
ನವದೆಹಲಿ, ನವೆಂಬರ್ 16: ಸದ್ಯದಲ್ಲೇ ಸಂಪುಟ (karnataka cabinet reshuffle) ಸೇರುವ ಕಾಲ ಬಂದಿತು ಎಂದು ಖುಷಿಯಾಗಿರುವ ಸಚಿವಾಕಾಂಕ್ಷಿಗಳು ಇನ್ನಷ್ಟು ಕಾಲ ತಾಳ್ಮೆ ವಹಿಸಬೇಕಾಗಬಹುದು. ಸಂಪುಟ ಪುನಾರಚನೆ ಸದ್ಯಕ್ಕೆ ಇಲ್ಲ. ಸಂಕ್ರಾಂತಿ ಬಳಿಕ ಆಗಬಹುದು ಎಂದು ಹೇಳಲಾಗುತ್ತಿದೆ. ಟಿವಿ9 ಕನ್ನಡಕ್ಕೆ ಈ ಬಗ್ಗೆ ಎಕ್ಸ್ಕ್ಲೂಸಿವ್ ಮಾಹಿತಿ ಲಭಿಸಿದೆ. ಅದರ ಪ್ರಕಾರ, ಜನವರಿಯಲ್ಲಿ ಸಂಕ್ರಾಂತಿ ಬಳಿಕವೇ ಸಂಪುಟಕ್ಕೆ ಸರ್ಜರಿ ಮಾಡಬಹುದು ಎನ್ನಲಾಗಿದೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನ್ ಜೊತೆ ಕಾಂಗ್ರೆಸ್ ಪಕ್ಷ ಮಕಾಡೆ ಮಲಗಿದ್ದು ಹೈಕಮಾಂಡ್ಗೆ ಹಿಂದೇಟು ಹಾಕುವಂತೆ ಮಾಡಿದೆ. ನಾಯಕತ್ವ ಬದಲಾವಣೆ ವಿಚಾರದಲ್ಲಿ ವರಿಷ್ಠರು ಎಚ್ಚರಿಕೆ ಹೆಜ್ಜೆ ಇಡುತ್ತಿದ್ದಾರೆ. ಈ ನಡುವೆ ಸಂಪುಟ ಪುನಾರಚನೆ ಈ ತಿಂಗಳೇ ಆಗಬಹುದು ಎನ್ನುವ ನಿರೀಕ್ಷೆ ಹಲವರಲ್ಲಿ ಮುಂದುವರಿದಿದೆ. ಅದಕ್ಕೆ ಕಾರಣವೂ ಇದೆ. ಸರ್ಕಾರ ರಚನೆ ಆಗಿ ನವೆಂಬರ್ 20ಕ್ಕೆ ಎರಡೂವರೆ ವರ್ಷ ಆಗುತ್ತೆ.. ಹೀಗಾಗಿ ಸಚಿವ ಸಂಪುಟ ಪುನಾರಚನೆ ಆಗೇ ಆಗುತ್ತೆ ಎಂದು ಆಕಾಂಕ್ಷಿಗಳು ಹೈಕಮಾಂಡ್ನತ್ತ ಚಿತ್ತ ನೆಟ್ಟು ಕುಳಿತಿದ್ದಾರೆ. ಆದ್ರೆ ಸಂಕ್ರಾಂತಿ ಬಳಿಕವೇ ಸಂಪುಟ ಪುನಾರಚನೆ ಆಗುತ್ತೆ ಅನ್ನೋ ಮಾಹಿತಿ ಸಿಕ್ಕಿದೆ.
ಬಿಹಾರ ಚುನಾವಣೆ ಸೋಲಿನ ಆಘಾತದಿಂದ ಹೊರಬರೋಕೆ ಕಾಂಗ್ರೆಸ್ಗೆ ಇನ್ನೂ ಸಮಯ ಬೇಕಿದೆ. ಹೀಗಾಗಿ ಸದ್ಯಕ್ಕೆ ಸಿದ್ದರಾಮಯ್ಯ ಸಂಪುಟಕ್ಕೆ ಸರ್ಜರಿ ಇಲ್ಲ ಎನ್ನಲಾಗ್ತಿದೆ. ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಬಗ್ಗೆ ಸದ್ಯಕ್ಕೆ ಬ್ರೇಕ್ ಹಾಕೋಕೆ ನಿರ್ಧಾರ ಮಾಡಲಾಗಿದೆ ಅಂತೆ. ಸದ್ಯಕ್ಕೆ ಬದಲಾವಣೆ ಮಾಡದಂತೆ ಹೈಕಮಾಂಡ್ ಸೂಚನೆ ಕೊಟ್ಟಿದೆ ಎನ್ನಲಾಗಿದೆ. ಮೂಲ ಮಾಹಿತಿಯ ಪ್ರಕಾರ ಬೆಳಗಾವಿ ಅಧಿವೇಶನ ಮುಗಿಸಿದ ಬಳಿಕವಷ್ಟೇ ಈ ಬಗ್ಗೆ ಚರ್ಚೆ ಮಾಡಬಹುದು ಎನ್ನಲಾಗ್ತಿದೆ. ಈ ಬಗ್ಗೆ ರಾಜ್ಯ ನಾಯಕರಿಗೆ ಹೈಕಮಾಂಡ್ ಸೂಚನೆಯನ್ನೂ ಕೊಟ್ಟಿದೆ.
