ಕೇವಲ ಬೆಂಗಳೂರಿಗೆ ಸೀಮಿತವಾಗಿದ್ದ ಬಿಎಂಟಿಸಿ ಬಸ್ ಈಗ ರಾಜ್ಯದ ವಿವಿಧ ಜಿಲ್ಲೆಗಳಿಗೂ ಸಂಚಾರ
ದಸರಾ ಹಿನ್ನೆಲೆಯಲ್ಲಿ ಸಾಲು ಸಾಲು ರಜೆ ಇರುವುದರಿಂದ ಹೆಚ್ಚುವರಿ ಕೆಎಸ್ಆರ್ಟಿಸಿ ಬಸ್‌ಗಳ ಜೊತೆಗೆ ಬಿಎಂಟಿಸಿ ಓಡಿಸಲು ತೀರ್ಮಾನಿಸಲಾಗಿದೆ. ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕೆ ಬಿಎಂಟಿಸಿ ಬಸ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್ಗಳು ಮೂರು ದಿನಗಳ ಕಾಲ ರಾಜ್ಯ ವಿವಿಧ ಜಿಲ್ಲೆಗಳಿಗೆ ಸಂಚರಿಸಲಿವೆ.
ಬೆಂಗಳೂರು, (ಅಕ್ಟೋಬರ್ 20): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ದಸರಾ(Dasara) ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಹೊಸ ಪ್ಲಾನ್ ರೂಪಿಸಿದೆ. ರಾಜ್ಯದಾದ್ಯಂತ ಪ್ರಯಾಣಿಕರ ಅಗತ್ಯತೆಗಳಿಗೆ ಅನುಸಾರವಾಗಿ ವಿವಿಧ ಊರುಗಳ ನಡುವೆ ವಿಶೇಷ ಬಸ್‌ಗಳನ್ನು ಆರಂಭಿಸುತ್ತಿದೆ. ಈ ದಸರಾಕ್ಕೆ ಹೆಚ್ಚುವರಿಯಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ರಾಜ್ಯ ಮತ್ತು ಅಂತಾರಾಜ್ಯ ಗಳಿಗೆ ಬಿಡಲಾಗಿದೆ. ಆದರೂ ಸಹ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಕೆಎಸ್ಆರ್ಟಿಸಿ ಜೊತೆಗೆ ಬಿಎಂಟಿಸಿ ಬಸ್‌ಗಳನ್ನು ಸಹ ರಾಜ್ಯದ ಇತರೆ ಜಿಲ್ಲೆಗಳಿಗೆ ಸಂಚಾರ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.
ಅಕ್ಟೋಬರ್ 23ರಂದು ಆಯುಧ ಪೂಜೆ ಹಾಗೂ ಅ.24 ವಿಜಯದಶಮಿ ಹಿನ್ನಲೆಯಲ್ಲಿ ಜನರು ಬೆಂಗಳೂರಿನಿಂದ ಬೇರೆ ಜಿಲ್ಲೆಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ ಅಕ್ಟೋಬರ್ 21, 22 ಮತ್ತು 23ರ ವರಿಗೆ ಪ್ರಯಾಣಿಕರ ಅನುಕೂಲಕ್ಕೆ ವಿವಿಧ ಜಿಲ್ಲೆಗಳಿಗೆ ಬಿಎಂಟಿಸಿ ಬಸ್ಗಳು ಸಂಚರಿಸಲಿವೆ. ಇದರೊಂದಿಗೆ ಇಷ್ಟು ದಿನ ಬೆಂಗಳೂರಿಗೆ ಸೀಮತವಾಗಿದ್ದ ಬಿಎಂಟಿಸಿ ಬಸ್ಗಳು ಇದೀಗ ರಾಜ್ಯದ ಬೇರೆ-ಬೇರೆ ಜಿಲ್ಲೆಗಳಿಗೂ ಹೋಗಲಿವೆ.
ಇದನ್ನೂ ಓದಿ: ದಸರಾ ಪ್ರಯುಕ್ತ ಬೆಂಗಳೂರು, ಬೀದರ್ ಮಧ್ಯೆ 3 ವಿಶೇಷ ರೈಲು: ಇಲ್ಲಿದೆ ವಿವರ
ಅಕ್ಟೋಬರ್-10 ರಂದು ಕೆಎಸ್ಆರ್ಟಿಸಿಯಲ್ಲಿ ನಡೆದ ಸಭೆ ನಿರ್ಧಾರದಂತೆ ಬಿಎಂಟಿಸಿ ಬಸ್ ಓಡಿಸಲು ಸೂಚನೆ ನೀಡಲಾಗಿದೆ. ಕೆಎಸ್ಆರ್ಟಿಸಿ ಮನವಿ ಆಧಾರದ ಮೇಲೆ ಹೊರ ಜಿಲ್ಲೆಗಳಿಗೂ ಬಸ್ ಓಡಿಸಲು ಬಿಎಂಟಿಸಿ ತೀರ್ಮಾನಿಸಿದೆ. ದಾವಣಗೆರೆ, ಶಿವಮೊಗ್ಗ, ಹೊಸದುರ್ಗ,ಬಳ್ಳಾರಿ, ಹಾಸನ, ಮತ್ತು ಧರ್ಮಸ್ಥಳಕ್ಕೆ ಬಿಎಂಟಿಸಿಯಿಂದ ಹೆಚ್ಚುವರಿ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ಪೂರ್ವ, ಉತ್ತರ, ದಕ್ಷಿಣ, ಹಾಗೂ ಈಶಾನ್ಯ ವಲಯದ ಡಿಪೋಗಳಿಂದ ನಿತ್ಯ 100 ಬಸ್ ಗಳು ಓಡಾಡಲಿವೆ. ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕೆ ಬಿಎಂಟಿಸಿ ಬಸ್‌ಗಳನ್ನು ಬಳಕೆ ಮಾಡಲಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:12 am, Fri, 20 October 23