BS Yediyurappa: ಕರ್ನಾಟಕದಲ್ಲಿ ಯಡಿಯೂರಪ್ಪ ನಂತರ ಬಿಜೆಪಿ ನಾಯಕ ಇವರೇನಾ? ಇಷ್ಟಕ್ಕೂ ಬಿಎಸ್​ವೈ ರಾಜೀನಾಮೆಗೆ ಕಾರಣವೇನು?

ಬಿ ಎಸ್​ ಯಡಿಯೂರಪ್ಪ: ಬಿಜೆಪಿ ಹೈಕಮಾಂಡ್ ಆರು ತಿಂಗಳ ಹಿಂದೆ ಉತ್ತರಾಖಂಡ ಸಿಎಂ ಆಗಿದ್ದ ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ಬದಲಾಯಿಸಿ ಸಿಎಂ ಸ್ಥಾನಕ್ಕೆ ತೀರತ್ ಸಿಂಗ್ ರಾವತ್ ಅವರನ್ನು ನೇಮಿಸಿತ್ತು. ಅದಕ್ಕೂ ಮುನ್ನ ಮಧ್ಯಪ್ರದೇಶದಲ್ಲಿ ಉಮಾಭಾರತಿ, ಗುಜರಾತ್ ನಲ್ಲಿ ಕೇಶುಭಾಯಿ ಪಟೇಲ್, ಆನಂದಿಬೆನ್ ಪಟೇಲ್, ದೆಹಲಿಯಲ್ಲಿ ಮದನ್ ಲಾಲ್ ಖುರಾನಾ, ಉತ್ತರ ಪ್ರದೇಶದಲ್ಲಿ ಕಲ್ಯಾಣ್ ಸಿಂಗ್ ರನ್ನು ಬೇರೆ ಬೇರೆ ಕಾರಣಗಳಿಗಾಗಿ ಸಿಎಂ ಹುದ್ದೆಯಿಂದ ಅವಧಿಗೂ ಮುನ್ನವೇ ಕೆಳಗಿಳಿಸಿದೆ.

BS Yediyurappa: ಕರ್ನಾಟಕದಲ್ಲಿ ಯಡಿಯೂರಪ್ಪ ನಂತರ ಬಿಜೆಪಿ ನಾಯಕ ಇವರೇನಾ? ಇಷ್ಟಕ್ಕೂ ಬಿಎಸ್​ವೈ ರಾಜೀನಾಮೆಗೆ ಕಾರಣವೇನು?
BS Yediyurappa: ಕರ್ನಾಟಕದಲ್ಲಿ ಯಡಿಯೂರಪ್ಪ ನಂತರ ಬಿಜೆಪಿ ನಾಯಕ ಇವರೇನಾ? ಇಷ್ಟಕ್ಕೂ ಯಡಿಯೂರಪ್ಪ ರಾಜೀನಾಮೆಗೆ ಕಾರಣವೇನು?
Follow us
S Chandramohan
| Updated By: ಸಾಧು ಶ್ರೀನಾಥ್​

Updated on: Jul 22, 2021 | 3:46 PM

ಕರ್ನಾಟಕದಲ್ಲಿ ಇಂದು ರಾಜಕೀಯವಾಗಿ ಸಂಚಲನ ಸೃಷ್ಟಿಯಾಗಿದೆ. ಸಿಎಂ ಯಡಿಯೂರಪ್ಪ ಜುಲೈ 25 ರಂದು ಹೈಕಮಾಂಡಿನಿಂದ ಸಂದೇಶ ಬರುತ್ತೆ. ಸಂದೇಶದಂತೆ ಜುಲೈ 26 ರಂದು ನಾನು ನಡೆದುಕೊಳ್ಳುವೆ ಎಂದು ಹೇಳುವ ಮೂಲಕ ಸಿಎಂ ಹುದ್ದೆಗೆ ರಾಜೀನಾಮೆ ನೀಡುವ ಮಹತ್ವದ ಸುಳಿವು ನೀಡಿದ್ದಾರೆ. ಈ ಮೂಲಕ ಬಿಜೆಪಿ ಹೈಕಮಾಂಡ್ ಕರ್ನಾಟಕದಲ್ಲಿ ನಾಯಕತ್ವದ ಬದಲಾವಣೆಗೆ ಸಿದ್ದವಾಗಿರುವುದು ಸ್ಪಷ್ಟವಾಗಿದೆ.

ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆಗೆ ಕಾರಣವೇನು?

ಬಿಜೆಪಿ ಹೈಕಮಾಂಡ್ ಆರು ತಿಂಗಳ ಹಿಂದೆ ಉತ್ತರಾಖಂಡ ಸಿಎಂ ಆಗಿದ್ದ ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ಬದಲಾಯಿಸಿ ಸಿಎಂ ಸ್ಥಾನಕ್ಕೆ ತೀರತ್ ಸಿಂಗ್ ರಾವತ್ ಅವರನ್ನು ನೇಮಿಸಿತ್ತು. ಕಳೆದ ತಿಂಗಳು ತೀರತ್ ಸಿಂಗ್ ರಾವತ್, ಶಾಸಕರಾಗಿ ಆಯ್ಕೆಯಾಗುವುದು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಮತ್ತೆ ಬದಲಾವಣೆ ಮಾಡಿ, ಪುಷ್ಕರ್ ಸಿಂಗ್ ಅವರನ್ನ ಸಿಎಂ ಆಗಿ ನೇಮಿಸಿದೆ. ಈಗ ಬಿಜೆಪಿ ಹೈಕಮಾಂಡ್ ಕಣ್ಣು ಕರ್ನಾಟಕದ ಮೇಲೆ ಬಿದ್ದಿದೆ. ಕರ್ನಾಟಕದಲ್ಲಿ ಸಿಎಂ ಹುದ್ದೆಯಲ್ಲಿರುವ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ, ಬೇರೊಬ್ಬರನ್ನು ಸಿಎಂ ಆಗಿ ನೇಮಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ.

ಈ ಬಗ್ಗೆ ಜುಲೈ 16 ಮತ್ತು ಜುಲೈ 17ರಂದು ದೆಹಲಿಗೆ ಭೇಟಿ ನೀಡಿದ್ದ ಸಿಎಂ ಯಡಿಯೂರಪ್ಪಗೆ ಬಿಜೆಪಿ ಹೈಕಮಾಂಡ್ ನಾಯಕರು ಸ್ಪಷ್ಟವಾದ ಸೂಚನೆ ನೀಡಿದ್ದಾರೆ. ಯಡಿಯೂರಪ್ಪಗೆ ಈಗ 78 ವರ್ಷ ವಯಸ್ಸು. ಇನ್ನೆರೆಡು ವರ್ಷದ ಅಧಿಕಾರಾವಧಿ ಪೂರ್ಣಗೊಳಿಸುವಷ್ಟರಲ್ಲಿ 80 ವರ್ಷ ವಯಸ್ಸಾಗುತ್ತೆ. 80 ವರ್ಷ ಆದ ಬಳಿಕವೂ ಯಡಿಯೂರಪ್ಪ ನಾಯಕತ್ವದಲ್ಲಿ 2023ರ ಕರ್ನಾಟಕದ ವಿಧಾನಸಭಾ ಚುನಾವಣೆಯನ್ನು ಬಿಜೆಪಿ ಪಕ್ಷ ಎದುರಿಸಲು ಸಾಧ್ಯವಿಲ್ಲ. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನೂ 2 ವರ್ಷ ಇರುವಾಗಲೇ ಸಿಎಂ ಸ್ಥಾನದಲ್ಲಿ ಬದಲಾವಣೆ ಮಾಡಿ, ಬೇರೊಬ್ಬರನ್ನು ಸಿಎಂ ಆಗಿ ನೇಮಿಸಬೇಕು.

ಹೊಸ ಸಿಎಂ ನಾಯಕತ್ವದಲ್ಲಿ 2023ರ ರಾಜ್ಯ ವಿಧಾನಸಭೆ ಚುನಾವಣೆ ಎದುರಿಸಬೇಕು ಎನ್ನುವುದು ಬಿಜೆಪಿ ಹೈಕಮಾಂಡ್ ಪ್ಲ್ಯಾನ್. ಹೀಗಾಗಿ ತಾವು ಈಗಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತ ಎಂದು ಬಿಜೆಪಿ ಹೈಕಮಾಂಡ್ ಕಳೆದ ವಾರವೇ ಯಡಿಯೂರಪ್ಪಗೆ ಸೂಚಿಸಿದೆ. ಆದರೆ, ಯಾವಾಗ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎನ್ನುವುದಷ್ಟೇ ಈಗ ನಿರ್ಧಾರವಾಗಬೇಕು. ಜೊತೆಗೆ ಬಹಳ ಮುಖ್ಯವಾಗಿ ಯಡಿಯೂರಪ್ಪ ನಂತರ ಕರ್ನಾಟಕದಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಾಬೇಕು ಎನ್ನುವುದನ್ನು ಬಿಜೆಪಿ ಹೈಕಮಾಂಡ್ ನಿರ್ಧರಿಸಬೇಕು.

