ಮುಂಬೈ ಬೆಂಗಳೂರು ವಿಮಾನ ಸೇರಿ ಮತ್ತೆ ಹಲವು ವಿಮಾನಗಳಿಗೆ ಬಾಂಬ್ ಬೆದರಿಕೆ

|

Updated on: Oct 22, 2024 | 12:57 PM

ದೇಶಾದ್ಯಂತ ವಿವಿಧ ವಿಮಾನಯಾನ ಸಂಸ್ಥೆಗಳ ವಿಮಾನಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಬರುತ್ತಿರುವ ಪ್ರಕ್ರಿಯೆ ಕಳೆದ ಹಲವು ದಿನಗಳಿಂದ ನಡೆಯುತ್ತಿದೆ. ಸೋಮವಾರ ರಾತ್ರಿ ಕೂಡ ಇಂಡಿಗೋ, ವಿಸ್ತಾರಾ ಮತ್ತು ಏರ್ ಇಂಡಿಯಾದ 30 ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದಿರುವುದು ಇದೀಗ ತಿಳಿದುಬಂದಿದೆ. ಇವುಗಳು ಹುಸಿ ಬಾಂಬ್ ಬೆದರಿಕೆ ಕರೆಗಳಾದರೂ ವಿಮಾನಗಳ ಕಾರ್ಯಾಚರಣೆ ಮೇಲೆ ಗಂಭೀರ ಪರಿಣಾಮ ಬೀರಿವೆ.

ಮುಂಬೈ ಬೆಂಗಳೂರು ವಿಮಾನ ಸೇರಿ ಮತ್ತೆ ಹಲವು ವಿಮಾನಗಳಿಗೆ ಬಾಂಬ್ ಬೆದರಿಕೆ
ಇಂಡಿಗೋ ವಿಮಾನ (ಸಾಂದರ್ಭಿಕ ಚಿತ್ರ)
Image Credit source: Getty Images
Follow us on

ಬೆಂಗಳೂರು, ಅಕ್ಟೋಬರ್ 22: ಮುಂಬೈಯಿಂದ ಬೆಂಗಳೂರಿಗೆ ತೆರಳಬೇಕಿದ್ದ ವಿಮಾನವೂ ಸೇರಿದಂತೆ ಇಂಡಿಗೋ, ವಿಸ್ತಾರ ಏರ್​ಲೈನ್ಸ್​​, ಏರ್​ ಇಂಡಿಯಾದ ಸುಮಾರು 30 ಹೆಚ್ಚು ವಿಮಾನಗಳಿಗೆ ಮತ್ತೆ ಬಾಂಬ್ ಬೆದರಿಕೆ ಸಂದೇಶ ಬಂದಿವೆ. 10 ಇಂಡಿಗೋ, 10 ವಿಸ್ತಾರ ವಿಮಾನಗಳಿಗೆ ಬೆದರಿಕೆ ಸಂದೇಶ ಬಂದಿವೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ.

ಅಕ್ಟೋಬರ್ 21 ರಂದು ಕೆಲವು ವಿಸ್ತಾರಾ ವಿಮಾನಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಭದ್ರತಾ ಬೆದರಿಕೆ ಸಂದೇಶಗಳು ಬಂದಿವೆ. ನಾವು ತಕ್ಷಣ ಸಂಬಂಧಿತ ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶ ನೀಡಿದ್ದೇವೆ ಮತ್ತು ಅವರು ಎಲ್ಲಾ ಸುರಕ್ಷತಾ ಕಾರ್ಯವಿಧಾನಗಳನ್ನು ಅನುಸರಿಸಿದ್ದಾರೆ. ನಮ್ಮ ಗ್ರಾಹಕರು, ಸಿಬ್ಬಂದಿ ಮತ್ತು ವಿಮಾನಗಳ ಸುರಕ್ಷತೆ ನಮಗೆ ಅತ್ಯಂತ ಮಹತ್ವದ್ದಾಗಿದೆ ಎಂದು ವಿಸ್ತಾರ ಏರ್​ಲೈನ್ಸ್ ಪ್ರಕಟಣೆ ತಿಳಿಸಿದೆ.

ಯಾವೆಲ್ಲ ವಿಮಾನಗಳಿಗೆ ಬಾಂಬ್ ಬೆದರಿಕೆ?

