ ರಾಜ್ಯದಲ್ಲಿ ಡಿಕೆಶಿ ಹೆಸರೇ ಹೇಳ್ತಾರೆ. ಯಾವ ಪುರುಷಾರ್ಥಕ್ಕೆ ಮಾತನಾಡ್ತಿದ್ದೀರಿ. ರಾಜ್ಯದಲ್ಲಿ 2.5 ಲಕ್ಷ ಹುದ್ದೆ ಖಾಲಿ ಇವೆ. ಈ ಸರ್ಕಾರ ಬಂದಾಗಿನಿಂದ ಹುದ್ದೆಗಳನ್ನು ಭರ್ತಿ ಮಾಡಲು ಆಗಿಲ್ಲ. ಸಿಎಂ ತವರು ಜಿಲ್ಲೆಯಲ್ಲಿ ಚೈತ್ರ ಬಿ ಕುರುಬುರು ಗ್ರಾಮ 32 ಬಾರಿ ಕೋಕೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ನಾಚಿಕೆಗೇಡಿನ ಈ ಸರ್ಕಾರ ಆಕೆ ಕೇವಲ 5 ಲಕ್ಷ ರೂ. ಬಹುಮಾನ ಕೊಟ್ಟಿದ್ದಾರೆ. ಸರ್ಕಾರದ ಮುಖಕ್ಕೆ ಆಕೆ ಹಣವನ್ನು ವಾಪಸ್ ಬಿಸಾಡಿದ್ದಾಳೆ. ಖಜಾನೆ ಖಾಲಿಯಾಗಿದ್ದಕ್ಕೆ ಈ ಸರಕಾರ ಹೀಗೆ ಮಾಡುತ್ತಿದೆ ಇಂಥ ಕೆಟ್ಡ ಪರಿಸ್ಥಿತಿ ಹಿಂದೆ ಯಾವ ಸರ್ಕಾರಕ್ಕೂ ಬಂದಿರಲಿಲ್ಲ. ಯಾರಿಗೋ ದಬ್ಬಾಳಿಕೆ ಮಾಡಿದಂತೆ ನನಗೆ ಮಾಡುವುದಕ್ಕೆ ಬರಬೇಡಿ ಎಂದು ಕಿಡಿಕಾರಿದರು.

ಮೊದಲ ಬಾರಿಗೆ ಅಬ್ಬರಿಸಿದ ವಿಜಯೇಂದ್ರ

ಹೌದು….ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡುವರೆ ವರ್ಷ ಆಯ್ತು ವಿಜಯೇಂದ್ರ ಈ ರೀತಿ ಯಾವಾತ್ತು ಗಟ್ಟಿ ಧ್ವನಿಯಲ್ಲಿ ಡಿಕೆ ಶಿವಕುಮಾರ್ ಅಥವಾ ಸಿದ್ದರಾಮಯ್ಯನವರ ವಿರುದ್ಧ ಮಾತನಾಡಿದ ಉದಾಹರಣೆಗಳಿಲ್ಲ.  ಹೀಗಾಗಿ ವಿಜಯೇಂದ್ರ ವಿರುದ್ಧ ಅಡ್ಜಸ್ಟ್​ಮೆಂಟ್ ರಾಜಕಾರಣದ ಆರೋಪಗಳು ಕೇಳಿಬಂದಿದ್ದವು.  ಆದ್ರೆ, ಇವತ್ತು ಇದೇ ಮೊದಲ ಬಾರಿಗೆ ವಿಜಯೇಂದ್ರ ಸಿಡಿದೆದಿದ್ದು,  ಡಿಕೆಶಿ ವಿರುದ್ಧ ಮನಸೋ ಇಚ್ಚೇ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಅದೇನು ಬಿಚ್ಚಿ ಇಡ್ತಾರೋ ಇಡಲಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ.

Published On - 4:22 pm, Thu, 18 December 25