
ಬೆಂಗಳೂರು, ಆಗಸ್ಟ್ 03: ಸಿಎಂ ಡಿಕೆ ಶಿವಕುಮಾರ್ ಅವರ ಸಚಿವ ಸಂಪುಟ ವಿಸ್ತರಣೆ ಸಂಬಂಧ 20 ಜನ ನೂತನ ಮಂತ್ರಿಗಳ ಹೆಸರನ್ನು ಎಐಸಿಸಿ ಪ್ರಕಟಿಸಿದ ಬಳಿಕವೂ ಭಾರಿ ಬದಲಾವಣೆ ನಡೆದಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಪಟ್ಟಿಯಲ್ಲಿ ಹೆಸರಿದ್ದ ಹೊರತಾಗಿಯೂ ಭಟ್ಕಳ ಕ್ಷೇತ್ರದ ಶಾಸಕ ಮಂಕಾಳು ವೈದ್ಯಗೆ ಮಂತ್ರಿ ಸ್ಥಾನ ಕೈತಪ್ಪಿದೆ. ಈ ವಿಚಾರವಾಗಿ ಎಐಸಿಸಿ ಸ್ಪಷ್ಟನೆ ನೀಡಿದ್ದು, ನೂತನ ಸಚಿವರ ಪಟ್ಟಿಯಲ್ಲಿ ಮಂಕಾಳು ವೈದ್ಯ ಹೆಸರಿರಲಿಲ್ಲ. ಇದು ಕೇವಲ ಟೈಪಿಂಗ್ ಮಿಸ್ಟೇಕ್ ಎಂದು ತಿಳಿಸಿದೆ. ಆದರೆ ಕೊನೇ ಕ್ಷಣದಲ್ಲಿ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕರಾಗಿರುವ ಎಸ್.ಎಸ್.ಮಲ್ಲಿಕಾರ್ಜುನಗೆ ಸ್ಥಾನ ನೀಡಲಾಗಿದೆ.
ಸಚಿವಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಸಿಎಂ ನಿವಾಸಕ್ಕೆ ಮಂಕಾಳು ವೈದ್ಯ ಭೇಟಿ ನೀಡಿದ್ದಾರೆ. ಕೊನೇ ಕ್ಷಣದ ನಿರ್ಧಾರದ ಸಂಬಂಧ ಮುಖ್ಯಮಂತ್ರಿಗಳ ಜೊತೆ ಚರ್ಚೆಗೆ ಅವರು ಆಗಮಿಸಿದ್ದರಾದರೂ ಡಿಕೆಶಿ ಜೊತೆ ಮಾತುಕತೆ ಸಾಧ್ಯವಾಗಿಲ್ಲ ಎನ್ನಲಾಗಿದೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಕಾಂಗ್ರೆಸ್ ಶಾಸಕ ಪ್ರತಿಕ್ರಿಯೆ ನೀಡಿದ್ದು, ನಾನು ಸಿಎಂ ಅವರನ್ನ ಭೇಟಿ ಆಗಿಲ್ಲ, ಅವರು ಸಿಕ್ಕಿಲ್ಲ. ಮತ್ತೊಮ್ಮೆ ಬರುತ್ತೇನೆ ಎಂದಷ್ಟೇ ಹೇಳಿ ಸಿಎಂ ಮನೆಯಿಂದ ಸಿಟ್ಟಲ್ಲೇ ಹೊರಟ ಪ್ರಸಂಗ ನಡೆದಿದೆ.
ಇದನ್ನೂ ಓದಿ: ಸಿಎಂ ಡಿಕೆಶಿ ಕ್ಯಾಬಿನೆಟ್ನಲ್ಲಿ 11 ಮಂದಿ ಮಾತ್ರ ಹೊಸಬರು: ಸಿದ್ದರಾಮಯ್ಯ ಸಂಪುಟದಲ್ಲಿದ್ದ ಹಲವರಿಗೆ ಕೊಕ್
ಮಂತ್ರಿಗಿರಿಗಾಗಿ ಪಟ್ಟು ಹಿಡಿದಿದ್ದ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಸಚಿವ ಸ್ಥಾನ ಸಿಗದಿದ್ದರೆ ರಾಜೀನಾಮೆ ನೀಡೋದಾಗಿ ತಿಳಿಸಿದ್ದಾರೆ. ಸಂಸದರಾಗಿರುವ ಪತ್ನಿ ಮತ್ತು ಶಾಸಕರಾಗಿರುವ ಮಗ ಕೂಡ ಸ್ಥಾನ ತೊರೆಯಲಿದ್ದಾರೆ ಎಂದು ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದಾರೆ. ಇದೇ ಕಾರಣಕ್ಕೆ ಮಂಕಾಳು ವೈದ್ಯಗೆ ಕೊನೇ ಕ್ಷಣದಲ್ಲಿ ಕೊಕ್ ನೀಡಿ ಮಲ್ಲಿಕಾರ್ಜುನ್ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂಬ ಮಾಹಿತಿ ಇದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:49 pm, Mon, 3 August 26