6E-63 ದೆಹಲಿ – ಜೆಡ್ಡಾ, 6E-12 ಇಸ್ತಾಂಬುಲ್ – ದೆಹಲಿ, 6E-83 ದೆಹಲಿ – ದಮ್ಮಾಮ್, 6E-65 ಕೋಜಿಕೋಡ್ – ಜೆಡ್ಡಾ, 6E-67 ಹೈದರಾಬಾದ್ – ಜೆಡ್ಡಾ, 6E-77 ಬೆಂಗಳೂರು – ಜೆಡ್ಡಾ, 6E-18 ಇಸ್ತಾಂಬುಲ್ – ಮುಂಬೈ, 6E-164 ಮಂಗಳೂರು – ಮುಂಬೈ, 6E-118 ಲಕ್ನೋ ಅಹಮದಾಬಾದ್ ಸೇರಿದಂತೆ ಸುಮಾರು 30 ವಿಮಾನಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ.

ಮತ್ತೊಂದೆಡೆ, ಸೋಮವಾರ ಕಾರ್ಯನಿರ್ವಹಿಸುತ್ತಿದ್ದ ಏರ್ ಇಂಡಿಯಾದ ಕೆಲವು ವಿಮಾನಗಳಿಗೆ ಬೆದರಿಕೆಗಳು ಬಂದಿವೆ ಎಂದು ಏರ್ ಇಂಡಿಯಾ ವಕ್ತಾರರು ಖಚಿತಪಡಿಸಿದ್ದಾರೆ. ಪ್ರೋಟೋಕಾಲ್ ಪ್ರಕಾರ, ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಅಧಿಕಾರಿಗಳು ಮತ್ತು ಭದ್ರತಾ ಏಜೆನ್ಸಿಗಳ ಮಾರ್ಗದರ್ಶನದಂತೆ ಎಲ್ಲಾ ಸುರಕ್ಷತಾ ಕಾರ್ಯವಿಧಾನಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.

ಹೆಚ್ಚಿದ ಬಾಂಬ್ ದಾಳಿ ಬೆದರಿಕೆ

ದೇಶದ ವಿಮಾನಯಾನ ಸಂಸ್ಥೆಗಳಿಗೆ ಕಳೆದ ಕೆಲವು ದಿನಗಳಲ್ಲಿ ಬಾಂಬ್ ದಾಳಿ ಬೆದರಿಕೆ ಸಂದೇಶಗಳು ಬರುವುದು ಹೆಚ್ಚಾಗತೊಡಗಿದೆ. ಕಳೆದ ಒಂದು ವಾರದಲ್ಲಿ 120 ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ.

ಇದು ಹುಸಿ ಬಾಂಬ್ ಬೆದರಿಕೆಗಳಾಗಿದ್ದರೂ, ನಾವು ಇಂಥ ವಿಚಾರಗಳನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ನಾಗರಿಕ ವಿಮಾನಯಾನ ಸಚಿವ ಕೆ ರಾಮಮೋಹನ್ ನಾಯ್ಡು ಸೋಮವಾರ ಹೇಳಿದ್ದಾರೆ.

ಇದನ್ನೂ ಓದಿ: ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ; ವಿಮಾನಯಾನ ಭದ್ರತಾ ನಿಯಮ ಬಿಗಿಗೊಳಿಸಲು ಸರ್ಕಾರ ಪ್ಲಾನ್

ಬಾಂಬ್ ಬೆದರಿಕೆ ಕರೆಗಳು ಹಾಗೂ ಸಂದೇಶಗಳು ಹುಸಿಯಾಗಿದ್ದರೂ ಅನೇಕ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಲು ಕಾರಣವಾಯಿತು. ಸಾವಿರಾರು ಪ್ರಯಾಣಿಕರಿಗೂ ತೊಂದರೆಯಾಯಿತು. ಒಟ್ಟಾರೆ ವಿಮಾನಗಳ ಕಾರ್ಯಾಚರಣೆ ಮೇಲೆ ಹುಸಿ ಬಾಂಬ್ ದಾಳಿ ಬೆದರಿಕೆಗಳು ಪ್ರಭಾವ ಬೀರಿದ್ದವು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