
ಸ್ಮಾರ್ಟ್ಫೋನ್ ಬ್ಲೂಟೂತ್ ಹೆಡ್ಫೋನ್ ಸ್ಪೋಟಗೊಂಡು ಯುವಕನೊಬ್ಬ ಮೃತಪಟ್ಟ ಘಟನೆ ರಾಜಸ್ಥಾನದ ಚೌಮು ಪಟ್ಟಣದ ಉದೈಪುರಿಯಾ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು 28 ವರ್ಷದ ರಾಕೇಶ್ ಕುಮಾರ್. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿದ್ದ ರಾಕೇಶ್ ಬ್ಲೂಟೂತ್ ಹೆಡ್ಫೋನ್ ಕಿವಿಗೆ ಹಾಕಿಕೊಂಡಿದ್ದರು. ಇದೇ ವೇಳೆ ಹೆಡ್ಫೋನ್ ಚಾರ್ಜ್ ಕಡಿಮೆಯಾಗಿದ್ದರಿಂದ ಚಾರ್ಜಿಂಗ್ ಪ್ಲಗ್ಗೆ ಸಂಪರ್ಕಿಸಿದ್ದಾನೆ. ಈ ವೇಳೆ ಹೆಡ್ಫೋನ್ ಸ್ಪೋಟಗೊಂಡು ಯುವಕ ಪ್ರಜ್ಞಾಹೀನನಾಗಿ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ರಾಕೇಶ್ ಮೃತಪಟ್ಟಿದ್ದಾನೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಿದ್ದಿವಿನಾಯಕ ಆಸ್ಪತ್ರೆಯ ಡಾ.ಎಲ್.ಎನ್.ರುಂಡ್ಲ, ಯುವಕನನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆ ತರಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಾಗ ಆತ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.
ಈ ಹಿಂದೆ OnePlus Nord 2 ಸ್ಮಾರ್ಟ್ ಫೋನಿನ ಬ್ಯಾಟರಿ ಕೂಡ ಸ್ಪೋಟಗೊಂಡಿತು. ಮಹಿಳೆಯೊಬ್ಬರು ಬೈಕ್ ಚಲಾಯಿಸುತ್ತಿದ್ದಾಗ ತನ್ನ ಫೋನ್ ಸ್ಫೋಟಗೊಂಡಿದೆ ಎಂದು ತಿಳಿಸಿದ್ದರು. ಈ ಸುದ್ದಿ ಭಾರೀ ಚರ್ಚೆಗೆ ಕಾರಣವಾಗುತ್ತಿದ್ದಂತೆ ಒನ್ಪ್ಲಸ್ ಕಂಪೆನಿ ಈ ಸಮಸ್ಯೆಯನ್ನು ಒಪ್ಪಿಕೊಂಡಿತ್ತು. ಅಲ್ಲದೆ ಫೋನ್ನ ಬ್ಯಾಟರಿ ಏಕೆ ಸ್ಫೋಟಗೊಂಡಿದೆ ಎಂಬುದನ್ನು ಪತ್ತೆ ಹಚ್ಚುವುದಾಗಿ ತಿಳಿಸಿತ್ತು.
ಇನ್ನು ಸ್ಮಾರ್ಟ್ಫೋನ್ ಸ್ಪೋಟಗಳು ಹೊಸದೇನಲ್ಲ. ಈ ಹಿಂದೆ ಚೀನಾ ಮೇಡ್ ಮೊಬೈಲ್ಗಳು ಹಾಗೂ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಸ್ಮಾರ್ಟ್ಫೋನ್ಗಳು ಸ್ಪೋಟಗೊಂಡಿದ್ದವು. ಇದೀಗ ಬ್ಲೂಟೂತ್ ಹೆಡ್ಫೋನ್ ಸ್ಪೋಟಗೊಂಡಿರುವ ವರದಿಯಾಗಿದೆ. ಹೀಗಾಗಿ ಯಾವುದೇ ಮೊಬೈಲ್ನ್ನು ಚಾರ್ಜಿಂಗ್ ಹಾಕಿ ಬಳಸದಿರಿ. ಅದರಲ್ಲೂ ಚಾರ್ಜಿಂಗ್ ವೇಳೆ ಮೊಬೈಲ್ ಹೆಡ್ಫೋನ್ ಅನ್ನು ಬಳಸುವುದು ಅಪಾಯಕಾರಿ. ಅದರ ತಾಜಾ ಉದಾಹರಣೆ ರಾಕೇಶ್ ಕುಮಾರ್ ಮೃತಪಟ್ಟಿರುವುದು. ಹೀಗಾಗಿ ಸ್ಮಾರ್ಟ್ಫೋನ್ ಬಳಕೆ ವೇಳೆ ಸಾಧ್ಯವಾದಷ್ಟು ಎಚ್ಚರದಿರುವುದು ಉತ್ತಮ.
(bluetooth headphone blast while charging, 28 year old boy died)
Published On - 10:25 pm, Sat, 7 August 21