ಜುಲೈ 25 ರಂದು ಬಿಜೆಪಿ ಹೈಕಮಾಂಡ್ ನಿಂದ ಸಂದೇಶ ಬರುತ್ತೆ. ಜುಲೈ 26 ರಂದು ಹೈಕಮಾಂಡ್ ಸಂದೇಶದ ಪ್ರಕಾರ ನಡೆದುಕೊಳ್ಳುತ್ತೇನೆ ಎಂದು ಯಡಿಯೂರಪ್ಪ ಇಂದು ಬೆಂಗಳೂರಿನ ಕಾಚರಕನಹಳ್ಳಿಯಲ್ಲಿ ಹೇಳಿದ್ದಾರೆ. ಇದರಿಂದಾಗಿ ಜುಲೈ 25 ರಂದೇ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ದಿನ, ಮುಹೂರ್ತ ನಿಗದಿಪಡಿಸಿ ತಿಳಿಸಬಹುದು.

ಬಿಜೆಪಿಯಲ್ಲಿ 2014ರ ನಂತರ ಅಲಿಖಿತ ನಿಯಮವೊಂದನ್ನು ಪಾಲಿಸಿಕೊಂಡು ಬರಲಾಗುತ್ತಿದೆ. 75 ವರ್ಷ ದಾಟಿದವರಿಗೆ ಯಾವುದೇ ಪ್ರಮುಖ ಅಧಿಕಾರ ಹುದ್ದೆಯನ್ನು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳಲ್ಲಿ ನೀಡಲ್ಲ ಎಂಬ ಅಲಿಖಿತ ನಿಯಮ ಪಾಲಿಸಕೊಂಡು ಬರಲಾಗುತ್ತಿದೆ. ಈ ನಿಯಮ ಪಾಲಿಸುವುದಕ್ಕಾಗಿಯೇ ಲಾಲ್ ಕೃಷ್ಣ ಅಡ್ವಾಣಿ, ಮುರುಳಿ ಮನೋಹರ್ ಜೋಷಿ, ಶಾಂತಾಕುಮಾರ್ ರಂಥ ಹಿರಿಯ ನಾಯಕರಿಗೂ ಲೋಕಸಭಾ ಟಿಕೆಟ್ ನೀಡಿಲ್ಲ.

ಈಗ ಅದೇ ನಿಯಮವನ್ನು ಯಡಿಯೂರಪ್ಪ ಅವರಿಗೂ ಅನ್ವಯಿಸಲಾಗುತ್ತಿದೆ. ಆದರೇ, ಯಡಿಯೂರಪ್ಪ 75 ವರ್ಷ ದಾಟಿದ ಮೇಲೆಯೇ 2 ವರ್ಷದ ಹಿಂದೆ ಸಿಎಂ ಹುದ್ದೆ ನೀಡಿದ್ದು ಕೂಡ ವಿಶೇಷ. 2019ರ ಜುಲೈ ತಿಂಗಳಲ್ಲೂ ಯಡಿಯೂರಪ್ಪ 75 ವರ್ಷ ದಾಟಿದ್ದಾರೆ ಎಂಬುದು ಬಿಜೆಪಿ ಹೈಕಮಾಂಡ್ ಗೆ ಗೊತ್ತಿತ್ತು. ಆದರೇ, ಆಗ ಕರ್ನಾಟಕದಲ್ಲಿ ಸರ್ಕಾರ ರಚಿಸಲು ತಮ್ಮ ವಯಸ್ಸಿನ ಮಿತಿ ನಿಯಮದಿಂದ ಯಡಿಯೂರಪ್ಪಗೆ ಹೈಕಮಾಂಡ್ ವಿನಾಯಿತಿ ನೀಡಿತ್ತು.

