ಶಾರ್ಜಾದಲ್ಲಿ ಕುಂದಾಪುರ ಮೂಲದ ಪ್ರಕಾಶ್ ಭೀಕರ ಕೊಲೆ: 9 ತುಂಡು ಮಾಡಿದ ದುಷ್ಕರ್ಮಿಗಳು
ದುಬೈ, ಶಾರ್ಜಾದಲ್ಲಿ ಉಡುಪಿ ಮೂಲದ ಪ್ರಕಾಶ್ ಕುಂದರ್ ಬರ್ಬರವಾಗಿ ಕೊಲೆಯಾಗಿದ್ದಾರೆ. ಅವರ ದೇಹವನ್ನು 9 ತುಂಡುಗಳಾಗಿ ಕತ್ತರಿಸಿ ಕಾರಿನಲ್ಲಿ ಪತ್ತೆಯಾಗಿದೆ. ಘಟನೆ ಬಳಿಕ ಪ್ರಕಾಶ್ ಪತ್ನಿ ಟೀನಾ ಕುಂದರ್ ಮತ್ತು ಪುತ್ರ ನಾಪತ್ತೆಯಾಗಿದ್ದು, ಪತ್ನಿಯೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಮೃತದೇಹವನ್ನು ಭಾರತಕ್ಕೆ ತರಲು ಕುಟುಂಬಸ್ಥರು ಪ್ರಯತ್ನಿಸುತ್ತಿದ್ದಾರೆ. ನ್ಯಾಯಕ್ಕಾಗಿ ಸಂಪೂರ್ಣ ತನಿಖೆಗೆ ಆಗ್ರಹಿಸಿದ್ದಾರೆ.

ದುಬೈ, ಸೆ.22: ಕೆಲಸ ಅರಸಿ ಯುನೈಟೆಡ್ ಅರಬ್ ಎಮಿರೇಟ್ಸ್ (UAE)ಗೆ ತೆರಳಿದ್ದ ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ವ್ಯಕ್ತಿಯೊಬ್ಬ ಶಾರ್ಜಾದಲ್ಲಿ ಅಮಾನುಷ ಹಾಗೂ ಭಯಾನಕ ರೀತಿಯಲ್ಲಿ ಕೊಲೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತರನ್ನು ಪ್ರಕಾಶ್ ಕುಂದರ್ ಎಂದು ಗುರುತಿಸಲಾಗಿದೆ. ದುಷ್ಕರ್ಮಿಗಳು ಪ್ರಕಾಶ್ ಅವರ ದೇಹವನ್ನು ಒಂಬತ್ತು ತುಂಡುಗಳಾಗಿ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದು, ಘಟನೆ ಬಳಿಕ ಮೃತರ ಪತ್ನಿ ಹಾಗೂ ಪುತ್ರ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಎರಡು ದಶಕಗಳಿಂದ ಯುಎಇನಲ್ಲಿ ನೆಲೆಸಿದ್ದ ಪ್ರಕಾಶ್ ಕುಂದರ್ ಅವರು ಶಾರ್ಜಾ ಏರ್‌ಪೋರ್ಟ್ ಏಜೆನ್ಸಿಯೊಂದರಲ್ಲಿ ಉದ್ಯೋಗದಲ್ಲಿದ್ದರು. ಮೂರು ತಿಂಗಳ ಹಿಂದೆ ನಡೆದಿರುವ ಈ ಕೊಲೆ ಪ್ರಕರಣ ಅತ್ಯಂತ ನಿಗೂಢವಾಗಿ ನಡೆಯಲಾಗಿತ್ತು. ಭಾರತದಲ್ಲಿದ್ದ ಪ್ರಕಾಶ್ ಅವರ ಸಹೋದರ ಅಣ್ಣನಿಗೆ ವಾಯ್ಸ್ ಮೆಸೇಜ್ ಕಳುಹಿಸಿದಾಗ, ಮರುಉತ್ತರ ವಾಯ್ಸ್ ಮೆಸೇಜ್ ಬರುವ ಬದಲು ‘ಟೆಕ್ಸ್ಟ್ ಮೆಸೇಜ್’ (ಪಠ್ಯ ಸಂದೇಶ) ರೂಪದಲ್ಲಿ ಬಂದಿತ್ತು. ಸಂದೇಹಗೊಂಡ ಸಹೋದರ, ಪ್ರಕಾಶ್ ಕಾರ್ಯನಿರ್ವಹಿಸುತ್ತಿದ್ದ ಏರ್‌ಪೋರ್ಟ್ ಏಜೆನ್ಸಿಗೆ ಕರೆ ಮಾಡಿ ವಿಚಾರಿಸಿದಾಗ “ಪ್ರಕಾಶ್ ಭಾರತಕ್ಕೆ ಮರಳಿದ್ದಾರೆ” ಎಂದು ತಿಳಿಸಿದ್ದರು. ಆದರೆ ಪ್ರಕಾಶ್ ಇಂಡಿಯಾಕ್ಕೆ ಬಂದಿರಲಿಲ್ಲ.