ಇದನ್ನೂ ಓದಿ: ಸಚಿವ ಸಂಪುಟ ಸರ್ಕಸ್ ನಡುವೆ ಡಿಕೆ ಬ್ರದರ್ಸ್ ನಡೆ ಸಸ್ಪೆನ್ಸ್: ಕಾಂಗ್ರೆಸ್ ಪಾಳಯದಲ್ಲಿ ಆಗ್ತಿರೋದೇನು?
ರಾಜ್ಯದಲ್ಲಿ ನವೆಂಬರ್, ಡಿಸೆಂಬರ್ ಕ್ರಾಂತಿ ಏನೂ ಇಲ್ಲ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ಜತೆಗ ಹೈಕಮಾಂಡ್ ಏನು ತಿರ್ಮಾನ ಮಾಡುತ್ತಾರೋ ಅದೇ ಅಂತಿಮ ಎಂದಿದ್ದಾರೆ.
ರಾಜ್ಯ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಆಗುತ್ತದೆ ಎಂದು ಹೇಳುತ್ತಿದ್ದ ರಾಜ್ಯ ಬಿಜೆಪಿಗರು ಈಗ ತುಸು ವರಸೆ ಬದಲಿಸಿ, ಸರ್ಕಾರವೇ ಪತನಗೊಂಡು ಮಧ್ಯಂತರ ಚುನಾವಣೆ ಬರಲಿದೆ ಎಂದು ಹೇಳುತ್ತಿದ್ದಾರೆ.
‘ಬಿಹಾರ ರಿಸಲ್ಟ್ ಬಳಿಕ ರಾಹುಲ್ ಡಮ್ಮಿ ಆಗಿದ್ದಾರೆ.. ರಾಜ್ಯದಲ್ಲಿ ಈಗ ಸಿದ್ದರಾಮಯ್ಯನವ್ರದ್ದೇ ಪ್ರಾಬಲ್ಯ. ಸಿದ್ದು ಕುರ್ಚಿ ಬಿಡಲ್ಲ. ಡಿಸಿಎಂ ಡಿಕೆ ಸುಮ್ನೇ ಕೂರಲ್ಲ. ಇಬ್ಬರ ತಿಕ್ಕಾಟದ ಮದ್ಯೆ ಸರ್ಕಾರ ಬಿದ್ದು ಹೋಗುತ್ತೆ’ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಭವಿಷ್ಯ ಹೇಳಿದ್ದಾರೆ.
ದೊಡ್ಡ ಪ್ರಮಾಣದಲ್ಲಿ ಪುನಾರಚನೆಗೆ ಹೈಕಮಾಂಡ್ ನಾಯಕರೊಬ್ಬರು ಸಲಹೆ ಕೊಟ್ಟಿದ್ದಾರೆ ಅನ್ನೋ ಮಾಹಿತಿಯೂ ಸಿಕ್ಕಿದೆ. ಹಾಲಿ ಸಚಿವರಿಗೆ ಪಕ್ಷದ ಕೆಲಸ ನೀಡಿ ಎಂದಿರೋ ಹೈಕಮಾಂಡ್ ನಾಯಕರು, ಸಂಪುಟ ಪುನಾರಚನೆ ಬದಲಾಗಿ 4 ಪ್ರಮುಖ ಸ್ಥಾನಗಳನ್ನು ತುಂಬುವ ಬಗ್ಗೆ ಚರ್ಚೆ ಮಾಡಿದ್ದಾರೆ. ನಾಗೇಂದ್ರ, ರಾಜಣ್ಣರಿಂದ ಖಾಲಿಯಾದ ಸ್ಥಾನ ತುಂಬೋದು, ಪರಿಷತ್ ಸಭಾಪತಿ & ಉಪಸಭಾಪತಿ ಆಯ್ಕೆ ಬಗ್ಗೆ ಪ್ರಸ್ತಾಪವೂ ಆಗಿದೆ. ಎಲ್ಲ ಆಯ್ಕೆಯನ್ನೂ ಹೈಕಮಾಂಡ್ ಮುಕ್ತವಾಗಿಯೇ ಇಟ್ಟಿದೆ ಎಂದು ಹೇಳಲಾಗುತ್ತಿದೆ.
