ಬೆಂಗಳೂರು:ರಾಜ್ಯದಲ್ಲಿ ಕೆಲ ದಿನಗಳಿಂದ ಮಳೆಯ ಅಬ್ಬರ ಜೋರಾಗಿದೆ. ಈಗ ಮತ್ತೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ. ಹಾಗಂತ ಹವಾಮಾನ ಇಲಾಖೆ ಗುನುಗುತ್ತಿದೆ. ಅದಕ್ಕೆ ತಕ್ಕಂತೆ ನಿನ್ನೆ ರಾತ್ರಿಯಿಂದಲೇ ಮಳೆರಾಯ ಮತ್ತೆ ತನ್ನ ಪ್ರತಾಪ ತೋರುತ್ತಿದ್ದಾನೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಿಂದಾಗಿ ಬಹುತೇಕ ಮನೆಗಳು, ರಸ್ತೆಗಳು ಕೆರೆಯಂತಾಗಿವೆ. ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈಗಾಗಲೇ ಕ್ಯಾರ್, ಮಹಾ ಚಂಡಮಾರುತಗಳ ಅಬ್ಬರದಿಂದ ಬಹಳಷ್ಟು ಹಾನಿಯಾಗಿದೆ. ಈ ಬೆನ್ನಲ್ಲೇ ಈಗ ‘ಬುಲ್ ಬುಲ್’ ಸೈಕ್ಲೋನ್ ಭೀತಿ ಹೆಚ್ಚಾಗಿದೆ. ಇದರಿಂದ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಹೆಚ್ಚುವ ಸಾಧ್ಯತೆ ಇದೆ. ಭಾರತದ ಪೂರ್ವ ಕರಾವಳಿಗೆ ಬುಲ್ ಬುಲ್ ಸೈಕ್ಲೋನ್ ಭೀತಿ ಎದುರಾಗಿದೆ. ಒಡಿಶಾ ರಾಜ್ಯದ ಕನಿಷ್ಠ 14 ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಸಂಭವಿಸಿದ್ದು, ಇದರಿಂದಾಗಿ ಚಂಡಮಾರುತ ಎದ್ದಿದೆ. ಇದರಿಂದಾಗಿ ರಾಜ್ಯದಲ್ಲಿಯೂ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಒಡಿಶಾ, ಪಶ್ಚಿಮ ಬಂಗಾಳ ಸೇರಿದಂತೆ ಎರಡೂ ರಾಜ್ಯಗಳಲ್ಲಿ 35 ಜನರ ಎನ್ಡಿಆರ್ಎಫ್ ತಂಡ ನಿಯೋಜನೆ ಮಾಡಲಾಗಿದೆ. ಮುಂದಿನ 48 ಗಂಟೆಗಳಲ್ಲಿ ಬುಲ್ ಬುಲ್ ಅಪ್ಪಳಿಸೋ ಭೀತಿ ಇದ್ದು, ಎಚ್ಚರಿಕೆ ರವಾನೆಯಾಗಿದೆ. ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆಯಾಗೋ ಸಾಧ್ಯತೆ ಇದೆ. ಎರಡೂ ರಾಜ್ಯಗಳಲ್ಲಿ ಹವಾಮಾನ ಇಲಾಖೆ ಹೈಅಲರ್ಟ್ ಘೋಷಿಸಿದೆ.