ಆದರೆ, ಸಿಎಂ ಆದ ಬಳಿಕ ಯಡಿಯೂರಪ್ಪ ಜನಪ್ರಿಯ, ಜನಪರ ಆಳ್ವಿಕೆ ನೀಡಿ ಒಳ್ಳೆಯ ಹೆಸರು ಗಳಿಸಿದ್ದರೇ, ಇನ್ನೂ 2 ವರ್ಷ ಯಡಿಯೂರಪ್ಪರನ್ನೇ ಸಿಎಂ ಆಗಿ ಮುಂದುವರಿಸಲು ಹೈಕಮಾಂಡ್ ಒಪ್ಪುತ್ತಿತ್ತ್ತು ಏನೋ. ಆದರೆ, ಯಡಿಯೂರಪ್ಪ ವಿರುದ್ಧ ಕುಟುಂಬ ರಾಜಕಾರಣ, ಸ್ವಜನಪಕ್ಷಪಾತ, ಮಗ ಸಂವಿಧಾನೇತರ ಶಕ್ತಿಯಾಗಿ ಪರ್ಯಾಯ ಶಕ್ತಿ ಕೇಂದ್ರವಾಗಿ ಸರ್ಕಾರ ನಡೆಸುತ್ತಿದ್ದಾರೆ ಎಂಬ ಟೀಕೆ, ಆರೋಪಗಳಿವೆ. ಈ ಆರೋಪಗಳ ದೂರುಗಳ ಸರಮಾಲೆಯೇ ದೆಹಲಿಯ ಬಿಜೆಪಿ ಹೈಕಮಾಂಡ್ ಗೆ ಮುಟ್ಟಿದೆ.

ಇದರಿಂದ ಕರ್ನಾಟಕದಲ್ಲಿ ಬಿಜೆಪಿಯ ವರ್ಚಸ್ಸು ವೃದ್ದಿಯಾಗುತ್ತಿಲ್ಲ. ಬಿಜೆಪಿ, ರಾಜ್ಯ ಸರ್ಕಾರದ ವರ್ಚಸ್ಸು ಕುಸಿಯುತ್ತಿದೆ ಎಂಬ ದೂರು ಹೈಕಮಾಂಡ್ ಗೆ ಸಲ್ಲಿಕೆಯಾಗಿದೆ. ಈ ದೂರು, ಆರೋಪಗಳಲ್ಲಿ ಎಳ್ಳಷ್ಟು ಸತ್ಯಾಂಶವಿಲ್ಲದಿದ್ದರೇ, ಹೈಕಮಾಂಡ್ ಈಗ ಸಿಎಂ ಸ್ಥಾನದಿಂದ ಯಡಿಯೂರಪ್ಪರನ್ನು ಕೆಳಗಿಳಿಸಲು ಚಿಂತಿಸುತ್ತಿರಲಿಲ್ಲವೇನೋ. ಕರ್ನಾಟಕದವರೇ ಆದ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೂ ಕರ್ನಾಟಕದ ವಾಸ್ತವ ಪರಿಸ್ಥಿತಿಯ ಅರಿವು ಚೆನ್ನಾಗಿಯೇ ಇದೆ.

ಹೀಗಾಗಿಯೇ ಈಗ ಸಿಎಂ ಸ್ಥಾನದಲ್ಲಿರುವ ಯಡಿಯೂರಪ್ಪ ಬದಲಾವಣೆಗೆ ತೀರ್ಮಾನ ತೆಗೆದುಕೊಂಡಿದ್ದಾರೆ. ಬಿ.ಎಲ್.ಸಂತೋಷ್ ಈಗ ಹೈಕಮಾಂಡ್ ಮಟ್ಟದಲ್ಲಿ ಮೋದಿ, ಅಮಿತ್ ಶಾ, ನಡ್ಡಾ ನಂತರದ ನಾಲ್ಕನೇ ಸ್ಥಾನದಲ್ಲಿದ್ದಾರೆ. ಹೀಗಾಗಿ ಪ್ರಮುಖ ತೀರ್ಮಾನಗಳನ್ನು ಬಿ.ಎಲ್.ಸಂತೋಷ್ ಅಭಿಪ್ರಾಯ ಪಡೆದೇ ತೆಗೆದುಕೊಳ್ಳಲಾಗುತ್ತೆ. ಹೀಗಾಗಿ ಮುಂದಿನ ಸಿಎಂ ಆಯ್ಕೆಯಲ್ಲೂ ಬಿ.ಎಲ್.ಸಂತೋಷ್ ಮಹತ್ವದ ಪಾತ್ರ ವಹಿಸುತ್ತಾರೆ ಎಂಬುದರಲ್ಲಿ ಅನುಮಾನವಿಲ್ಲ. ಹಾಗಂತ ಸಿಎಂ ಸ್ಥಾನದಲ್ಲಿರುವವರನ್ನು ಬಿಜೆಪಿ ಹೈಕಮಾಂಡ್ ಬದಲಾಯಿಸುತ್ತಿರುವುದು ದೇಶದಲ್ಲಿ ಇದೇ ಮೊದಲೇನೂ ಅಲ್ಲ, ಕೊನೆಯೂ ಅಲ್ಲ.