ನಿನ್ನೆಯಷ್ಟೇ (ನ. 15) ದೆಹಲಿಯಲ್ಲಿ ರಾಹುಲ್ ಗಾಂಧಿ ಅವರನ್ನ ಭೇಟಿಯಾದ ಸಿಎಂ ಸಿದ್ದರಾಮಯ್ಯ, 15 ನಿಮಿಷಗಳ ಕಾಲ ಚರ್ಚಿಸಿದ್ರು. ಪ್ರಸ್ತುತ ರಾಜ್ಯ ರಾಜಕೀಯದ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಿದ್ದರಾಮಯ್ಯ ದೆಹಲಿಯಿಂದ ವಾಪಾಸ್ ಬಂದ್ರೂ, ಡಿಸಿಎಂ ಡಿಕೆ ಶಿವಕುಮಾರ್ ಅವರು ಮಾತ್ರ ದೆಹಲಿಯಲ್ಲೇ ಠಿಕಾಣಿ ಹೂಡಿರೋದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ, ಸಂಪುಟ ಪುನಾರಚನೆಗೆ ಸಿಎಂ ಸಿದ್ದರಾಮಯ್ಯ ಪ್ರಸ್ತಾಪ ಮಾಡಿದ್ರೆ, ಪೂರ್ಣ ಪ್ರಮಾಣದ ಸಂಪುಟ ವಿಸ್ತರಣೆಗೆ ಡಿಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ರಾಹುಲ್ ಭೇಟಿಯಾಗಿ ಈ ವಿಚಾರವನ್ನೂ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ತವರು ಚಿತ್ತಾಪುರದಲ್ಲಿ RSS ಅದ್ಧೂರಿ ಪಥಸಂಚಲನ: ಹೈಸೆಕ್ಯುರಿಟಿ ನಡುವೆ ಹೆಜ್ಜೆ ಹಾಕಿದ ಗಣವೇಷಧಾರಿಗಳು
ಇಂದಿನ ಹೈದ್ರಾಬಾದ್ ಪ್ರವಾಸವನ್ನೂ ರದ್ದು ಮಾಡಿ, ನಿನ್ನೆಯಿಂದಲೇ ದೆಹಲಿಯಲ್ಲಿ ಠಿಕಾಣಿ ಹೂಡಿರೋ ಡಿಸಿಎಂ ಡಿಕೆ ಶಿವಕುಮಾರ್, ತಮ್ಮದೇ ಆದ ತಂತ್ರಗಾರಿಕೆ ನಡೆಸ್ತಿದ್ದಾರೆ. ಮಾಜಿ ಸಂಸದ ಡಿಕೆ. ಸುರೇಶ್ ಕೂಡ ದೆಹಲಿಗೆ ಎಂಟ್ರಿ ಕೊಟ್ಟಿದ್ದಾರೆ. ರಾಹುಲ್ ಗಾಂಧಿ ಭೇಟಿಗೆ ಸಮಯ ಕೇಳಿರೋ ಡಿಸಿಎಂ ಡಿಕೆ ಪ್ರಸ್ತುತ ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ಮಾಡೋ ಸಾಧ್ಯತೆ ಇದೆ ಎನ್ನಲಾಗ್ತಿದೆ.
ನಾಳೆ ಮತ್ತೆ ದೆಹಲಿಗೆ ತೆರಳಲಿರೋ ಸಿಎಂ ಸಿದ್ದರಾಮಯ್ಯ, ಹೈಕಮಾಂಡ್ ನಾಯಕರನ್ನ ಭೇಟಿ ಮಾಡಲಿದ್ದಾರೆ. ನವೆಂಬರ್ 18ರಂದು ದೆಹಲಿಗೆ ಕೆ.ಸಿ. ವೇಣುಗೋಪಾಲ್ ಬಂದ ಬಳಿಕ ಎಲ್ಲವೂ ಚರ್ಚೆ ಮಾಡಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆಗೂ ಸಿಎಂ ಮಾತುಕತೆ ನಡೆಸೋ ಸಾಧ್ಯತೆ ಇದೆ. ಮುಂದೆ ದೆಹಲಿಯಲ್ಲಿ ಅದ್ಯಾವ ಬೆಳವಣಿಗೆ ಆಗುತ್ತೆ ಅನ್ನೋದು ಕಾದುನೋಡಬೇಕಿದೆ.
ವರದಿ: ಮಹೇಶ್, ಟಿವಿ9 ನವದೆಹಲಿ
ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