ಬಳಿಕ ಶಾರ್ಜಾದಲ್ಲಿರುವ ಸಂಬಂಧಿಕರ ಮೂಲಕ ಅಲ್ಲಿನ ಪೊಲೀಸರಿಗೆ ದೂರು ನೀಡಲಾಯಿತು. ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಪ್ರಕಾಶ್ ಅವರ ಸ್ವಂತ ಕಾರಿನ ಡಿಕ್ಕಿಯಲ್ಲಿ ಗುರುತು ಪತ್ತೆಯಾಗದಂತೆ 9 ತುಂಡುಗಳಾಗಿ ವಿಂಗಡಿಸಲಾಗಿದ್ದ ಶವ ಪತ್ತೆಯಾಗಿದೆ. ಪೊಲೀಸರು ಕುಟುಂಬಸ್ಥರಿಂದ ಡಿಎನ್ಎ ಮಾದರಿ ಪಡೆದು ಪರೀಕ್ಷೆ ನಡೆಸಿದಾಗ, ಅದು ಪ್ರಕಾಶ್ ಕುಂದರ್ ಅವರದ್ದೇ ಶರೀರ ಎಂಬುದು ಅಧಿಕೃತವಾಗಿ ದೃಢಪಟ್ಟಿದೆ.
ಜುಲೈ ಅಂತ್ಯದಿಂದ ಶಾರ್ಜಾ ಪೊಲೀಸರು ಹಲವು ಹಂತದ ಸುದೀರ್ಘ ತನಿಖೆ ನಡೆಸುತ್ತಿದ್ದಾರೆ. ಈ ರಕ್ತಸಿಕ್ತ ಪ್ರಕರಣದಲ್ಲಿ ಅತ್ಯಂತ ನಿಗೂಢ ಸಂಗತಿಯೆಂದರೆ, ಘಟನೆ ನಡೆದ ಬೆನ್ನಲ್ಲೇ ಮೃತರ ಪತ್ನಿ ಟೀನಾ ಕುಂದರ್ ಹಾಗೂ ಆಕೆಯ ಪುತ್ರ ಕಣ್ಮರೆಯಾಗಿದ್ದಾರೆ. ಪತ್ನಿ ಟೀನಾ ಕುಂದರ್ ಬೇರೊಬ್ಬ ವ್ಯಕ್ತಿಯ ನೆರವಿನೊಂದಿಗೆ ಈ ಭೀಕರ ಕೃತ್ಯ ಎಸಗಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಘಟನೆಯ ನಂತರ ಆಕೆ ಯಾರ ಸಂಪರ್ಕಕ್ಕೂ ಸಿಗದ ಕಾರಣ, ಕೊಲೆ ಮಾಡಿ ಭಾರತಕ್ಕೆ ಅಥವಾ ಬೇರೆ ಯಾವುದಾದರೂ ದೇಶಕ್ಕೆ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ.
ಇದನ್ನೂ ಓದಿ: ಅನ್ನ ಹಾಕಿದ ತಾಯಿಯನ್ನೇ ಕೊಂದ ಆಟೋ ಚಾಲಕ: ಅಜ್ಜಿಯನ್ನು ನಂಬಿಸಿ ಕರೆದೊಯ್ದು ಭೀಕರ ಕೊಲೆ
ಒಂದು ವೇಳೆ ಪತ್ನಿಯೇ ಈ ಅಮಾನುಷ ಕೃತ್ಯ ಎಸಗಿದ್ದರೆ ಅದಕ್ಕೆ ಕಾರಣವೇನು? ಆಕೆ ಎಲ್ಲಿದ್ದಾಳೆ ಎಂಬುದನ್ನು ಶೀಘ್ರವಾಗಿ ಪತ್ತೆಹಚ್ಚಬೇಕು ಎಂದು ಮೃತನ ಕುಟುಂಬಸ್ಥರು ಆಕ್ರೋಶದೊಂದಿಗೆ ಒತ್ತಾಯಿಸಿದ್ದಾರೆ. ಪ್ರಸ್ತುತ ಘಟನೆ ಶಾರ್ಜಾದಲ್ಲಿ ನಡೆದಿರುವುದರಿಂದ ತನಿಖೆಯನ್ನು ಶಾರ್ಜಾ ಪೊಲೀಸರೇ ನಡೆಸುತ್ತಿದ್ದಾರೆ. ಪ್ರಕಾಶ್ ಅವರ ಭೌತಿಕ ಶರೀರವನ್ನು ಭಾರತಕ್ಕೆ ತರಲು ಸಂಬಂಧಿಕರು ನಿರಂತರ ಪ್ರಯತ್ನ ಮುಂದುವರಿಸಿದ್ದಾರೆ. ಮೃತದೇಹ ಸ್ವದೇಶಕ್ಕೆ ಬಂದ ನಂತರ, ಭಾರತ ಸರ್ಕಾರದ ಮೂಲಕವೂ ಸಮಗ್ರ ತನಿಖೆಗೆ ಒತ್ತಾಯಿಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