ಮಧ್ಯಪ್ರದೇಶದಲ್ಲಿ ಉಮಾಭಾರತಿ, ಗುಜರಾತ್ ನಲ್ಲಿ ಕೇಶುಭಾಯಿ ಪಟೇಲ್, ಆನಂದಿಬೆನ್ ಪಟೇಲ್, ದೆಹಲಿಯಲ್ಲಿ ಮದನ್ ಲಾಲ್ ಖುರಾನಾ, ಉತ್ತರ ಪ್ರದೇಶದಲ್ಲಿ ಕಲ್ಯಾಣ್ ಸಿಂಗ್ ರನ್ನು ಬೇರೆ ಬೇರೆ ಕಾರಣಗಳಿಗಾಗಿ ಸಿಎಂ ಹುದ್ದೆಯಿಂದ ಅವಧಿಗೂ ಮುನ್ನವೇ ಕೆಳಗಿಳಿಸಿದೆ. ಇದೇ ಯಡಿಯೂರಪ್ಪ 2011ರ ಜುಲೈ ತಿಂಗಳಲ್ಲಿ ಆಕ್ರಮ ಗಣಿಗಾರಿಕೆಯ ಆರೋಪದ ಬಗ್ಗೆ ಲೋಕಾಯುಕ್ತ ನೀಡಿದ್ದ ಅಂತಿಮ ವರದಿಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಆಗ ನಿತಿನ್ ಗಡ್ಕರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಆಗಿನ್ನೂ ಲಾಲ್ ಕೃಷ್ಣ ಅಡ್ವಾಣಿ ಮಾತು ಬಿಜೆಪಿಯಲ್ಲಿ ನಡೆಯುತ್ತಿದ್ದ ಕಾಲವದು. ಅಡ್ವಾಣಿ ಅವರಿಗೆ ಕರ್ನಾಟಕದ ಅನಂತಕುಮಾರ್ ಕಣ್ಣು, ಕಿವಿಯಾಗಿದ್ದರು. ಲಾಲ್ ಕೃಷ್ಣ ಅಡ್ವಾಣಿ, ಯಡಿಯೂರಪ್ಪ ಭ್ರಷ್ಟಾಚಾರದ ಆರೋಪದ ಕಾರಣಕ್ಕಾಗಿಯೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಗಿಪಟ್ಟು ಹಿಡಿದಿದ್ದರು. ಇದನ್ನೇ ನಿತಿನ್ ಗಡ್ಕರಿ, ಯಡಿಯೂರಪ್ಪಗೆ ತಿಳಿಸಿದ್ದರು. ಇದರಿಂದಾಗಿ ಪರ್ಯಾಯ ಮಾರ್ಗವಿಲ್ಲದೇ, ಯಡಿಯೂರಪ್ಪ 2011ರ ಜುಲೈ 31ರಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಕರ್ನಾಟಕದಲ್ಲಿ ಯಡಿಯೂರಪ್ಪ ನಂತರ ಬಿಜೆಪಿ ನಾಯಕ ಯಾರು?

ಈಗ ಕರ್ನಾಟಕದಲ್ಲಿ ಯಡಿಯೂರಪ್ಪ ನಂತರ ರಾಜ್ಯ ಸರ್ಕಾರವನ್ನು ಸಿಎಂ ಆಗಿ ಯಾರು ಮುನ್ನೆಡೆಸುತ್ತಾರೆ ಎಂಬ ಪ್ರಶ್ನೆ ಸಹಜವಾಗಿಯೇ ರಾಜ್ಯದ ರಾಜಕೀಯ ವಲಯವನ್ನು ಕಾಡುತ್ತಿದೆ. ಈ ಪ್ರಶ್ನೆಗೆ ಈಗ ಬಿಜೆಪಿ ಹೈಕಮಾಂಡ್ ಉತ್ತರ ನೀಡಬೇಕು. ಈಗ ಬಿಜೆಪಿ ಹೈಕಮಾಂಡೇ ರಾಜ್ಯದ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಬೇಕು. ಈಗ ಬಿಜೆಪಿ ಹೈಕಮಾಂಡ್ ಮುಂದೆ ಬಿಜೆಪಿಯ ಕೆಲ ನಾಯಕರ ಹೆಸರುಗಳಿವೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಬಿಜೆಪಿ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಅರವಿಂದ್ ಬೆಲ್ಲದ್, ಮುರುಗೇಶ್ ನಿರಾಣಿ ಹೆಸರುಗಳಿವೆ.

ಇವರೆಲ್ಲರನ್ನೂ ಹೊರತುಪಡಿಸಿ ಡಾರ್ಕ್ ಹಾರ್ಸ್ ಕೂಡ ಸಿಎಂ ಆಗಿ ಆಯ್ಕೆಯಾಗಬಹುದು. ಪ್ರಹ್ಲಾದ್ ಜೋಷಿ, ಬಿ.ಎಲ್.ಸಂತೋಷ್, ವಿಶ್ವೇಶ್ವರ ಹೆಗಡೆ ಕಾಗೇರಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಸಿ.ಟಿ.ರವಿ, ದಕ್ಷಿಣ ಕರ್ನಾಟಕದಲ್ಲಿ ಪ್ರಬಲವಾಗಿರುವ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಅರವಿಂದ್ ಬೆಲ್ಲದ್, ಮುರುಗೇಶ್ ನಿರಾಣಿ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಬಲವಾಗಿರುವ ಲಿಂಗಾಯತ ಸಮುದಾಯಕ್ಕೆ ಸೇರಿದವರು.

ಬಿಜೆಪಿ ಹೈಕಮಾಂಡ್ ಜಾತಿ ಆಧರಿತ ಪ್ರಾತಿನಿಧ್ಯವನ್ನು ನೀಡದೆಯೂ ಹೋಗಬಹುದು. ತತ್ವ ಸಿದ್ದಾಂತಕ್ಕೆ ಬದ್ದರಾಗಿರುವ ವ್ಯಕ್ತಿಗೆ ಸಿಎಂ ಪಟ್ಟ ಕಟ್ಟುವ ಸಾಧ್ಯತೆಯೇ ಹೆಚ್ಚು. ಮುರುಗೇಶ್ ನಿರಾಣಿ ಸಕ್ಕರೆ ಉದ್ಯಮಿಯೂ ಹೌದು ಎನ್ನುವುದನ್ನು ಹೊರತುಪಡಿಸಿದರೇ, ಈ ಎಲ್ಲ ನಾಯಕರು ಆರ್‌ಎಸ್ಎಸ್ ಸಂಘನೆಯಿಂದಲೇ ಬಂದವರು. ಹಿಂದುತ್ವದ ಸಿದ್ದಾಂತಕ್ಕೆ ಬದ್ದರಾಗಿರುವವರು.

ಈಗ ಸಿಎಂ ಆಗಿ ಆಯ್ಕೆಯಾಗುವ ನಾಯಕ 2023ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಸವಾಲು ಸ್ವೀಕರಿಸಬೇಕು. ಪಕ್ಷ , ಸರ್ಕಾರದ ವರ್ಚಸ್ಸು ಹೆಚ್ಚಾಗುವಂತೆ ಕೆಲಸ ಮಾಡಬೇಕು. ಜೊತೆಗೆ 2024ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ 25 ಕ್ಷೇತ್ರಗಳಲ್ಲಿ ಪಕ್ಷಕ್ಕೆ ಗೆಲುವು ತಂದುಕೊಡಬೇಕು.

ನಾಯಕತ್ವ ಬದಲಾವಣೆ ಮೂಲಕ ಮುಂದಿನ ವಿಧಾನಸಭೆ ಚುನಾವಣೆಗೆ ಪಕ್ಷ, ಸರ್ಕಾರವನ್ನು ಸಜ್ಜುಗೊಳಿಸಲು ಈಗಲೇ ನಾಯಕತ್ವ ಬದಲಾವಣೆಗೆ ಬಿಜೆಪಿ ಹೈಕಮಾಂಡ್ ನಿರ್ಧಾರ ತೆಗೆದುಕೊಂಡಿದೆ. ಮಠಮಾನ್ಯಗಳ ವಿರೋಧ ಯಾವುದನ್ನೂ ಲೆಕ್ಕಿಸದೇ, ಈ ಬಾರಿ ಸಿಎಂ ಬದಲಾವಣೆಗೆ ದೃಢ ನಿರ್ಧಾರವನ್ನು ಬಿಜೆಪಿ ಹೈಕಮಾಂಡ್ ತೆಗೆದುಕೊಂಡಿದೆ.

ನಾಲ್ಕು ಬಾರಿ ಸಿಎಂ ಆದ ಹೆಗ್ಗಳಿಕೆ:

ಯಡಿಯೂರಪ್ಪ ನಾಲ್ಕು ಬಾರಿ ಕರ್ನಾಟಕದ ಸಿಎಂ ಆದ ಹೆಗ್ಗಳಿಕೆ ಹೊಂದಿದ್ದಾರೆ. 2006 ರಲ್ಲಿ ಜೆಡಿಎಸ್ ಬೆಂಬಲ ಕೊಡುವ ಭರವಸೆಯೊಂದಿಗೆ ಸಿಎಂ ಹುದ್ದೆಗೇರಿದ್ದರು. ಆದರೇ, ವಿಶ್ವಾಸಮತ ಯಾಚನೆ ವೇಳೆ ಬೆಂಬಲ ನೀಡಲ್ಲ ಎಂದು ಜೆಡಿಎಸ್‌ ಸದನದಿಂದ ಹೊರನಡೆದಿದ್ದರಿಂದ ಯಡಿಯೂರಪ್ಪ ಒಂದೇ ವಾರದಲ್ಲಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದಾದ ಬಳಿಕ 2008 ರಿಂದ 2011ರವರೆಗೆ ಸಿಎಂ ಆಗಿ ಬಳಿಕ ಲೋಕಾಯುಕ್ತ ವರದಿಯಿಂದ ಸಿಎಂ ಹುದ್ದೆಗೆ 2ನೇ ಬಾರಿ ರಾಜೀನಾಮೆ ನೀಡಿದ್ದರು. ಬಳಿಕ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ 106 ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

ಈ ಕಾರಣದಿಂದ ರಾಜ್ಯಪಾಲ ವಜೂಭಾಯಿ ವಾಲಾ ಮೊದಲಿಗೆ ಯಡಿಯೂರಪ್ಪಗೆ ಸರ್ಕಾರ ರಚಿಸಿ, ಬಹುಮತ ಸಾಬೀತುಪಡಿಸಲು ಸೂಚಿಸಿದ್ದರು. ಆದರೇ, ಬಹುಮತ ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ತಿಳಿದು ಯಡಿಯೂರಪ್ಪ ಮೂರೇ ದಿನಕ್ಕೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತೀನ್ ದಿನ್ ಕಾ ಸುಲ್ತಾನ್ ಆಗಿದ್ದರು. ಬಳಿಕ 2019ರ ಜುಲೈ 26ರಿಂದ 2021 ಜುಲೈ 26ರವರೆಗೆ ಸಿಎಂ ಆಗಿ 2 ವರ್ಷ ಪೂರ್ಣಗೊಳಿಸಿ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಸುಳಿವು ನೀಡಿದ್ದಾರೆ. ಆದರೆ, ನಾಲ್ಕು ಬಾರಿ ಸಿಎಂ ಆಗುವ ಮೂಲಕ ಒಟ್ಟಾರೆ 5 ವರ್ಷ ಆಳ್ವಿಕೆಯನ್ನು ಯಡಿಯೂರಪ್ಪ ನಡೆಸಿದ್ದಾರೆ.

(BS Yediyurappa exit from Karnataka chief ministership expected but who will be next cm)